ಆಪರೇಷನ್ ಸಿಂದೂರದಲ್ಲಿ ಭಾರತೀಯ ವಾಯುಪಡೆಯು ಪಾಕಿಸ್ತಾನದ ವಾಯುನೆಲೆಗಳ ಮೇಲೆ ನಿಖರ ದಾಳಿ ನಡೆಸಿ, ಪ್ರಮುಖ ಮೂಲಸೌಕರ್ಯಗಳಿಗೆ ಹಾನಿ ಮಾಡಿದೆ. ಭೋಲಾರಿ, ಜಾಕೋಬಾಬಾದ್, ಸರ್ಗೋಧಾ ಮತ್ತು ನೂರ್ ಖಾನ್ ವಾಯುನೆಲೆಗಳು ಈ ದಾಳಿಗೆ ಒಳಗಾಗಿವೆ.
ನವದೆಹಲಿ: ಆಪರೇಷನ್ ಸಿಂದೂರ ಕಾರ್ಯಚರಣೆಯಲ್ಲಿ 100ಕ್ಕೂ ಅಧಿಕ ಭಯೋತ್ಪಾದಕರನ್ನು ಸಂಹಾರ ಮಾಡಲಾಗಿದೆ ಎಂದು ಸೇನೆ ಅಧಿಕೃತ ಸಂಖ್ಯೆಯನ್ನು ಇಂದಿನ ಸುದ್ದಿಗೋಷ್ಠಿಯಲ್ಲಿ ನೀಡಿದೆ. ಮೇ 10 ರಂದು ಭಾರತೀಯ ವಾಯುಪಡೆ, ಪಾಕಿಸ್ತಾನದ ವಾಯುಪಡೆಯ ಮೇಲೆ ನಿಖರವಾಗಿ ದಾಳಿ ನಡೆಸಿತ್ತು. ಈ ದಾಳಿಯ ಬಳಿಕ ಪಾಕ್ ವಾಯುಪಡೆ ಹಾನಿಗೊಳಾದ ಉಪಗ್ರಹ ಚಿತ್ರಗಳನ್ನು ಬಿಡುಗಡೆ ಮಾಡಲಾಗಿದೆ. ವಿದೇಶಿ ಉಪಗ್ರಹ ಗುಪ್ತಚರ ಸಂಸ್ಥೆಗಳು ಬಿಡುಗಡೆ ಮಾಡಿರುವ ಚಿತ್ರಗಳು ಭಾರತದ ದಾಳಿಗಳ ಪರಿಣಾಮಕಾರಿತ್ವ ಮತ್ತು ನಿಖರತೆಯನ್ನು ಸ್ಪಷ್ಟಪಡಿಸುತ್ತದೆ. ದಾಳಿಯ ಮುನ್ನ ಮತ್ತು ನಂತರದ ಫೋಟೋಗಳನ್ನ ಬಿಡುಗಡೆ ಮಾಡಲಾಗಿದೆ.
ಭಾರತೀಯ ಬಾಹ್ಯಾಕಾಶ ವಿಶ್ಲೇಷಣಾ ಸಂಸ್ಥೆ ಕಾವಾಸ್ಪೇಸ್ ಮತ್ತು ಚೀನಾ ಮೂಲದ ಮಿಜಾಜ್‌ವಿಷನ್ ಬಿಡುಗಡೆ ಮಾಡಿರುವ ಉಪಗ್ರಹ ದೃಶ್ಯಗಳು, ಭಾರತವು ಪಾಕಿಸ್ತಾನದ ವಾಯುಪ್ರದೇಶವನ್ನು ನಿಖರವಾಗಿ ಭೇದಿಸಿದೆ ಮಾತ್ರವಲ್ಲದೆ ಪ್ರಮುಖ ವಾಯು ಸ್ವತ್ತುಗಳು ಮತ್ತು ಮೂಲಸೌಕರ್ಯಗಳನ್ನು ಹಾನಿಗೊಳಿಸಿರೋದನ್ನು ದೃಢಪಡಸಿದೆ. ಭೋಲಾರಿ, ಜಾಕೋಬಾಬಾದ್ (ಷಾಬಾಜ್), ಸರ್ಗೋಧಾ ಮತ್ತು ರಾವಲ್ಪಿಂಡಿ ಬಳಿಯ ಕಾರ್ಯತಂತ್ರದ ನೂರ್ ಖಾನ್ ವಾಯುನೆಲೆ ಮೇಲೆ ಭಾರತ ನಿಖರವಾದ ದಾಳಿಯನ್ನು ಮಾಡಿದೆ.
ಭೋಲಾರಿ ವಾಯುನೆಲೆ
ಸಿಂಧ್‌ನಲ್ಲಿರುವ PAF ನೆಲೆ ಭೋಲಾರಿಯು ಭಾರತೀಯ ವಾಯು-ಉಡಾವಣಾ ಕ್ರೂಸ್ ಕ್ಷಿಪಣಿಯಿಂದ (ALCM) ವಿನಾಶಕಾರಿ ದಾಳಿಗೆ ಒಳಗಾಗಿದೆ ಎಂದು ಕಾವಾಸ್ಪೇಸ್‌ನ ಚಿತ್ರಗಳು ದೃಢಪಡಿಸುತ್ತವೆ, ಬ್ರಹ್ಮೋಸ್ ಬಳಕೆಯನ್ನು ಸೂಚಿಸುತ್ತದೆ. ಚದುರಿದ ಅವಶೇಷಗಳು ಮತ್ತು ಕಟ್ಟಡಕ್ಕೆ ಹಾನಿಯಾಗಿರೋದನ್ನು ಬಿಡುಗಡೆಯಾಗಿರುವ ಫೋಟೋಗಳಲ್ಲಿ ಕಾಣಬಹುದು.
ಜಾಕೋಬಾಬಾದ್ (ಶಹಬಾಜ್) ವಾಯುನೆಲೆ
ಪಾಕಿಸ್ತಾನದ ಮತ್ತೊಂದು ವಾಯುನೆಲೆಯಾಗಿರುವ ಜಕೋಬಾಬಾದ್‌ನ ಪಿಎಎಫ್ ಬೇಸ್ ಶಹಬಾಜ್ ಮೇಲೆಯೂ ಭಾರತದ ವಾಯುಪಡೆ ನಿಖರವಾಗಿ ದಾಳಿ ನಡೆಸಿದೆ. ಈ ವಾಯುನೆಲೆಯ ದಾಳಿಯ ಮುನ್ನ ಮತ್ತು ನಂತರದ ಫೋಟೋಗಳನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ. ಬೇಸ್‌ನ ಮುಖ್ಯ ಏಪ್ರನ್‌ನಲ್ಲಿರುವ ಹ್ಯಾಂಗರ್‌ಗೆ ನೇರ ಡಿಕ್ಕಿ ಹೊಡೆದಂತೆ ಕಂಡುಬರುತ್ತಿದೆ, ವಾಯು ಸಂಚಾರ ನಿಯಂತ್ರಣ (ಎಟಿಸಿ) ಕಟ್ಟಡವೂ ಭಾಗಶಃ ಹಾನಿಗೆ ಒಳಗಾದಂತೆ ಫೋಟೋದಲ್ಲಿ ಕಾಣಿಸುತ್ತದೆ.
ನೂರ್ ಖಾನ್ ವಾಯುನೆಲೆ
ಚೀನಾ ಮೂಲದ ಉಪಗ್ರಹ ಗುಪ್ತಚರ ಸಂಸ್ಥೆ ಮಿಜಾಜ್‌ವಿಷನ್ ರಾವಲ್ಪಿಂಡಿಯ ಚಕ್ಲಾಲಾದಲ್ಲಿರುವ ನೂರ್ ಖಾನ್ ವಾಯುನೆಲೆಯಲ್ಲಿ ಹಾನಿಯನ್ನು ದೃಢಪಡಿಸಿವೆ. ಇದು ಪಾಕಿಸ್ತಾನದ ಮಿಲಿಟರಿ ಕಮಾಂಡ್ ರಚನೆಗೆ ಹತ್ತಿರವಿರುವ ಅತ್ಯಂತ ಕಾರ್ಯತಂತ್ರದ ನೆಲೆಯಾಗಿದೆ. ಇಲ್ಲಿಯ ಮೂಲಸೌಕರ್ಯ ಮತ್ತು ವಾಹನಗಳನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಿತ್ತು.
ಸರ್ಗೋಧಾ ವಾಯುನೆಲೆ: ರನ್‌ವೇ ಗುರಿ
ಕವಾಸ್ಪೇಸ್ ಉತ್ತರ ವಾಯು ಕಮಾಂಡ್ ಸೌಲಭ್ಯವಾದ ಪಿಎಎಫ್ ಬೇಸ್ ಸರ್ಗೋಧಾದ ಚಿತ್ರಣವನ್ನು ಸಹ ಹಂಚಿಕೊಂಡಿದೆ. ದೃಶ್ಯಗಳು ರನ್‌ವೇ ಹಾನಿಯನ್ನು ಸೂಚಿಸುತ್ತವೆ, ಇದು ಬಹುಶಃ ವಿಮಾನ ಉತ್ಪಾದನಾ ಸಾಮರ್ಥ್ಯವನ್ನು ಕುಂಠಿತಗೊಳಿಸುವ ಗುರಿಯನ್ನು ಹೊಂದಿದೆ.


