ನವೆಂಬರ್ 1 ರಿಂದ ಕೆಲ ಕಡ್ಡಾಯ ರೂಲ್ಸ್ ಜಾರಿಯಾಗಿದೆ. ಹಳೇ ವಾಹನ ಪ್ರವೇಶ ನಿಷೇಧಿಸಲಾಗಿದೆ. ಶೇಕಡಾ 50ರಷ್ಟು ಮಂದಿಗೆ ವರ್ಕ್ ಫ್ರಮ್ ಹೋಮ್ ಕಡ್ಡಾಯವಾಗಿದೆ. ರಾಷ್ಟ್ರ ರಾಜಧಾನಿಯಲ್ಲಿ ಕಠಿಣ ನಿಯಮಗಳು ಜಾರಿಯಾಗಿದೆ.

ದೆಹಲಿ (ನ.01) ಪ್ರತಿ ತಿಂಗಳ ಆರಂಭದಲ್ಲಿ ಕೆಲ ನಿಯಮಗಳು, ಬೆಲೆಗಳು ಬದಲಾಗುತ್ತದೆ. ಆದರೆ ಈ ಬಾರಿ ನವೆಂಬರ್ ತಿಂಗಳ ಆರಂಭದಿಂದ ಕೆಲ ಕಠಿಣ ನಿಯಮಗಳು ಜಾರಿಯಾಗಿದೆ. ಇಂದಿನಿಂದ ಹಳೇ ವಾಹನ ಪ್ರವೇಶವನ್ನು ನಿಷೇಧಿಸಲಾಗಿದೆ. ಶೇಕಡಾ 50ರಷ್ಟು ಮಂದಿಗೆ ವರ್ಕ್ ಫ್ರಮ್ ಹೋಮ್ ನೀಡುವುದು ಕಡ್ಡಾಯವಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯು ಮಾಲಿನ್ಯ ತೀವ್ರವಾಗುತ್ತಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ಕಠಿಣ ನಿಯಮಗಳು ಇಂದಿನಿಂದ ಜಾರಿಯಾಗಿದೆ. ಮಾಲಿನ್ಯ ತಗ್ಗಿಸಲು ದೆಹಲಿ ಸರ್ಕಾರ ಈ ಕ್ರಮಗಳನ್ನು ಕೈಗೊಂಡಿದೆ. ಹಳೇ ವಾಹನಗಳು (BS6 ಎಮಿಷನ್ ರಹಿತ) ದೆಹಲಿ ಪ್ರವೇಶ ನಿಷೇಧಿಸಿಲಾಗಿದೆ. ಇತ್ತ ದೆಹಲಿಯಲ್ಲಿ ಕಂಪನಿಗಳು ಶೇಕಡಾ 50ರಷ್ಟು ಮಂದಿಗೆ ಮನೆಯಿಂದ ಕೆಲಸ ಮಾಡಲು ಅವಕಾಶ ನೀಡಬೇಕು.

ನವೆಂಬರ್ 1ರಿಂದ ಬದಲಾದ ರೂಲ್ಸ್

ದೆಹಲಿಯಲ್ಲಿ ಹೆಚ್ಚಾಗುತ್ತಿರುವ ವಾಯು ಮಾಲಿನ್ಯ ನಿಯಂತ್ರಿಸಲು ದೆಹಲಿ ಸರ್ಕಾರ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿಯು ನವೆಂಬರ್ 1ರಿಂದ ಜಾರಿಗೆ ಬರುವಂತೆ ಅತ್ಯಂತ ಕಠಿಣ ನಿಯಮಗಳನ್ನು ಜಾರಿಗೊಳಿಸಿದೆ. ನವೆಂಬರ್ 1ರಿಂದ ಜನವರಿ 31ರವರೆಗೆ ದೆಹಲಿ ಹಾಗೂ ಎನ್‌ಸಿಆರ್ ವ್ಯಾಪ್ತಿಯಲ್ಲಿ ಬಿಎಸ್‌-6 (BS6) ಮಾನದಂಡ ಹೊಂದಿಲ್ಲದ ಹಾಗೂ ಇತರೆ ರಾಜ್ಯಗಳಲ್ಲಿ ನೋಂದಣಿಯಾಗಿರುವ ಹಳೆಯ ಡೀಸೆಲ್ ಮತ್ತು ಪೆಟ್ರೋಲ್ ವಾಹನಗಳ ಪ್ರವೇಶ ಹಾಗೂ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ನಿಯಮ ಉಲ್ಲಂಘಿಸುವ ವಾಹನಗಳ ವಿರುದ್ಧ RTO ಹಾಗೂ ಸಂಚಾರ ಪೊಲೀಸರು ಆಟೋಮೆಟಿಕ್ ಇ-ಚಲನ್ (E-Challan) ಮೂಲಕ ದಂಡ ವಿಧಿಸಲಿದ್ದಾರೆ. ಇದರ ಜೊತೆಗೆ ನಗರಾಡಳಿತವು ನಗರದ ಸುಮಾರು 500 ಇಂಧನ ಬಂಕ್‌ಗಳಲ್ಲಿ ‘ನೋ ಪಿ ಯು ಸಿ (ಎಮಿಶನ್ ಟೆಸ್ಟ್), ನೋ ಫ್ಯೂಯೆಲ್’ (No PUC, No Fuel) ನಿಯಮವನ್ನು ಜಾರಿಗೆ ತಂದಿದೆ. ಈ ಮೂಲಕ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (PUCC) ಇಲ್ಲದ ವಾಹನಗಳಿಗೆ ಪೆಟ್ರೋಲ್, ಡೀಸೆಲ್ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಸಿಬ್ಬಂದಿಗೆ ಕಡ್ಡಾಯ ವರ್ಕ್ ಫ್ರಮ್ ಹೋಮ್

ರಸ್ತೆಗಳಲ್ಲಿ ವಾಹನ ಸಂಚಾರ ದಟ್ಟಣೆ ಹಾಗೂ ಹೊಗೆಯ ಪ್ರಮಾಣವನ್ನು ತಗ್ಗಿಸುವ ಉದ್ದೇಶದಿಂದ ಸರ್ಕಾರಿ ಮತ್ತು ಖಾಸಗಿ ಕಚೇರಿಗಳಲ್ಲಿ ಶೇಕಡಾ 50ರಷ್ಟು ಸಿಬ್ಬಂದಿಗೆ ಕಡ್ಡಾಯವಾಗಿ ‘ವರ್ಕ್ ಫ್ರಮ್ ಹೋಮ್’ (Work From Home) ನೀಡಲು ಸೂಚಿಸಲಾಗಿದೆ. ಕಚೇರಿಗೆ ಬರುವ ಸಿಬ್ಬಂದಿಗೆ ಹಂತ-ಹಂತದ (Staggered) ಸಮಯವನ್ನು ನಿಗದಿಪಡಿಸಲಾಗಿದೆ. ಸಾರ್ವಜನಿಕ ಉದ್ಯೋಗಿಗಳು ಕಚೇರಿಯ ವೇಳಾಪಟ್ಟಿಯನ್ನು ಹಂಚಿಕೊಂಡು ಕ್ಯಾರ್‌ಪೂಲಿಂಗ್ ಅಥವಾ ಸಾರ್ವಜನಿಕ ಸಾರಿಗೆಯನ್ನು ಬಳಸಲು ಪ್ರೋತ್ಸಾಹಿಸಲಾಗುತ್ತಿದೆ. ಆಸ್ಪತ್ರೆ, ಅಗ್ನಿಶಾಮಕ, ಪೊಲೀಸ್ ಮತ್ತು ತುರ್ತು ಸೇವೆಗಳಿಗೆ ಮಾತ್ರ ಈ ನಿಯಮದಿಂದ ವಿನಾಯಿತಿ ನೀಡಲಾಗಿದೆ.

ಪಾರ್ಕಿಂಗ್ ಶುಲ್ಕ ಡಬಲ್

ಖಾಸಗಿ ವಾಹನಗಳ ಬಳಕೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ದೆಹಲಿ ನಗರಪಾಲಿಕೆ ಹಾಗೂ ಎನ್‌ಡಿಎಂಸಿ ವ್ಯಾಪ್ತಿಯ ಅಧಿಕೃತ ಪಾರ್ಕಿಂಗ್ ತಾಣಗಳಲ್ಲಿ ಇಂದಿನಿಂದ ಪಾರ್ಕಿಂಗ್ ಶುಲ್ಕವನ್ನು ಶೇಕಡಾ 100ರಷ್ಟು (ಡಬಲ್) ಹೆಚ್ಚಿಸಲಾಗಿದೆ. ಆದರೆ ದೆಹಲಿ ಮೆಟ್ರೋ (DMRC) ನಿರ್ವಹಿಸುವ ಪಾರ್ಕಿಂಗ್ ಸ್ಥಳಗಳಿಗೆ ಈ ದರ ಏರಿಕೆಯಿಂದ ವಿನಾಯಿತಿ ನೀಡಲಾಗಿದೆ. ಕಟ್ಟಡ ನಿರ್ಮಾಣ ಕಾಮಗಾರಿಗಳ ಮೇಲೆ ನಿರ್ಬಂಧ ಹೇರಲಾಗಿದೆ. ಸಾರ್ವಜನಿಕರ ಆರೋಗ್ಯ ಸುರಕ್ಷತೆಯಿಂದ ಕಠಿಣ ನಿಯಮಗಳನ್ನು ಜಾರಿಗೊಳಿಸಲಾಗಿದೆ. ದೆಹಲಿಯಲ್ಲಿ ವಾಯು ಮಾಲಿನ್ಯ ತೀವ್ರಗೊಳ್ಳುತ್ತಿದ್ದಂತೆ ಉಸಿರಾಟ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿದೆ. ಸಾಲು ಸಾಲು ಹಬ್ಬಗಳಿರುವ ಪರಿಣಾಮ ಮಾಲಿನ್ಯದ ಪ್ರಮಾಣ ಹೆಚ್ಚಾಗುವ ಆತಂಕ ಎದುರಾಗಿದೆ. ಹೀಗಾಗಿ ದೆಹಲಿ ಸರ್ಕಾರ ಕಠಿಣ ನಿಯಮ ಜಾರಿ ಮಾಡಿದೆ.