Trouble for Navjot Sidhu : ಸಿಧುವಷ್ಟು ಕ್ರೂರಿ ಯಾರೂ ಇಲ್ಲ ಅಂದ್ರು ಸಹೋದರಿ, ಆಕೆ ಯಾರು ಗೊತ್ತೇ ಇಲ್ಲ ಅಂದ್ರು ಸಿಧು ಪತ್ನಿ!
ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಧು ವಿರುದ್ಧ ಗಂಭೀರ ಆರೋಪ
ಸಿಧು ದೊಡ್ಡ ಕ್ರೂರಿ ಎಂದ ಎನ್ ಆರ್ ಐ ಸಹೋದರಿ ಸುಮನ್ ಟೂರ್
ಆಕೆ ಯಾರು ನನಗೆ ಗೊತ್ತೇ ಇಲ್ಲ ಅಂದ್ರು ಸಿಧು ಪತ್ನಿ
ಚಂಡೀಗಢ (ಜ. 28): ಪಂಜಾಬ್ ವಿಧಾನಸಭೆ ಚುನಾವಣೆ (Punjab Assembly Election ) ಹೊಸ್ತಿಲಲ್ಲಿ ಇರುವಾಗಲೇ ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ(Punjab Congress chief ) ನವಜೋತ್ ಸಿಧು (Navjot Sidhu)ಮೇಲೆ ಅವರ ಸಹೋದರಿ ಗಂಭೀರ ಆರೋಪ ಹೊರಿಸಿದ್ದಾರೆ. 1986ರಲ್ಲಿ ನಮ್ಮ ತಂದೆಯ ನಿಧನದ ಬಳಿಕ, ನನ್ನ ಅಕ್ಕ ಹಾಗೂ ತಾಯಿಯನ್ನು ನಿರ್ದಾಕ್ಷಿಣ್ಯವಾಗಿ ಮನೆಯಿಂದ ಹೊರಹಾಕಿದ ವ್ಯಕ್ತಿ ನವಜೋತ್ ಸಿಧು ಎಂದು ಎನ್ ಆರ್ ಐ ಸಹೋದರಿ ಸುಮನ್ ಟೂರ್ (NRI Sister Suman Toor) ಆರೋಪಿಸಿದ್ದಾರೆ. ಈ ಅವಮಾನದಿಂದ ಬೇಸತ್ತ ನಮ್ಮ ತಾಯಿ 1989ರಲ್ಲಿ ರೈಲ್ವೆ ನಿಲ್ದಾಣದಲ್ಲಿ ನಿರ್ಗತಿಕರಾಗಿ ಸಾವನ್ನಪ್ಪಿದ್ದರು ಎಂದು ಗಂಭೀರ ಆರೋಪ ಮಾಡಿದ್ದಾರೆ. ಆದರೆ, ಸಿಧು ವಿರುದ್ಧ ಈ ಗಂಭೀರ ಆರೋಪ ಮಾಡಿರುವ ಸುಮನ್ ಟೂರ್ ಯಾರೆನ್ನುವುದು ತನಗೆ ಗೊತ್ತಿಲ್ಲ ಎಂದು ಸಿಧು ಅವರ ಪತ್ನಿ ನವಜೋತ್ ಕೌರ್ ಸಿಧು (Navjot Kaur)ಹೇಳಿದ್ದಾರೆ.
ನವಜೋತ್ ಸಿಧು ಅವರ ತಂದೆ ತಮ್ಮ ಮೊದಲ ಪತ್ನಿಯಿಂದ ಇಬ್ಬರು ಹೆಣ್ಣುಮಕ್ಕಳನ್ನು ಹೊಂದಿದ್ದರು. ಆದರೆ, ಅವರು ಯಾರು ಎನ್ನುವುದು ತಮಗೆ ತಿಳಿದಿಲ್ಲ ಎಂದು ನವಜೋತ್ ಕೌರ್ ಹೇಳಿದ್ದಾರೆ. ಶುಕ್ರವಾರ ಚಂಡೀಗಢದಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಸುಮನ್ ಟೂರ್, ತಮ್ಮ ಕುಟುಂಬದ ಆಘಾತಕಾರಿ ವಿಷಯಗಳನ್ನು ಬಹಿರಂಗಪಡಿಸಿದ್ದು ಮಾತ್ರವಲ್ಲದೆ ನವಜೋತ್ ಸಿಧು ಕ್ರೂರ ವ್ಯಕ್ತಿ ಎಂದು ಆಪಾದನೆ ಮಾಡಿದ್ದರು. 1986ರಲ್ಲಿ ನಮ್ಮ ತಂದೆ ನಿಧನರಾದ ಕೆಲವೇ ತಿಂಗಳಲ್ಲಿ ನಮ್ಮನ್ನು ಮನೆಯಿಂದ ನವಜೋತ್ ಸಿಧು ಹೊರಹಾಕಿದ್ದರು. 1989ರಲ್ಲಿ ನಮ್ಮ ತಾಯಿ ದೆಹಲಿ ರೈಲ್ವೆ ನಿಲ್ದಾಣದಲ್ಲಿ ನಿರ್ಗತಿಕಳಂತೆ ಸಾವನ್ನಪ್ಪಿದಳು. ಅಪ್ಪನ ಅಸ್ತಿಯನ್ನು ತಾನೊಬ್ಬನೇ ಅನುಭವಿಸಬೇಕು ಎನ್ನುವ ಹುನ್ನಾರದಲ್ಲಿದ್ದ ಸಿಧು, ನನ್ನ ತಾಯಿ ಹಾಗೂ ನಮ್ಮಿಬ್ಬರ ಜೊತೆ ಇದ್ದ ಎಲ್ಲಾ ಸಂಪರ್ಕವನ್ನೂ ಕಡಿದುಹಾಕಿದ್ದರು. ನನ್ನ ಅಕ್ಕ ಹಾಗೂ ನಾನು ನಿರ್ಮಲ್ ಭಗವಂತ್ ಎನ್ನುವ ಮಹಿಳೆಯ ಮಕ್ಕಳು ಎಂದು ಸುಮನ್ ಟೂರ್ ಹೇಳಿದ್ದಾರೆ.
1986ರಲ್ಲಿ ತಂದೆ ತೀರಿಕೊಂಡ ನಂತರ ಸಿದ್ದು ತಮ್ಮ ತಾಯಿ ಹಾಗೂ ಅಕ್ಕನಿಗೆ ಕಿರುಕುಳ ನೀಡಿ ಮನೆಯಿಂದ ಹೊರ ಹಾಕಿದ್ದರು ಎಂದು ಸುಮನ್ ಆರೋಪಿಸಿದ್ದಾರೆ. ಚಿಕ್ಕಂದಿನಲ್ಲೇ ತಂದೆ-ತಾಯಿ ಬೇರೆಯಾಗಿದ್ದರು ಎಂದು ಮಾಧ್ಯಮಗಳಲ್ಲಿ ಹೇಳಿಕೆ ನೀಡಿದ ಸಿಧು ಮೇಲೆ ಹಲವು ಕಾನೂನು ಪ್ರಕರಣಗಳು ದಾಖಲಾಗಿವೆ. ಸಿದ್ದು ಅವರನ್ನು ಸುಳ್ಳುಗಾರ ಎಂದು ಕರೆದಿರುವ ಸುಮನ್ ಟೂರ್, ತಾಯಿಯೊಂದಿಗೆ ಮನೆಯಿಂದ ಹೊರಹಾಕಲ್ಪಟ್ಟ ಅಕ್ಕನ ಮಗಳಿಂದ ಸಿಧು ಅವರ ಸುಳ್ಳುಗಳು ನನಗೆ ತಿಳಿದವು. ನನ್ನ ಅಕ್ಕ ಈಗಾಗಲೇ ನಿಧನರಾಗಿದ್ದಾರೆ ಎಂದು ಸುಮನ್ ಟೂರ್ ತಿಳಿಸಿದ್ದಾರೆ.
ಕ್ರಿಕೆಟಿಗ ಬಲ್ವಂತ್ ಸಿಧು (Cricketer Balwant Sidhu ) ಅವರು ನವಜೋತ್ ಸಿಧು ಅವರ ತಂದೆ. ತಾನು ತಂದೆಯೊಂದಿಗೆ ಬಹಳ ಹತ್ತಿರವಾಗಿದ್ದೆ ಎಂದು ಹೇಳಿರುವ ಸಿಧು, ತಾನು ಕೇವಲ 2 ವರ್ಷದವನಾಗಿದ್ದಾಗ ಹೆತ್ತವರು ಬೇರ್ಪಟ್ಟಿದ್ದರು ಎಂದು ಹೇಳಿದ್ದರು.
Punjab Elections: ಸಿಧು ದುರಹಂಕಾರ ಕೊನೆಗಾಣಿಸಲು ಪ್ರಮುಖ ಅಭ್ಯರ್ಥಿ ಕಣಕ್ಕಿಳಿಸಿದ ಅಕಾಲಿ ದಳ!
ಆದರೆ, ಇದನ್ನು ಸುಳ್ಳಿನ ಕಂತೆ ಎಂದಿರುವ ಸುಮನ್ ಟೂರ್, ತಮ್ಮ ಕುಟುಂಬದ ಚಿತ್ರವನ್ನು ಮಾಧ್ಯಮಗಳ ಮುಂದೆ ತೋರಿಸಿದ್ದಲ್ಲದೆ, "ಇದರಲ್ಲಿ ಸಿಧು ಅವರಿಗೆ 2 ವರ್ಷವಾಗಿರುವ ರೀತಿ ಕಾಣುತ್ತಿದೆಯೇ?' ಎಂದು ಪ್ರಶ್ನೆ ಮಾಡಿದ್ದಾರೆ. ತನ್ನ ಪೋಷಕರ ಸಂಬಂಧದ ಬಗ್ಗೆ ಮುಕ್ತವಾಗಿ ಹೇಳಲು ಏಕೆ ನಿರಾಕರಣೆ ಮಾಡುತ್ತಿರುವೆ ಎಂದು ನನ್ನ ತಾಯಿ ಸಿಧು ಅವರಿಗೆ ಕೇಳಿದ್ದರು. ಆದರೆ, ಈ ವಿಷಯಗಳನ್ನು ಹೇಳಲು ಸಿಧು ನಿರಾಕರಿಸಿದ್ದರು.
Punjab Elections 2022: ನಿಮಗೆಲ್ಲಾ ಸ್ವಾಗತ ಅಂತಾ ED ಅಧಿಕಾರಿಗಳಿಗೆ ಅರವಿಂದ್ ಕೇಜ್ರಿವಾಲ್ ಹೇಳಿದ್ದೇಕೆ?
ನಾನು ಅಮೆರಿಕದಲ್ಲಿ ವಾಸವಾಗಿದ್ದೆ. ನನ್ನ ಅಕ್ಕ ತೀರಿಹೋದ ಬಳಿಕ ಈ ಎಲ್ಲಾ ವಿಚಾರಗಳು ಗೊತ್ತಾಗಿವೆ. ಸುಮನ್ ಟೂರ್ ಜೊತೆಗೆ ಯಾವುದೇ ರಕ್ತ ಸಂಬಂಧವಿಲ್ಲ ಎಂದು ಸಿಧು ಹೇಳಿರುವ ನಡುವೆ, ಜನವರಿ 20 ರಂದು ನವಜೋತ್ ಸಿಧು ಅವರ ಭೇಟಿಯಾಗಲು ಪ್ರಯತ್ನಿಸಿದ್ದೆ. ಆದರೆ, ಸಿಧು ಅದನ್ನು ನಿರಾಕರಿಸಿದ್ದಾರೆ ಎಂದು ಹೇಳಿದ್ದಾರೆ.