ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ನಮ್ಮ ಮೆಟ್ರೋದ ಬ್ಲೂ ಲೈನ್ ಕಾಮಗಾರಿ ತೀವ್ರ ವಿಳಂಬವಾಗುತ್ತಿದೆ. ಮೂಲಸೌಕರ್ಯ ಸವಾಲುಗಳು, ಭೂಸ್ವಾಧೀನ ಸಮಸ್ಯೆಗಳು ಮತ್ತು ವೆಚ್ಚ ಹೆಚ್ಚಳವೇ ಈ ವಿಳಂಬಕ್ಕೆ ಪ್ರಮುಖ ಕಾರಣಗಳಾಗಿವೆ. 2027-28ರ ವೇಳೆಗೆ ಈ ಮಾರ್ಗ ಸಾರ್ವಜನಿಕರಿಗೆ ಮುಕ್ತವಾಗುವ ನಿರೀಕ್ಷೆಯಿದೆ. ತಮಿಳುನಾಡಿನ ಆ ಒಂದು ನಿರ್ಧಾರ ಬಿಟ್ಟು ಏನೆಲ್ಲಾ ಸವಾಲಿದೆ ಇಲ್ಲಿದೆ ಸಂಪೂರ್ಣ ವಿವರ.

ಬೆಂಗಳೂರಿನ ಅತ್ಯಂತ ನಿರೀಕ್ಷಿತ ಸಾರಿಗೆ ಯೋಜನೆಗಳಲ್ಲಿ ಒಂದಾದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ನಮ್ಮ ಮೆಟ್ರೋದ 58.19 ಕಿ.ಮೀ ಉದ್ದದ ಬ್ರ್ಯಾಂಡೆಡ್ ‘ಬ್ಲೂ ಲೈನ್’ ಕಾಮಗಾರಿಯು ತೀವ್ರ ವಿಳಂಭವಾಗುತ್ತಿದೆ. ಇದಕ್ಕೆ ಈಗ ತಮಿಳುನಾಡು ಇತರ ರಾಜ್ಯಗಳಿಗೆ ಸಿಮೆಂಟ್, ಕಲ್ಲು, ಜಲ್ಲಿ ರಫ್ತು ಬ್ಯಾನ್ ಮಾಡಿರುವುದು ಕಾರಣ ಎನ್ನಲಾಗುತ್ತಿದೆ. ಆದರೆ ಕಾರಣ ಇದೊಂದೇ ಅಲ್ಲ.

ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ ಹೊರ ವರ್ತುಲ ರಸ್ತೆ ಮಾರ್ಗವಾಗಿ ಕೆಐಎ ಸಂಪರ್ಕಿಸುವ ಈ ಕಾರಿಡಾರ್, ಲಕ್ಷಾಂತರ ಪ್ರಯಾಣಿಕರಿಗೆ ಮತ್ತು ಐಟಿ ಉದ್ಯೋಗಿಗಳಿಗೆ ನೇರ ಹಾಗೂ ಸುಲಭ ಪ್ರಯಾಣದ ಆಯ್ಕೆಯಾಗಿದೆ. ಆದರೂ ಹಲವು ಕಾರಣಗಳಿಂದ ಈ ಯೋಜನೆ ಪೂರ್ಣಗೊಳ್ಳುವುದು ತೀವ್ರ ವಿಳಂಬವಾಗುತ್ತಿದೆ.

ನಿರ್ಮಾಣದ ಸವಾಲುಗಳೇನು?

ಬ್ಲೂ ಲೈನ್ ಯೋಜನೆಗೆ ಮುಖ್ಯವಾಗಿ ಸಮಸ್ಯೆ ಇರುವುದು ಔಟರ್‌ ರಿಂಗ್ ರೋಡ್ ಮತ್ತು ಹೆಬ್ಬಾಳ - ಕೆಂಪಾಪುರ ಮಾರ್ಗದಲ್ಲಿನ ಕಠಿಣ ಮೂಲಸೌಕರ್ಯ ಸವಾಲುಗಳು

ಮಾರ್ಗ ಮಾಡಲು ಬೇಕಾದ ವಿಶೇಷ ಪೋರ್ಟಲ್ ರಚನೆ: ಹೆಬ್ಬಾಳ ಮತ್ತು ಕೆಂಪಾಪುರ ನಡುವಿನ ಸುಮಾರು 1 ಕಿ.ಮೀ. ಭಾಗದಲ್ಲಿ 4 ಮೆಟ್ರೋ ಹಳಿಗಳನ್ನು ಅಳವಡಿಸುವಂತಹ ವಿಶೇಷ ‘ಮೂರು-ಪಿಯರ್ ಪೋರ್ಟಲ್’ ಸಂರಚನೆಯನ್ನು ಬಿಎಮ್‌ಆರ್‌ಸಿಎಲ್ ನಿರ್ಮಿಸುತ್ತಿದೆ. ಇದು ನಮ್ಮ ಮೆಟ್ರೋ ಜಾಲದಲ್ಲೇ ಮೊದಲ ಪ್ರಯೋಗವಾಗಿದೆ. ಭವಿಷ್ಯದಲ್ಲಿ ನಿರ್ಮಿಸಲು ಉದ್ದೇಶಿಸಲಾದ ‘ಆರೆಂಜ್ ಲೈನ್’ ಜೊತೆಗೆ ಬ್ಲೂ ಲೈನ್ ಅನ್ನು ಕನೆಕ್ಟ್ ಮಾಡಲು ಈ ತಾಂತ್ರಿಕ ಮಾದರಿಯನ್ನು ರೂಪಿಸಲಾಗಿದೆ. ಇದು ಸವಾಲಿನ ಕೆಲಸವಾಗಿದೆ

ಭಾರೀ ಸಂಚಾರ ಮತ್ತು ನೈಟ್ ಶಿಫ್ಟ್ ಕೆಲಸ: ಔಟರ್ ರಿಂಗ್‌ ರೋಡ್‌ ಪ್ರಮುಖ ಐಟಿ ಕಾರಿಡಾರ್ ಆಗಿರುವುದರಿಂದ, ಹಗಲು ವೇಳೆಯಲ್ಲಿ ಸಂಚಾರ ದಟ್ಟಣೆ ಜಾಸ್ತಿ ಇರುತ್ತದೆ. ಸಂಚಾರಕ್ಕೆ ತೊಂದರೆಯಾಗದಂತೆ ರಾತ್ರಿ ವೇಳೆ ಮಾತ್ರ ಪಿಲ್ಲರ್ ಮತ್ತು ಗರ್ಡರ್ ಅಳವಡಿಕೆ ಕಾಮಗಾರಿಗಳನ್ನು ನಡೆಸಲಾಗುತ್ತಿದೆ. ಇದು ಕೆಲಸದ ವೇಗವನ್ನು ಕಡಿಮೆ ಮಾಡುತ್ತದೆ.

ಏಕಕಾಲಿಕ ಮೂಲಸೌಕರ್ಯ ಅಭಿವೃದ್ಧಿ: ಸಿಲ್ಕ್ ಬೋರ್ಡ್ ಜಂಕ್ಷನ್‌ನಲ್ಲಿ ಸಿಗ್ನಲ್-ಫ್ರೀ ಫ್ಲೈಓವರ್, ರಸ್ತೆ ಅಗಲೀಕರಣ ಮತ್ತು ಮೆಟ್ರೋ ಪಿಲ್ಲರ್‌ಗಳನ್ನು ಒಂದೇ ಸಮಯದಲ್ಲಿ ನಿರ್ಮಿಸುವ ಸವಾಲು ಕೆಲಸದ ವೇಗವನ್ನು ತಗ್ಗಿಸಿದೆ. ಜಮೀನು ಅಭಾವ ಹಾಗೂ ಕಾರ್ಯನಿರತ ರಸ್ತೆಗಳ ನಡುವೆ ಮೆಟ್ರೋ ನಿಲ್ದಾಣಗಳನ್ನು ವಿನ್ಯಾಸಗೊಳಿಸುವುದು ಪ್ರಮುಖ ತೊಡಕಾಗಿತ್ತು.

ಯೋಜನೆ ವಿಳಂಬಕ್ಕೆ ಪ್ರಮುಖ ಕಾರಣಗಳು

ಯೋಜನೆ ಪ್ರಾರಂಭವಾದ ಹಂತದಿಂದಲೂ ಹಲವಾರು ಆಡಳಿತಾತ್ಮಕ ಮತ್ತು ತಾಂತ್ರಿಕ ಅಡೆತಡೆಗಳು ವೇಗದ ಕಾಮಗಾರಿಗೆ ಸಮಸ್ಯೆಯಾಗಿತ್ತು. ಆರಂಭಿಕ ಹಂತದಲ್ಲಿ ರಕ್ಷಣಾ ಸಚಿವಾಲಯ ಮತ್ತು ರೈಲ್ವೆ ಇಲಾಖೆಗೆ ಸೇರಿದ ಭೂಮಿಯನ್ನು ವಶಪಡಿಸಿಕೊಳ್ಳಲು ಬಿಎಮ್‌ಆರ್‌ಸಿಎಲ್‌ಗೆ ಬಹಳಷ್ಟು ಸಮಯ ಹಿಡಿಯಿತು.

ತದ ನಂತರ ಈ ಮಾರ್ಗ ಹಾದು ಹೋಗುವಲ್ಲಿ ಇದ್ದ ಮರಗಳನ್ನು ಕಡಿಯಲು ಸಂಬಂಧಿಸಿದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗಳು ಮತ್ತು ಹೈಕೋರ್ಟ್ ವಿಧಿಸಿದ್ದ ತಡೆಯಾಜ್ಞೆಗಳಿಂದಾಗಿ ಫೇಸ್ 2A (ಸಿಲ್ಕ್ ಬೋರ್ಡ್ - ಕೆ.ಆರ್. ಪುರಂ) ಕಾಮಗಾರಿಯು ಸುಮಾರು ಒಂದು ವರ್ಷಕ್ಕೂ ಹೆಚ್ಚು ಕಾಲ ಸ್ಥಗಿತಗೊಂಡಿತ್ತು.

ಇದಾದ ನಂತರ ಹೆಬ್ಬಾಳ, ಮಾರತಹಳ್ಳಿ ಮತ್ತು ನಾಗವಾರ ಭಾಗಗಳಲ್ಲಿ ಭೂಗತ ಕಾವೇರಿ ನೀರಿನ ಮುಖ್ಯ ಪೈಪ್‌ಲೈನ್‌ಗಳು, ಒಳಚರಂಡಿ ನಾಲಾಗಳು ಮತ್ತು ಹೈ-ಟೆನ್ಷನ್ ವಿದ್ಯುತ್ ಲೈನ್‌ಗಳನ್ನು ಸ್ಥಳಾಂತರಿಸುವ ಕೆಲಸವು ಸಾಕಷ್ಟು ಸಮಯ ತೆಗೆದುಕೊಂಡಿತು. ಜೊತೆಗೆ ಭೂಗತ ಮಾರ್ಗಕ್ಕೆ ಭೂಮಿಯನ್ನು ಕಿ.ಮೀಗಟ್ಟಲೆ ಕೊರೆಯಲು ಕೂಡ ಸಾಕಷ್ಟು ಸಮಯ ಬೇಕಿದೆ. ಇದರ ಜೊತೆಗೆ ಕೋವಿಡ್-19 ಮತ್ತು ಲಾಕ್‌ಡೌನ್ ಸಮಯದಲ್ಲಿ ತವರೂರುಗಳಿಗೆ ತೆರಳಿದ್ದ ವಲಸೆ ಕಾರ್ಮಿಕರ ಲಭ್ಯತೆಯಿಲ್ಲದೆ ಕಾಮಗಾರಿ ಸ್ಥಗಿತಗೊಂಡಿತ್ತು.

ಯೋಜನಾ ಹಂತಗಳು ಮತ್ತು ತೆರೆಯುವ ನೂತನ ವೇಳಾಪಟ್ಟಿ

ಪ್ರಸ್ತುತ ವೇಳಾಪಟ್ಟಿಯ ಪ್ರಕಾರ ಬ್ಲೂ ಲೈನ್ ಕಾರಿಡಾರ್ ಅನ್ನು ಹಂತ-ಹಂತವಾಗಿ ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಲು ಬಿಎಮ್‌ಆರ್‌ಸಿಎಲ್ ಗುರಿ ಹಾಕಿಕೊಂಡಿದೆ. ಫೇಸ್ 2A ಅಂದರೆ ಸೆಂಟ್ರಲ್ ಸಿಲ್ಕ್ ಬೋರ್ಡ್ – ಕೆ.ಆರ್. ಪುರಂ - 19.75 ಕಿ.ಮೀ ಈ ವಿಭಾಗದ ವಾಣಿಜ್ಯ ಕಾರ್ಯಾಚರಣೆಯು 2027 ರ ಮಧ್ಯಭಾಗದಲ್ಲಿ ಪ್ರಾರಂಭವಾಗುವ ನಿರೀಕ್ಷೆಯಿದೆ. ಫೇಸ್ 2B ಅಂದರೆ ಹೆಬ್ಬಾಳ ದಿಂದ ವಿಮಾನ ನಿಲ್ದಾಣ ಸಂಪರ್ಕ ಮಾರ್ಗವನ್ನು ಸೆಪ್ಟೆಂಬರ್ 2027 ರ ವೇಳೆಗೆ ತೆರೆಯುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ. ಕೆ.ಆರ್. ಪುರಂ – ಹೆಬ್ಬಾಳ ಉಳಿದ ಭಾಗದ ಕಾಮಗಾರಿಯು ಡಿಸೆಂಬರ್ 2027 ರಿಂದ ಮಾರ್ಚ್ 2028 ರ ನಡುವೆ ಪೂರ್ಣಗೊಳ್ಳುವ ಸಾಧ್ಯತೆಯಿದೆ.

ಬ್ಲೂ ಲೈನ್ ಯೋಜನಾ ವೆಚ್ಚ ಮತ್ತು ಮೂಲ ಸೌಕರ್ಯಗಳ ಬೆಲೆ ಹೆಚ್ಚಳ!

ಬ್ಲೂ ಲೈನ್ ಮೂಲಸೌಕರ್ಯ ಯೋಜನೆಯ ಒಟ್ಟು ಅಂದಾಜು ವೆಚ್ಚ ₹14,788 ಕೋಟಿ ಆಗಿದ್ದು, ಫೇಸ್ 2A ಅಂದರೆ ಸಿಲ್ಕ್ ಬೋರ್ಡ್ – ಕೆ.ಆರ್. ಪುರಂ ನಿರ್ಮಾಣಕ್ಕೆ ₹5,994 ಕೋಟಿ (19.75 ಕಿ.ಮೀ). ಮತ್ತು ಫೇಸ್ 2B ಅಂದರೆ ಕೆ.ಆರ್. ಪುರಂ – ವಿಮಾನ ನಿಲ್ದಾಣಕ್ಕೆ ₹10,584 ಕೋಟಿ (38.44 ಕಿ.ಮೀ). ವೆಚ್ಚವಾಗಲಿದೆ. ಇದರಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಈಕ್ವಿಟಿ ಪಾಲು ಸುಮಾರು ₹3,973 ಕೋಟಿ. ಆಗಿದೆ. ಜೊತೆಗೆ ಭೂಸ್ವಾಧೀನ ವೆಚ್ಚ ಸುಮಾರು ₹2,762 ಕೋಟಿ ಇದನ್ನು ಸಂಪೂರ್ಣವಾಗಿ ಕರ್ನಾಟಕ ಸರ್ಕಾರವೇ ಭರಿಸುತ್ತಿದೆ. ಉಳಿದ ಭಾಗದ ಮೊತ್ತವನ್ನು ಏಷ್ಯನ್ ಅಭಿವೃದ್ಧಿ ಬ್ಯಾಂಕ್ (ADB) ಮತ್ತು ಜಪಾನ್ ಇಂಟರ್ನ್ಯಾಷನಲ್ ಕೋಆಪರೇಷನ್ ಏಜೆನ್ಸಿ (JICA) ಸಂಸ್ಥೆಗಳ ಸಾಲದ ಮೂಲಕ ಕ್ರೋಡೀಕರಿಸಲಾಗಿದೆ. ಇದರ ಜೊತೆಗೆ ಈ ಯೋಜನಾ ವರದಿ ಸಿದ್ದವಾದಾಗ ಅಂದಾಜು ವೆಚ್ಚಕ್ಕೂ ಈಗ ಬೀಳುತ್ತಿರುವ ಅಂದಾಜು ವೆಚ್ಚಕ್ಕೂ ಅಜಗಜಾಂತರ ವ್ಯತ್ಯಾಸವಿದ್ದು ಇದೂ ಕೂಡ ಕಾಮಗಾರಿ ನಿಧಾನವಾಗುತ್ತಿರುವುದಕ್ಕೆ ಒಂದು ಕಾರಣವಾಗಿದೆ.

ಯೋಜನಾ ವರದಿ ಮತ್ತು ಅನುಮೋದನೆಯ ಕಾಲಕ್ರಮ:

2016 - 2017: ಫೇಸ್ 2A ಮೊದಲ DPR ಸಿದ್ಧಗೊಂಡು 2017 ರಲ್ಲಿ ರಾಜ್ಯ ಸರ್ಕಾರದ ಒಪ್ಪಿಗೆ ಪಡೆಯಿತು.

2019: ಹೆಬ್ಬಾಳ ಮಾರ್ಗವಾಗಿ ವಿಮಾನ ನಿಲ್ದಾಣಕ್ಕೆ ಹೋಗುವ ಫೇಸ್ 2B ಪರಿಷ್ಕೃತ DPR ಮತ್ತು ನಕ್ಷೆಯನ್ನು BMRCL ಅಂತಿಮಗೊಳಿಸಿತು.

2020: ಕರ್ನಾಟಕ ಸರ್ಕಾರವು ಫೇಸ್ 2A ಮತ್ತು 2B ಎರಡನ್ನೂ ಸಂಯೋಜಿತ ಬ್ಲೂ ಲೈನ್ ಆಗಿ ಅನುಮೋದಿಸಿತು.

ಏಪ್ರಿಲ್ 2021: ಕೇಂದ್ರ ಸಚಿವ ಸಂಪುಟವು ಯೋಜನೆಯ ಒಟ್ಟು ನಕ್ಷೆ ಮತ್ತು ₹14,788 ಕೋಟಿ ಮೊತ್ತಕ್ಕೆ ಅಂತಿಮ ಅನುಮೋದನೆ ನೀಡಿತು. ತದನಂತರ 2021-22 ರಲ್ಲಿ ಮುಖ್ಯ ಕಾಮಗಾರಿಗಳು ಚಾಲನೆ ಪಡೆದವು.

ಚಾಲಕರಹಿತ ತಂತ್ರಜ್ಞಾನ

ನಮ್ಮ ಮೆಟ್ರೋ ಬ್ಲೂ ಲೈನ್ ಕಾರಿಡಾರ್‌ನಲ್ಲಿ ಚಾಲಕರಹಿತ ತಂತ್ರಜ್ಞಾನವನ್ನು ಪರಿಚಯಿಸಲಾಗುತ್ತಿದೆ. ಈ ರೈಲುಗಳು ಅತ್ಯಾಧುನಿಕ ಸ್ವಯಂಚಾಲಿತ ರೈಲು ನಿಯಂತ್ರಣ (CBTC) ಮತ್ತು ಕಾರ್ಯಾಚರಣಾ ಸುರಕ್ಷತಾ ವ್ಯವಸ್ಥೆಗಳನ್ನು ಹೊಂದಿರುತ್ತವೆ. ಪ್ರಯಾಣಿಕರ ಸೇವೆ ಆರಂಭವಾಗುವ ಮುನ್ನ ಇವು ವ್ಯಾಪಕ ತಾಂತ್ರಿಕ ಪರೀಕ್ಷೆಗಳಿಗೆ ಒಳಗಾಗಲಿವೆ.

ಈ ಯೋಜನೆ ಪೂರ್ಣಗೊಂಡಾಗ, ಕೆಐಎ ವಿಮಾನ ನಿಲ್ದಾಣಕ್ಕೆ ತೆರಳುವ ಪ್ರಯಾಣಿಕರು ಖಾಸಗಿ ಟ್ಯಾಕ್ಸಿಗಳು ಹಾಗೂ ಕಾರುಗಳ ಮೇಲಿನ ಅವಲಂಬನೆಯನ್ನು ತಪ್ಪಿಸಿ, ಹೊರ ವರ್ತುಲ ರಸ್ತೆಯ ಭೀಕರ ಟ್ರಾಫಿಕ್‌ನಿಂದ ಮುಕ್ತಿ ಪಡೆಯಲಿದ್ದಾರೆ. 2027-28 ರ ವೇಳೆಗೆ ನಗರದ ವಿವಿಧ ಭಾಗಗಳಿಂದ ವಿಮಾನ ನಿಲ್ದಾಣಕ್ಕೆ ನೇರ ಮತ್ತು ಸುರಕ್ಷಿತ ಮೆಟ್ರೋ ಪ್ರಯಾಣ ಲಭ್ಯವಾಗಲಿದೆ.