ಬಿಲಾಸಪುರದಲ್ಲಿ ರೈಲು ಅಪಘಾತ ಸಂಭವಿಸಿದೆ. ಮೂರು ಬೋಗಿಗಳು ಹಳಿ ತಪ್ಪಿದ ಪರಿಣಾಮ ಇತರ ರೈಲು ಸಂಚಾರ ವಿಳಂಬವಾಗಿದೆ. ಈ ಮಾರ್ಗದಲ್ಲಿ ಚಲಿಸಬೇಕಿದ್ದ ಹಲವು ಪ್ರಯಾಣಿಕರ ರೈಲುಗಳನ್ನು ತಾತ್ಕಾಲಿಕ ಸ್ಥಗಿತಗೊಳಿಸಲಾಗಿದೆ.

ಬಿಲಾಸಪುರ (ಜು.13) ಭಾರತೀಯ ರೈಲ್ವೇಯ ಗೂಡ್ಸ್ ರೈಲು ಬಿಲಾಸಪುರದಲ್ಲಿ ಹಳಿ ತಪ್ಪಿ ಅಪಘಾತಕ್ಕೀಡಾಗಿದೆ. ಗೂಡ್ಸ್ ರೈಲು ಚಲಿಸುತ್ತಿದ್ದಂತೆ ಮೂರು ಬೋಗಿಗಳು ಹಳಿ ತಪ್ಪಿ ಅಪಘಾತ ಸಂಭವಿಸಿದೆ. ಪರಿಣಾಮ ರೈಲು ಹಳಿ, ವಿದ್ಯುತ್ ಸಂಪರ್ಕ ಸೇರಿದಂತೆ ಹಲವು ಮೂಲಭೂತ ಸೌಕರ್ಯಗಳಿಗೆ ಹಾನಿಯಾಗದ ಘಟನೆ ಚತ್ತೀಸಗಢದ ಬಿಲಾಸಪುರ ಜಿಲ್ಲೆಯಲ್ಲಿ ನಡೆದಿದೆ. ಅದೃಷ್ಠವಶಾತ್ ಈ ಅಪಘಾತದಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಆದರೆ ಇದೇ ಮಾರ್ಗದಲ್ಲಿ ಚಲಿಸಬೇಕಿದ್ದ ಹಲವು ಪ್ರಯಾಣಕರ ರೈಲು ಸಂಚಾರ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಿಧಾನವಾಗಿ ಚಲಿಸುತ್ತಿದ್ದ ವೇಳೆ ಹಳಿ ತಪ್ಪಿದ ರೈಲು

ಗೂಡ್ಸ್ ರೈಲು ಸರಕು ಇಳಿಸಿದ ಬಳಿಕ ನಿಧಾನವಾಗಿ ಸಾಗುತ್ತಿತ್ತು. ಸೌತ್ ಈಸ್ಟರ್ನ್ ಸೆಂಟ್ರಲ್ ರೈಲ್ವೇ ವಲಯದ ಬಿಲಾಸ್‌ಪುರ ಬಳಿ ಮೂರು ಬೋಗಿಗಳು ಹಳಿ ತಪ್ಪಿ ಅಪಘಾತ ಸಂಭವಿಸಿದೆ. ರೈಲು ನಿಧಾನವಾಗಿ ಚಲಿಸುತ್ತಿದ್ದ ಕಾರಣ ಹೆಚ್ಚಿನ ಹಾನಿ ಸಂಭವಿಸಿಲ್ಲ. ವಿದ್ಯುತ್ ಸಂಪರ್ಕಗಳು ಕಡಿತಗೊಂಡಿದೆ. ರೈಲಿನ ಬೋಗಿ ಹಳಿ ತಪ್ಪುತ್ತಿದ್ದಂತೆ ಲೋಕೋ ಪೈಲೆಟ್ ರೈಲು ನಿಲ್ಲಿಸಿ ಮತ್ತಷ್ಟು ಅನಾಹುತ ತಪ್ಪಿಸಿದ್ದಾರೆ.

ರೈಲು ಹಳಿ ತಪ್ಪಿದ ಮಾಹಿತಿ ಸಿಗುತ್ತಿದ್ದಂತೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಇದೇ ವೇಳೆ ರೈಲ್ವೇ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ನಡೆಸಿದ್ದಾರೆ. ಹಳಿ ತಪ್ಪಿದ ರೈಲು ಬೋಗಿಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಸಿದ್ದಾರೆ. ಇದೇ ವೇಳೆ ಹಳಿಗಳ ದುರಸ್ತಿ, ವಿದ್ಯುತ್ ಸಂಪರ್ಕ ದುರಸ್ತಿ ಕಾರ್ಯಗಳು ಭರದಿಂದ ಸಾಗಿದೆ. ಇದೇ ಮಾರ್ಗದಲ್ಲಿ ಹಲವು ಪ್ರಯಾಣಿಕ ರೈಲುಗಳು ಸಂಚಾರವಿರುವ ಕಾರಣ ತಕ್ಷಣವೇ ದುರಸ್ತಿ ಕಾರ್ಯಗಳು ಆರಂಭಗೊಂಡಿದೆ.

ಪ್ರಯಾಣಿಕ ರೈಲು, ಸರಕು ರೈಲುಗಳ ಸಂಚಾರ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಕೆಲ ರೈಲುಗಳ ಮಾರ್ಗ ಬದಲಿಸಲಾಗಿದೆ. ಬಿಲಾಸಪುರ ರೈಲ್ವೇ ಅಪಘಾತದಲ್ಲಿ ಕೆಲ ಹಳಿಗಳು ಹಾನಿಯಾಗಿದೆ. ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಹೀಗಾಗಿ ಇವುಗಳನ್ನು ದುರಸ್ತಿ ಮಾಡಿದ ಬಳಿಕ ಪರಿಶೀಲನೆ ನಡೆಯಲಿದೆ. ಅಧಿಕಾರಿಗಳ ಪರಿಶೀಲನೆ ನಡೆಸಿದ ಬಳಿಕ ರೈಲು ಸಂಚಾರ ಮುಂದುವರಿಯಲಿದೆ ಎಂದು ಬಿಲಾಸವುರ ವಿಭಾಗದ ರೈಲು ಅಧಿಕಾರಿಗಳು ಹೇಳಿದ್ದಾರೆ.