Asianet Suvarna News Asianet Suvarna News

ಕೊರೋನೋತ್ತರ ಜಗತ್ತಲ್ಲಿ ಏನು ಬದಲಾಗಬೇಕು?

ಭೀಕರ ಸಾಂಕ್ರಾಮಿಕ ರೋಗ ಹರಡಿರುವ ಸಂದರ್ಭದಲ್ಲಿ ಒಂದು ರಾಷ್ಟ್ರದ ವಿಶ್ವಾಸವನ್ನು ಹೆಚ್ಚಿಸುವ ಏಕೈಕ ಮಾರ್ಗವೆಂದರೆ ಆ ದೇಶದ ಆರೋಗ್ಯ ವ್ಯವಸ್ಥೆ ಮತ್ತು ಅದರ ಸಾಮರ್ಥ್ಯದ ಬಗ್ಗೆ ಆ ದೇಶಕ್ಕಿರುವ ವಿಶ್ವಾಸ. ಹೀಗಾಗಿ ನಮ್ಮ ದೇಶದ ಆರೋಗ್ಯ ಮೂಲಸೌಕರ್ಯ ವೃದ್ಧಿಸಬೇಕು.

MP Rajeev chandrasekhar taken on improvising india health and prosperity from Covid 19
Author
Bengaluru, First Published May 25, 2020, 9:37 AM IST

ಕೊರೋನಾ ವೈರಸ್‌ ಅಥವಾ ಕೋವಿಡ್‌-19 ಹಿಂದೆಂದೂ ಕಂಡಿರದ ಸಾಂಕ್ರಾಮಿಕ ರೋಗ. 1918ರ ಸ್ಪಾನಿಷ್‌ ಫä್ಲ ಬಳಿಕ ಜಗತ್ತು ಇಂಥದ್ದೊಂದು ಭಯಾನಕ ರೋಗವನ್ನು ಕಂಡಿರಲಿಲ್ಲ. ಚೀನಾದಲ್ಲಿ ಹುಟ್ಟಿ(ಮಾಂಸ ಮಾರಾಟ ಕೇಂದ್ರದಲ್ಲಿಯೋ ಅಥವಾ ಚೀನಾದ ಪ್ರಯೋಗಾಲಯದಲ್ಲಿಯೋ ಇನ್ನೂ ತಿಳಿದಿಲ್ಲ) ವಿಶ್ವದಾದ್ಯಂತ ವ್ಯಾಪಿಸಿ, ಯಾವುದೇ ಮುಂದುವರೆದ, ಆಧುನಿಕ ರಾಷ್ಟ್ರಗಳನ್ನೂ ಬಿಡದೆ ಅಪಾರ ಸಾವು-ನೋವು, ಆರ್ಥಿಕ ವಿನಾಶವನ್ನು ಈ ವೈರಸ್‌ ಉಂಟುಮಾಡಿದೆ.

ಜಗತ್ತು ಕುರುಡಾಗಿ ನಡೆಯುತ್ತಿದೆ

ಸದ್ಯ ಕೊರೋನಾ ವೈರಸ್‌ ತಡೆಯುವ ಲಸಿಕೆ ಇಲ್ಲ. ಹೀಗಾಗಿ ಇನ್ನಷ್ಟುಕಾಲ ಇದು ನಮ್ಮೊಂದಿಗೇ ಇರಲಿದೆ ಎಂದು ಖಂಡಿತ ಊಹಿಸಬಹುದು. ಕೊರೋನಾದ ಪರಿಣಾಮವನ್ನು ಈಗಾಗಲೇ ನಾವೆಲ್ಲ ನೋಡುತ್ತಿದ್ದೇವೆ. ವ್ಯಾಪಾರ, ಉದ್ಯೋಗ ನಷ್ಟ, ಅಪಾರ ಜೀವಹಾನಿ ಇದರಿಂದ ಉಂಟಾಗಿದೆ.

ಆರಂಭಿಕ ಹಂತದ ಪರಿಣಾಮದಿಂದ ಭೀತಿಗೊಂಡು, ಆದಾಯವೂ ಇಲ್ಲದ ದುರ್ಬಲ ವಲಸಿಗ ವರ್ಗ ಬೇರೆ ದಾರಿ ಕಾಣದೆ ತವರಿನತ್ತ ಮುಖಮಾಡಿತು. ಲಕ್ಷಾಂತರ ವಲಸೆ ಕಾರ್ಮಿಕರು ಒಟ್ಟಿಗೆ ತವರು ಕಡೆ ಮುಖ ಮಾಡಿದ್ದರಿಂದ ಹಠಾತ್‌ ಉಂಟಾದ ಜನಪ್ರವಾಹಕ್ಕೆ ಅಗತ್ಯ ಸೌಲಭ್ಯ ಒದಗಿಸುವುದೇ ಆ ರಾಜ್ಯಗಳಿಗೆ ಕಷ್ಟವಾಯಿತು.

ಆರ್ಥಿಕ ಪುನಶ್ಚೇತನಕ್ಕೆ ಆರ್‌ಸಿ 16 ಸಲಹೆ!

ಭವಿಷ್ಯ ನುಡಿಯುವವರು, ತಜ್ಞರು ಮತ್ತು ಅರ್ಥಶಾಸ್ತ್ರಜ್ಞರು ಹೇಳುತ್ತಿರುವುದರ ಹೊರತಾಗಿಯೂ, ಈ ಸಾಂಕ್ರಾಮಿಕ ರೋಗದ ವಿಷಯದಲ್ಲಿ ಇಡೀ ಜಗತ್ತು ಕುರುಡಾಗಿ ಹಾರುತ್ತಿದೆ ಎಂದು ಯಾರು ಬೇಕಾದರೂ ಹೇಳಬಹುದು. ಕೊರೋನಾ ವಿರುದ್ಧ ಲಸಿಕೆ ಲಭ್ಯವಾಗುವರೆಗೆ ಜಗತ್ತಿನ ಎಲ್ಲ ಸರ್ಕಾರ ಮತ್ತು ನಾಗರಿಕರು ಅವರ ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಜೊತೆಗೆ ಜೀವನೋಪಾಯವನ್ನೂ ಗಳಿಸುತ್ತಾ ಸಮತೋಲನ ಸಾಧಿಸಿ ಜೀವನ ನಡೆಸಬೇಕಾಗುತ್ತದೆ. ಆಧುನಿಕ ಯುಗದಲ್ಲಿ ಯಾವ ಸರ್ಕಾರಗಳಿಗೂ ಹಿಂದೆ ಇಂತಹ ಆಯ್ಕೆಗಳು ಎದುರಾಗಿರಲಿಲ್ಲ.

ಮುಂದೆ ಆಗಬೇಕಿರುವ ಬದಲಾವಣೆ

ಇನ್ನುಮುಂದೆ ಖಂಡಿತ ನಮ್ಮ ಜೀವನ ಹಿಂದಿನಂತೆ ಇರುವುದಿಲ್ಲ. ಆಡಳಿತ ಮತ್ತು ಆದ್ಯತೆಗಳಲ್ಲಿ ನಿಜವಾದ ಬದಲಾವಣೆಗಳಾಗಲಿವೆ. ಅದನ್ನು ಈಗಾಗಲೇ ನಮ್ಮೆಲ್ಲರ ಗಮನಕ್ಕೆ ತರಲಾಗಿದೆ. ದೀರ್ಘ ಕಾಲದಿಂದ ಕಡೆಗಣಿಸ್ಪಟ್ಟವಿಷಯಗಳು ಈಗ ಈ ಆಘಾತದ ಬಳಿಕ ನಮ್ಮ ಪ್ರಮುಖ ಆದ್ಯತೆಯಾಗಿ ಪರಿವರ್ತನೆಯಾಗಲಿವೆ.

1. ಬಡ ಮತ್ತು ಅನೌಪಚಾರಿಕ ವಲಯಕ್ಕೆ ದೇಶಾದ್ಯಂತ ಸಾಮಾಜಿಕ ಭದ್ರತೆ ಕಲ್ಪಿಸುವ ವ್ಯವಸ್ಥೆಯೊಂದು ನಮಗೆ ಬೇಕು. ಕೊರೋನಾ ವೈರಸ್‌ ಉಂಟುಮಾಡಿದ ಅಭದ್ರತೆಯ ಭೀತಿಯಿಂದ ಲಕ್ಷಾಂತರ ವಲಸೆ ಕಾರ್ಮಿಕರು ತಮ್ಮ ತವರು ರಾಜ್ಯಗಳಿಗೆ ಮರಳಲು ಹೆಣಗುತ್ತಿರುವಾಗ, ಅನೌಪಚಾರಿಕ ವಲಯದ ರಚನಾತ್ಮಕ ದುರ್ಬಲತೆ ಮತ್ತು ಸ್ವಾತಂತ್ರ್ಯ ಬಂದು 70 ವರ್ಷಗಳಾದರೂ, ಗರೀಬಿ ಹಟಾವೋ ಎಂಬ ಘೋಷಣೆಗಳ ಹೊರತಾಗಿಯೂ ಅವರ ಜೀವನಕ್ಕೆ ಅಗತ್ಯವಾದ ಮೂಲಭೂತ ಸಾಮಾಜಿಕ ಭದ್ರತೆಯೂ ಇಲ್ಲದಿರುವ ಪರಿಸ್ಥಿತಿಯನ್ನು ನಾವು ಕಣ್ಣಾರೆ ಕಾಣುತ್ತಿದ್ದೇವೆ. ಇದು ಮೊದಲು ಬದಲಾಗಬೇಕು. ಅನೌಪಚಾರಿಕ ವಲಯ ಮತ್ತು ಬಡ ವರ್ಗ ಮೊದಲು ಔಪಚಾರಿಕವಾಗಬೇಕು ಮತ್ತು ಅವರನ್ನು ಸಮಗ್ರ ಸಾಮಾಜಿಕ ಭದ್ರತೆಯ ಕಾಯ್ದೆಯ ವ್ಯಾಪ್ತಿಯಡಿ ತರಬೇಕು.

ಲಾಕ್‌ಡೌನ್‌ನಲ್ಲಿ ಕಂಗೊಳಿಸುತ್ತಿರುವ ಬೆಂಗ್ಳೂರು! ನಗರದ ಈ ಸೊಬಗನ್ನು ಕಾಪಾಡೋಣ

2. ದೀರ್ಘ ಕಾಲದಿಂದ ನಿರ್ಲಕ್ಷಿಸಲ್ಪಟ್ಟಮತ್ತು ಈ ಹಿಂದಿನ ಎಲ್ಲಾ ಸರ್ಕಾರಗಳು ಕಡಿಮೆ ಆದ್ಯತೆ ನೀಡಿರುವ ವಿಷಯ ಎಂದರೆ ಅದು ವೈಯಕ್ತಿಕ ಸುರಕ್ಷೆ ಮತ್ತು ಆರೋಗ್ಯ ಭದ್ರತೆ. ಭಾರತ ಮತ್ತು ಭಾರತೀಯರು ಉತ್ತಮ, ಗುಣಮಟ್ಟದ ಸಾರ್ವತ್ರಿಕ ಆರೋಗ್ಯ ಸೇವೆಗೆ ಅರ್ಹರು. ಈ ನಿಟ್ಟಿನಲ್ಲಿ ಪ್ರಧಾನಮಂತ್ರಿ ಆಯುಷ್ಮಾನ್‌ ಭಾರತ ಯೋಜನೆಯು ಉತ್ತಮ ಆರಂಭವಾಗಿದೆ. ಎಲ್ಲಾ ರಾಜ್ಯಗಳಲ್ಲಿ ಮೆಟ್ರೋ ಸಿಟಿಗಳಿಂದ ದೂರ ಇರುವ ಜಿಲ್ಲೆಗಳಲ್ಲಿ ಹೆಚ್ಚಿನ ಆರೋಗ್ಯ ಸೇವೆ ನೀಡುವ ಸಾಮರ್ಥ್ಯವನ್ನು ಸೃಷ್ಟಿಸುವತ್ತ ಗಮನಹರಿಸುವ ಮೂಲಕ ಈ ಯೋಜನೆಯನ್ನು ವೇಗವಾಗಿ ವಿಸ್ತರಿಸಬೇಕಾಗಿದೆ.

ಭಾರತದಲ್ಲಿ 1000 ರೋಗಿಗಳಿಗೆ ಕೇವಲ 0.7 ಹಾಸಿಗೆಗಳು ಮತ್ತು 0.8 ವೈದ್ಯರು ಇದ್ದಾರೆ. ನಾವು ಜಿಡಿಪಿಯ ಕೇವಲ ಶೇ.3ರಷ್ಟುಭಾಗವನ್ನು ಆರೋಗ್ಯ ಮತ್ತು ಕ್ಷೇಮಕ್ಕಾಗಿ ವ್ಯಯಿಸುತ್ತಿದ್ದೇವೆ. ಸಾಂಕ್ರಾಮಿಕ ರೋಗವು ಜಗತ್ತಿನೆಲ್ಲೆಡೆ ಹೆಚ್ಚಿನ ಅಪಾಯ ತಂದೊಡ್ಡುತ್ತಿರುವ ಈ ಹೊತ್ತಿನಲ್ಲಿ ನಮ್ಮ ಆರೋಗ್ಯ ವ್ಯವಸ್ಥೆಯ ಸೌಲಭ್ಯಗಳು ತೀರಾ ಅಸಮರ್ಪಕವಾಗಿವೆ ಎಂಬುದನ್ನು ಈ ಅಂಶಗಳು ಒತ್ತಿ ಹೇಳುತ್ತಿವೆ. ಇಂತಹ ಸೋಂಕು ಹರಡಿರುವ ಸಂದರ್ಭದಲ್ಲಿ ಒಂದು ರಾಷ್ಟ್ರದ ವಿಶ್ವಾಸವನ್ನು ಹೆಚ್ಚಿಸುವ ಏಕೈಕ ಮಾರ್ಗವೆಂದರೆ ಅದು ಆ ದೇಶದ ಆರೋಗ್ಯ ವ್ಯವಸ್ಥೆ ಮತ್ತು ಅದರ ಸಾಮರ್ಥ್ಯ ಬಗ್ಗೆ ಆ ದೇಶಕ್ಕಿರುವ ವಿಶ್ವಾಸ.

3. ನಮ್ಮ ಆರ್ಥಿಕ ಅಭಿವೃದ್ಧಿಯಲ್ಲಿ ಸುಸ್ಥಿರತೆ ಬರಬೇಕು. ಅದು ಈ ರೀತಿಯ ಅಥವಾ ಇತರ ರೀತಿಯ ಸಾಂಕ್ರಾಮಿಕ ರೋಗಗಳ ಮರಳುವಿಕೆಯನ್ನು ನಾವು ಇನ್ನೊಮ್ಮೆ ಕಾಣುವ ಸಾಧ್ಯತೆಯನ್ನು ದೂರ ಮಾಡುತ್ತದೆ.

4. ಸ್ವಾವಲಂಬನೆ ಅಥವಾ ಆತ್ಮನಿರ್ಭರತೆ, ಸ್ಥಳೀಯ ಸಮುದಾಯ ಅಥವಾ ರಾಜ್ಯ ಮತ್ತು ರಾಷ್ಟ್ರ ಮಾದರಿ ಅಭಿವೃದ್ಧಿ- ಇಲ್ಲಿ ಜನರು ಉದ್ಯೋಗವನ್ನು ತಾವೇ ಕಂಡುಕೊಳ್ಳುತ್ತಾರೆ. ತಮ್ಮ ರಾಜ್ಯ ಅಥವಾ ಸಮುದಾಯದಲ್ಲೇ ಅಭಿವೃದ್ಧಿಯ ಅವಕಾಶವನ್ನು ಪಡೆಯುತ್ತಾರೆ. ಈ ಮೂಲಕ ಸಾಮಾಜಿಕ ವ್ಯವಸ್ಥೆಯ ತಳಪಾಯದಲ್ಲಿದ್ದ ಸ್ಥಳೀಯ ಸಮುದಾಯಗಳನ್ನು ಪುನರ್‌ ನಿರ್ಮಿಸಲಾಗುತ್ತದೆ.

5. ಟೆಕ್ನಾಲಜಿ ಮತ್ತು ರಿಮೋಟ್‌ ವರ್ಕಿಂಗ್‌- ನಮ್ಮ ಜೀವನದ ಪ್ರತಿ ಅಂಶಗಳಲ್ಲೂ ತಂತ್ರಜ್ಞಾನ ಆವರಿಸಿದೆ. ಸರ್ಕಾರ, ನ್ಯಾಯಾಂಗ ಅಥವಾ ಉದ್ಯಮಗಳೂ ಇಂಟರ್‌ನೆಟ್‌ ಮತ್ತು ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತಿವೆ. ರಿಮೋಟ್‌ ವರ್ಕಿಂಗ್‌ ಎಲ್ಲ ಕ್ಷೇತ್ರಕ್ಕೂ ರೂಢಿಯಾಗಿ ಕಾಲಿಟ್ಟಿದೆ.

ಈ ತೀವ್ರ ಆತಂಕ ಮತ್ತು ಅದು ನಮ್ಮ ಜೀವನದ ಮೇಲೆ ಉಂಟುಮಾಡಿರುವ ಪರಿಣಾಮಗಳ ಹೊರತಾಗಿಯೂ ನಾವು ನಮ್ಮ ನಂಬಿಕೆಯನ್ನು ಉಳಿಸಿಕೊಳ್ಳಬೇಕು. ಈ ವೈರಸ್‌ ವಿರುದ್ಧದ ಹೋರಾಟದಲ್ಲಿ ನಾವು ಮೇಲುಗೈ ಸಾಧಿಸುತ್ತೇವೆ ಮತ್ತು ಎಲ್ಲವನ್ನೂ ಪುನರ್‌ ನಿರ್ಮಿಸುತ್ತೇವೆ ಎಂಬ ವಿಶ್ವಾಸವಿರಬೇಕು. ಆದರೆ ನಾವು ಮರಳುವ ಜೀವನವು ವಿಭಿನ್ನವಾದ, ಚುರುಕಾದ, ಹೆಚ್ಚು ಸಹಾನುಭೂತಿ, ಕಾಳಜಿ, ಅರಿವುಳ್ಳದ್ದೂ ಆಗಿರುತ್ತದೆ. ಅದರಿಂದಾಗಿ ನಮ್ಮ ಸಮುದಾಯ, ರಾಜ್ಯ ಮತ್ತು ರಾಷ್ಟ್ರ ಸರಿಯಾದ ರೀತಿಯಲ್ಲಿ ಮುನ್ನಡೆಯುತ್ತದೆ.

- ರಾಜೀವ್‌ ಚಂದ್ರಶೇಖರ್‌, ರಾಜ್ಯಸಭಾ ಸದಸ್ಯ

Follow Us:
Download App:
  • android
  • ios