ಭುವನೇಶ್ವರ್(ನ.15): ಮಹಾತ್ಮ ಗಾಂಧಿಜೀ ಸಾವು ಆಕಸ್ಮಿಕ ಎಂಬ ಒಡಿಶಾ ಸರ್ಕಾರದ  ಶಾಲಾ ಕಿರುಪುಸ್ತಕ ವಿವಾದದ ಕಿಡಿ ಹೊತ್ತಿಸಿದ್ದು, ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಕ್ಷಮೆಗೆ ವಿವಿಧ ಸಾಮಾಜಿಕ ಸಂಘಟನೆಗಳು ಆಗ್ರಹಿಸಿವೆ.

ಮಹಾತ್ಮ ಗಾಂಧಿಜೀ ಅವರ 150ನೇ ಜನ್ಮ ಜಯಂತಿ ಅಂಗವಾಗಿ ಒಡಿಶಾ ಸರ್ಕಾರ 'ಆಮಾ ಬಾಪೂಜಿ: ಏಕ್ ಝಲಾಕಾ'(ನಮ್ಮ ಬಾಪೂಜಿ: ಒಂದು ಝಲಕ್)ಎಂಬ ಶಾಲಾ ಕಿರುಪುಸ್ತಕವನ್ನು ಹೊರತಂದಿದೆ. ಮಹಾತ್ಮ ಅವರ ಜೀವನ, ಸಾಧನೆ ಕುರಿತ ಸಂಕ್ಷಿಪ್ತ ವಿವರಣೆಯನ್ನು ಈ ಪುಸ್ತಕ ಒಳಗೊಂಡಿದೆ.

ಗಾಂಧೀಜಿ ಆತ್ಮಹತ್ಯೆ ಮಾಡಿಕೊಂಡಿದ್ದು ಹೇಗೆ? ಪರೀಕ್ಷೆಯಲ್ಲಿ ಪ್ರಶ್ನೆ!
 

ಈ ಕಿರುಪುಸ್ತಕದಲ್ಲಿ ಮಹಾತ್ಮ ಗಾಂಧಿಜೀ  ಜ.30, 1948ರಂದು ಆಕಸ್ಮಿಕ ಕಾರಣಗಳಿಂದ ನಿಧನರಾದರು ಎಂದು ಉಲ್ಲೇಖಿಸಲಾಗಿದೆ. ಆದರೆ ಗಾಂಧಿಜೀ ವರನ್ನು ಇದೇ ದಿನದಂದು ಮತಾಂಧ ನಾಥೂರಾಮ್ ಗೋಡ್ಸೆ ಗುಂಡಿಟ್ಟು ಕೊಂದಿರುವುದು ಕಣ್ಣ ಮುಂದಿರುವ ಇತಿಹಾಸ.

ಈಗಾಗಲೇ ಈ ಕಿರುಪುಸ್ತಕ ಒಡಿಶಾದ ಸರ್ಕಾರಿ ಶಾಲೆಗಳಲ್ಲಿ ವಿತರಣೆಗೊಂಡಿದ್ದು, ಗಾಂಧಿಜೀ ಸಾವಿನ ಕಾರಣ ಬದಲಿಸಿರುವ ರಾಜ್ಯ ಸರ್ಕಾರದ ಶಿಕ್ಷಣ ಇಲಾಖೆ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ.

ನವೀನ್ ಪಟ್ನಾಯಕ್ ಹಿಂದುತ್ವವಾದಿ ಹಾಗೂ ಗೋಡ್ಸೆ ಪರ ಸಹಾನುಭೂತಿಯುಳ್ಳ ಸಂಘಟನೆಗಳ ಒತ್ತಡಕ್ಕೆ ಮಣಿದು ಇತಿಹಾಸವನನು ತಿರುಚುವ ಕೆಲಸಕ್ಕೆ ಕೈ ಹಾಕಿದ್ದಾರೆ ಎಂದು ವಿಪಕ್ಷಗಳು ಆರೋಪಿಸಿವೆ.

ಸ್ವಾತಂತ್ರ್ಯ ಕೊಡಿಸಿದ ನೀವು ಯಾಕಿಷ್ಟು ಬೇಗ ನಮ್ಮನ್ನಗಲಿದ್ರಿ?: ಕಣ್ಣೀರಿಟ್ಟು ನಗೆ ಪಾಟಲಿಗೀಡಾದ ನಾಯಕ!

ಈ ಕುರಿತು ಪ್ರತಿಕ್ರಿಯೆ ನೀಡಿರುವ ಒಡಿಶಾ ಕಾಂಗ್ರೆಸ್ ನಾಯಕ ನರಸಿಂಗಾ ಮಿಶ್ರಾ, ಉದ್ದೇಶಪೂರ್ವಕವಾಗಿ ಗಾಂಧಿಜೀ ಹತ್ಯೆಯನ್ನು ಇತಿಹಾಸದಿಂದ ಅಳಿಸುವ ಕೆಲಸಕ್ಕೆ ಪಟ್ನಾಯಕ್ ಸರ್ಕಾರ ಮುಂದಾಗಿದೆ ಎಂದು ಹರಿಹಾಯ್ದಿದ್ದಾರೆ.

ಕೂಡಲೇ ಗಾಂಧಿಜೀ ಹತ್ಯೆಯ ಕುರಿತು ಸುಳ್ಳು ಮಾಹಿತಿ ನೀಡಿರುವ ಕಿರುಪುಸ್ತಕವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿರುವ ಮಿಶ್ರಾ, ಈ ಮಹಾ ಪ್ರಮಾದಕ್ಕೆ ಈ ಕೂಡಲೇ ನವೀನ್ ಪಟ್ನಾಯಕ್ ರಾಜ್ಯದ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.

ಇನ್ನು ಕಿರುಪುಸ್ತಕದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಎಡಪಕ್ಷಗಳು, ಕೇಂದ್ರ ಸರ್ಕಾರ ಹಾಗೂ ಹಿಂದುತ್ವವಾದಿ ಸಂಘಟನೆಗಳನ್ನು ಮೆಚ್ಚಿಸಲು ಪಟ್ನಾಯಕ್ ಸರ್ಕಾರ ಗಾಂಧಿಜೀ ಹತ್ಯೆಯ ಇತಿಹಾಸ ತಿರುಚಿದೆಎ ಎಂದು ಆರೋಪಿಸಿವೆ.

ಗಾಂಧಿ ಜಯಂತಿ: 150 ಕಿ.ಮೀ. ಪಾದಯಾತ್ರೆ ನಡೆಸುವಂತೆ ಮೋದಿ ಕರೆ

ಇನ್ನು ಕಿರುಪುಸ್ತಕದ ವಿರುದ್ಧ ಆಕ್ರೋಶ ಭುಗಿಲೇಳುತ್ತಿದ್ದಂತೇ ಎಚ್ಚೆತ್ತಿರುವ ಶಿಕ್ಷಣ ಇಲಾಖೆ, ಈ ಕೂಡಲೇ ಎಲ್ಲಾ ಸರ್ಕಾರಿ ಶಾಲೆಗಳಿಂದ ಈ ಕಿರುಪುಸ್ತಕವನ್ನು ಹಿಂಪಡೆಯಲಾಗುವುದು ಎಂದು ಭರವಸ ನೀಡಿದೆ.