ದೆಹಲಿಯಲ್ಲಿ ಉಗ್ರರ ಪರ ಪೋಸ್ಟರ್‌ಗಳು ಕಾಣಿಸಿಕೊಂಡ ಬೆನ್ನಲ್ಲೇ ದೆಹಲಿ ಪೊಲೀಸರ ವಿಶೇಷ ದಳ ಕಾರ್ಯಾಚರಣೆ ನಡೆಸಿದೆ. ಲಷ್ಕರ್-ಎ-ತೊಯ್ಬಾ ಉಗ್ರ ಸಂಘಟನೆಯ ದೊಡ್ಡ ಜಾಲವನ್ನು ಭೇದಿಸಿದ್ದು, ಕೋಲ್ಕತ್ತಾ ಮತ್ತು ತಿರುಪ್ಪೂರಿನಲ್ಲಿ ಏಳು ಬಾಂಗ್ಲಾದೇಶಿ ಪ್ರಜೆಗಳು ಸೇರಿ ಒಟ್ಟು ಎಂಟು ಮಂದಿಯನ್ನು ಬಂಧಿಸಿದ್ದಾರೆ.

ರಾಷ್ಟ್ರ ರಾಜಧಾನಿ ದೆಹಲಿಯ ಹಲವೆಡೆ ಉಗ್ರ ಬುರ್ಹಾನ್ ವಾನಿಯನ್ನು ವೈಭವೀಕರಿಸುವ ಪೋಸ್ಟರ್‌ಗಳು ಕಾಣಿಸಿಕೊಂಡಿದ್ದವು. ಇದರ ಬೆನ್ನಲ್ಲೇ ಭಾನುವಾರ ದೆಹಲಿ ಪೊಲೀಸರ ವಿಶೇಷ ದಳ (Special Cell) ಲಷ್ಕರ್-ಎ-ತೊಯ್ಬಾ (LeT) ಜೊತೆ ನಂಟು ಹೊಂದಿದ್ದ ದೊಡ್ಡ ಉಗ್ರರ ಜಾಲವೊಂದನ್ನು ಭೇದಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಶ್ಚಿಮ ಬಂಗಾಳದ ಕೋಲ್ಕತ್ತಾ ಮತ್ತು ತಮಿಳುನಾಡಿನ ತಿರುಪ್ಪೂರಿನಲ್ಲಿ ಪೊಲೀಸರು ಸಂಘಟಿತ ದಾಳಿಗಳನ್ನು ನಡೆಸಿದ್ದಾರೆ. ಈ ವೇಳೆ, ಎಂಟು ಶಂಕಿತ ಉಗ್ರರನ್ನು ಬಂಧಿಸಲಾಗಿದೆ. ಬಂಧಿತರಲ್ಲಿ ಏಳು ಮಂದಿ ಬಾಂಗ್ಲಾದೇಶದ ಪ್ರಜೆಗಳಾಗಿದ್ದು, ಅವರು ಅಕ್ರಮವಾಗಿ ಭಾರತಕ್ಕೆ ನುಸುಳಿ ತಮ್ಮ ನಿಜವಾದ ಗುರುತನ್ನು ಮರೆಮಾಚಲು ಭಾರತೀಯ ಗುರುತಿನ ಚೀಟಿಗಳನ್ನು ಪಡೆದುಕೊಂಡಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಉಗ್ರರ ಪರ ಪೋಸ್ಟರ್‌ಗಳಿಂದ ತನಿಖೆ ಆರಂಭ

ಅಧಿಕಾರಿಗಳ ಪ್ರಕಾರ, ಫೆಬ್ರವರಿ 8, 2026 ರಂದು ಈ ಪ್ರಕರಣ ಬೆಳಕಿಗೆ ಬಂದಿದೆ. ಅಂದು ಜನ್‌ಪಥ್ ಮೆಟ್ರೋ ನಿಲ್ದಾಣ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪಾಕಿಸ್ತಾನ ಮತ್ತು ಉಗ್ರರ ಪರವಾದ ಪೋಸ್ಟರ್‌ಗಳನ್ನು ಅಂಟಿಸಿರುವುದನ್ನು CISF ಸಿಬ್ಬಂದಿ ಗಮನಿಸಿ ದೂರು ನೀಡಿದ್ದರು. ನಂತರ ದೆಹಲಿಯ ಬೇರೆ ಬೇರೆ ಕಡೆಗಳಲ್ಲೂ ಇದೇ ರೀತಿಯ ಪೋಸ್ಟರ್‌ಗಳು ಪತ್ತೆಯಾದವು. ಈ ಪೋಸ್ಟರ್‌ಗಳಲ್ಲಿ ಬುರ್ಹಾನ್ ವಾನಿಯನ್ನು ವೈಭವೀಕರಿಸುವ ಚಿತ್ರಗಳಿದ್ದವು. ಜೊತೆಗೆ, 'ಭಾರತವೇ, ನರಮೇಧ ನಿಲ್ಲಿಸು ಮತ್ತು ಕಾಶ್ಮೀರವನ್ನು ಸ್ವತಂತ್ರಗೊಳಿಸು' ಎಂಬಂತಹ ಘೋಷಣೆಗಳು ಮತ್ತು ಪಾಕಿಸ್ತಾನವನ್ನು ಬೆಂಬಲಿಸುವ ಉರ್ದು ವಾಕ್ಯಗಳು ಇದ್ದವು. ಈ ಸಂಬಂಧ, ಸುಪ್ರೀಂ ಕೋರ್ಟ್ ಮೆಟ್ರೋ ಪೊಲೀಸ್ ಠಾಣೆಯಲ್ಲಿ BNS ಮತ್ತು DPDP ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಯಿತು. ಪ್ರಕರಣದ ಸೂಕ್ಷ್ಮತೆಯನ್ನು ಪರಿಗಣಿಸಿ, ತನಿಖೆಯನ್ನು ವಿಶೇಷ ದಳ/NDR ಗೆ ವರ್ಗಾಯಿಸಲಾಯಿತು.

ಸಂಘಟಿತ ದಾಳಿ, 8 ಮಂದಿ ಅರೆಸ್ಟ್

ತನಿಖೆಯ ವೇಳೆ, ವಿಶೇಷ ದಳದ ತಂಡಗಳು ದೆಹಲಿ ಮತ್ತು ಗುರುಗ್ರಾಮ್‌ನಲ್ಲಿ ಶಂಕಿತರ ಚಲನವಲನಗಳ ಬಗ್ಗೆ ತಾಂತ್ರಿಕ ಮತ್ತು ಮಾನವ ಗುಪ್ತಚರ ಮಾಹಿತಿಗಳನ್ನು ಕಲೆಹಾಕಿದವು. ಈ ಖಚಿತ ಮಾಹಿತಿ ಆಧರಿಸಿ, ಫೆಬ್ರವರಿ 15 ರಂದು ಕೋಲ್ಕತ್ತಾದ ಮಝೇರ್‌ಪಾರಾದ ಹತಿಯಾರ ಗೋಟೆಯಲ್ಲಿ ದಾಳಿ ನಡೆಸಲಾಯಿತು. ಈ ವೇಳೆ, ಉಮರ್ ಫಾರೂಕ್ (31) ಮತ್ತು ರೋಬಿಯುಲ್ ಇಸ್ಲಾಂ (31) ಎಂಬುವವರನ್ನು ಪೊಲೀಸರು ಬಂಧಿಸಿದರು. ಬಳಿಕ ಫೆಬ್ರವರಿ 21 ರಂದು ತಿರುಪ್ಪೂರಿನಲ್ಲಿ ಪೊಲೀಸರು ಮತ್ತಷ್ಟು ದಾಳಿಗಳನ್ನು ನಡೆಸಿ, ಈ ಜಾಲಕ್ಕೆ ಸೇರಿದ ಇನ್ನೂ ಆರು ಮಂದಿ ಕಾರ್ಯಕರ್ತರನ್ನು ಬಂಧಿಸಿದರು.

ಆರೋಪಿಗಳ ಮನೆಗಳನ್ನು ಶೋಧಿಸಿದಾಗ, ಪಾಕಿಸ್ತಾನ ಮತ್ತು ಉಗ್ರರ ಪರವಾದ ಹಲವಾರು ಪೋಸ್ಟರ್‌ಗಳು, ಆಕ್ಷೇಪಾರ್ಹ ಮಾಹಿತಿ ಇರುವ 10 ಮೊಬೈಲ್ ಫೋನ್‌ಗಳು, 25 ಡೆಬಿಟ್/ಕ್ರೆಡಿಟ್ ಕಾರ್ಡ್‌ಗಳು, ಐದು PoS ಮಷಿನ್‌ಗಳು ಹಾಗೂ ಬಾಂಗ್ಲಾದೇಶಿ ಪಾಸ್‌ಪೋರ್ಟ್‌ಗಳು ಮತ್ತು ಗುರುತಿನ ಚೀಟಿಗಳು ಪತ್ತೆಯಾಗಿವೆ.

ನೆಟ್ವರ್ಕ್ ಹ್ಯಾಂಡ್ಲರ್ ಹಿನ್ನೆಲೆ ಬಯಲು

ವಿಚಾರಣೆ ವೇಳೆ, ಆರೋಪಿ ಉಮರ್ ಫಾರೂಕ್ ಮಹತ್ವದ ಮಾಹಿತಿಗಳನ್ನು ಬಾಯ್ಬಿಟ್ಟಿದ್ದಾನೆ. ತಾನು ಮಾರ್ಚ್ 2025 ರಲ್ಲಿ ಈ ಜಾಲದ ಹ್ಯಾಂಡ್ಲರ್ ಆಗಿರುವ ಶಬೀರ್ ಅಹ್ಮದ್ ಲೋನ್ ಅಲಿಯಾಸ್ ರಾಜಾ ಅಲಿಯಾಸ್ ಕಾಶ್ಮೀರಿ ಎಂಬಾತನ ಸಂಪರ್ಕಕ್ಕೆ ಬಂದಿದ್ದಾಗಿ ಹೇಳಿದ್ದಾನೆ. ನಂತರ ಆತನೇ ತನಗೆ ತೀವ್ರಗಾಮಿ ಬೋಧನೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಜಮ್ಮು ಮತ್ತು ಕಾಶ್ಮೀರದ ಕಂಗನ್ ನಿವಾಸಿಯಾಗಿರುವ ಲೋನ್, ಸದ್ಯ ಬಾಂಗ್ಲಾದೇಶದಲ್ಲಿ ನೆಲೆಸಿದ್ದಾನೆ. ಭಾರತದಲ್ಲಿ ಲಷ್ಕರ್-ಎ-ತೊಯ್ಬಾ ಚಟುವಟಿಕೆಗಳನ್ನು ಮುನ್ನಡೆಸುವ ಜವಾಬ್ದಾರಿಯನ್ನು ಈತನೇ ಆರೋಪಿಗಳಿಗೆ ವಹಿಸಿದ್ದ ಎಂದು ಹೇಳಲಾಗಿದೆ.

ಈ ಉಗ್ರರ ತಂಡವು ಪ್ರಮುಖ ಸ್ಥಳಗಳ ಬಗ್ಗೆ ಗೂಢಚರ್ಯೆ ನಡೆಸಿತ್ತು. ಅಷ್ಟೇ ಅಲ್ಲ, ಸ್ಥಳೀಯ ಸಂಪರ್ಕಗಳ ಮೂಲಕ ಶಸ್ತ್ರಾಸ್ತ್ರಗಳನ್ನು ವ್ಯವಸ್ಥೆ ಮಾಡಲು ಪ್ರಯತ್ನಿಸುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಫೆಬ್ರವರಿ 6 ರಂದು ಆರೋಪಿಗಳು ಪಾಟ್ನಾ ಮೂಲಕ ದೆಹಲಿಗೆ ಪ್ರಯಾಣಿಸಿದ್ದರು. ಅಲ್ಲಿ ಸುಮಾರು 10 ಸ್ಥಳಗಳಲ್ಲಿ ಪೋಸ್ಟರ್‌ಗಳನ್ನು ಅಂಟಿಸಿ, ಅದಕ್ಕೆ ಸಾಕ್ಷಿಯಾಗಿ ವಿಡಿಯೋಗಳನ್ನು ರೆಕಾರ್ಡ್ ಮಾಡಿದ್ದರು. ನಂತರ ಆ ವಿಡಿಯೋಗಳನ್ನು ತಮ್ಮ ಹ್ಯಾಂಡ್ಲರ್‌ಗೆ ಕಳುಹಿಸಿ, ಕೋಲ್ಕತ್ತಾಗೆ ವಾಪಸ್ ಆಗಿದ್ದರು ಎಂಬುದನ್ನು ತನಿಖಾಧಿಕಾರಿಗಳು ಬಹಿರಂಗಪಡಿಸಿದ್ದಾರೆ.

ಲೋನ್ ಒಬ್ಬ ತರಬೇತಿ ಪಡೆದ ಲಷ್ಕರ್ ಉಗ್ರ. ಈತನನ್ನು 2007ರಲ್ಲಿ ವಿಶೇಷ ದಳದ ಪೊಲೀಸರು ಭಾರೀ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳ ಸಮೇತ ಬಂಧಿಸಿದ್ದರು. ಪಾಕಿಸ್ತಾನ ಮೂಲದ ಉಗ್ರರ ಹಿರಿಯ ನಾಯಕರೊಂದಿಗೆ ಈತನಿಗೆ ಸಂಪರ್ಕವಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ. ಸದ್ಯ ಈತ ಬಾಂಗ್ಲಾದೇಶಿ ಪ್ರಜೆಗಳನ್ನು ಬಳಸಿಕೊಂಡು ಭಾರತದಲ್ಲಿ ಸ್ಲೀಪರ್ ಸೆಲ್‌ಗಳನ್ನು ಮತ್ತೆ ಸಕ್ರಿಯಗೊಳಿಸಲು ಯತ್ನಿಸುತ್ತಿದ್ದಾನೆ ಎಂದು ಶಂಕಿಸಲಾಗಿದೆ. ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.

YouTube video player