ವಿಪಕ್ಷದ ಪ್ರಶ್ನೆಗಳಿಗೆ ಮೋದಿ ಸಿಡಿಗುಂಡು: ಪ್ರತಿಪಕ್ಷಗಳ ಅವಿಶ್ವಾಸ ಗೊತ್ತುವಳಿಗೆ ಹೀನಾಯ ಸೋಲು
No Confidence Motion: ಲೋಕಸಭೆಯಲ್ಲಿ ಮೋದಿ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಮಂಡಿಸಿದ್ದ ಅವಿಶ್ವಾಸ ಗೊತ್ತುವಳಿ ಮಂಡನೆಗೆ ಧ್ವನಿಮತದ ಮೂಲಕ ಸೋಲುಂಟಾಗಿದೆ.
ನವದೆಹಲಿ (ಆಗಸ್ಟ್ 10, 2023): ಮಣಿಪುರ ಹಿಂಸಾಚಾರ ವಿಚಾರವಾಗಿ ಪ್ರತಿಪಕ್ಷಗಳು ಅವಿಶ್ವಾಸ ನಿರ್ಣಯ ಮಂಡಿಸಿದ್ದವು. ಆದರೆ, ಪ್ರಧಾನಿ ಮೋದಿ ಪ್ರತಿಪಕ್ಷಗಳ ವಿರುದ್ಧ ಭಾರಿ ವಾಗ್ದಾಳಿ ನಡೆಸಿದ್ದು, ಹಾಗೂ ಭಾಷಣದ ನಂತರ ಪ್ರತಿಪಕ್ಷಗಳು ಮಂಡಿಸಿದ್ದ ಅವಿಶ್ವಾಸ ಗೊತ್ತುವಳಿ ಮಂಡನೆಗೆ ಲೋಕಸಭೆಯಲ್ಲಿ ಧ್ವನಿಮತದ ಮೂಲಕ ಮತದಾನ ನಡೆದಿದ್ದು, ಇದಕ್ಕೆ ಹೀನಾಯ ಸೋಲುಂಟಾಗಿದೆ. ಮೋದಿ ಭಾಷಣ ಮಾಡುವ ವೇಳೆ ಪ್ರತಿಪಕ್ಷಗಳ ಸಂಸದರು ಲೋಕಸಭೆಯಿಂದ ಹೊರ ನಡೆದ ಹಿನ್ನೆಲೆ ಅವಿಶ್ವಾಸ ಗೊತ್ತುವಳಿಗೆ ಸೋಲುಂಟಾಗಿದೆ.
ಅವಿಶ್ವಾಸ ಮತ ಹಾಕುವುದಕ್ಕೂ ಮುನ್ನ, ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯದ ಕುರಿತು ಪ್ರಧಾನಿ ನರೇಂದ್ರ ಮೋದಿ ಉತ್ತರಿಸಿದರು. ಬಿಜೆಪಿ-ಎನ್‌ಡಿಎ ಸರ್ಕಾರಕ್ಕೆ ಅವಿಶ್ವಾಸ ಗೊತ್ತುವಳಿ ಯಾವಾಗಲೂ ಅದೃಷ್ಟ ಮತ್ತು ಮುಂದಿನ ಚುನಾವಣೆಯಲ್ಲಿ ನಾವು ದೊಡ್ಡ ಅಂತರದಿಂದ ಗೆಲ್ಲುತ್ತೇವೆ ಎಂದು ಭರವಸೆ ನೀಡಿದರು. ಹಾಗೂ, ಅವಿಶ್ವಾಸ ಗೊತ್ತುವಳಿ ಮಂಡಿಸಿದ್ದರೂ ಅದಕ್ಕೆ ಸರಿಯಾಗಿ ಸಿದ್ಧರಾಗಿಲ್ಲ ಎಂದು ಪ್ರತಿಪಕ್ಷಗಳ ವಿರುದ್ಧ ಪ್ರಧಾನಿ ಮೋದಿ ವ್ಯಂಗ್ಯವಾಡಿದ್ದಾರೆ. ಹಾಗೂ, 2028ರಲ್ಲಿ ಅವಿಶ್ವಾಸ ಗೊತ್ತುವಳಿ ಮಂಡಿಸುವಾಗ ಸಿದ್ಧರಾಗಿ ಬನ್ನಿ ಎಂದೂ ಸಲಹೆ ಮಾಡಿದ್ದಾರೆ.
ಇದನ್ನು ಓದಿ: HAL ಮುಳುಗುತ್ತಿದೆ ಎಂದು ವಿಕ್ಷಗಳು ಟೀಕಿಸಿದ್ದವು; ಇಂದು ರಾಷ್ಟ್ರದ ಹೆಮ್ಮೆಯಾಗಿದೆ: ಮೋದಿ
ತಮ್ಮ ಎರಡು ಗಂಟೆಗಳ ಸುದೀರ್ಘ ಭಾಷಣದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸುವುದರ ಜೊತೆಗೆ, ಈಶಾನ್ಯ ರಾಜ್ಯದಲ್ಲಿ ಶೀಘ್ರದಲ್ಲಿ ಶಾಂತಿಯನ್ನು ತರುವುದಾಗಿ ಪ್ರತಿಜ್ಞೆ ಮಾಡಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆರೋಪಿಗಳನ್ನು ಶಿಕ್ಷಿಸಲು ಮತ್ತು ರಾಜ್ಯದಲ್ಲಿ ಶಾಂತಿ ನೆಲೆಸಲು ಹಗಲಿರುಳು ಶ್ರಮಿಸುತ್ತಿವೆ. ಮಣಿಪುರದ ಜನತೆಯೊಂದಿಗೆ ಇಡೀ ದೇಶ ನಿಂತಿದೆ ಎಂದು ನಾನು ಅವರಿಗೆ ಭರವಸೆ ನೀಡಲು ಬಯಸುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಮಣಿಪುರದಲ್ಲಿ ನಡೆದ ಹಿಂಸಾಚಾರವನ್ನು ದೇಶದ ಅಂತರ್ಯುದ್ಧ ಎಂದು ಕರೆದ ಕಾಂಗ್ರೆಸ್‌ನ ಹಿರಿಯ ನಾಯಕ ಅಧೀರ್ ರಂಜನ್ ಚೌಧರಿ ಅವರು ಈ ವಿಷಯದ ಬಗ್ಗೆ ಪ್ರಧಾನಿ ಮೌನವನ್ನು ಪ್ರಶ್ನಿಸಿದ ಬೆನ್ನಲ್ಲೇ ಇಂದು ಲೋಕಸಭೆಯಲ್ಲಿ ಮಾತಿನ ಚಕಮಕಿ ನಡೆದಿದೆ. ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಈಶಾನ್ಯ ರಾಜ್ಯದಲ್ಲಿ ಲೆಕ್ಕವಿಲ್ಲದಷ್ಟು ಘರ್ಷಣೆಗಳು ಮತ್ತು ಸಾವುಗಳು ಸಂಭವಿಸಿದೆ ಎಂದು ಬಿಜೆಪಿ ಸಂಸದ ಜ್ಯೋತಿರಾದಿತ್ಯ ಸಿಂಧಿಯಾ ಸದನಕ್ಕೆ ನೆನಪಿಸಿದರು.
ಇದನ್ನೂ ಓದಿ: ಕರ್ನಾಟಕದ 13 ಸೇರಿ ದೇಶದ 508 ರೈಲು ನಿಲ್ದಾಣಗಳ ಪುನರಾಭಿವೃದ್ಧಿಗೆ ಶಂಕುಸ್ಥಾಪನೆ ಮಾಡಿದ ಮೋದಿ: ನಿಮ್ಮ ಊರು ಇದ್ಯಾ ನೋಡಿ..
ಅಧೀರ್ ರಂಜನ್ ಚೌಧರಿಗೂ ಮುನ್ನ ಆಡಳಿತಾರೂಢ ಸರ್ಕಾರದ ಮೇಲೆ ತಡೆರಹಿತ ವಾಗ್ದಾಳಿ ನಡೆಸಿದ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ, ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರವು ಬಿಜೆಪಿಯ "ದೊಡ್ಡ ವೈಫಲ್ಯ" ಎಂದು ಹೇಳಿದರು. ಹಾಗೂ, ಕೇಂದ್ರದ "ಮಣಿಪುರದಲ್ಲಿ ಮೌನ ಸಂಹಿತೆ"ಯನ್ನು ಕೊನೆಗೊಳಿಸುವುದು ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯದ ಗುರಿಯಾಗಿದೆ ಎಂದು ಟಿಎಂಸಿ ಸಂಸದೆ ಹೇಳಿದರು. “ಈ ಗೊತ್ತುವಳಿಯು ಮಣಿಪುರದಲ್ಲಿ ಈ ಮೌನ ಸಂಹಿತೆಯನ್ನು ಮುರಿಯುವುದಾಗಿದೆ. ಪ್ರಧಾನಿ ಮೋದಿ ನಮ್ಮ ಮಾತು ಕೇಳುವುದಿಲ್ಲ, ಕೊನೆಯ ದಿನ ಬಂದು ಭಾಷಣ ಮಾಡುತ್ತಾರೆ. ಹಾಗೂ, ನಮ್ಮ ಪ್ರಧಾನಿ ಸಂಸತ್ತಿಗೆ ಬರಲು ನಿರಾಕರಿಸುತ್ತಾರೆ ಎನ್ನುವುದೋ ಅಥವಾ ಅವರು ಮಣಿಪುರಕ್ಕೆ ಹೋಗಲು ನಿರಾಕರಿಸುತ್ತಾರೆ ಎನ್ನುವುದೋ - ಇವೆರಡರಲ್ಲಿ ಯಾವುದು ಹೆಚ್ಚು ದುರದೃಷ್ಟಕರ ಸಂಗತಿ ಏನೆಂದು ನನಗೆ ತಿಳಿದಿಲ್ಲ ಎಂದೂ ಪ್ರಧಾನಿ ಮೋದಿಯ ಕಾಲೆಳೆದಿದ್ದರು.
ಇದನ್ನೂ ಓದಿ: ‘I.N.D.I.A.’ ಮೈತ್ರಿಕೂಟದ ಮರು ನಾಮಕರಣ ಮಾಡಿದ ಪ್ರಧಾನಿ: ಮೋದಿ ಇಟ್ಟ ಹೊಸ ಹೆಸರು ಹೀಗಿದೆ ನೋಡಿ..