ಬಾಗಿಲ ಸಂದಿಗೆ ಸಿಲುಕಿಕೊಂಡ 15 ತಿಂಗಳ ಮಗುವಿನ ಬೆರಳು, ಅಗ್ನಿಶಾಮಕ ದಳದಿಂದ ರಕ್ಷಣೆ
ಅಗ್ನಿಶಾಮಕ ದಳಡದ ಸಿಬ್ಬಂದಿ ಮನೆಗೆ ಆಗಮಿಸಿ, ಮಗುವಿನ ಬೆರಳನ್ನು ಯಾವುದೇ ಗಾಯಗಳಿಲ್ಲದೆ ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಕೊಚ್ಚಿ (ನ.15): ಫ್ಲ್ಯಾಟ್‌ನ ಕೋಣೆಯಲ್ಲಿ ಬಾಗಿಲು ಹಾಗೂ ಬಾಗಿಲ ಚೌಕಟ್ಟಿನ ನಡುವೆ 15 ತಿಂಗಳ ಬಾಲಕಿಯ ಕೈಬೆರಳು ಸಿಲುಕಿಹಾಕಿಕೊಂಡು ಆಕ್ರಂದನ ಮಾಡುತ್ತಿದ್ದಾಗ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬಂದು ಮಗುವನ್ನು ರಕ್ಷಣೆ ಮಾಡಿದ್ದಾರೆ. ಪ್ರಮಾಡಂ ಪಂಚಾಯತ್‌ನ ಅಮ್ಮೂಮ್ಮತೋಡ್ ವಲಿಯವಿಳದಲ್ಲಿ ಅಭಿಜತ್ ಸಾರಾ ಆಲ್ವಿನ್ ಎಂಬ ಮಗುವಿನ ಬೆರಳುಗಳು ಬಾಗಿಲಲ್ಲಿ ಸಿಕ್ಕಿಹಾಕಿಕೊಂಡಿದ್ದವು. ಪತ್ತನಂತಿಟ್ಟದಿಂದ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಯಾವುದೇ ಗಾಯಗಳಿಲ್ಲದೆ ಮಗುವಿನ ಬೆರಳನ್ನು ಬಾಗಿಲ ಸಂದಿಯಿಂದ ಹೊರತೆಗೆದಿದ್ದಾರೆ.
ಎಸ್‌ಬಿಐ ಕುಂಬಳ ಶಾಖೆಯ ಉದ್ಯೋಗಿಯಾಗಿರುವ ಅಡೂರ್ ಮೂಲದ ಆಲ್ವಿನ್ ಪಿ ಕೋಶಿ ಮತ್ತು ಅನೀನಾ ಅನ್ನಾ ರಾಜನ್ ದಂಪತಿಗಳ ಮಗಳು ಅಭಿಜತ್‌ಳ ಕೈ ಬೆರಳುಗಳು ಬಾಗಿಲ ಸಂದಿಯಲ್ಲಿ ಸಿಕ್ಕಿಹಾಕಿಕೊಂಡಿತ್ತು. ತಂದೆ-ತಾಯಿ ಎಷ್ಟೇ ಪ್ರಯತ್ನಪಟ್ಟರೂ ಮಗುವಿನ ಬೆರಳನ್ನು ಹೊರತೆಗೆಯಲು ಸಾಧ್ಯವಾಗಿರಲಿಲ್ಲ. ಅದಲ್ಲದೆ, ಪ್ರಯತ್ನಪೂರ್ವಕವಾಗಿ ಬಾಗಿಲನ್ನು ಎಳೆದರೆ ಮಗುವಿನ ಕೈಬೆರಳು ತುಂಡಾಗುವ ಅಪಾಯವೂ ಇತ್ತು. ನೋವಿನಿಂದ ಮಗು ಬಹಳ ಕಾಲ ಅಳುತ್ತಿದ್ದರೂ, ಆಕೆಯೊಂದಿಗೆ ತಾಯಿ ಕೂಡ ಕಣ್ಣೀರು ಹಾಕಿದ್ದು ಬಿಟ್ಟರೆ ಬೇರೆನೂ ಮಾಡಲು ಸಾಧ್ಯವಾಗಿರಲಿಲ್ಲ. ಮಗು ಅಳುತ್ತಿರುವ ನಡುವೆಯೂ ಗಾಯವಾಗದಂತೆ ಬೆರಳನ್ನು ಹೊರತೆಗೆಯುವ ಪ್ರಯತ್ನ ಮಾಡಿದ್ದರು. ಇದರಲ್ಲಿ ಯಶಸ್ವಿಯಾಗದೇ ಇದ್ದಾಗ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿತ್ತು.
ಪತ್ತನಂತಿಟ್ಟ ಅಗ್ನಿಶಾಮಕ ಠಾಣೆಯ ಸಹಾಯಕ ಠಾಣಾಧಿಕಾರಿ ಎ. ಸಾಬು ನೇತೃತ್ವದಲ್ಲಿ ಹಿರಿಯ ಅಗ್ನಿಶಾಮಕ ಮತ್ತು ರಕ್ಷಣಾ ಅಧಿಕಾರಿ ಎಸ್ ರಂಜಿತ್, ಅಗ್ನಿಶಾಮಕ ಮತ್ತು ರಕ್ಷಣಾ ಅಧಿಕಾರಿಗಳಾದ ಇ ನೌಷಾದ್, ಎಸ್ ಫ್ರಾನ್ಸಿಸ್, ಎ ರಂಜಿತ್, ವಿ ಶೈಜು, ಎನ್.ಆರ್. ತನ್ಸೀರ್, ಕೆ.ಆರ್. ವಿಷ್ಣು ಮುಂತಾದವರು ರಕ್ಷಣಾ ಕಾರ್ಯದಲ್ಲಿ ಭಾಗವಹಿಸಿ ಮಗುವನ್ನು ಹಾಗೂ ಆಕೆಯ ಕೈಬೆರಳನ್ನು ರಕ್ಷಣೆ ಮಾಡಿದ್ದಾರೆ.
Bhatkal: 50 ಸಾವಿರ ಲಂಚ ಪಡೆಯುವಾಗ ಸಿಕ್ಕಿಬಿದ್ದ ಪುರಸಭೆ ಮುಖ್ಯಾಧಿಕಾರಿ ನೀಲಕಂಠ ಮೆಸ್ತಾ