ಹಮಾಸ್‌ ಉಗ್ರರ ಮೇಲೆ ಇಸ್ರೇಲ್‌ ಯುದ್ಧ ಸಾರಿರುವಾಗಲೇ ದೆಹಲಿಯಲ್ಲಿರುವ ಆ ದೇಶದ ರಾಯಭಾರ ಕಚೇರಿಯ ಬಳಿ ಮಂಗಳವಾರ ಸಂಜೆ ಸ್ಫೋಟ ಸಂಭವಿಸಿದ್ದು, ಆ ಸ್ಫೋಟಕ್ಕೆ ಕಾರಣರಾದವರಿಗಾಗಿ ಭದ್ರತಾ ಪಡೆಗಳು ತೀವ್ರ ಶೋಧ ಕಾರ್ಯಾಚರಣೆಯನ್ನು ಆರಂಭಿಸಿವೆ.

ಪಿಟಿಐ ನವದೆಹಲಿ: ಹಮಾಸ್‌ ಉಗ್ರರ ಮೇಲೆ ಇಸ್ರೇಲ್‌ ಯುದ್ಧ ಸಾರಿರುವಾಗಲೇ ದೆಹಲಿಯಲ್ಲಿರುವ ಆ ದೇಶದ ರಾಯಭಾರ ಕಚೇರಿಯ ಬಳಿ ಮಂಗಳವಾರ ಸಂಜೆ ಸ್ಫೋಟ ಸಂಭವಿಸಿದ್ದು, ಆ ಸ್ಫೋಟಕ್ಕೆ ಕಾರಣರಾದವರಿಗಾಗಿ ಭದ್ರತಾ ಪಡೆಗಳು ತೀವ್ರ ಶೋಧ ಕಾರ್ಯಾಚರಣೆಯನ್ನು ಆರಂಭಿಸಿವೆ.

ಬಾಂಬ್‌ ಸ್ಫೋಟಗೊಳ್ಳುವ ಕೆಲವೇ ಕ್ಷಣಗಳ ಮುನ್ನ ಇಬ್ಬರು ಯುವಕರು ಸ್ಫೋಟ ನಡೆದ ಸ್ಥಳದಲ್ಲಿ ಅಡ್ಡಾಡುತ್ತಿರುವ ವಿಡಿಯೋ ಭದ್ರತಾ ಪಡೆಗಳಿಗೆ ದೊರೆತಿದೆ. ಈ ನಡುವೆ, ದೆಹಲಿಯ ತನ್ನ ರಾಯಭಾರ ಕಚೇರಿ ಬಳಿ ಸಂಭವಿಸಿದ ಸ್ಫೋಟ ಶಂಕಿತ ಭಯೋತ್ಪಾದಕ ದಾಳಿಯಂತಿದ್ದು, ಭಾರತದಲ್ಲಿರುವ ತನ್ನ ಪ್ರಜೆಗಳು ತೀವ್ರ ಎಚ್ಚರಿಕೆ ವಹಿಸಬೇಕು ಎಂದು ಇಸ್ರೇಲ್‌ ಸಂದೇಶ ನೀಡಿದೆ. ಸ್ಫೋಟ ಸಂಭವಿಸಿದ ಸ್ಥಳದಲ್ಲಿ ಇಸ್ರೇಲ್‌ ಅನ್ನು ನಿಂದಿಸುವ ಪತ್ರವನ್ನು ದೊರೆತಿದೆ ಎಂಬುದು ಗಮನಾರ್ಹ.

ಇಸ್ರೇಲ್‌ ದೂತಾವಾಸ ಸ್ಫೋಟ ಉಗ್ರ ಕೃತ್ಯ?

ಈ ನಡುವೆ ರಾಷ್ಟ್ರೀಯ ಭದ್ರತಾ ಪಡೆ (ಎನ್‌ಎಸ್‌ಜಿ)ಯ ಅಧಿಕಾರಿಗಳು ವಿಧಿವಿಜ್ಞಾನ ಪ್ರಯೋಗಾಲಯದ ಪರಿಣತರ ಜತೆ ಸ್ಫೋಟ ಸ್ಥಳಕ್ಕೆ ಭೇಟಿ ನೀಡಿ, ಎಲೆ ಹಾಗೂ ಹುಲ್ಲನ್ನು ಸಂಗ್ರಹಿಸಿದ್ದಾರೆ. ಸ್ಫೋಟಕ್ಕೆ ಬಳಸಿರುವ ವಸ್ತು ಅವುಗಳಿಗೆ ಅಂಟಿಕೊಂಡಿರಬಹುದು ಎಂಬ ಕಾರಣಕ್ಕೆ ಈ ಸಂಗ್ರಹ ಕಾರ್ಯ ನಡೆದಿದೆ. ಈ ಮಧ್ಯೆ ಎನ್‌ಎಸ್‌ಜಿಯ ಶ್ವಾನದಳ ಕೂಡ ಪರಿಶೀಲನೆ ನಡೆಸಿದೆ. ಈ ನಡುವೆ, ದೆಹಲಿ ಪೊಲೀಸರ ವಿಶೇಷ ತಂಡ ಕೂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಘಟನಾ ಸ್ಥಳದಲ್ಲಿ ಅರೆಸೇನಾ ಪಡೆಯನ್ನು ನಿಯೋಜನೆ ಮಾಡಲಾಗಿದೆ. ದೆಹಲಿ ಪೊಲೀಸರು ಎಫ್‌ಐಆರ್‌ ದಾಖಲು ಮಾಡುವ ಬಗ್ಗೆ ಚಿಂತನೆಯಲ್ಲಿದ್ದಾರೆ.

ದೆಹಲಿ ಸ್ಫೋಟ ಬೆನ್ನಲ್ಲೇ ಎಲ್ಲಾ ವಿಮಾನ ನಿಲ್ದಾಣ ಸೇರಿ ಹಲವೆಡೆ ಹೈ ಅಲರ್ಟ್ ಘೋಷಣೆ!

ಸ್ಫೋಟದ ಬೆನ್ನಲ್ಲೇ ಇಸ್ರೇಲ್‌ ರಾಯಭಾರ ಕಚೇರಿ ಹಾಗೂ ದೆಹಲಿಯಲ್ಲಿನ ಯಹೂದಿಗಳು ನೆಲೆಸಿರುವ ಸ್ಥಳದಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ.

ಇಸ್ರೇಲ್‌ ಸೂಚನೆ:

ಬಹಿರಂಗವಾಗಿ ಇಸ್ರೇಲ್‌ ಲಾಂಛನವನ್ನು ಪ್ರದರ್ಶನ ಮಾಡುವುದು, ಹೆಚ್ಚು ಭದ್ರತೆ ಇಲ್ಲದ ದೊಡ್ಡ ಕಾರ್ಯಕ್ರಮಗಳಿಗೆ ತೆರಳುವುದು, ತಾವು ಹಮ್ಮಿಕೊಳ್ಳುವ ಕಾಯಕ್ರಮಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಳ್ಳದಂತೆ ಇಸ್ರೇಲ್‌ನ ರಾಷ್ಟ್ರೀಯ ಭದ್ರತಾ ಮಂಡಳಿ ಭಾರತದಲ್ಲಿನ ತನ್ನ ಪ್ರಜೆಗಳಿಗೆ ಸೂಚನೆ ನೀಡಿದೆ.