Omicron In Mumbai: ಕಠಿಣ ನಿರ್ಬಂಧ ಜಾರಿ: ರೈಲು, ಬಸ್ಸು, ಟ್ಯಾಕ್ಸಿ ಹತ್ತಲೂ ಲಸಿಕೆ ಕಡ್ಡಾಯ!
* ಮಹಾರಾಷ್ಟ್ರದ 28 ಒಮಿಕ್ರೋನ್ ಕೇಸ್‌ಗಳಲ್ಲಿ ಮುಂಬೈ ಪಾಲು 12
* ಮುಂಬೈನಲ್ಲಿ ಕಠಿಣ ನಿರ್ಬಂಧ ಜಾರಿ
* ಸ್ಥಳೀಯ ರೈಲು, ಬಸ್ಸು, ಟ್ಯಾಕ್ಸಿ ಹತ್ತಲೂ ಲಸಿಕೆ ಕಡ್ಡಾಯ
ಮುಂಬೈ(ಡಿ.16): ಒಮಿಕ್ರೋನ್ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಗುರುವಾರದಿಂದ ಜಾರಿಗೆ ಬರುವಂತೆ ಸೆ.144ರಡಿ ನಿರ್ಬಂಧ ಕ್ರಮಗಳನ್ನು ಜಾರಿಗೊಳಿಸಲಾಗಿದೆ.
ಮಹಾರಾಷ್ಟ್ರದಲ್ಲಿ ಒಟ್ಟಾರೆ 28 ಒಮಿಕ್ರೋನ್ ಕೇಸ್‌ಗಳು ಪತ್ತೆಯಾಗಿದ್ದು, ಇದರಲ್ಲಿ 12 ಕೇಸ್‌ಗಳು ಮುಂಬೈನಲ್ಲೇ ದಾಖಲಾಗಿವೆ. ಈ ಹಿನ್ನೆಲೆಯಲ್ಲಿ ಕಠಿಣ ನಿರ್ಬಂಧ ಕ್ರಮಗಳನ್ನು ಜಾರಿಗೊಳಿಸಲಾಗಿದೆ. ಈ ಪ್ರಕಾರ ಸಾರ್ವಜನಿಕ ಸ್ಥಳದಲ್ಲಿ 5ಕ್ಕಿಂತ ಹೆಚ್ಚು ಮಂದಿ ಸೇರುವಂತಿಲ್ಲ. ಸಾರ್ವಜನಿಕ ಸಭೆ ಸೇರಿ ಯಾವುದೇ ಸಮಾರಂಭ ನಡೆಸುವಂತಿಲ್ಲ. ಶಾಪಿಂಗ್ ಮಳಿಗೆಗಳು, ಅಂಗಡಿ ಮುಂಗಟ್ಟುಗಳು, ಮನೋರಂಜನೆ ಕಾರ್ಯಕ್ರಮ ಸೇರಿದಂತೆ ಇನ್ನಿತರ ಯಾವುದೇ ಸ್ಥಳಗಳಿಗೆ ಭೇಟಿ ನೀಡಲು ಕೋವಿಡ್ ಲಸಿಕೆಯ 2 ಡೋಸ್‌ಗಳನ್ನು ಪಡೆದಿರಲೇಬೇಕು. ಅಲ್ಲದೆ ಸ್ಥಳೀಯ ರೈಲು, ಬಸ್ಸು, ಟ್ಯಾಕ್ಸಿಗಳಿಗೂ ಇದೇ ನಿಯಮ ಅನ್ವಯವಾಗಲಿದೆ.
Omicron Threat : ವಿದೇಶದಿಂದ ಬಂದವರಿಗೆ ನೆಗೆಟಿವ್ ಇದ್ದರೂ ಕ್ವಾರಂಟೈನ್?
ಇನ್ನು ಸಿನಿಮಾ ಥಿಯೇಟರ್‌ಗಳು, ಮಲ್ಟಿಪ್ಲೆಕ್ಸ್ ಮತ್ತು ಸಿನಿಮಾ ಹಾಲ್‌ಗಳಲ್ಲಿ ಶೇ.50ರಷ್ಟುಜನರಿಗೆ ಮಾತ್ರ ಅವಕಾಶ ನೀಡಬೇಕು. 1000ಕ್ಕಿಂತ ಹೆಚ್ಚು ಜನ ಸೇರುವ ಕಾರ್ಯಕ್ರಮಗಳಿಗೆ ಸ್ಥಳೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅನುಮತಿ ಕಡ್ಡಾಯ. ಮುಂಬೈಗೆ ಬರುವವರು ಪೂರ್ತಿ ಲಸಿಕೆ ಪಡೆದಿರಬೇಕು ಅಥವಾ 72 ಗಂಟೆಗಳ ಮುಂಚಿತವಾಗಿ ಪಡೆದ ಆರ್‌ಟಿ-ಪಿಸಿಆರ್ ನೆಗೆಟಿವ್ ಹೊಂದಿರಲೇಬೇಕು.
ಬ್ರಿಟನ್ನಲ್ಲಿ ಕೋವಿಡ್ ಸ್ಫೋಟ: ದಾಖಲೆಯ 78,610 ಕೇಸು
ಬ್ರಿಟನ್‌ನಲ್ಲಿ ಕೊರೋನಾ ಸ್ಫೋಟಗೊಂಡಿದ್ದು ಗುರುವಾರ 78,610 ಹೊಸ ಪ್ರಕರಣಗಳು ದಾಖಲಾಗಿವೆ. ಸಾಂಕ್ರಾಮಿಕದ ಆರಂಭದಿಂದಲೂ ಒಂದೇ ದಿನ ದಾಖಲಾದ ಪ್ರಕರಣಗಳಲ್ಲಿ ಇದು ಗರಿಷ್ಟವಾಗಿದೆ. ಈ ಹಿಂದೆ ಜ.8ರಂದು 68,053 ಮಂದಿಗೆ ಸೋಂಕು ಹಬ್ಬಿದ್ದು, ಈವರೆಗಿನ ಅತಿಹೆಚ್ಚು ದೈನಂದಿನ ಕೇಸ್ ಆಗಿತ್ತು. ಒಮಿಕ್ರೋನ್ ಹಾಗೂ ಡೆಲ್ಟಾರೂಪಾಂತರಿಯ ಹಾವಳಿ ದಿನೇ ದಿನೇ ಹೆಚ್ಚುತ್ತಿದ್ದು, ಕೊರೋನಾ ಪ್ರಕರಣಗಳ ಸಂಖ್ಯೆ ವೇಗವಾಗಿ ದ್ವಿಗುಣವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಈ ಮಹಾಮಾರಿ ಬಗ್ಗೆ ಜನ ಎಚ್ಚೆತ್ತುಕೊಳ್ಳಬೇಕು ಎಂದು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಎಚ್ಚರಿಕೆ ನೀಡಿದ್ದಾರೆ.
ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯಲ್ಲಿ ತೀವ್ರ ಹೆಚ್ಚಳ ಕಂಡುಬಂದಿದೆ. ಇದರಿಂದ ಎಚ್ಚೆತ್ತ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸ್‌ನ್ ಬೂಸ್ಟರ್ ಡೋಸ್ ನೀಡುವ ಅಭಿಯಾನ ಚುರುಕುಗೊಳಿಸಲು ನಿರ್ಧರಿಸಿದ್ದಾರೆ. ಬ್ರಿಟನ್‌ನಲ್ಲಿ ಬುಧವಾರ 656,711 ಬೂಸ್ಟರ್ ಡೋಸ್‌ಗಳನ್ನು ನೀಡಲಾಗಿದೆ. ಒಟ್ಟಾರೆ 6.7 ಕೋಟಿ ಜನಸಂಖ್ಯೆ ಹೊಂದಿದ ಬ್ರಿಟನ್‌ನಲ್ಲಿ ಈವರೆಗೆ 1.1 ಕೋಟಿ ಜನ ಸೋಂಕಿಗೆ ತುತ್ತಾಗಿದ್ದು, 1.46 ಲಕ್ಷ ಜನರನ್ನು ಸೋಂಕು ಬಲಿತೆಗೆದುಕೊಂಡಿದೆ.
Omicron In Karnataka: 2ನೇ ಅಲೆಯಲ್ಲಿ ಸೋಂಕು ತಗಲಿತ್ತು, 2 ಡೋಸ್ ಲಸಿಕೆ ಪಡೆದಿದ್ದೆ. ಆದರೂ ಒಮಿಕ್ರಾನ್ ಬಂತು!
ವಿದೇಶದಿಂದ ಬಂದವರಿಗೆ ನೆಗೆಟಿವ್ ಇದ್ದರೂ ಕ್ವಾರಂಟೈನ್?
ಹೈರಿಸ್ಕ್ ದೇಶಗಳು ಸೇರಿದಂತೆ ವಿದೇಶಗಳಿಂದ ಬಂದವರಿಗೆ ಕೋವಿಡ್ (Covid ) ನೆಗೆಟಿವ್ ವರದಿ ಇದ್ದರೂ ಸಾಂಸ್ಥಿಕ ಕ್ವಾರಂಟೈನ್ (quarantine) ಮಾಡಲು ಚಿಂತನೆ ನಡೆಸಲಾಗಿದೆ ಎಂದು ಬೆಂಗಳೂರು ಮಹಾನಗರ ಪಾಲಿಕೆ (BBMP) ಮುಖ್ಯ ಆಯುಕ್ತ ಗೌರವ್‌ಗುಪ್ತಾ ತಿಳಿಸಿದರು. ಬುಧವಾರ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಮಿಕ್ರೋನ್ (Omicron) ವೈರಾಣು ಸೋಂಕು ಹೆಚ್ಚಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲೂ (Karnataka) ಕಟ್ಟು ನಿಟ್ಟಿನ ಕ್ರಮಕ್ಕೆ ತೀರ್ಮಾನ ಮಾಡಲಾಗಿದೆ. ಹೈ ರಿಸ್ಕ್ ದೇಶಗಳಿಂದ ಬರುವವರ ಮೇಲೆ ನಿಗಾ ವಹಿಸಲಾಗಿದ್ದು, ಈ ಹಿಂದಿನಂತೆ ಸಾಂಸ್ಥಿಕ ಕ್ವಾರಂಟೈನ್ ಪದ್ಧತಿ ಜಾರಿ ಮಾಡುವ ಕುರಿತು ಮಾತುಕತೆ ನಡೆಯುತ್ತಿದೆ ಎಂದು ಹೇಳಿದರು.
ಪಾಲಿಕೆ ವ್ಯಾಪ್ತಿಯ ಸದ್ಯ 300 ಮಂದಿ ಕೋವಿಡ್ (Covid) ಸೋಂಕಿತರು ಆಸ್ಪತ್ರೆಯಲ್ಲಿ (Hospital) ಚಿಕಿತ್ಸೆ ಪಡೆಯುತ್ತಿದ್ದಾರೆ. 3 ಸಾವಿರ ಹಾಸಿಗೆಗಳನ್ನು ಕೋವಿಡ್ ಹಾಗೂ ಒಮಿಕ್ರೋನ್ ಸೋಂಕಿತರ ಚಿಕಿತ್ಸೆಗಾಗಿ ಮೀಸಲಿಟ್ಟಿದ್ದು, ಮುಂಬರುವ ದಿನಗಳಲ್ಲಿ ಹೆಚ್ಚು ಜನರು ದಾಖಲಾದರೆ, ಇನ್ನಷ್ಟುಹಾಸಿಗೆಗಳನ್ನು ಮೀಸಲಿಡುತ್ತೇವೆ ಎಂದರು.