ಪಹಲ್ಗಾಮ್ ಹತ್ಯಾಕಾಂಡದ ಪ್ರತೀಕಾರವಾಗಿ ಭಾರತ "ಆಪರೇಷನ್ ಸಿಂಧೂರ್" ನಡೆಸಿ ಪಾಕಿಸ್ತಾನ ಮತ್ತು ಪಿಒಕೆ ಒಂಬತ್ತು ಭಯೋತ್ಪಾದಕ ನೆಲೆಗಳ ಮೇಲೆ ದಾಳಿ ನಡೆಸಿತು. ಸಿಂಧೂರ ವಿವಾಹಿತ ಹಿಂದೂ ಮಹಿಳೆಯರ ಮತ್ತು ಯೋಧರ ಸಂಕೇತವಾಗಿದ್ದು, ಹತ್ಯಾಕಾಂಡದಲ್ಲಿ ಹಿಂದೂಗಳನ್ನು ಗುರಿಯಾಗಿಸಿ ಕೊಲ್ಲಲಾಗಿತ್ತು. ಈ ಕಾರ್ಯಾಚರಣೆ ಬಲಿಪಶುಗಳಿಗೆ ಗೌರವ ಸಲ್ಲಿಸುತ್ತದೆ ಮತ್ತು ಭಾರತದ ದೃಢಸಂಕಲ್ಪವನ್ನು ಪ್ರತಿಬಿಂಬಿಸುತ್ತದೆ.
ನವದೆಹಲಿ (ಮೇ.7): ನಾವು ಇಡೋ ಹೆಸರೇ ನಮ್ಮ ಸಂದೇಶ. ಬುಧವಾರ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ದ ಒಂಬತ್ತು ಸ್ಥಳಗಳ ಮೇಲೆ ದಾಳಿ ಮಾಡುವ ಮೂಲಕ ಭಾರತವು ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಸೇಡು ತೀರಿಸಿಕೊಂಡಿತು. ಈ ಆಪರೇಷನ್ ಮಿಷನ್‌ಗೆ ಭಾರತ ನೀಡಿದ್ದ ಹೆಸರು ಆಪರೇಷನ್ ಸಿಂಧೂರ್.
ಸಿಂದೂರ ಅಥವಾ ಕುಂಕುಮ ವಿವಾಹಿತ ಹಿಂದೂ ಮಹಿಳೆಯರ ಸಂಕೇತವಾಗಿದೆ ಮತ್ತು ಏಪ್ರಿಲ್ 22 ರಂದು ಪಹಲ್ಗಾಮ್ ಹತ್ಯಾಕಾಂಡದ ಉಲ್ಲೇಖ ಎನ್ನುವ ರೀತಿಯಲ್ಲಿ ಭಾರತ ಇದನ್ನು ಬಳಸಿತ್ತು. ಪಹಲ್ಗಾಮ್ ದಳಿಯಲ್ಲಿ ಹೊಸದಾಗಿ ಮದುವೆಯಾಗಿದ್ದವರನ್ನು ಸೇರಿದಂತೆ ಪುರುಷರನ್ನು ಅವರ ಧರ್ಮದ ಆಧಾರದ ಮೇಲೆ ಪ್ರತ್ಯೇಕಿಸಿ ಭಯೋತ್ಪಾದಕರು ಕೊಂದಿದ್ದರು. ಯೋಧರು ಸಿಂಧೂರ್ ತಿಲಕವನ್ನು ಸಹ ಹೆಮ್ಮೆಯಿಂದ ಧರಿಸುತ್ತಾರೆ. ಹಿಂದೂ ಮಹಿಳೆಯರ ಸಿಂಧೂರವನ್ನು ಅಳಿಸಿದ್ದಕ್ಕೆ ಪ್ರತಿಯಾಗಿ ಭಾರತ ಇಡೀ ಕಾರ್ಯಾಚರಣೆಗೆ ಆಪರೇಷನ್ ಸಿಂಧೂರ ಎಂದು ಹೆಸರನ್ನಿಟ್ಟಿತ್ತು.
ಗಡಿಯಾಚೆಗಿನ ದಾಳಿಯ ಮೊದಲ ಘೋಷಣೆಯಲ್ಲಿ, ಭಾರತೀಯ ಸೇನೆಯು ಆಪರೇಷನ್ ಸಿಂಧೂರ್ ಎಂಬ ಹೆಸರನ್ನು ದೃಶ್ಯೀಕರಿಸಲು ಒಂದು ಚಿತ್ರವನ್ನು ಬಳಸಿತು. ಬೆಳಗಿನ ಜಾವ ನಡೆದ ದಾಳಿಯಲ್ಲಿ ನಿಖರ ಮದ್ದುಗುಂಡುಗಳನ್ನು ಬಳಸಲಾಗಿತ್ತು, ಇವುಗಳನ್ನು ಸೇನೆ ಮತ್ತು ಭಾರತೀಯ ವಾಯುಪಡೆ (ಐಎಎಫ್) ಸಂಯೋಜಿಸಿ ಪಾಕಿಸ್ತಾನ ಮತ್ತು ಪಿಒಕೆಯಲ್ಲಿನ ಭಯೋತ್ಪಾದಕ ನೆಲೆಗಳ ಮೇಲೆ ದಾಳಿ ನಡೆಸಲಾಯಿತು.
"ಸ್ವಲ್ಪ ಸಮಯದ ಹಿಂದೆ, ಭಾರತೀಯ ಸಶಸ್ತ್ರ ಪಡೆಗಳು ಆಪರೇಷನ್ ಸಿಂದೂರ್ ಅನ್ನು ಪ್ರಾರಂಭಿಸಿದವು, ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದಲ್ಲಿನ ಭಯೋತ್ಪಾದಕ ಮೂಲಸೌಕರ್ಯಗಳ ಮೇಲೆ ದಾಳಿ ಮಾಡಿತು, ಅಲ್ಲಿಂದಲೇ ಭಾರತದ ವಿರುದ್ಧ ಭಯೋತ್ಪಾದಕ ದಾಳಿಗಳನ್ನು ಯೋಜಿಸಲಾಗಿತ್ತು. ಒಟ್ಟಾರೆಯಾಗಿ, ಒಂಬತ್ತು ಸ್ಥಳಗಳನ್ನು ಗುರಿಯಾಗಿಸಲಾಗಿದೆ" ಎಂದು ಭಾರತೀಯ ಸೇನೆ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.
ಪಾಕಿಸ್ತಾನದ ಬೆಂಬಲಿತ ಭಯೋತ್ಪಾದಕರು ಬೈಸರನ್‌ನಲ್ಲಿ ಹಿಂದೂ ಪುರುಷರನ್ನು ಗುರಿಯಾಗಿಸಿಕೊಂಡು ಗುಂಡು ಹಾರಿಸಿ ಕೊಂದಿದ್ದರು. ಪಹಲ್ಗಾಮ್ ನ ಈ ಸ್ಥಳಕ್ಕೆ ಹನಿಮೂನ್‌ಗೆ ಹೆಚ್ಚಾಗಿ ಭೇಟಿ ನೀಡುತ್ತಾರೆ.
ಕೇವಲ ಆರು ದಿನಗಳ ಹಿಂದಷ್ಟೇ ವಿವಾಹವಾಗಿದ್ದ ಹಿಮಾಂಶಿ ನರ್ವಾಲ್, ತನ್ನ ಪತಿ, ನೌಕಾಪಡೆಯ ಅಧಿಕಾರಿ ಲೆಫ್ಟಿನೆಂಟ್ ವಿನಯ್ ನರ್ವಾಲ್ ಅವರ ಮೃತದೇಹದ ಪಕ್ಕದಲ್ಲಿ ಕುಳಿತು ಕಣ್ಣೀರಿಟ್ಟಿದ್ದು ಇಡೀ ಪಹಲ್ಗಾಮ್ ಹತ್ಯಾಕಾಂಡದ ದುರಂತ ಚಿತ್ರ ಎನಿಸಿತ್ತು.
ಕೆಲವು ದಿನಗಳ ನಂತರ, ಹಿಮಾಂಶಿ ತನ್ನ ಪತಿಗೆ ಗೌರವ ಸಲ್ಲಿಸುವ ವೇಳೆ ಕಾಣಿಸಿಸಿಕೊಂಡಿದ್ದರು. ಪಹಲ್ಗಾಮ್ ಸಮಯದಲ್ಲಿ ಆಕೆಯ ಹಣೆಯ ಮೇಲಿದ್ದ ಸಿಂಧೂರ ಈ ಸಮಯದಲ್ಲಿ ಇಲ್ಲವಾಗಿತ್ತು. ದೇಶವನ್ನೇ ಬೆಚ್ಚಿಬೀಳಿಸಿದ್ದು ಕೇವಲ ಆ ಅನಾಗರಿಕತೆ ಮಾತ್ರವಲ್ಲ, ಭಾರತದ ದೃಢಸಂಕಲ್ಪವನ್ನು ಉಕ್ಕಿಸಿದವರು ಮಹಿಳೆಯರ ಮುಖಗಳು.
ಈಗ ಭಾರತದ ಸೇನೆ ಬೆಂಕಿ ಮತ್ತು ರೋಷದಿಂದ ತನ್ನ ಪ್ರತಿಕ್ರಿಯೆ ನೀಡಿದೆ.ಈ ಬಾರಿ ನೀಡಿದ ಇನ್ನೊಂದು ಸಂದೇಶ - ಆಪರೇಷನ್ ಸಿಂಧೂರ್.
ಆಪರೇಷನ್ ಸಿಂಧೂರ್ ಎಂಬ ಈ ಕಾರ್ಯಾಚರಣೆಯ ಹೆಸರಿನ ವಿಶೇಷತೆಯೆಂದರೆ, ಅದು ಪಹಲ್ಗಾಮ್ ಹತ್ಯಾಕಾಂಡದ ಬಲಿಪಶುಗಳು ಮತ್ತು ಬದುಕುಳಿದವರನ್ನು ಮಾನವೀಯಗೊಳಿಸುತ್ತದೆ ಮತ್ತು ಜೀವಗಳು ನಿರ್ಜೀವ ಸಂಖ್ಯೆಯಲ್ಲಿ ಕಳೆದುಹೋಗಲು ಬಿಡುವುದಿಲ್ಲ. ಭಾರತವು ಅಮೂಲ್ಯವಾದ ಮತ್ತು ಆಚರಿಸಲ್ಪಡುತ್ತಿದ್ದ ಜೀವಹಾನಿಗೆ ಸೇಡು ತೀರಿಸಿಕೊಳ್ಳಲು ಶ್ರಮಿಸುತ್ತಿದೆ ಎಂಬುದನ್ನು ಇದು ತೋರಿಸಿದೆ.
ವಧುವಿನ ಹಣೆಯ ಮೇಲೆ ಕುಂಕುಮದ ಪುಡಿಯ ಒಂದು ಚಿಟಿಕೆ ಹಚ್ಚುವುದು ಆಕೆಯ ಪತಿಯ ಜೀವನವನ್ನು ಗುರುತಿಸುತ್ತದೆ. ಇದು ಮಹಿಳೆ ವಿವಾಹಿತಳಾಗಿದ್ದು, ಆಕೆಯ ಪತಿ ಜೀವಂತವಾಗಿದ್ದಾನೆ ಎಂಬುದನ್ನು ಸೂಚಿಸುತ್ತದೆ. ವಿವಾಹಿತ ಹಿಂದೂ ಮಹಿಳೆಯರ ಜೀವನದಲ್ಲಿ ಇದು ಸಾಂಪ್ರದಾಯಿಕ ಮತ್ತು ಸಾಂಸ್ಕೃತಿಕ ಮಹತ್ವವನ್ನು ಹೊಂದಿದೆ.
ಕೆಲವು ಸಂಪ್ರದಾಯಗಳಲ್ಲಿ, ಸಿಂಧೂರವು ಪಾರ್ವತಿ ದೇವಿಗೆ ಸಂಬಂಧಿಸಿದೆ, ಅವರನ್ನು ವೈವಾಹಿಕ ಭಕ್ತಿಯ ಸಾರಾಂಶವೆಂದು ಪರಿಗಣಿಸಲಾಗುತ್ತದೆ. ಸಿಂಧೂರ ಅಥವಾ ಕುಂಕುಮ ಕೂಡ ಯೋಧನ ಗುರುತು.
ಭಾರತದ ಯೋಧರು ಆಕ್ರಮಣಕಾರಿ ಶತ್ರುವನ್ನು ಎದುರಿಸಲು ಹೋಗುವಾಗ ತಮ್ಮ ಹಣೆಯ ಮೇಲೆ ತಿಲಕವನ್ನು, ಹೆಚ್ಚಾಗಿ ಸಿಂಧೂರವನ್ನು ಹಾಕಿಕೊಳ್ಳುತ್ತಾರೆ.
ರಜಪೂತರು ಮತ್ತು ಮರಾಠ ಯೋಧರು ತಮ್ಮ ಭೂಮಿ ಮತ್ತು ಧರ್ಮಕ್ಕಾಗಿ ಶತ್ರುಗಳ ವಿರುದ್ಧ ಹೋರಾಡುವಾಗ ತಲೆಯೆತ್ತಿ ನಿಂತಾಗ ಹಣೆಯ ಮೇಲೆ ಕುಂಕುಮವನ್ನು ಹಾಕಿಕೊಂಡಿದ್ದು ತೋರಿಸಲಾಗಿದೆ. ಮುಗ್ಧ ನಾಗರಿಕರ ರಕ್ತ ಚೆಲ್ಲಿದ ಕಾರಣ ಇದು ಕೂಡ ಧರ್ಮಕ್ಕಾಗಿ, ಅಂದರೆ ಸದಾಚಾರಕ್ಕಾಗಿ ನಡೆದ ಯುದ್ಧವೆನಿಸಿಕೊಂಡಿದೆ.
ಪಾಕಿಸ್ತಾನ ಮತ್ತು ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕರು ಭಾರತೀಯ ನಾಗರಿಕರಿಗೆ ಹಾನಿ ಮಾಡುವುದನ್ನು ಎಂದಿಗೂ ನಿಲ್ಲಿಸಿಲ್ಲವಾದರೂ, ಭಾರತ ತನ್ನ ಪ್ರತಿದಾಳಿಗಳನ್ನು ಭಯೋತ್ಪಾದಕ ನೆಲೆಗಳು ಮತ್ತು ಶಿಬಿರಗಳಿಗೆ ಸೀಮಿತಗೊಳಿಸಲು ಹೆಚ್ಚಿನ ಕಾಳಜಿ ವಹಿಸಿದೆ. ಬುಧವಾರ ಬಿಡುಗಡೆ ಮಾಡಿದ ಭಾರತ ಹೇಳಿಕೆಯಲ್ಲಿ ಇದನ್ನು ಸ್ಪಷ್ಟಪಡಿಸಲಾಗಿದೆ. ಭಾರತ ಯಾವುದೇ ಪಾಕಿಸ್ತಾನಿ ಮಿಲಿಟರಿ ಸೌಲಭ್ಯಕ್ಕೆ ಹಾನಿ ಮಾಡಿಲ್ಲ ಎಂದು ಬಹಳ ಸ್ಪಷ್ಟವಾಗಿ ತಿಳಿಸಿದೆ. ಆದ್ದರಿಂದ, ಪಾಕಿಸ್ತಾನ ಮತ್ತು ಪಿಒಕೆಯಲ್ಲಿ ಭಾರತ ನಡೆಸಿದ ಬೆಳಗಿನ ಪೂರ್ವ ಭಯೋತ್ಪಾದನಾ ವಿರೋಧಿ ದಾಳಿಗಳ ಹೆಸರಿಗೆ ಹೆಚ್ಚಿನ ಮಹತ್ವವಿದೆ.


