ನಗರದಲ್ಲಿ ಪಾರಿವಾಳಗಳಿಗೆ ಆಹಾರ ಹಾಕದಂತೆ ಬಿಎಂಸಿ ಪಾಲಿಕೆಗೆ ಸರ್ಕಾರ ಸೂಚನೆ ನೀಡಿದೆ. ಸರ್ಕಾರ ಈ ಸೂಚನೆ ನೀಡಿದ್ದೇಕೆ?
ಮುಂಬೈ ( ಜು.04) ನಗರದಲ್ಲಿ ಪಾರಿವಾಳಗಳ ಸಂಖ್ಯೆ ಹೆಚ್ಚೇ ಇದೆ. ಪ್ರತಿ ಕಟ್ಟಡಗಳಲ್ಲಿ ಪಾರಿವಾಳ ಗೂಡು ಕಟ್ಟಿರುತ್ತದೆ. ಬೆಂಗಳೂರು ಸೇರಿದಂತೆ ಭಾರತದ ಬಹುತೇಕ ನಗರಗಳಲ್ಲಿ ಪಾರಿವಾಳದ ಸಂಖ್ಯೆ ತುಸು ಹೆಚ್ಚೆ ಇದೆ. ಇದೀಗ ಮುಂಬೈ ನಗರದಲ್ಲಿ ಪಾರಿವಾಳಗಳಿಗೆ ಯಾವುದೇ ಆಹಾರ ಹಾಕದಂತೆ ಮಹಾರಾಷ್ಟ್ರ ಸರ್ಕಾರ ಮುಂಬೈ ಮಹಾನಗರ ಪಾಲಿಕೆಗೆ ಸೂಚನೆ ನೀಡಿದೆ. ಪ್ರಮುಖವಾಗಿ ಜನರ ಆರೋಗ್ಯದ ದೃಷ್ಟಿಯಿಂದ ಮಹಾ ಸರ್ಕಾರ ಈ ಕ್ರಮ ಕೈಗೊಂಡಿದೆ.
ಪಾರಿವಾಳ ಹಿಕ್ಕೆ, ಪುಕ್ಕಗಳಿಂದ ಗಂಭೀರ ಆರೋಗ್ಯ ಸಮಸ್ಯೆ
ಪಾರಿವಾಳ ನಿರುಪದ್ರವಿಯಾಗಿದ್ದರೂ ಅದರ ಹಿಕ್ಕೆ ಹಾಗೂ ರೆಕ್ಕೆ ಪುಕ್ಕಗಳು ಮಾನವನ ಆರೋಗ್ಯದ ಮೇಲೆ ಗಂಭೀರ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತಿದೆ ಅನ್ನೋದು ವೈದ್ಯ ಲೋಕ ಹಲವು ಬಾರಿ ಸ್ಪಷ್ಟಪಡಿಸಿದೆ. ಪಾರಿವಾಳ ಹಿಕ್ಕೆ ಹಾಗು ಪುಕ್ಕಗಳಿಂದ ಮಾನವನಲ್ಲಿ ಉಸಿರಾಟದ ಸಮಸ್ಯೆಗಳು ಕಾರಣವಾಗಲಿದೆ. ಇದು ಮಾರಣಾಂತಿಕವಾಗುವ ಸಾಧ್ಯತೆ ಹೆಚ್ಚು. ಪಾರಿವಾಳ ಹತ್ತಿರವಿದ್ದಲ್ಲಿ ಅದು ಮಾನವನ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದರಲ್ಲಿ ಅನುಮಾನವಿಲ್ಲ.
ಮುಂಬೈನಲ್ಲಿದೆ 50ಕ್ಕೂ ಹೆಚ್ಚು ಖಬೂತರ್ ಖಾನಸ್
ಮುಂಬೈ ನಗರದಲ್ಲಿ 50ಕ್ಕೂ ಹೆಚ್ಚು ಕಡೆ ಪಾರಿವಾಳಗಳಿಗೆ ಆಹಾರ, ಕಾಳುಗಳನ್ನು ಹಾಕಲಾಗುತ್ತದೆ. ಇಲ್ಲಿ ಬೃಹನ್ ಮುಂಬೈ ಮನ್ಸಿಪಲ್ ಕಾರ್ಪೋರೇಶನ್ ಪಾರಿವಾಳಗಳಿಗೆ ಆಹಾರ ಹಾಕುತ್ತದೆ. ಇದರ ಜೊತೆಗೆ ಸಾರ್ವಜನಿಕರು ಇಲ್ಲಿ ಪಾರಿವಾಳಗಳಿಗೆ ಆಹಾರ ಹಾಕುತ್ತಾರೆ. ಮುಂಬೈನ ಹಲವು ಖಬೂತರ್ ಖನಾಸ್ ಫೋಟೋ ಸೆಶನ್ ಹಾಗೂ ಪಿಕ್‌ನಿಕ್ ತಾಣವಾಗಿದೆ. ಹಲವರು ಇಲ್ಲಿಗೆ ಆಗಮಿಸಿ ಆಹಾರ, ಕಾಳುಗಳನ್ನು ಪಾರಿವಾಳಕ್ಕೆ ಹಾಕಿ ಫೋಟೋ, ವಿಡಿಯೋ ತೆಗೆಸಿಕೊಳ್ಳುತ್ತಾರೆ. ಇದೀಗ ಈ ಎಲ್ಲಾ ಪ್ರದೇಶದಲ್ಲಿ ಪಾರಿವಾಳಕ್ಕೆ ಆಹಾರ ಹಾಕುವ ಪದ್ಧತಿ ಅಂತ್ಯಗೊಳಿಸಲು ಸರ್ಕಾರ ಸೂಚಿಸಿದೆ.
ವಿಧಾನ ಪರಿಷತ್‌ನಲ್ಲಿ ಗಂಭೀರ ಚರ್ಚೆ ಬಳಿಕ ಕ್ರಮ
ಶಿವಸೇನೆ ನಾಯಕಿ ಮನೀಶಾ ಕಯಾಂಡೆ ಈ ಕುರಿತು ಮಹಾರಾಷ್ಟರ ಪರಿಷತ್‌ನಲ್ಲಿ ಧ್ವನಿ ಎತ್ತಿದ್ದರು. ಪಾರಿವಾಳ ಹಿಕ್ಕೆ, ಪುಕ್ಕಗಳಿಂದ ಆಗುತ್ತಿರುವ ಆರೋಗ್ಯ ಸಮಸ್ಯೆ, ವೈದ್ಯರು ಈ ಕುರುತಿ ಹೇಳುತ್ತಿರುವುದೇನು? ಹೆಚ್ಚುತ್ತಿರುವ ಆರೋಗ್ಯ ಸಮಸ್ಯೆಯಲ್ಲಿ ಪಾರಿವಾಳ ಹಿಕ್ಕೆಗಳ ಪಾತ್ರ ಕುರಿತು ಮಾತನಾಡಿದ್ದರು. ಹೀಗಾಗಿ ಮುಂಬೈನಲ್ಲಿ ದಿನದಿಂದ ದಿನಕ್ಕೆ ಪಾರಿವಾಳಗಳ ಸಂಖ್ಯೆ ಹೆಚ್ಚಾಗುತ್ತಿದೆ. ಪಾರಿವಾಳಗಳಿಗೆ ಆಹಾರ ಹಾಕುತ್ತಿರು ಕಾರಣ ಸಂಖ್ಯೆ ಹೆಚ್ಚಾಗುತ್ತಿದೆ. ಬೆಳಗ್ಗೆ ಇಲ್ಲಿ ಆಹಾರ ತಿನ್ನವು ಪಾರಿವಾಳಗಳು ಕಟ್ಟಡ, ಮನೆ, ಅಪಾರ್ಟ್‌ಮೆಂಟ್‌ಗಳಲ್ಲಿ ರಾತ್ರಿ ತಂಗುತ್ತದೆ. ಇದರಿಂದ ಉಸಿರಾಟದ ಸಮಸ್ಯೆ ಹೆಚ್ಚಾಗುತ್ತಿದೆ ಎಂದು ಬೆಳಕು ಚೆಲ್ಲಿದ್ದರು.
ಬೆಂಗಳೂರಿನಲ್ಲಿ ಹೆಚ್ಚಾಗುತ್ತಿದೆ ಪಾರಿವಾಳ, ಇಲಿಗಳ ಸಂಖ್ಯೆ
ಬೆಂಗಳೂರಿನಲ್ಲೂ ಪಾರಿವಾಳಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿದೆ. ಇದು ಬೆಂಗಳೂರಿಗರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ನಗರದಲ್ಲಿ ಪಾರಿವಾಳ ಮಾತ್ರವಲ್ಲ, ಇಲಿಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ ವರದಿಗಳು ಹೇಳುತ್ತಿದೆ. ಜನರ ಆರೋಗ್ಯದ ದೃಷ್ಟಿಯಿಂದ ಪಾರಿವಾಳಗಳ ಸಂಖ್ಯೆಯಲ್ಲಿ ಸಮತೋಲನ ಅತ್ಯವಶ್ಯಕ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.
