ಬಿಬಿಸಿ ವಿರುದ್ಧ ಮತ್ತಷ್ಟು ಆಕ್ರೋಶ: ನಿಷೇಧದ ಬಳಿಕವೂ ಮತ್ತೆ ಸಾಕ್ಷ್ಯಚಿತ್ರ ಶೇರ್ ಮಾಡಿದ ಟಿಎಂಸಿ ಎಂಪಿ..!
ಬಿಬಿಸಿಗೆ ಚರ್ಚಿಲ್ ಬಗ್ಗೆ ಸಾಕ್ಷ್ಯಚಿತ್ರ ಮಾಡಲು ಧೈರ್ಯವಿದೆಯೇ? ಎಂದು ಶೇಖರ್ ಕಪೂರ್ ಪ್ರಶ್ನೆ ಮಾಡಿದ್ದಾರೆ. ಸುಳ್ಳು ಸಾಕ್ಷ್ಯಚಿತ್ರಗಳನ್ನು ನಿರ್ಮಾಣ ಮಾಡುವುದರಲ್ಲಿ ಬಿಬಿಸಿ ಎತ್ತಿದ ಕೈ ಎಂದು ಉದ್ಯಮಿ ಅರುಣ್ ಪುದೂರ್ ಕಿಡಿ ಕಾರಿದ್ದಾರೆ. ಅಲ್ಲದೆ, ಕೆಲವರಿಗೆ ಸುಪ್ರೀಂಕೋರ್ಟ್‌ಗಿಂತ ಬಿಬಿಸಿಯೇ ಹೆಚ್ಚು ಎಂದೂ ಕೇಂದ್ರ ಸಚಿವ ರಿಜಿಜು ಟೀಕೆ ಮಾಡಿದ್ದಾರೆ.
ನವದೆಹಲಿ (ಜನವರಿ 23, 2023): ಗುಜರಾತ್ ಗಲಭೆಯ ಕುರಿತಾಗಿ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಬ್ರಿಟನ್ ಸುದ್ದಿವಾಹಿನಿ ‘ಬಿಬಿಸಿ’ ನಿರ್ಮಾಣ ಮಾಡಿರುವ ಸಾಕ್ಷ್ಯಚಿತ್ರಕ್ಕೆ ಭಾರತದಾದ್ಯಂತ ಭಾರಿ ಆಕ್ರೋಶ ಮುಂದುವರಿದಿದೆ. ಭಾರತದ ಗಣ್ಯರ ಕುರಿತು ಸಾಕ್ಷ್ಯಚಿತ್ರ ಸಿದ್ಧಪಡಿಸಿರುವ ಬಿಬಿಸಿಗೆ, ಬ್ರಿಟಿಷ್ ಮಹನೀಯರ ಕರ್ಮಕಾಂಡಗಳ ಸಾಕ್ಷ್ಯಚಿತ್ರ ಮಾಡುವ ಧೈರ್ಯ ಇದೆಯೇ ಎಂದು ಭಾರತದಲ್ಲಿನ ಕೆಲವು ಗಣ್ಯರು ಪ್ರಶ್ನಿಸಿದ್ದಾರೆ.
ಚಿತ್ರನಿರ್ಮಾಣಕಾರ ಶೇಖರ್ ಕಪೂರ್ ಟ್ವೀಟ್ ಮಾಡಿ, ‘ಬ್ರಿಟನ್‌ನಲ್ಲಿ ಅಂದಿನ ಪ್ರಧಾನಿ ವಿನ್‌ಸ್ಟನ್ ಚರ್ಚಿಲ್ ಅವರು ಆರಾಧ್ಯ ದೈವರಲ್ಲಿ ಒಬ್ಬರು. ಇಂಥ ಚರ್ಚಿಲ್ ಅವರು ಭಾರತದ ಬಂಗಾಳದಲ್ಲಿ ಬರಗಾಲ ಉಂಟಾಗಿದ್ದಾಗ ಲಕ್ಷಾಂತರ ಜನರ ಸಾವಿಗೆ ಕಾರಣರಾಗಿದ್ದರು. ಅಲ್ಲದೆ, ಕುರ್ದ್ ಆದಿವಾಸಿಗಳ ಮೇಲೆ ರಾಸಾಯನಿಕ ಬಾಂಬ್ ಹಾಕಿದ ಮೊದಲ ವ್ಯಕ್ತಿ ಅವರು. ಇಂಥವರ ಬಗ್ಗೆ ಸಾಕ್ಷ್ಯಚಿತ್ರ ಮಾಡುವ ಧೈರ್ಯ ಬಿಬಿಸಿಗೆ ಇದೆಯೇ?’ ಎಂದು ಪ್ರಶ್ನಿಸಿದ್ದಾರೆ.
ಇದನ್ನು ಓದಿ: ಪ್ರಧಾನಿ ಮೋದಿ ಕುರಿತ ಬಿಬಿಸಿ ಸಾಕ್ಷ್ಯಚಿತ್ರಕ್ಕೆ ಭಾರತದಲ್ಲಿ ‘ನಿಷೇಧ’
ಇನ್ನು ಉದ್ಯಮಿ ಅರುಣ್ ಪುದೂರ್ ಅವರು, ‘ಸುಳ್ಳು ಸಾಕ್ಷ್ಯಚಿತ್ರಗಳನ್ನು ನಿರ್ಮಾಣ ಮಾಡುವುದರಲ್ಲಿ ಬಿಬಿಸಿ ಎತ್ತಿದ ಕೈ. ಇಂಥ ನಕಲಿ ಸಾಕ್ಷ್ಯಚಿತ್ರಗಳ ಇತಿಹಾಸವನ್ನೇ ಬಿಬಿಸಿ ಹೊಂದಿದೆ’ ಎಂದು ಕಿಡಿಕಾರಿದ್ದಾರೆ.
ರಿಜಿಜು ತಿರುಗೇಟು:
ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಪ್ರತಿಕ್ರಿಯಿಸಿ, ‘ಭಾರತದಲ್ಲಿ ಇನ್ನೂ ಕೆಲವರು ವಸಾಹತುಶಾಹಿಯ ಅಮಲು ಬಿಟ್ಟಿಲ್ಲ. ಅವರು ಬಿಬಿಸಿಯನ್ನು ಭಾರತದ ಸರ್ವೋಚ್ಚ ನ್ಯಾಯಾಲಯಕ್ಕಿಂತ ಹೆಚ್ಚಾಗಿ ಪರಿಗಣಿಸುತ್ತಾರೆ ಮತ್ತು ತಮ್ಮ ನಾಯಕರನ್ನು ಮೆಚ್ಚಿಸಲು ದೇಶದ ಘನತೆ ಮತ್ತು ಇಮೇಜ್‌ಅನ್ನು ಕೆಳಮಟ್ಟಕ್ಕೆ ತಗ್ಗಿಸುತ್ತಾರೆ. ಹೇಗಿದ್ದರೂ ಈ ತುಕ್ಡೆ ತುಕ್ಡೆ ಗ್ಯಾಂಗ್ ಸದಸ್ಯರಿಂದ ಉತ್ತಮ ಭರವಸೆ ಇಲ್ಲ, ಅವರ ಏಕೈಕ ಗುರಿ ಭಾರತದ ಶಕ್ತಿಯನ್ನು ದುರ್ಬಲಗೊಳಿಸುವುದು’ ಎಂದು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಮೋದಿ ವಿರುದ್ಧ ಅಪಪ್ರಚಾರ, ಸಾಕ್ಷ್ಯ ಚಿತ್ರದ ಮೂಲಕ ಬ್ರಿಟಿಷ್ ಟಿವಿ ಹುನ್ನಾರ!
ಮತ್ತೆ ಸಾಕ್ಷ್ಯಚಿತ್ರ ಶೇರ್ ಮಾಡಿದ ಟಿಎಂಸಿ ಎಂಪಿ
ಗುಜರಾತ್ ಗಲಭೆ ಕುರಿತಾಗಿ ಬಿಬಿಸಿ ನಿರ್ಮಾಣ ಮಾಡಿರುವ ಸಾಕ್ಷ್ಯಚಿತ್ರವನ್ನು ಭಾರತದಲ್ಲಿ ಸರ್ಕಾರ ನಿಷೇಧಿಸಿದ್ದರೂ ಸಹ ತೃಣಮೂಲ ಕಾಂಗ್ರೆಸ್ನ ಸಂಸದೆ ಮಹುವಾ ಮೊಯಿತ್ರಾ ಸಾಕ್ಷ್ಯಚಿತ್ರದ ಲಿಂಕ್ ಅನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ಮೂಲಕ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಸಡ್ಡು ಹೊಡೆದಿದ್ದಾರೆ.
‘ಕ್ಷಮಿಸಿ, ಸೆನ್ಸಾರ್ಶಿಪ್ ಅನ್ನು ಒಪ್ಪಿಕೊಳ್ಳುವುದಕ್ಕಾಗಿ ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವನ್ನು ಪ್ರತಿನಿಧಿಸಲು ಆಯ್ಕೆಯಾಗಿಲ್ಲ’ ಎಂದು ಮಹುವಾ ಹೇಳಿದ್ದಾರೆ. ಈ ಸಾಕ್ಷ್ಯಚಿತ್ರದ ಮೊದಲ ಭಾಗದ ಲಿಂಕ್ಗಳನ್ನು ಸಾಮಾಜಿಕ ಜಾಲತಾಣದಿಂದ ತೆಗೆದುಹಾಕುವಂತೆ ಸರ್ಕಾರ ಸೂಚಿಸಿದ ಒಂದು ದಿನದ ತರುವಾಯ ಮಹುವಾ ಇದನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ವಿವಾದಿತ ಮೋದಿ ಸಾಕ್ಷ್ಯಚಿತ್ರಕ್ಕೆ ಬಿಬಿಸಿ ಸಂಸ್ಥೆ ಸಮರ್ಥನೆ: ಭಾರತ, ರಿಷಿ ಸುನಕ್ ಟೀಕೆಗೆ ಸ್ಪಷ್ಟನೆ