ತೆಲಂಗಾಣದಲ್ಲಿ ದೇವರಿಗೆ ಹರಕೆ ತೀರಿಸಲು ತಲೆ ಬೋಳಿಸಿಕೊಂಡ ನರೇಗಾ ಕಾರ್ಮಿಕನೊಬ್ಬನ ಮುಖವನ್ನು ಡಿಜಿಟಲ್ ಹಾಜರಾತಿ ಆ್ಯಪ್ ಗುರುತಿಸಲು ವಿಫಲವಾಗಿದೆ. ಹಾಜರಾತಿಗಾಗಿ, ಸಹೋದ್ಯೋಗಿ ಮಹಿಳೆಯೊಬ್ಬರ ಕೂದಲನ್ನು ತನ್ನ ತಲೆಯ ಮೇಲೆ ಇಟ್ಟುಕೊಂಡು ಫೋಟೋ ತೆಗೆಸಿಕೊಂಡ ನಂತರವೇ ಆ್ಯಪ್ ಆತನನ್ನು ಗುರುತಿಸಿದೆ.
ಹೈದರಾಬಾದ್ (ಮೇ.30): ತಂತ್ರಜ್ಞಾನ ಎಷ್ಟೇ ಮುಂದುವರಿದಿದ್ದರೂ ಕೆಲವೊಮ್ಮೆ ಅದು ಮಾಡುವ ಎಡವಟ್ಟುಗಳು ಜನರನ್ನು ಸಂಕಷ್ಟಕ್ಕೆ ದೂಡುವುದರ ಜೊತೆಗೆ ಭಾರಿ ನಗೆಪಾಟಲಿಗೂ ಈಡುಮಾಡುತ್ತವೆ. ಇಂತಹದೇ ಒಂದು ತಮಾಷೆಯ ಪ್ರಸಂಗವೊಂದು ತೆಲಂಗಾಣದಲ್ಲಿ ನಡೆದಿದೆ. ದೇವಸ್ಥಾನಕ್ಕೆ ಹೋಗಿ ಹರಕೆ ಎನ್ನುವತೆ ತಲೆ ಬೋಳಿಸಿಕೊಂಡು ಬಂದ ಕೂಲಿ ಕಾರ್ಮಿಕನೊಬ್ಬನನ್ನು ಸರ್ಕಾರದ ಡಿಜಿಟಲ್ ಹಾಜರಾತಿ ಆ್ಯಪ್ ಗುರುತಿಸಲು ನಿರಾಕರಿಸಿದೆ. ಕೊನೆಗೆ
ತನ್ನ ಜೊತೆ ಕೆಲಸ ಮಾಡುತ್ತಿದ್ದ ಮಹಿಳೆಯ ಉದ್ದ ಕೂದಲನ್ನು ತನ್ನ ತಲೆಯ ಮೇಲೆ ಇಟ್ಟುಕೊಂಡ ಬಳಿಕ ಆ್ಯಪ್ ಆತನನ್ನು ಗುರುತಿಸಿದೆ. ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.
ತೆಲಂಗಾಣದ ಮಹಬೂಬಾಬಾದ್ ಜಿಲ್ಲೆಯ ಇನುಗುರ್ತಿ ಮಂಡಲದ ಕೋಮಟಿಪಲ್ಲಿ ಗ್ರಾಮದ ದಿನಗೂಲಿ ಕಾರ್ಮಿಕ ಮಳ್ಯಾಲ ಶ್ರೀನಿವಾಸ್ ಇತ್ತೀಚೆಗೆ ಕೊಂಡಗಟ್ಟು ವೀರ ಹನುಮಾನ್ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಹಿಂದೂ ಸಂಪ್ರದಾಯದಂತೆ ದೇವರಿಗೆ ತಮ್ಮ ತಲೆಗೂದಲನ್ನು ಮುಡಿಪಾಗಿ ನೀಡಿದ್ದರು.
ಆದರೆ, ಅವರು ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (MGNREGA) ಯೋಜನೆಯಡಿ ಕೆಲಸಕ್ಕೆ ಮರಳಿದಾಗ ವಿಚಿತ್ರ ಸಮಸ್ಯೆಯೊಂದು ಎದುರಾಯಿತು. ನರೇಗಾ ಕಾಮಗಾರಿ ಸ್ಥಳದಲ್ಲಿ ಪಾರದರ್ಶಕತೆಗಾಗಿ ಸರ್ಕಾರ ಜಾರಿಗೆ ತಂದಿರುವ ಫೇಸ್ ಅಥೆಂಟಿಕೇಶನ್ (ಮುಖ ಗುರುತಿಸುವಿಕೆ) ತಂತ್ರಜ್ಞಾನದ ರಾಷ್ಟ್ರೀಯ ಮೊಬೈಲ್ ಮಾನಿಟರಿಂಗ್ ಸಿಸ್ಟಮ್ (NMMS) ಆ್ಯಪ್ ಶ್ರೀನಿವಾಸ್ ಅವರ ಮುಖವನ್ನು ಗುರುತಿಸಲು ಪದೇ ಪದೇ ನಿರಾಕರಿಸಿತು! ತಲೆಯಲ್ಲಿದ್ದ ಕೂದಲು ಸಂಪೂರ್ಣ ಮಾಯವಾಗಿದ್ದರಿಂದ ಆ್ಯಪ್ ಅವರ ಹಳೆಯ ಪ್ರೊಫೈಲ್‌ಗೆ ಮ್ಯಾಚ್ ಮಾಡಿಕೊಳ್ಳದೆ ಲಾಗ್ ಇನ್ ಪ್ರಕ್ರಿಯೆಯನ್ನು ತಿರಸ್ಕರಿಸುತ್ತಲೇ ಇತ್ತು.
ಆಗ ಹೊಳೆದಿದ್ದು ಉಪಾಯ
ಆ್ಯಪ್ ಕಾರ್ಯನಿರ್ವಹಿಸದ ಕಾರಣ ಶ್ರೀನಿವಾಸ್ ಮತ್ತು ಅಲ್ಲಿನ ಮೇಲ್ವಿಚಾರಕರು (Supervisor) ಹೈರಾಣಾಗಿದ್ದರು. ಎಷ್ಟು ಬಾರಿ ಪ್ರಯತ್ನಿಸಿದರೂ ಆ್ಯಪ್ ಮಾತ್ರ ಶ್ರೀನಿವಾಸ್ ಮುಖವನ್ನು ಪತ್ತೆಹಚ್ಚುತ್ತಿರಲಿಲ್ಲ. ಒಂದು ದಿನದ ಕೂಲಿ ಕೈತಪ್ಪಿ ಹೋಗುವ ಆತಂಕದಲ್ಲಿದ್ದ ಶ್ರೀನಿವಾಸ್‌ಗೆ ಸಹಾಯ ಮಾಡಲು ಜೊತೆಯಲ್ಲಿದ್ದ ಮಹಿಳಾ ಸಹೋದ್ಯೋಗಿಯೊಬ್ಬರು ಮುಂದೆ ಬಂದರು.
ಆ ಮಹಿಳಾ ಕಾರ್ಮಿಕಳು ತಕ್ಷಣವೇ ತನ್ನ ತಲೆಯ ಕೂದಲನ್ನು ಶ್ರೀನಿವಾಸ್ ಅವರ ಮುಂಡನಗೊಂಡಿದ್ದ ತಲೆಯ ಮೇಲ್ಭಾಗದಲ್ಲಿ ಕೂದಲಿನಂತೆ ಹರಡಿ ಹಿಡಿದರು. ಅಷ್ಟೇ ಅಲ್ಲದೇ ಇದ್ದ ಮೀಸೆಯನ್ನು ಮಸಿಯಿಂದ ಮುಖದ ಮೇಲೆ ಬರೆಯಲಾಗಿತ್ತು. ಅಚ್ಚರಿ ಎನ್ನುವಂತೆ ಈ ಬಾರಿ ಸೂಪರ್‌ವೈಸರ್ ಆ್ಯಪ್ ಕ್ಯಾಮೆರಾ ಆನ್ ಮಾಡಿ ಫೇಸ್ ಸ್ಕ್ಯಾನ್ ಮಾಡುತ್ತಿದ್ದಂತೆ, ಸಿಸ್ಟಮ್ ತಕ್ಷಣವೇ ಅವರ ಮುಖವನ್ನು ಗುರುತಿಸಿ ಹಾಜರಾತಿಯನ್ನು ಯಶಸ್ವಿಯಾಗಿ ದಾಖಲಿಸಿತು! ಇದನ್ನು ಕಂಡು ಅಲ್ಲಿದ್ದ ಇತರೆ ಕಾರ್ಮಿಕರು ಹಾಗೂ ಸ್ಥಳೀಯರು ಬೆರಗಾಗಿದ್ದಾರೆ.
ತಂತ್ರಜ್ಞಾನದ ಲೋಪದ ವಿರುದ್ಧ ಕಾರ್ಮಿಕರ ಬೇಸರ
ಈ "ಕೂದಲಿನ ರಹಸ್ಯ" ಕಾರ್ಯಾಚರಣೆ ಇಡೀ ಗ್ರಾಮದಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹಾಸ್ಯದ ವಸ್ತುವಾಗಿದ್ದರೂ, ಇದರ ಹಿಂದೆ ಕಾರ್ಮಿಕರ ದೊಡ್ಡದೊಂದು ಆತಂಕ ಅಡಗಿದೆ. ಈ ಕುರಿತು ಬಿಡುಗಡೆಯಾಗಿರುವ ವಿಡಿಯೋ ಒಂದರಲ್ಲಿ ಕಾರ್ಮಿಕರೊಬ್ಬರು ಸರ್ಕಾರದ ತಂತ್ರಜ್ಞಾನದ ಲೋಪದ ವಿರುದ್ಧ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. 'ಪಾರದರ್ಶಕತೆಗಾಗಿ ತರಲಾದ ಆ್ಯಪ್ ಈಗ ನಮ್ಮ ಹೊಟ್ಟೆಯ ಮೇಲೆ ಹೊಡೆಯುತ್ತಿದೆ. ಆ್ಯಪ್‌ನಲ್ಲಿ ಹಾಜರಾತಿ ಬೀಳದಿದ್ದರೆ ನಮಗೆ ಆ ದಿನದ ಕೂಲಿ ಸಿಗುವುದಿಲ್ಲ. ಇಂತಹ ತಾಂತ್ರಿಕ ದೋಷಗಳಿಂದ ಬಡ ಕಾರ್ಮಿಕರು ಭಾರಿ ನಷ್ಟ ಅನುಭವಿಸಬೇಕಾಗುತ್ತದೆ. ಕಾರ್ಮಿಕರು ಗಡ್ಡ ಬಿಟ್ಟಿರಲಿ, ಕ್ಲೀನ್ ಶೇವ್ ಮಾಡಿರಲಿ, ತಲೆ ಮುಂಡನ ಮಾಡಿಸಿಕೊಂಡಿರಲಿ ಅಥವಾ ಪೂರ್ಣ ಕೂದಲು ಹೊಂದಿರಲಿ, ವ್ಯವಸ್ಥೆಯು ಅವರನ್ನು ಸರಿಯಾಗಿ ಗುರುತಿಸಿ ನಿಯಮಿತವಾಗಿ ವೇತನ ತಲುಪಿಸುವಂತೆ ಉನ್ನತ ಅಧಿಕಾರಿಗಳು ಈ ಆ್ಯಪ್‌ನ ಲೋಪದೋಷಗಳನ್ನು ತಕ್ಷಣವೇ ಸರಿಪಡಿಸಬೇಕು..' ಎಂದಿದ್ದಾರೆ.


