ಪತ್ನಿಯ ಅಕ್ರಮ ಸಂಬಂಧವನ್ನು ಸಾಬೀತುಪಡಿಸಲು ಪತಿ ನೀಡಿದ ಮೊಬೈಲ್ ಫೋಟೋಗಳನ್ನು ಸಾಕ್ಷ್ಯವಾಗಿ ಪರಿಗಣಿಸಿ ಮಧ್ಯಪ್ರದೇಶ ಹೈಕೋರ್ಟ್ ವಿಚ್ಛೇದನವನ್ನು ಎತ್ತಿಹಿಡಿದಿದೆ. ಭಾರತೀಯ ಸಾಕ್ಷ್ಯ ಕಾಯ್ದೆಯ ಸೆಕ್ಷನ್ 65B ವಿಚ್ಛೇದನ ಪ್ರಕರಣಗಳಿಗೆ ಕಟ್ಟುನಿಟ್ಟಾಗಿ ಅನ್ವಯಿಸುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಡಿವೋರ್ಸ್​ ಎನ್ನುವುದು ಇತ್ತೀಚಿನ ದಿನಗಳಲ್ಲಿ ಮಾಮೂಲಾಗಿದೆ. ಆದರೆ ಇಂಥ ಪ್ರಕರಣಗಳಲ್ಲಿ ಸಾಕಷ್ಟು ಪ್ರಕರಣಗಳು ಕ್ಷುಲ್ಲಕ ಕಾರಣಗಳಿಗೆ ನಡೆಯುವುದು ಇದ್ದರೆ, ಕೆಲವೊಂದು ಪ್ರಕರಣಗಳಲ್ಲಿ ಅಕ್ರಮ ಸಂಬಂಧವೇ ಮುಖ್ಯ ಪಾತ್ರ ವಹಿಸುತ್ತದೆ. ಪತಿಗೋ, ಪತ್ನಿಗೋ ಅಕ್ರಮ ಸಂಬಂಧವಿದ್ದರೆ ಅದರಿಂದ ಮನೆಯ ವಾತಾವರಣ ಹಾಳಾಗಿ ಅದು ಡಿವೋರ್ಸ್​ವರೆಗೂ ಹೋಗುತ್ತದೆ. ಆದರೆ ಇಂಥ ಎಷ್ಟೋ ಸಂದರ್ಭಗಳಲ್ಲಿ ಈ ಅಕ್ರಮವನ್ನು ಸಾಬೀತು ಮಾಡುವುದು ಪತಿ ಅಥವಾ ಪತ್ನಿಗೆ ಕಷ್ಟಸಾಧ್ಯವಾಗುತ್ತದೆ. ಏಕೆಂದರೆ, ಇಂಥ ಸಂದರ್ಭಗಳಲ್ಲಿ, ಸೂಕ್ತ ಸಾಕ್ಷ್ಯಾಧಾರಗಳ ಕೊರತೆ ಇರುತ್ತದೆ, ಜೊತೆಗೆ ಫೋಟೋ ಇತ್ಯಾದಿಗಳು ಸಾಕ್ಷ್ಯಾಧಾರವಾಗಿ ಪರಿಗಣಿಸಲು ಬರುವುದಿಲ್ಲ ಎನ್ನುವ ನಿಯಮ ಕೂಡ ಇರುವ ಕಾರಣದಿಂದ ಯಾವುದೇ ರೀತಿಯ ಫೋಟೋಗಳನ್ನು ತೋರಿಸಿ ಸಾಬೀತು ಮಾಡಲಾಗದೇ ಗಂಡ ಅಥವಾ ಹೆಂಡತಿ ಸಮಸ್ಯೆಗೆ ಒಳಪಡುತ್ತಾರೆ.

ತೊಂದರೆಗೆ ಒಳಗಾದವರ ನೆರವಿಗೆ ಹೈಕೋರ್ಟ್​

ಆದರೆ ಇಂಥವರಿಗೆ ಅನುಕೂಲ ಆಗುವಂಥ ಕುತೂಹಲದ ತೀರ್ಪನ್ನು ಮಧ್ಯಪ್ರದೇಶ ಹೈಕೋರ್ಟ್​ ನೀಡಿದೆ. ಸಾಮಾನ್ಯವಾಗಿ ಭಾರತೀಯ ಸಾಕ್ಷ್ಯ ಕಾಯ್ದೆಯ ಸೆಕ್ಷನ್ 65B ಅಡಿಯಲ್ಲಿ ಮೊಬೈಲ್​ ಫೋನ್​ಗಳಲ್ಲಿನ ಫೋಟೋಗಳನ್ನು ಯಾವುದೇ ಪ್ರಕರಣಗಳಲ್ಲಿ ಸಾಕ್ಷ್ಯ ಎಂದು ಕೋರ್ಟ್​ಗಳು ಪರಿಗಣಿಸುವಂತಿಲ್ಲ. ಆದರೆ ಇಲ್ಲೊಂದು ಡಿವೋರ್ಸ್​ ಪ್ರಕಣದಲ್ಲಿ, ಪತ್ನಿಯ ವ್ಯಭಿಚಾರವನ್ನು ತೋರಿಸುವ ಮೊಬೈಲ್ ಫೋನ್‌ನಲ್ಲಿನ ಛಾಯಾಚಿತ್ರಗಳ ಆಧಾರದ ಮೇಲೆ ಕೋರ್ಟ್​ ಡಿವೋರ್ಸ್​ ನೀಡಿದೆ. ಡಿವೋರ್ಸ್​ ಪ್ರಕರಣಗಳಲ್ಲಿ ಭಾರತೀಯ ಸಾಕ್ಷ್ಯ ಕಾಯ್ದೆಯ ಸೆಕ್ಷನ್ 65B ಅನ್ವಯ ಮಾಡುವುದು ಉಚಿತವಲ್ಲ ಎಂದು ಕೋರ್ಟ್​ ಹೇಳಿದೆ. ಈ ಮೂಲಕ ಪತಿ ಅಥವಾ ಪತ್ನಿಯ ಅಕ್ರಮ ಸಂಬಂಧದ ಬಗ್ಗೆ ಸಾಕ್ಷಿ ನೀಡಲಾಗದೇ ನೋವು ಅನುಭವಿಸುತ್ತಿರುವವರಿಗೆ ಈ ತೀರ್ಪು ವರದಾನವಾಗಿದೆ.

ಕೋರ್ಟ್​ ಹೇಳಿದ್ದೇನು?

ಭಾರತೀಯ ಸಾಕ್ಷ್ಯ ಕಾಯ್ದೆಯ ಸೆಕ್ಷನ್ 65B ನ್ಯಾಯಾಲಯದಲ್ಲಿ ಸಾಕ್ಷಿಯಾಗಿ ಎಲೆಕ್ಟ್ರಾನಿಕ್ ದಾಖಲೆಗಳ ಸ್ವೀಕಾರಾರ್ಹತೆಯ ಬಗ್ಗೆ ತಿಳಿಸುತ್ತದೆ. ಅದನ್ನು ಮಾನ್ಯ ಮಾಡುವಂತಿಲ್ಲ ಎನ್ನುತ್ತದೆ ಈ ನಿಯಮ. ಆದರೆ, ಇದನ್ನು ಡಿವೋರ್ಸ್​ ಕೇಸ್​ನಲ್ಲಿ ಅನ್ವಯ ಮಾಡುವುದು ಸರಿಯಲ್ಲ ಎಂದು ನ್ಯಾಯಮೂರ್ತಿಗಳಾದ ವಿಶಾಲ್ ಧಗತ್ ಮತ್ತು ಭಗವತಿ ಪ್ರಸಾದ್ ಶರ್ಮಾ ಪೀಠ ಹೇಳಿದೆ. ಈ ಪ್ರಕರಣದಲ್ಲಿ, ಪತ್ನಿಯ ವ್ಯಭಿಚಾರವನ್ನು ತೋರಿಸುವ ಮೊಬೈಲ್ ಫೋಟೋಗಳ ಆಧಾರದ ಮೇಲೆ ಗಂಡನಿಗೆ ಕೌಟುಂಬಿಕ ಕೋರ್ಟ್​ ನೀಡಿರುವ ತೀರ್ಪನ್ನು ಹೈಕೋರ್ಟ್​ ಎತ್ತಿ ಹಿಡಿದಿದೆ. ಫೋಟೋಗಳ ಸಾಕ್ಷಿಯ ಮೇಲೆ ಡಿವೋರ್ಸ್​ ನೀಡಿರುವುದನ್ನು ಪ್ರಶ್ನಿಸಿ ಪತ್ನಿ ಸಲ್ಲಿಸಿದ್ದ ಮೇಲ್ಮನವಿ ವಜಾ ಆಗಿದೆ.

ನ್ಯಾಯಾಲಯದ ಸ್ಪಷ್ಟನೆ

ಈ ಬಗ್ಗೆ ಸ್ಪಷ್ಟಪಡಿಸಿರುವ ಹೈಕೋರ್ಟ್​, "ಕುಟುಂಬ ನ್ಯಾಯಾಲಯಗಳ ಕಾಯ್ದೆಯ ಸೆಕ್ಷನ್ 14 ರ ಪ್ರಕಾರ, ವಿವಾದವನ್ನು ಪರಿಣಾಮಕಾರಿಯಾಗಿ ನಿಭಾಯಿಸಲು ಸಹಾಯ ಮಾಡುವ ಯಾವುದೇ ವರದಿ, ಹೇಳಿಕೆ, ದಾಖಲೆಗಳು, ಮಾಹಿತಿ ಅಥವಾ ವಿಷಯವನ್ನು ಸಾಕ್ಷ್ಯವಾಗಿ ಸ್ವೀಕರಿಸಬಹುದು, ಅದು ಭಾರತೀಯ ಸಾಕ್ಷ್ಯ ಕಾಯ್ದೆ, 1872 ರ ಅಡಿಯಲ್ಲಿ ಅದು ಇಲ್ಲದಿದ್ದರೆ ಪ್ರಸ್ತುತವಾಗಿದೆಯೋ ಇಲ್ಲವೋ ಅಥವಾ ಸ್ವೀಕಾರಾರ್ಹವಾಗಿದೆಯೋ ಇಲ್ಲವೋ ಎಂಬುದನ್ನು ಪರಿಗಣಿಸಿ. ವೈವಾಹಿಕ ಪ್ರಕರಣಗಳಲ್ಲಿ ಭಾರತೀಯ ಸಾಕ್ಷ್ಯ ಕಾಯ್ದೆ ಕಟ್ಟುನಿಟ್ಟಾಗಿ ಅನ್ವಯಿಸುವುದಿಲ್ಲ ಮತ್ತು ಮುಂದಿನ ನ್ಯಾಯಾಲಯಕ್ಕೆ ಸತ್ಯವನ್ನು ಕಂಡುಹಿಡಿಯಲು ಯಾವುದೇ ವರದಿ, ಹೇಳಿಕೆ, ಸಾಕ್ಷ್ಯಗಳನ್ನು ಸಾಕ್ಷ್ಯವಾಗಿ ಸ್ವೀಕರಿಸುವ ಅಧಿಕಾರವನ್ನು ನೀಡಲಾಗಿದೆ..." ಎಂದು ಹೇಳಿದೆ.