ರಾಯ್ಪುರ್(ಏ.06): ದೇಶದಲ್ಲೇ ಅತಿ ಹೆಚ್ಚು ನಕ್ಸಲ್ ಪೀಡಿತ ಪ್ರದೇಶವಾಗಿರುವ ಛತ್ತೀಸ್‌ಗಢದ ಸುಕ್ಮಾ ಹಾಗೂ ಬಿಜಾಪುರ ಜಿಲ್ಲೆ ಗಡಿಯಲ್ಲಿ ಶನಿವಾರ ಭದ್ರತಾ ಪಡೆ ಹಾಗೂ ನಕ್ಸಲರ ನಡುವಿನ ಹೋರಾಟದಲ್ಲಿ 24 ಯೋಧರು ಹುತಾತ್ಮರಾಗಿದ್ದರು. ಈ ದಾಳಿಯ ಹೊತ್ತಿನಲ್ಲಿ ಸಿಖ್ ಯೋಧನೊಬ್ಬ ತನ್ನ ಪೇಟವನ್ನು ತಗೆದು ದಾಳಿಯಲ್ಲಿ  ಗಾಯಗೊಂಡಿದ್ದ ಯೋಧನೊಬ್ಬನಿಗೆ ಸುತ್ತಿದ್ದಾರೆ ಎಂದು ಪೋಲಿಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ಕೇಂದ್ರ ಪೊಲೀಸ್ ಮೀಸಲು ಪಡೆಯ ಮತ್ತು ಕೋಬ್ರಾ ಪಡೆಯ ಯೋಧ ಬಲರಾಮ್ ಸಿಂಗ್ ಮತ್ತೊಬ್ಬ ಯೋಧ ಅಭಿಷೇಕ್ ಪಾಂಡೆಗೆ ತಮ್ಮ ಪೇಟವನ್ನು ಸುತ್ತಿ ಸಹಾಯ ಮಾಡಿದ್ದರು. ಸ್ವತ: ಬಲರಾಮ್ ಸಿಂಗ್ರಿಗೂ ಕೂಡ ದಾಳಿಯ ವೇಳೆ ಗಾಯಗಳಾಗಿದ್ದವು ಎಂದು 1988ನೇ ಬ್ಯಾಚ್‌ನ ಐಪಿಎಸ್ ಅಧಿಕಾರಿ ಆರ್ ಕೆ ವಿಜ್ ಹೇಳಿದ್ದಾರೆ. ಇಬ್ಬರೂ ಯೋಧರನ್ನು ಛತ್ತಿಸ್‌ಗಢದ ರಾಯ್ಪುರ ಆಸ್ಪತ್ರಗೆ ದಾಖಲಿಸಲಾಗಿದೆ. 

ನಕ್ಸಲರ ಟಾಪ್ ಕಮಾಂಡರ್ ಹಿಡ್ಮಾ, 24 ಯೋಧರು ಹುತಾತ್ಮರಾಗಲು ಈತನೇ ಕಾರಣ!

ʼಇದು ಸಮಾಜಕ್ಕೆ ಮಾದರಿಯಾದ ಕೆಲಸ. ಯೋಧ ಬಲರಾಮರವರಿಗೂ ಗುಂಡಿನ ಗಾಯಗಳಾಗಿದ್ದವು ಆದರೂ ಅವರು ಹೋರಾಟ ಮುಂದುವರೆಸಿದರು. ಇಬ್ಬರು ಯೋಧರ ಆರೋಗ್ಯ ಸ್ಥಿರವಾಗಿದ್ದು ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆʼಎಂದು ಐಪಿಎಸ್ ಅಧಿಕಾರಿ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಯೋಧ ಬಲರಾಮ್ ಸಿಂಗ್ ʼಎರಡೂ ಕಡೆಗಳಿಂದ ಗುಂಡಿನ ದಾಳಿಯಾಗುತ್ತಿತ್ತು. ಯೋಧ ಅಭೀಷೇಕ್ ಕಾಲಿಗೆ ಗಾಯವಾಗಿದ್ದನ್ನು ನಾನು ನೋಡಿದೆ. ಅವನ ಕಾಲಿನ ರಕ್ತಸ್ರಾವ ನಿಲ್ಲಲಿಲ್ಲ, ಅವನು ಸಾಯುತ್ತಾನೆ ಎಂದೆನಿಸಿತು. ಹಾಗಾಗಿ ನನ್ನ ಪೇಟವನ್ನು ತೆಗೆದು ರಕ್ತ ಬರದಂತೆ ಅವನ ಕಾಲಿಗೆ ಕಟ್ಟಿದೆʼ ಎಂದು ಹೇಳಿದ್ದಾರೆ.

ನಾಪತ್ತೆಯಾಗಿರುವ ಯೋಧ ನಕ್ಸಲರ ಒತ್ತೆಯಾಳು? ಬಿಡಿಸಿಕೊಡುವಂತೆ ಪ್ರಧಾನಿಗೆ ಪುತ್ರಿ ಮನವಿ!

ಜಗತ್ತಿನಾದ್ಯಂತ ಒಟ್ಟು 30 ಮಿಲಿಯನ್ ಸಿಖ್ ಸಮುದಾಯವದವರಿದ್ದಾರೆ. ಸಿಖ್‌ ಹೆಚ್ಚು ಜನಸಂಖ್ಯೆ ಹೊಂದಿರುವ ಜಗತ್ತಿನ 5 ನೇ ದೊಡ್ಡ ಸಮುದಾಯವಾಗಿದೆ. ಪೇಟವು ಸಿಖ್ ಸಮುದಾಯದ ಅತ್ಯಂತ ಮುಖ್ಯ ಸಂಕೇತವಾಗಿದೆ. ಪುರುಷ ಮತ್ತು ಮಹಿಳೆಯರು ಇಬ್ಬರೂ ಕೂಡ ಪೇಟಗಳನ್ನು ಧರಿಸುತ್ತಾರೆ. ಈ ಪೇಟಗಳು ತಮ್ಮ ಗುರುಗಳಿಂದ ಬಳುವಳಿಯಾಗಿ ಬಂದಿವೆ ಎಂದು ಭಾವಿಸುತ್ತಾರಲ್ಲದೇ ಪೇಟದ ಜೊತೆಗೆ ವೈಯುಕ್ತಿಕವಾಗಿ ಬೆಸೆದಿರುತ್ತಾರೆ. ದಕ್ಷಿಣ ಏಷ್ಯಾದಲ್ಲಿ ಪೇಟವನ್ನು ರಾಜ ಮಹಾರಾಜರು ಧರಿಸುತ್ತಿದ್ದರು ಮತ್ತು  ಅದು ಸಾಮಾಜಿಕ ಸ್ಥಾನಮಾನದ ಸೂಚ್ಯಂಕವಾಗಿತ್ತು, ಹಾಗಾಗಿ ಎಲ್ಲ ಮಾನವರು ಶ್ರೇಷ್ಠರು ಮತ್ತು ಸಮಾನರು ಎಂದು ತಿಳಿಸಲು ಸಿಖ್ ಗುರುಗಳು ಕೂಡ ಪೇಟವನ್ನು ಧರಿಸಿದರು ಎಂದು ಹೇಳಲಾಗುತ್ತದೆ.