ದೆಹಲಿ ಗಲಭೆ ವೇಳೆ ಇಂಟಲಿಜೆನ್ಸ್ ಅಧಿಕಾರಿ ಅಂಕಿತ್ ಶರ್ಮಾ ಹತ್ಯೆ ಪ್ರಕರಣದ ತೀರ್ಪು ಹೊರಬಿದ್ದಿದೆ. ಆಪ್ ಮಾಜಿ ನಾಯಕ ತಾಹೀರ್ ಹುಸೇನ್ ದೋಷಿ ಎಂದು ಕೋರ್ಟ್ ತೀರ್ಪು ನೀಡಿದೆ. ಇದೇ ಪ್ರಕರಣದಲ್ಲಿ ಜಾವೇದ್ ಸೇರಿದಂತೆ ನಾಲ್ವರು ದೋಷಿ ಎಂದಿದೆ.
ನವದೆಹಲಿ (ಜು.13) ದೇಶವನ್ನೇ ನಡುಗಿಸಿದ 2020ರ ದೆಹಲಿ ದಂಗೆ ಅಚಾನಕ್ಕಾಗಿ ನಡೆದ ಗಲಭೆಯಲ್ಲ, ವ್ಯವಸ್ಥಿತ ಷಡ್ಯಂತ್ರ ಅನ್ನೋದಕ್ಕೆ ಹಲವು ಸಾಕ್ಷ್ಯಗಳು ಲಭ್ಯವಾಗಿದೆ. ಈಶಾನ್ಯ ದೆಹಲಿಯಲ್ಲಿ ನಡೆದ ದಂಗೆ ವೇಳೆ ಗುಪ್ತಚರ ಇಲಾಖೆ ಅಧಿಕಾರಿ ಅಂಕಿತ್ ಶರ್ಮಾ ಹತ್ಯೆಯಾಗಿತ್ತು. ಈ ಹತ್ಯೆ ಪ್ರಕರಣದ ತೀರ್ಪನ್ನು ಕೋರ್ಟ್ ಪ್ರಕಟಿಸಿದೆ.ಈ ಪ್ರಕರಣ ಸಂಬಂಧಿಸಿ ಆಪ್ ಮಾಜಿ ನಾಯಕ ತಾಹೀರ್ ಹುಸೇನ್ ದೋಷಿ ಎಂದು ಕೋರ್ಟ್ ತೀರ್ಪು ನೀಡಿದೆ. ತಾಹೀರ್ ಹುಸೈನ್ ಜೊತೆ ಇತರ ನಾಲ್ವರು ಅಪರಾಧಿಗಳು ಎಂದು ದೆಹಲಿ ನ್ಯಾಯಾಲಯ ತೀರ್ಪು ನೀಡಿದೆ.
ತಾಹೀರ್ ಹುಸೇನ್ ಜೊತೆ ಐವರು ಅಪರಾಧಿಗಳು
ದೆಹಲಿ ಕಾರ್ಕಡೊಮಾ ನ್ಯಾಯಲಯದ ಹೆಚ್ಚುವರಿ ಸೆಷನ್ ನ್ಯಾಯಾಧೀಶ ಪ್ರವೀಣ್ ಸಿಂಗ್ ತೀರ್ಪು ಪ್ರಕಟಿಸಿದ್ದಾರೆ. ತಾಹೀರ್ ಹುಸೇನ್ ಭಾರತೀಯ ದಂಡ ಸಂಹಿತೆ ಸೆಕ್ಷನ್ 302, 365, 153 ಎ, 147, 148 ಹಾಗೂ 16ೃ49ರ ಅಡಿಯಲ್ಲಿ ದೋಷಿ ಎಂದು ನ್ಯಾಯಲಯ ತೀರ್ಪು ನೀಡಿದೆ. ತಾಹಿರ್ ಹುಸೇನ್ ಜೊತೆ ಜಾವೇದ್, ಅನಾಸ್, ನಾಜಿಮ್ ಹಾಗೂ ಕಾಸಿಮ್ ಸೇರಿ ಐವರನ್ನು ಅಪರಾಧಿಗಳು ಎಂದು ಕೋರ್ಟ್ ತೀರ್ಪು ನೀಡಿದೆ.
ಚರಂಡಿಯಲ್ಲಿ ಅಂಕಿತ್ ಶರ್ಮಾ ಶವ ಪತ್ತೆ
2020ರ ದೆಹಲಿ ದಂಗೆ ಭಾರತದ ಗಲಭೆಗಳ ಪೈಕಿ ಅತ್ಯಂತ ಭೀಕರ ದಂಗೆಯಾಗಿದೆ. ಫೆಬ್ರವರಿ 25, 2020ರಂದು ಇಂಟೆಲಿಜೆನ್ಸ್ ಆಫೀಸರ್ ಅಂಕಿತ್ ಶರ್ಮಾ ಕರ್ತವ್ಯ ಮುಗಿಸಿ ಮನೆಗೆ ಮರಳಿದ್ದಾರೆ. ಸಂಜೆ ಮನೆಯಿಂದ ದಿನಸಿ ಸೇರಿದಂತೆ ಮನೆಯ ವಸ್ತುಗಳ ಖರೀದಿಸಲು ಮನೆಯಿಂದ ಹೊರಗಡೆ ತೆರಳಿದ್ದರು. ಆದರೆ ಎಷ್ಟು ಹೊತ್ತಾದರೂ ಅಂಕಿತ್ ಶರ್ಮಾ ಮನೆಗೆ ಮರಳಲಿಲ್ಲ. ಗಾಬರಿಗೊಂಡ ಅಂಕಿತ್ ಶರ್ಮಾ ಕುಟುಂಬ ಪೊಲೀಸರಿಗೆ ದೂರು ನೀಡಿದ್ದರು. ಅಂಕಿತ್ ಶರ್ಮಾ ತಂದೆ ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿದ್ದರು.
ಕಾರ್ಯಾಚರಣೆ ವೇಳೆ ಅಂಕಿತ್ ಶರ್ಮಾ ಮೃತೇದಹ ಖಜೂರಿ ಖಾಸ್ ಬಳಿಯ ಚರಂಡಿಯಲ್ಲಿ ಪತ್ತೆಯಾಗಿತ್ತು. ಮಸೀದಿಯಲ್ಲಿ ಅಂಕಿತ್ ಶರ್ಮಾರನ್ನು ಹತ್ಯೆ ಮಾಡಿ ಚರಂಡಿಯಲ್ಲಿ ಎಸೆಯಲಾಗಿತ್ತು ಅನ್ನೋ ಮಾಹಿತಿಯೂ ಬಹಿರಂಗವಾಗಿತ್ತು. ಮರಣೋತ್ತರ ಪರೀಕ್ಷೆಯಲ್ಲಿ ಅಂಕಿತ್ ಶರ್ಮಾ ಮೇಲಿನ ಭೀಕರ ದಾಳಿಯ ದಾಖಲೆ ಬಿಚ್ಚಿಟ್ಟಿತ್ತು. ಮಾರಾಕಾಸ್ತ್ರಗಳಿಂದ ಭೀಕರ ದಾಳಿಯಾಗಿರುವುದು ದೃಢಪಟ್ಟಿತ್ತು. ಅಂಕಿತ್ ಶರ್ಮಾ ದೇಹದಲ್ಲಿ 51 ಗಾಯದ ಗುರುತುಗಳಿತ್ತು.
ಚಾರ್ಜ್‌ಶೀಟ್‌ನಲ್ಲಿತ್ತು ಸ್ಫೋಟಕ ಮಾಹಿತಿ
ಅಂಕಿತ್ ಶರ್ಮಾ ಹತ್ಯೆ ವ್ಯವಸ್ಥಿತವಾಗಿ,ಟಾರ್ಗೆಟ್ ಮಾಡಿ ಮಾಡಿದ ಕೊಲೆಯಾಗಿತ್ತು ಅನ್ನೋದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ. ತಾಹೀರ್ ಹುಸೆನ್ ತನ್ನ ಮನೆಯ ಮೇಲ್ಚಾವಣಿಯಲ್ಲಿ ಹಾಗೂ ಮಸೀದಿಯಿಂದ ದಂಗೆಕೋರರ ಗುಂಪನ್ನು ಮುನ್ನಡೆಸುತ್ತಿದ್ದ. ಅಧಿಕಾರಿಯನ್ನು ಟಾರ್ಗೆಟ್ ಮಾಡಿದ್ದ ತಾಹೀರ್ ಹುಸೇನ್ ಹಾಗೂ ಗ್ಯಾಂಗ್ ವ್ಯವಸ್ಥಿತವಾಗಿ ಕೊಲೆ ಮಾಡಿತ್ತು. ಪೊಲೀಸರು ಸಾಕ್ಷಿ ಸಮೇತ ತಾಹೀರ್ ಹುಸೇನ್ ಹಾಗೂ ಗ್ಯಾಂಗ್‌ನ ಆರೋಪವನ್ನು ಸಾಬೀತುಪಡಿಸಿದ್ದರು. ಇದೀಗ ತಾಹೀರ್ ಹುಸೇನ್ ಸೇರಿದಂತೆ ಐವರ ದೋಷಿ ಎಂದು ಕೋರ್ಟ್ ತೀರ್ಪು ನೀಡಿದೆ.


