Omicron Threat : ವಿದೇಶದಿಂದ ಬಂದವರಿಗೆ ನೆಗೆಟಿವ್ ಇದ್ದರೂ ಕ್ವಾರಂಟೈನ್?
- ವಿದೇಶದಿಂದ ಬಂದವರಿಗೆ ನೆಗೆಟಿವ್ ಇದ್ದರೂ ಕ್ವಾರಂಟೈನ್?:
- -ಹೈರಿಸ್ಕ್ ದೇಶಗಳು ಸೇರಿದಂತೆ ಎಲ್ಲ ವಿದೇಶದಿಂದ ಬಂದವರಿಗೆ ಅನ್ವಯ
- ನೆನೆಟಿವ್ ವರದಿ ಇದ್ದರೂ ಕ್ವಾರಂಟೈನ್‌ಗೆ ಚಿಂತನೆ
ಬೆಂಗಳೂರು (ಡಿ.16): ಹೈರಿಸ್ಕ್ ದೇಶಗಳು ಸೇರಿದಂತೆ ವಿದೇಶಗಳಿಂದ ಬಂದವರಿಗೆ ಕೋವಿಡ್ (Covid ) ನೆಗೆಟಿವ್ ವರದಿ ಇದ್ದರೂ ಸಾಂಸ್ಥಿಕ ಕ್ವಾರಂಟೈನ್ (quarantine) ಮಾಡಲು ಚಿಂತನೆ ನಡೆಸಲಾಗಿದೆ ಎಂದು ಬೆಂಗಳೂರು ಮಹಾನಗರ ಪಾಲಿಕೆ (BBMP) ಮುಖ್ಯ ಆಯುಕ್ತ ಗೌರವ್‌ಗುಪ್ತಾ ತಿಳಿಸಿದರು. ಬುಧವಾರ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಮಿಕ್ರೋನ್ (Omicron) ವೈರಾಣು ಸೋಂಕು ಹೆಚ್ಚಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲೂ (Karnataka) ಕಟ್ಟು ನಿಟ್ಟಿನ ಕ್ರಮಕ್ಕೆ ತೀರ್ಮಾನ ಮಾಡಲಾಗಿದೆ. ಹೈ ರಿಸ್ಕ್ ದೇಶಗಳಿಂದ ಬರುವವರ ಮೇಲೆ ನಿಗಾ ವಹಿಸಲಾಗಿದ್ದು, ಈ ಹಿಂದಿನಂತೆ ಸಾಂಸ್ಥಿಕ ಕ್ವಾರಂಟೈನ್ ಪದ್ಧತಿ ಜಾರಿ ಮಾಡುವ ಕುರಿತು ಮಾತುಕತೆ ನಡೆಯುತ್ತಿದೆ ಎಂದು ಹೇಳಿದರು.
ಪಾಲಿಕೆ ವ್ಯಾಪ್ತಿಯ ಸದ್ಯ 300 ಮಂದಿ ಕೋವಿಡ್ (Covid) ಸೋಂಕಿತರು ಆಸ್ಪತ್ರೆಯಲ್ಲಿ (Hospital) ಚಿಕಿತ್ಸೆ ಪಡೆಯುತ್ತಿದ್ದಾರೆ. 3 ಸಾವಿರ ಹಾಸಿಗೆಗಳನ್ನು ಕೋವಿಡ್ ಹಾಗೂ ಒಮಿಕ್ರೋನ್ ಸೋಂಕಿತರ ಚಿಕಿತ್ಸೆಗಾಗಿ ಮೀಸಲಿಟ್ಟಿದ್ದು, ಮುಂಬರುವ ದಿನಗಳಲ್ಲಿ ಹೆಚ್ಚು ಜನರು ದಾಖಲಾದರೆ, ಇನ್ನಷ್ಟುಹಾಸಿಗೆಗಳನ್ನು ಮೀಸಲಿಡುತ್ತೇವೆ ಎಂದರು.
ಒಮಿಕ್ರೋನ್ ಬಹಳ ವೇಗವಾಗಿ ಹರಡುತ್ತಿದೆ ಎಂಬ ವಿಚಾರ ತಿಳಿದ್ದು ಮುಂದಿನ ದಿನಗಳಲ್ಲಿ ಬಹುತೇಕ ಪ್ರಕರಣ ಡೆಲ್ಟಾಬದಲು ಒಮಿಕ್ರಾನ್ ಬರಬಹುದು ಎಂದು ಯುಕೆ ಅಂದಾಜಿಸಿದೆ. ಈ ಹಿನ್ನೆಲೆ ಒಮಿಕ್ರೋನ್ ಸೋಂಕಿತರ ಪತ್ತೆಯಾದರೆ ಅವರ ಚಿಕಿತ್ಸೆಗೆ ಪಾಲಿಕೆ ವ್ಯಾಪ್ತಿಯಲ್ಲಿ ಇರುವ ಸಿದ್ಧತೆ ಮುಂದುವರೆಸುತ್ತೇವೆ. ಹೊರ ದೇಶದಿಂದ ಬರುವ ಎಲ್ಲರನ್ನು, ಅದರಲ್ಲಿಯೂ ಹೈರಿಸ್ಕ್ ಇರುವ ದೇಶಗಳಿಂದ ಬರುವ ಪ್ರಯಾಣಿಕರನ್ನು ಪರೀಕ್ಷೆಗೊಳಪಡಿಸುತ್ತೇವೆ. ನಗರದಲ್ಲಿ ಸದ್ಯ ಕೋವಿಡ್ (Covid) ಪ್ರಕರಣದಲ್ಲಿ ಏರಿಕೆಯಾಗಿಲ್ಲ. ಆದರೆ, ಮುಂದಿನ ದಿನಗಳಲ್ಲಿ ಏರಿಕೆಯಾಗುವ ಸಾಧ್ಯತೆಯಿದ್ದು, ಮುಂಜಾಗ್ರತೆ ಕೈಗೊಂಡಿದ್ದೇವೆ ಎಂದು ತಿಳಿಸಿದರು.
ಸೋಂಕಿನ ಲಕ್ಷಣ ಕಂಡು ಬರುವ ಪ್ರತಿಯೊಬ್ಬರು ತಪ್ಪದೇ ಕೋವಿಡ್ ಪರೀಕ್ಷೆ (Covid Test) ಮಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಬಿಬಿಎಂಪಿ ಕೋವಿಡ್ ಪರೀಕ್ಷೆ ಸಂಖ್ಯೆ ಹೆಚ್ಚಿಸಿದೆ. ಜೊತೆಗೆ ಲಸಿಕೆ ನೀಡುವುದನ್ನು ಕೂಡ ಜಾಸ್ತಿ ಮಾಡಲಾಗಿದೆ. ಸಾರ್ವಜನಿಕರು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕನ್ನಡಪ್ರಭ ಎಚ್ಚರಿಸಿತ್ತು! ವಿದೇಶದಿಂದ ಬಂದು ಹೋಂ ಕ್ವಾರಂಟೈನ್ ಇದ್ದವರಲ್ಲಿ ಕೊರೋನಾ ಹೆಚ್ಚಳವಾಗುತ್ತಿದೆ. ಸಾಂಸ್ಥಿಕ ಕ್ವಾರಂಟೈನ್ ವಿನಾಯ್ತಿಯಿಂದ ಸೋಂಕು ಹೆಚ್ಚಳವಾಗುತ್ತಿದೆ ಎಂಬ ಕುರಿತು ‘ಮುಳುವಾಯ್ತಾ ಸಾಂಸ್ಥಿಕ ಕ್ವಾರಂಟೈನ್ ವಿನಾಯ್ತಿ?’ ಎಂಬ ಶೀರ್ಷಿಕೆಯಡಿ ಡಿ.13ರಂದು ಕನ್ನಡಪ್ರಭದಲ್ಲಿ ವರದಿ ಪ್ರಕಟವಾಗಿತ್ತು. ಈ ಬೆನ್ನಲ್ಲೆ ಪಾಲಿಕೆ ಕ್ರಮಕ್ಕೆ ಮುಂದಾಗಿದೆ.
ಸೋಂಕಿತ ಗುಣಮುಖ : ದಕ್ಷಿಣ ಆಫಿಕ್ರಾದಿಂದ ಬಂದು ಒಮಿಕ್ರೋನ್ (Omicron) ಧೃಡಪಟಿದ್ದ 34 ವರ್ಷದ ಸೋಂಕಿತ ಸಂಪೂರ್ಣ ಗುಣಮುಖನಾಗಿದ್ದು, ಮಂಗಳವಾರ ಸಂಜೆ ಆಸ್ಪತ್ರೆಯಿಂದ (Hospital) ಬಿಡುಗಡೆ ಮಾಡಲಾಗಿದೆ. ಈ ಮೂಲಕ ಒಮಿಕ್ರೋನ್ ರೂಪಾಂತರಿ ತಗುಲಿ ಗುಣಮುಖರಾದ ರಾಜ್ಯದ ಮೊದಲ ವ್ಯಕ್ತಿ ಇವರಾಗಿದ್ದಾರೆ. ರಾಜ್ಯದಲ್ಲಿ ಈವರೆಗೂ ದಕ್ಷಿಣ ಆಫ್ರಿಕಾದಿಂದ (South Africa) ಬಂದ ಇಬ್ಬರು ಮತ್ತು ಅಂತರಾಷ್ಟ್ರೀಯ ಸಭೆಯಲ್ಲಿ ಭಾಗವಹಿಸಿದ್ದ ವೈದ್ಯರೊಬ್ಬರಲ್ಲಿ ಒಮಿಕ್ರೋನ್ ದೃಢಪಟ್ಟಿದೆ. ಈ ಪೈಕಿ ಇಬ್ಬರು ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇನ್ನೊಬ್ಬ (ಎರಡನೇ ಸೋಂಕಿತ 66 ವರ್ಷದ ವೃದ್ಧ) ನಕಲಿ ಸೋಂಕು ವರದಿ ಸಲ್ಲಿಸಿ ವಿದೇಶಕ್ಕೆ ತೆರಳಿದ್ದು, ಈ ಕುರಿತು ಪೊಲೀಸರು (Police) ತನಿಖೆ ನಡೆಸಿದ್ದಾರೆ.
ಮೊದಲ ಸೋಂಕಿತ ಇನ್ನೂ ಆಸ್ಪತ್ರೆಯಲ್ಲಿ:
ಅಂತಾರಾಷ್ಟ್ರೀಯ ಸಭೆಯೊಂದರಲ್ಲಿ ಭಾಗವಹಿಸಿ ಡಿ.1 ರಂದು ಒಮಿಕ್ರೋನ್ ದೃಢಪಟ್ಟಿದ್ದ 46 ವರ್ಷದ ಬೆಂಗಳೂರು (Bengaluru) ಮೂಲದ ವೈದ್ಯನಿಗೆ (Doctor) ಚಿಕಿತ್ಸೆ ಮುಂದವರೆಸಲಾಗಿದೆ. ಸೋಮವಾರ ನಡೆಸಿದ ಪರೀಕ್ಷೆಯಲ್ಲಿ ರೋಗ ಪ್ರತಿಕಾಯಗಳ ಉತ್ಪತ್ತಿ ಪ್ರಮಾಣ ಸಾಮಾನ್ಯಕ್ಕಿಂತಲೂ ಕಡಿಮೆ ಇರುವ ಕಾರಣ ಇನ್ನು ಒಂದು ದಿನ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಅವಶ್ಯಕವಿದೆ. ಸದ್ಯ ಸೊಂಕಿನ ಲಕ್ಷಣಗಳಿಲ್ಲ, ಬುಧವಾರ ಮತ್ತೊಂದು ಪರೀಕ್ಷೆ ನಡೆಸಿ ಫಲಿತಾಂಶ ಆಧರಿಸಿ ಬಿಡುಗಡೆ ಮಾಡಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ.
ಸದ್ಯ ಗುಣಮುಖರಾಗಿರುವ ವ್ಯಕ್ತಿ ಡಿ.1ರಂದು ದಕ್ಷಿಣ ಆಫ್ರಿಕಾದಿಂದ ಬೆಂಗಳೂರಿಗೆ ಬಂದಿದ್ದರು. ವಿಮಾನ ನಿಲ್ದಾಣದಲ್ಲಿ ಸೋಂಕು ಪರೀಕ್ಷೆ ನಡೆಸಿ ವರದಿ ನೆಗೆಟಿವ್ ಬಂದ ಹಿನ್ನೆಲೆ ಮನೆಯಲ್ಲಿ ಕ್ವಾರಂಟೈನ್ ಇದ್ದರು. ಆದರೆ, ಎರಡು ದಿನಗಳ ಬಳಿಕ (ಡಿ.3) ಸೋಂಕಿನ ಲಕ್ಷಣಗಳು ಕಾಣಿಸಿಕೊಂಡ ಕಾರಣಕ್ಕೆ ಆರ್‌ಟಿಪಿಸಿಆರ್ (RTPCR) ಪರೀಕ್ಷೆ ನಡೆಸಿದಾಗ ಕೊರೋನಾ (Corona) ದೃಢಪಟ್ಟಿತ್ತು. ಕೂಡಲೇ ಬೌರಿಂಗ್ ಆಸ್ಪತ್ರೆಗೆ ದಾಖಲಿಸಿ, ವಂಶವಾಹಿ ಪರೀಕ್ಷೆ ನಡೆಸಲಾಗಿತ್ತು. ಕಳೆದ ಭಾನುವಾರ (ಡಿ.12) ವರದಿ ಬಂದಿದ್ದು, ಒಮಿಕ್ರೋನ್ ದೃಢ ಪಟ್ಟಿತ್ತು.
‘ಸರ್ಕಾರದ ಮಾರ್ಗ ಸೂಚಿಯಂತೆ ಆಸ್ಪತ್ರೆ(Hospital) ದಾಖಲಾಗಿ 10 ದಿನಗಳು ಪೂರ್ಣಗೊಂಡಿದ್ದು, ಎರಡು ಬಾರಿ ಆರ್‌ಟಿಪಿಸಿಆರ್ (RTPCR) ಪರೀಕ್ಷಾ ವರದಿ ನೆಗೆಟಿವ್ ಬಂದಿದೆ. ಸೋಂಕಿತ ಸಂಪೂರ್ಣ ಆರೋಗ್ಯವಾಗಿದ್ದಾರೆ. ಈ ಹಿನ್ನೆಲೆ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಈ ಸೋಂಕಿತರ ಸಂಪರ್ಕದಲ್ಲಿದ್ದ ಎಲ್ಲಾ 20 ಮಂದಿಯ ಕೊರೊನಾ (Corona) ವರದಿ ನೆಗೆಟಿವ್ ಬಂದಿತ್ತು. ಆಸ್ಪತ್ರೆಯಿಂದ ಬಿಡುಗಡೆಯಾದ ನಂತರ ಮುಂದಿನ ಒಂದು ವಾರ ಹೋಂ ಕ್ವಾರಂಟೈನ್ ಸೂಚಿಸಲಾಗಿದೆ. ವಾರದ ಬಳಿಕ ಮತ್ತೆ ಸೋಂಕು ಪರೀಕ್ಷೆ ಸೇರಿದಂತೆ ಕೊರೋನಾ ನಂತರದ ಆರೋಗ್ಯ ತಪಾಸಣೆ ನಡೆಸಲಾಗುತ್ತದೆ’ ಎಂದು ಬೌರಿಂಗ್ ಆಸ್ಪತ್ರೆ ವೈದ್ಯರು ಮಾಹಿತಿ ನೀಡಿದರು.