ಭಾರತ-ಪಾಕಿಸ್ತಾನ ಸಂಘರ್ಷದ ಬಗ್ಗೆ ಆಪರೇಷನ್ ಸಿಂದೂರ್ ನಲ್ಲಿ ಉಗ್ರ ನೆಲೆಗಳ ನಾಶ, ಸೈನಿಕರ ಸಾವು, ಬಳಸಿದ ಶಸ್ತ್ರಾಸ್ತ್ರಗಳು ಸೇರಿದಂತೆ 5 ಪ್ರಮುಖ ಪ್ರಶ್ನೆಗಳಿಗೆ ಭಾರತೀಯ ಸೇನೆ ಉತ್ತರಿಸಿದೆ. ಕಾರ್ಯಾಚರಣೆಯ ಗೌಪ್ಯತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕೆಲವು ಮಾಹಿತಿಯನ್ನು ಬಹಿರಂಗ ಪಡಿಸಿಲ್ಲ.
ನವದೆಹಲಿ: ಭಾರತ-ಪಾಕಿಸ್ತಾನದ (India Vs Pakistan) ನಡುವೆ ಈಗ ಯುದ್ಧ ವಿರಾಮ ಘೋಷಣೆಯಾಗಿದೆ ಅಂದ್ರೂ ಪಾಕ್‌ನಿಂದ ಅಪ್ರಚೋದಿತ ದಾಳಿಯಾಗುತ್ತಿದೆ. ಯುದ್ಧದ ಸ್ಥಿತಿಯಲ್ಲಿ ಎರಡೂ ಕಡೆಯಿಂದ ಕ್ಷಿಪಣಿಗಳು ಮತ್ತು ಡ್ರೋನ್‌ಗಳ ದಾಳಿ ನಡೆಯಿತು. ಭಾರತ ವೈಮಾನಿಕ ದಾಳಿ ನಡೆಸುವ ಮೂಲಕ ಪಾಕಿಸ್ತಾನದ ದಾಳಿಗಳನ್ನು ವಿಫಲಗೊಳಿಸಿತು. ಸಾಮಾಜಿಕ ಮಾಧ್ಯಮದಿಂದ ಹಿಡಿದು ಟಿವಿವರೆಗೆ, ಎಲ್ಲರೂ ಒಂದೇ ಪ್ರಶ್ನೆ ಕೇಳುತ್ತಿದ್ದಾರೆ, ಈ ಸಂಘರ್ಷದಲ್ಲಿ ಭಾರತ ಪಾಕಿಸ್ತಾನಕ್ಕೆ ಎಷ್ಟು ಹಾನಿ ಮಾಡಿದ? ಎಷ್ಟು ಉಗ್ರರನ್ನು ಕೊಂದಿದೆ, ಅವರ ಎಷ್ಟು ವಿಮಾನ-ಕ್ಷಿಪಣಿಗಳನ್ನು ಹೊಡೆದುರುಳಿಸಿದೆ? ಭಾರತಕ್ಕೂ ಏನಾದರೂ ಹಾನಿಯಾಗಿದೆಯೇ? ಈ ಎಲ್ಲಾ ಪ್ರಶ್ನೆಗಳಿಗೆ ಭಾರತೀಯ ಸೇನೆ ಒಂದೊಂದಾಗಿ ಉತ್ತರಿಸಿದೆ. ಮೇ 11 ರಂದು ಸಂಜೆ ಆಪರೇಷನ್ ಸಿಂದೂರ್ ಬಗ್ಗೆ ಮೂರು ಸೇನಾಪಡೆಗಳ ಸುದ್ದಿಗೋಷ್ಠಿಯಲ್ಲಿ ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್, ವೈಸ್ ಅಡ್ಮಿರಲ್ ಎ.ಎನ್. ಪ್ರಮೋದ್ ಮತ್ತು ಏರ್ ಮಾರ್ಷಲ್ ಅವಧೇಶ್ ಕುಮಾರ್ ಭಾರ್ತಿ ಈ ಬಗ್ಗೆ ಮಾಹಿತಿ ನೀಡಿದರು.
1. ಎಷ್ಟು ಪಾಕಿಸ್ತಾನಿಗಳು ಸತ್ತಿದ್ದಾರೆ?
ಮೇ 6-7 ರ ರಾತ್ರಿ ನಡೆದ ದಾಳಿಯಲ್ಲಿ ಭಾರತ ಹಲವು ಉಗ್ರರ ನೆಲೆಗಳನ್ನು ನಾಶಪಡಿಸಿದೆ ಎಂದು ಸೇನೆ ತಿಳಿಸಿದೆ. ಗುಪ್ತಚರ ವರದಿಗಳ ಪ್ರಕಾರ, 100 ಕ್ಕೂ ಹೆಚ್ಚು ಉಗ್ರರು ಹತರಾಗಿದ್ದಾರೆ. ಎಲ್‌ಒಸಿಯಲ್ಲಿ ಪಾಕಿಸ್ತಾನಿ ಸೇನೆಯ ಸುಮಾರು 35 ರಿಂದ 40 ಸೈನಿಕರು ಸಾವನ್ನಪ್ಪಿದ್ದಾರೆ. ಈ ಸಂಖ್ಯೆ ಹೆಚ್ಚಾಗಬಹುದು.
2. ಪಾಕಿಸ್ತಾನದ ಎಷ್ಟು ಕ್ಷಿಪಣಿಗಳು-ವಿಮಾನಗಳು ನಾಶವಾದವು?
ಪಾಕಿಸ್ತಾನದ ಹಲವಾರು ವಿಮಾನಗಳನ್ನು ಗುರಿಯಾಗಿಸಲಾಗಿದೆ, ಆದರೆ ಕಾರ್ಯಾಚರಣೆಯ ಕಾರಣಗಳಿಗಾಗಿ ಸಂಖ್ಯೆ ಮತ್ತು ಹೆಸರನ್ನು ಬಹಿರಂಗಪಡಿಸಲಾಗುವುದಿಲ್ಲ ಎಂದು ಭಾರತೀಯ ಸೇನೆ ಸ್ಪಷ್ಟಪಡಿಸಿದೆ. ಕಾರಣ ಸ್ಪಷ್ಟವಾಗಿದೆ, ಆಪರೇಷನ್ ಸಿಂದೂರ್ ಇನ್ನೂ ನಡೆಯುತ್ತಿದೆ ಮತ್ತು ಯಾವುದೇ ಸೋರಿಕೆಯು ಪಾಕಿಸ್ತಾನಕ್ಕೆ ಲಾಭವಾಗಬಹುದು.
3. ಭಾರತದ ಯಾವುದೇ ಕ್ಷಿಪಣಿ ಅಥವಾ ವಿಮಾನ ಪತನವಾಗಿದೆಯೇ?
ನಾವು ಎಲ್‌ಒಸಿ ದಾಟಿಲ್ಲ, ಎಲ್ಲಾ ದಾಳಿಗಳನ್ನು ಗಡಿಯೊಳಗಿನಿಂದಲೇ ನಡೆಸಲಾಗಿದೆ ಎಂದು ಭಾರತೀಯ ಸೇನೆ ತಿಳಿಸಿದೆ. ಭಾರತದ ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದ್ದಾಗಿ ಪಾಕಿಸ್ತಾನ ಮಾಡುತ್ತಿರುವ ಹೇಳಿಕೆ ಸುಳ್ಳು ಮತ್ತು ಪ್ರಚಾರ.
4. ಭಾರತಕ್ಕೂ ಹಾನಿಯಾಗಿದೆಯೇ?
ಶತ್ರುಗಳಿಗೆ ಉಪಯುಕ್ತವಾಗುವ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸುವುದಿಲ್ಲ ಎಂದು ಸೇನೆ ಹೇಳಿದೆ. ಆದಾಗ್ಯೂ, ಈವರೆಗೆ ಭಾರತೀಯ ಸೇನೆಯ 5 ಯೋಧರು ಹುತಾತ್ಮರಾಗಿದ್ದಾರೆ ಎಂದು ಮಾಹಿತಿ ನೀಡಲಾಗಿದೆ. ಉಳಿದ ಹಾನಿಯ ವಿವರಗಳನ್ನು ಕಾರ್ಯಾಚರಣೆಯ ಗೌಪ್ಯತೆಯಲ್ಲಿ ಇರಿಸಲಾಗಿದೆ.
5. ಭಾರತ ಯಾವ ಶಸ್ತ್ರಾಸ್ತ್ರಗಳಿಂದ ಪಾಕಿಸ್ತಾನಕ್ಕೆ ಪಾಠ ಕಲಿಸಿದೆ?
ಈ ವಿವರಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ, ಏಕೆಂದರೆ ಇದು ಶತ್ರುಗಳಿಗೆ ಲಾಭವಾಗಬಹುದು ಆದರೆ ಪಾಕಿಸ್ತಾನ ಭಾರೀ ಶಸ್ತ್ರಾಸ್ತ್ರಗಳನ್ನು ಬಳಸಿದಾಗ, ನಾವು ಅವರಿಗೆ ತಕ್ಕ ಉತ್ತರ ನೀಡಿದ್ದೇವೆ ಎಂದು ತಿಳಿಸಿದೆ. ಅಂದರೆ ಕೇವಲ ಗುಂಡುಗಳಿಂದಲ್ಲ, ಭಾರೀ ಶಸ್ತ್ರಾಸ್ತ್ರಗಳಿಂದಲೂ ತಕ್ಕ ಉತ್ತರ ನೀಡಲಾಗಿದೆ.
ಸಶಸ್ತ್ರ ಪಡೆಗಳಿಗೆ ಸ್ಪಷ್ಟ ಸೂಚನೆ
ಗಡಿಯಾಚೆಯಿಂದ ಯಾವುದೇ ಗುಂಡಿನ ದಾಳಿ ಮತ್ತು ಶೆಲ್ ದಾಳಿಗೆ ಸಂಪೂರ್ಣ ಬಲದಿಂದ ಪ್ರತಿಕ್ರಿಯಿಸುವಂತೆ ಪ್ರಧಾನಿ ನರೇಂದ್ರ ಮೋದಿ ಸಶಸ್ತ್ರ ಪಡೆಗಳಿಗೆ ಸ್ಪಷ್ಟ ಸೂಚನೆ ನೀಡಿದ್ದಾರೆ ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ. ಆಪರೇಷನ್ ಸಿಂಧೂರ್ ಇನ್ನೂ ಮುಗಿದಿಲ್ಲ, ಮತ್ತು ನಿಯಂತ್ರಣ ರೇಖೆ (ಎಲ್‌ಒಸಿ) ಆಚೆಯಿಂದ ಪಾಕಿಸ್ತಾನ ಹಾರಿಸುವ ಪ್ರತಿಯೊಂದು ಗುಂಡೇಟಿಗೆ ಭಾರತ ಬಾಂಬ್ ಮೂಲಕ ಪ್ರತಿಕ್ರಿಯಿಸುತ್ತದೆ ಎಂದು ಹೇಳಿದ್ದಾರೆ ಎಂದು ವರದಿಯಾಗಿದೆ. ಈ ನಡುವೆ ಮುಂಜಾಗ್ರತ ಕ್ರಮವಾಗಿ ಕೆಲವು ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ.
ಇದನ್ನೂ ಓದಿ: ಪಾಕ್ ವಾಯುನೆಲೆಗಳ ಮೇಲೆ ಭಾರತದಿಂದ ನಿಖರ ದಾಳಿ: ಫೋಟೋಗಳಲ್ಲಿ ನೋಡಿ


