ಖತಾರ್ ದೇಶದ ಮಾಜಿ ಅಮೀರ್ ಶೇಖ್ ಹಮದ್ ಬಿನ್ ಖಲೀಫಾ ಅಲ್-ಥಾನಿ ಅವರ ನಿಧನದ ಹಿನ್ನೆಲೆಯಲ್ಲಿ, ಗೌರವಸೂಚಕವಾಗಿ ಭಾರತ ಒಂದು ದಿನ ರಾಷ್ಟ್ರೀಯ ಶೋಕಾಚರಣೆ ನಡೆಸಿದೆ. ಎಲ್ಲಾ ಸರ್ಕಾರಿ ಹಾಗೂ ಪ್ರಮುಖ ಕಟ್ಟಡಗಳ ಮೇಲೆ ಧ್ವಜವನ್ನು ಅರ್ಧಮಟ್ಟಕ್ಕೆ ಹಾರಿಸಲಾಗಿದೆ.

ನವದೆಹಲಿ (ಜು.13) ಖತಾರ್ ದೇಶದ ಫಾದರ್ ಎಂದೇ ಕರೆಯಲ್ಪಡುವ ಶೇಖ್ ಹಮದ್ ಬಿನ್ ಖಲೀಫಾ ಅಲ್-ಥಾನಿ ನಿಧನದ ಹಿನ್ನಲೆಯಲ್ಲಿ ಭಾರತ ಇಂದು (ಜು.13) ರಾಷ್ಟ್ರೀಯ ಶೋಕಾಚರಣೆ ನಡೆಸಿದೆ. ಶೋಕಾಚರಣೆಯ ಅಂಗವಾಗಿ ಇಂದು ಭಾರತದಾದ್ಯಂತ ರಾಷ್ಟ್ರಧ್ವಜವನ್ನು ಅರ್ಧಕ್ಕೆ ಹಾರಿಸಿ ಗೌರವ ನಮನ ಸಲ್ಲಿಸಲಾಗಿದೆ. 74ನೇ ವಯಸ್ಸಿನಲ್ಲಿ ನಿಧನರಾದ ಶೇಖ್ ಹಮದ್ ಬಿನ್ ಖಲೀಫಾ ಅಲ್-ಥಾನಿಗೆ ಭಾರತ ಸರ್ಕಾರ ವಿಶೇಷ ಗೌರವ ಸಲ್ಲಿಸಿದೆ. ಭಾರತ ಸರ್ಕಾರದ ಪರವಾಗಿ ಸಚಿವ ಕಿರಣ್ ರಿಜಿಜು ಖತಾರ್‌ಗೆ ಪ್ರಯಾಣ ಬೆಳೆಸಿ ರಾಜಮನೆತನಕ್ಕೆ ಸ್ವಾಂತನ ಹೇಳಲಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪ್ರಧಾನಿ ಮೋದಿ ಕಂಬನಿ

ಖತಾರ್ ರಾಜ್ಯದ ಫಾದರ್ ಅಮೀರ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಕಂಬನಿ ಮಿಡಿದಿದ್ದಾರೆ. ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮೂಲಕ ಸಾಂತ್ವನ ಮಾತುಗಳನ್ನಾಡಿದ್ದಾರೆ. ಖತಾರ್ ರಾಜ್ಯದ ಫಾದರ್ ಅಮೀರ್, ಅವರ ಘನತೆವೆತ್ತ ಶೇಖ್ ಹಮದ್ ಬಿನ್ ಖಲೀಫಾ ಅಲ್-ಥಾನಿ ಅವರ ನಿಧನದ ಸುದ್ದಿ ತೀವ್ರ ದುಃಖ ತಂದಿದೆ. ಅವರು ಖತಾರ್ ಅನ್ನು ಅಭಿವೃದ್ಧಿ ಮತ್ತು ಸಮೃದ್ಧಿಯ ಉನ್ನತ ಶಿಖರಕ್ಕೆ ಮುನ್ನಡೆಸಿದ ಮಹಾನ್ ದೂರದರ್ಶಿ ನಾಯಕರಾಗಿದ್ದರು. ಫೆಬ್ರವರಿ 2024 ರಲ್ಲಿ ನನ್ನ ಖತಾರ್ ಭೇಟಿಯ ಸಂದರ್ಭದಲ್ಲಿ ಅವರನ್ನು ಭೇಟಿಯಾಗುವ ಸೌಭಾಗ್ಯ ನನಗಿತ್ತು, ಅವರನ್ನು ಭಾರತದ ಅತ್ಯಂತ ಆಪ್ತ ಮಿತ್ರನನ್ನಾಗಿ ನಾವು ಸದಾ ನೆನಪಿಸಿಕೊಳ್ಳುತ್ತೇವೆ. ಖತಾರ್‌ನ ಪ್ರಸ್ತುತ ಅಮೀರ್ ಶೇಖ್ ತಮೀಮ್ ಬಿನ್ ಹಮದ್ ಅಲ್ ಥಾನಿ ಹಾಗೂ ಅಲ್ಲಿನ ರಾಜಮನೆತನ ಮತ್ತು ಜನತೆಗೆ ನನ್ನ ಆಳವಾದ ಸಾಂತ್ವನಗಳು" ಎಂದು ಪ್ರಧಾನಿ ಮೋದಿ ಬರೆದುಕೊಂಡಿದ್ದಾರೆ.

ಶೇಖ್ ಹಮದ್ ಬಿನ್ ಖಲೀಫಾ ಅಲ್-ಥಾನಿ ಅವರು 1995 ರಿಂದ 2013 ರವರೆಗೆ ಒಟ್ಟು 18 ವರ್ಷಗಳ ಕಾಲ ಖತಾರ್ ದೇಶದ ಅಮೀರ್ ಆಗಿ ಆಡಳಿತ ನಡೆಸಿದ್ದರು. ಇವರ ಆಡಳಿತಾವಧಿಯಲ್ಲೇ ಖತಾರ್ ದೇಶವು ಜಾಗತಿಕ ಮಟ್ಟದಲ್ಲಿ ಆರ್ಥಿಕ, ಸಾಮಾಜಿಕ ಮತ್ತು ರಾಜತಾಂತ್ರಿಕವಾಗಿ ಅಭೂತಪೂರ್ವ ಬದಲಾವಣೆಗಳನ್ನು ಕಂಡಿತು. ತಮ್ಮ ದೇಶದ ತೈಲ ಮತ್ತು ದ್ರವೀಕೃತ ನೈಸರ್ಗಿಕ ಅನಿಲ (LNG) ಉದ್ಯಮವನ್ನು ಜಾಗತಿಕ ಮಟ್ಟಕ್ಕೆ ವಿಸ್ತರಿಸುವ ಮೂಲಕ ಖತಾರ್ ಅನ್ನು ವಿಶ್ವದ ಅತ್ಯಂತ ಶ್ರೀಮಂತ ದೇಶಗಳ ಸಾಲಿನಲ್ಲಿ ನಿಲ್ಲಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.

2013 ರಲ್ಲಿ ಅವರು ಸ್ವಯಂಪ್ರೇರಿತರಾಗಿ ಅಧಿಕಾರದಿಂದ ಕೆಳಗಿಳಿದು, ತಮ್ಮ ಪುತ್ರ ಹಾಗೂ ಪ್ರಸ್ತುತ ಅಮೀರ್ ಆಗಿರುವ ಶೇಖ್ ತಮೀಮ್ ಅವರಿಗೆ ಆಡಳಿತದ ಚುಕ್ಕಾಣಿ ಒಪ್ಪಿಸುವ ಮೂಲಕ ಗಲ್ಫ್ ರಾಷ್ಟ್ರಗಳ ಇತಿಹಾಸದಲ್ಲೇ ಹೊಸ ಪರಂಪರೆಗೆ ನಾಂದಿ ಹಾಡಿದ್ದರು. ಇವರ ಆಡಳಿತಾವಧಿಯಲ್ಲಿ ಖತಾರ್‌ನಲ್ಲಿ ಭಾರತೀಯ ಸಮುದಾಯದ ಜನಸಂಖ್ಯೆ ಗಣನೀಯವಾಗಿ ಬೆಳೆದಿದ್ದಲ್ಲದೆ, ಇವರು 1999, 2005 ಮತ್ತು 2012 ರಲ್ಲಿ ಭಾರತಕ್ಕೆ ಅಧಿಕೃತ ಭೇಟಿ ನೀಡಿ ಉಭಯ ದೇಶಗಳ ಬಾಂಧವ್ಯವನ್ನು ಗಟ್ಟಿಗೊಳಿಸಿದ್ದರು