ದೀಪಾವಳಿ ಸಮೀಪಿಸುತ್ತಿದ್ದಂತೆ ದೆಹಲಿಯಲ್ಲಿ ಸ್ಫೋಟ, NIA ತನಿಖೆಯಲ್ಲಿ ಸ್ಫೋಟಕ ಮಾಹಿತಿ!
ದೀಪಾವಳಿಗೆ ಕೆಲ ದಿನಗಳು ಮಾತ್ರ ಬಾಕಿ. ಆದರೆ ದೆಹಲಿಯಲ್ಲಿ ನಡೆದ ಸ್ಫೋಟ ಇದೀಗ ಆತಂಕ ಹೆಚ್ಚಿಸಿದೆ. ಸಿಆರ್‌ಪಿಎಫ್ ಶಾಲಾ ಆವರಣದಲ್ಲಿ ಸ್ಫೋಟ ಸಂಭವಿಸಿದೆ. NIA ಸ್ಥಳಕ್ಕೆ ದೌಡಾಯಿಸಿ ತನಿಖೆ ಆರಂಭಿಸಿದ್ದು, ಸ್ಥಳದಲ್ಲಿ ಪತ್ತೆಯಾದ ಅನುಮಾನಾಸ್ಪದ ಪುಡಿಯನ್ನು ಪರೀಕ್ಷೆಗೆ ಒಳಪಡಿಸಿದ್ದಾರೆ.
ನವದೆಹಲಿ(ಆ.20) ದೀಪಾವಳಿ ಹಬ್ಬದ ತಯಾರಿಗಳು ನಡೆಯುತ್ತಿದೆ. ಇದರ ನಡುವೆ ದೆಹಲಿಯ ರೋಹಣಿ ವಲಯದಲ್ಲಿರುವ ಸಿಆರ್‌ಪಿಎಫ್ ಶಾಲಾ ಆವರಣದಲ್ಲಿ ಸ್ಫೋಟ ಸಂಭವಿಸಿದೆ. ಭಾರಿ ಸ್ಫೋಟಕ್ಕೆ ಶಾಲಾ ಆವರಣದ ಕಂಪೌಂಡ್ ಕುಸಿದು ಬಿದ್ದಿದೆ. ಹತ್ತಿದ ಅಂಗಡಿ ಮುಂಗಟ್ಟುಗಳ ಗೋಡೆಗಳು ಬಿರುಕು ಬಿಟ್ಟಿದೆ. ಅದೃಷ್ಟವಶಾತ್ ಭಾನುವಾರದ ಕಾರಣ ಯಾವುದೇ ಅಪಾಯ ಸಂಭವಿಸಿಲ್ಲ. ದೆಹಲಿ ಪೊಲೀಸ್, ಫೊರೆನ್ಸಿಕ್ ತಂಡ ಹಾಗೂ ರಾಷ್ಟ್ರೀಯ ತನಿಖಾ ದಳ(ಎನ್ಐಎ) ಸ್ಥಳಕ್ಕೆ ಧಾವಿಸಿ ತನಿಖೆ ಆರಂಭಿಸಿದೆ.
ಭಾರಿ ಶಬ್ದದೊಂದಿಗೆ ಸ್ಫೋಟ ಸಂಭವಿಸಿದೆ. ಸ್ಫೋಟದ ಬಳಿಕ ದಟ್ಟ ಹೊಗೆ ಕಾಣಿಸಿಕೊಂಡಿದೆ. ಶಾಲಾ ಆವರಣ ಪಕ್ಕದಲ್ಲಿನ ಅಂಗಡಿಗಳ ಗಾಜುಗಳ ಪುಡಿ ಪುಡಿಯಾಗಿದೆ. ಪಾರ್ಕ್ ಮಾಡಿದ್ದ ವಾಹನಗಳಿಗೂ ಹಾನಿಯಾಗಿದೆ. ಘಟನೆ ಮಾಹಿತಿ ತಿಳಿಯುತ್ತಿದ್ದಂತ ಘಟನಾ ಸ್ಥಳಕ್ಕೆ ದೆಹಲಿ ವಿಶೇಷ ದಳ ಪೊಲೀಸರು ದೌಡಾಯಿಸಿದ್ದಾರೆ. ಇಡೀ ಅವರಣ ಸುತ್ತುವರಿದು ವಶಕ್ಕೆ ಪಡೆದಿದ್ದಾರೆ. ಇದರ ಬೆನ್ನಲ್ಲೇ ಫೊರೆನ್ಸಿಕ್ ತಂಡ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದೆ. ಶಾಲಾ ಆವರಣದ ಗೋಡೆಗಳಲ್ಲಿ ಸಿಕ್ಕ ಪೌಡರ್ ರೀತಿಯ ವಸ್ತು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿದ್ದಾರೆ.
ದಿಲ್ಲಿ ಇಸ್ರೇಲ್ ಕಚೇರಿ ಸಮೀಪ ಸ್ಫೋಟ: ಬಾಂಬರ್‌ಗೆ ಭದ್ರತಾ ಪಡೆಯ ತೀವ್ರ ತಲಾಶ್
ಸ್ಫೋಟದ ಮಾಹಿತಿ ತಿಳಿಯುತ್ತಿದ್ದಂತೆ ಎನ್ಐಎ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಸ್ಫೋಟದ ಹಿಂದೆ ಯಾವುದೇ ಭಯೋತ್ಪಾದಕ ಸಂಘಟನೆ, ಭಯೋತ್ಪಾದಕ ಕೃತ್ಯದ ಕುರಿತು ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ಸ್ಥಳಕ್ಕೆ ಎನ್‌ಎಸ್‌ಜಿ ಕಮಾಂಡೋ ಕೂಡ ಆಗಮಿಸಿದೆ. ಘಟನೆ ಸ್ಥಳ ಹಾಗೂ ಸುತ್ತ ಮುತ್ತ ಭದ್ರತೆ ನಿಯೋಜಿಸಲಾಗಿದೆ.
ಘಟನೆ ಬೆನ್ನಲ್ಲೇ ಎನ್ಐಎ ಅಧಿಕಾರಿಗಳ ತಂಡ ಸೋಶಿಯಲ್ ಮೀಡಿಯಾ ಮೇಲೂ ಹದ್ದಿನ ಕಣ್ಣಿಟ್ಟಿದೆ. ಘಟನೆ ಕುರಿತು ಸುಳಿವು ಪತ್ತೆಗೆ ನಿರಂತರ ಕಾರ್ಯಾಚರಣೆ ಆರಂಭಗೊಂಡಿದೆ. ಸಿಲಿಂಡರ್ ಬ್ಲಾಸ್ಟ್ ಅನ್ನೋ ಮಾತುಗಳು ಕೇಳಿಬಂದಿದೆ. ಆದರೆ ಯಾವುದೇ ಸ್ಪಷ್ಟೆತೆ ಲಭ್ಯವಾಗಿಲ್ಲ. ಮೇಲ್ನೋಟಕ್ಕೆ ಭಯೋತ್ಪಾದಕ ಕೃತ್ಯದಂತೆ ಕಾಣಿಸುತ್ತಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ.
ಘಟನೆಗೆ ಕಾರಣ ಕುರಿತು ದೆಹಲಿ ಪೊಲೀಸ್ ಅಥವಾ ಎನ್ಐಎ ಅಧಿಕಾರಿಗಳು ಯಾವುದೇ ಮಾಹಿತಿ ನೀಡಿಲ್ಲ. ಘಟನೆಯ ಪ್ರಾಥಮಿಕ ತನಿಖೆ ಪ್ರಗತಿಯಲ್ಲಿದೆ. ಶೀಘ್ರದಲ್ಲೇ ಅಧಿಕಾರಿಗಳ ತಂಡ ಘಟನೆ ಕುರಿತು ಮಾಹಿತಿ ನೀಡಲಿದ್ದಾರೆ. ಆದರೆ ದೀಪಾವಳಿ ಹಬ್ಬದ ಸಡಗರದಲ್ಲಿರುವ ರಾಷ್ಟ್ರ ರಾಜಧಾನಿ ಜನ ಈ ಸ್ಫೋಟದಿಂದ ಬೆಚ್ಚಿ ಬಿದ್ದಿದ್ದಾರೆ. ಎನ್ಐಎ , ದೆಹಲಿ ಪೊಲೀಸ್ ಅಧಿಕಾರಿಗಳ ತಂಡ ಸೇರಿದಂತೆ ಹಲವು ಎಜೆನ್ಸಿ ಘಟನೆ ಕುರಿತು ತನಿಖೆ ನಡೆಸುತ್ತಿದೆ.
ದೆಹಲಿ ಬಾಂಬ್ ಸ್ಫೋಟದ ಹಿಂದೆ ಜೈಶ್-ಉಲ್-ಹಿಂದ್ ಉಗ್ರಸಂಘಟನೆ ಕೈವಾಡ?