Asianet Suvarna News Asianet Suvarna News

Covid Vaccination : 8 ಕೋಟಿ ದಾಟಿದ ಕೊರೋನಾ ಲಸಿಕೆ ವಿತರಣೆ

  • ರಾಜ್ಯದಲ್ಲಿ ಕೊರೋನಾ ಲಸಿಕೆ ವಿತರಣೆಯು ಶನಿವಾರ ಎಂಟು ಕೋಟಿ ಡೋಸ್‌ ಗಡಿದಾಟಿದೆ
  • ಪ್ರಮುಖ ರಾಜ್ಯಗಳ ಪೈಕಿ ಮೊದಲ ಡೋಸ್‌ ಗುರಿಸಾಧನೆಯಲ್ಲಿ ಮೊದಲ ಸ್ಥಾನ, ಎರಡನೇ ಡೋಸ್‌ ವಿತರಣೆಯಲ್ಲಿ ಮೂರನೇ ಸ್ಥಾನದಲ್ಲಿದೆ
Covid vaccination Numbers Crossed 8 Crore in Karnataka snr
Author
Bengaluru, First Published Dec 12, 2021, 7:12 AM IST

 ಬೆಂಗಳೂರು(ಡಿ.12): ರಾಜ್ಯದಲ್ಲಿ ಕೊರೋನಾ (Corona) ಲಸಿಕೆ (Vaccination) ವಿತರಣೆಯು ಶನಿವಾರ ಎಂಟು ಕೋಟಿ ಡೋಸ್‌ ಗಡಿದಾಟಿದೆ. ಪ್ರಮುಖ ರಾಜ್ಯಗಳ ಪೈಕಿ ಮೊದಲ ಡೋಸ್‌ ಗುರಿಸಾಧನೆಯಲ್ಲಿ ಮೊದಲ ಸ್ಥಾನ, ಎರಡನೇ ಡೋಸ್‌ ವಿತರಣೆಯಲ್ಲಿ ಮೂರನೇ ಸ್ಥಾನದಲ್ಲಿದೆ. ಈ ಕುರಿತು ಶನಿವಾರ ಟ್ವೀಟ್‌ ಮಾಡಿರುವ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ (Sudhakar), ಕೊರೋನಾ (Corona) ಲಸಿಕೆ ಅಭಿಯಾನದಲ್ಲಿ ರಾಜ್ಯ ಪ್ರಮುಖ ಮೈಲಿಗಲ್ಲು ಮುಟ್ಟಿದೆ. ದೇಶದ ಪ್ರಮುಖ ರಾಜ್ಯಗಳ ಪೈಕಿ ಮೊದಲ ಡೋಸ್‌ ಲಸಿಕೆ ವಿತರಣೆಯಲ್ಲಿ ಕರ್ನಾಟಕ (Karnataka) ಮೊದಲ ಮತ್ತು ಎರಡನೇ ಡೋಸ್‌ ವಿತರಣೆಯಲ್ಲಿ ಮೂರನೇ ಸ್ಥಾನದಲ್ಲಿದೆ ಎಂದಿದ್ದಾರೆ.

ಕೋವಿನ್‌ ಪೋರ್ಟಲ್‌ ಮಾಹಿತಿಯಂತೆ ರಾಜ್ಯದಲ್ಲಿ 18 ವರ್ಷ ಮೇಲ್ಪಟ್ಟ ಕೊರೋನಾ (Corona) ಲಸಿಕೆ ವ್ಯಾಪ್ತಿಗೆ ಬರುವವರ ಸಂಖ್ಯೆ 4.89 ಕೋಟಿ ಇದೆ. ಡಿ.12ರವರೆಗೆ 4.65 ಕೋಟಿ ಮಂದಿ ಮೊದಲ ಡೋಸ್‌ ಲಸಿಕೆ ಪಡೆದಿದ್ದಾರೆ. ಈ ಮೂಲಕ ಶೇ.95ರಷ್ಟು ಮೊದಲ ಡೋಸ್‌ ಗುರಿ ಸಾಧನೆಯಾಗಿದೆ. 3.38 ಕೋಟಿ ಮಂದಿ ಎರಡೂ ಡೋಸ್‌ ಪೂರ್ಣಗೊಳಿಸುವ ಮೂಲಕ ಶೇ.69ರಷ್ಟುಗುರಿ ಸಾಧನೆಯಾಗಿದೆ. ಮೊದಲ ಮತ್ತು ಎರಡನೇ ಡೋಸ್‌ ಸೇರಿ ಒಟ್ಟಾರೆ 8.03 ಕೋಟಿ ಡೋಸ್‌ನಷ್ಟು ಲಸಿಕೆಯನ್ನು ರಾಜ್ಯದಲ್ಲಿ ನೀಡಲಾಗಿದೆ.

ನಿತ್ಯ ಸರಾಸರಿ 6 ಲಕ್ಷ ಡೋಸ್‌: ಒಮಿಕ್ರೋನ್‌ ಆತಂಕ ಬಳಿಕ ಲಸಿಕೆ (Vaccination) ಅಭಿಯಾನ ವೇಗ ಪಡೆದುಕೊಂಡಿದ್ದು, ಕಳೆದ 10 ದಿನಗಳಲ್ಲಿ (ಡಿ.1-10) ನಿತ್ಯ ಸರಾಸರಿ ಆರು ಲಕ್ಷಕ್ಕೂ ಅಧಿಕ ಮಂದಿಲಸಿಕೆ ಪಡೆದಿದ್ದಾರೆ. ಇನ್ನು ಈ ಅವಧಿಯಲ್ಲಿ ಲಸಿಕೆ ಪಡೆದವರ ಪೈಕಿ ಶೇ.90 ರಷ್ಟು ಎರಡನೇ ಡೋಸ್‌ ಫಲಾನುಭವಿಗಳಾಗಿದ್ದಾರೆ.
 
30 ಲಕ್ಷ ಒಟ್ಟು ಸೋಂಕಿತರು 38257 ಕೋವಿಡ್‌ಗೆ ಸಾವು:   ರಾಜ್ಯದಲ್ಲಿ ಶನಿವಾರ ಹೊಸದಾಗಿ 320 ಮಂದಿ ಕರೋನಾ ಸೋಂಕಿಗೆ ಒಳಗಾಗುವುದರೊಂದಿಗೆ ಈ ಮಹಾಮಾರಿಯ ಹಾವಳಿ ಆರಂಭವಾದಾಗಿನಿಂದ ಇದುವರೆಗೂ ಕರ್ನಾಟಕದಲ್ಲಿ ಸೋಂಕು ದೃಢಪಟ್ಟವರ ಸಂಖ್ಯೆ 30 ಲಕ್ಷ ದಾಟಿದೆ. ಶನಿವಾರ ಸೋಂಕಿಗೆ ಒಳಗಾದವರೂ ಸೇರಿ ರಾಜ್ಯದಲ್ಲಿ ಒಟ್ಟು ಸಂಖ್ಯೆ 30,00,105 ಆಗಿದೆ. ಈ ಪೈಕಿ ಈ ಪೈಕಿ ಶೇ.98 ಮಂದಿ ಅಂದರೆ 29.54 ಲಕ್ಷ ಮಂದಿ ಚೇತರಿಸಿಕೊಂಡಿದ್ದಾರೆ.

ರಾಜ್ಯದಲ್ಲಿ ಶನಿವಾರ ಇಬ್ಬರು ಮೃತಪಟ್ಟಿದ್ದಾರೆ. ಮೃತಪಟ್ಟಇಬ್ಬರೂ ಬೆಂಗಳೂರು ನಗರಕ್ಕೆ (Bengaluru City) ಸೇರಿದವರು. ರಾಜ್ಯದಲ್ಲಿ ಈವರೆಗೆ ಒಟ್ಟು 38,257 ಮಂದಿ ಕೋವಿಡ್‌ ನಿಂದ ಪ್ರಾಣ ಕಳೆದುಕೊಂಡಿದ್ದಾರೆ. ಬೆಂಗಳೂರು ನಗರದಲ್ಲಿ 190, ಕೊಡಗು 21, ಹಾಸನ 17, ಮೈಸೂರು 14 ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ 10 ಪ್ರಕರಣ ದಾಖಲಾಗಿದೆ. ಬಾಗಲಕೋಟೆ, ಬೀದರ್‌, ಚಿಕ್ಕಬಳ್ಳಾಪುರ (Chikkaballapura), ಚಿತ್ರದುರ್ಗ, ಗದಗ, ಹಾವೇರಿ, ಕೋಲಾರ, ಕೊಪ್ಪಳ, ರಾಯಚೂರು ಮತ್ತು ಯಾದಗಿರಿಯಲ್ಲಿ ಹೊಸ ಪ್ರಕರಣ ದಾಖಲಾಗಿಲ್ಲ. ಉಳಿದ ಜಿಲ್ಲೆಯಲ್ಲಿ ಒಂದಂಕಿಯಲ್ಲಿ ಪ್ರಕರಣ ದಾಖಲಾಗಿದೆ. ಶನಿವಾರ 317 ಮಂದಿ ಕೋವಿಡ್‌ನಿಂದ ಗುಣಹೊಂದಿದ್ದು, ಸಕ್ರಿಯ ಪ್ರಕರಣಗಳ ಒಟ್ಟು ಸಂಖ್ಯೆ 7,306ಕ್ಕೆ ಏರಿದೆ.

ಮೊದಲ ಕೇಸು: 2020ರ ಮಾ.8ರಂದು ಅಮೆರಿಕದಿಂದ ಬೆಂಗಳೂರಿಗೆ (Bengaluru) ಬಂದಿದ್ದ ವ್ಯಕ್ತಿಯಲ್ಲಿ ರಾಜ್ಯದಲ್ಲೇ ಮೊದಲ ಬಾರಿಗೆ ಕೋವಿಡ್‌ ಪತ್ತೆಯಾಗಿತ್ತು. ಮೇ ತಿಂಗಳ 19ರ ಬಳಿಕ ದೈನಂದಿನ ಪ್ರಕರಣ ನೂರು ದಾಟಿತ್ತು. ಜುಲೈ ಹೊತ್ತಿಗೆ ದೈನಂದಿನ ಪ್ರಕರಣ ಸಾವಿರ ಮೀರಿ ಬೆಳೆದು ದಿನಕ್ಕೆ ಹತ್ತು ಸಾವಿರಕ್ಕೂ ಹೆಚ್ಚು ಪ್ರಕರಣ ವರದಿಯಾದವು. ಡಿಸೆಂಬರ್‌ ಅಂತ್ಯಕ್ಕೆ 9.19 ಲಕ್ಷ ಪ್ರಕರಣಗಳು ದಾಖಲಾಗಿ 12,090 ಮಂದಿ ಮರಣವನ್ನಪ್ಪಿದ್ದರು.

2ನೇ ಅಲೆ ಭೀಕರತೆ: ಆದರೆ 2021ರ ಮಾರ್ಚ್ ಬಳಿಕ ಸೃಷ್ಟಿಯಾದ ಎರಡನೇ ಅಲೆ ರಾಜ್ಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿತ್ತು. ಏಪ್ರಿಲ್‌, ಮೇ ತಿಂಗಳಲ್ಲಿ ದಿನಕ್ಕೆ 40-50 ಸಾವಿರ ಪ್ರಕರಣ ವರದಿಯಾಗುವುದರ ಜೊತೆಗೆ ಪ್ರತಿದಿನ 400-500 ಮಂದಿ ಮರಣವನ್ನಪ್ಪುತ್ತಿದ್ದರು. ಜುಲೈ ಬಳಿಕ ದೈನಂದಿನ ಸೋಂಕಿನ ಪ್ರಮಾಣದಲ್ಲಿ ಇಳಿಕೆ ದಾಖಲಾಗಿದೆ. ಸದ್ಯ ಪ್ರತಿದಿನ 300ರ ಅಸುಪಾಸಿನಲ್ಲಿ ಪ್ರಕರಣ ವರದಿಯಾಗುತ್ತಿದೆ.3ನೇ ರಾಜ್ಯ:  ಕರ್ನಾಟಕ ಹೊರತು ಪಡಿಸಿದರೆ ಮಹಾರಾಷ್ಟ್ರ ಮತ್ತು ಕೇರಳ ರಾಜ್ಯದಲ್ಲಿ ಮಾತ್ರ ಒಟ್ಟು ಸೋಂಕಿತರ ಸಂಖ್ಯೆ 30 ಲಕ್ಷ ದಾಟಿದೆ.

Follow Us:
Download App:
  • android
  • ios