Asianet Suvarna News Asianet Suvarna News

ಪ್ರಧಾನಿ ಮೋದಿ ಕುರಿತ ಬಿಬಿಸಿ ಸಾಕ್ಷ್ಯಚಿತ್ರಕ್ಕೆ ಭಾರತದಲ್ಲಿ ‘ನಿಷೇಧ’

ಗುಜರಾತ್‌ ದಂಗೆಯ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುವ ಹಾಗೂ ದಂಗೆಯ ಕುರಿತ ತನಿಖೆ ಬಗ್ಗೆಯೂ ಅಪಸ್ವರ ವ್ಯಕ್ತಪಡಿಸುವ ಈ ಡಾಕ್ಯುಮೆಂಟರಿಯನ್ನು ಬಿಬಿಸಿ ಇತ್ತೀಚೆಗಷ್ಟೇ ಬಿಡುಗಡೆ ಮಾಡಿದೆ.

government blocks bbc documentary on pm modi on you tube bans links on twitter ash
Author
First Published Jan 22, 2023, 8:23 AM IST

ನವದೆಹಲಿ (ಜನವರಿ 22, 2023): 2002ರ ಗುಜರಾತ್‌ ದಂಗೆಯ ಕುರಿತು ಬಿಬಿಸಿ ತಯಾರಿಸಿರುವ ವಿವಾದಿತ ‘ಇಂಡಿಯಾ: ದಿ ಮೋದಿ ಕ್ವಶ್ಚನ್‌’ ಸಾಕ್ಷ್ಯಚಿತ್ರದ ಎಲ್ಲಾ ಲಿಂಕ್‌ಗಳನ್ನು ಕೇಂದ್ರ ಸರ್ಕಾರ ಬ್ಲಾಕ್‌ ಮಾಡಿದೆ. ಅಲ್ಲದೆ, ಟ್ವಿಟ್ಟರ್‌ ಹಾಗೂ ಯುಟ್ಯೂಬ್‌ನಲ್ಲಿ ಶೇರ್‌ ಆಗುತ್ತಿರುವ ಈ ಡಾಕ್ಯುಮೆಂಟರಿಯ ಲಿಂಕ್‌ಗಳನ್ನು ತೆಗೆದುಹಾಕುವಂತೆ ಆ ಕಂಪನಿಗಳಿಗೆ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ.

ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ (Union Ministry of Information and Broadcasting) ಕಾರ್ಯದರ್ಶಿ ಅಪೂರ್ವ ಚಂದ್ರ ಅವರು ಮಾಹಿತಿ ತಂತ್ರಜ್ಞಾನ ನಿಯಮ-2021ರ (Information Technology Act) ಅಡಿ ತಮಗಿರುವ ತುರ್ತು ಅಧಿಕಾರವನ್ನು ಬಳಸಿ ಸೋಷಿಯಲ್‌ ಮೀಡಿಯಾ (Social Media) ಕಂಪನಿಗಳಿಗೆ ಈ ಸಾಕ್ಷ್ಯಚಿತ್ರವನ್ನು (Documentary) ತಡೆಹಿಡಿಯುವಂತೆ ಸೂಚಿಸಿದ್ದಾರೆ ಎಂದು ಹೇಳಲಾಗಿದೆ. ಅಲ್ಲದೆ, ಟ್ವಿಟ್ಟರ್‌ನಲ್ಲಿರುವ (Twitter) ಈ ಸಾಕ್ಷ್ಯಚಿತ್ರದ ಕುರಿತ 50ಕ್ಕೂ ಹೆಚ್ಚು ಪೋಸ್ಟ್‌ಗಳನ್ನು ಕೂಡ ಅಳಿಸಿಹಾಕಲು ಸೂಚಿಸಿದ್ದಾರೆ.

ಇದನ್ನು ಓದಿ: ವಿವಾದಿತ ಮೋದಿ ಸಾಕ್ಷ್ಯಚಿತ್ರಕ್ಕೆ ಬಿಬಿಸಿ ಸಂಸ್ಥೆ ಸಮರ್ಥನೆ: ಭಾರತ, ರಿಷಿ ಸುನಕ್‌ ಟೀಕೆಗೆ ಸ್ಪಷ್ಟನೆ

ಇದಕ್ಕೆ ಪೂರಕವಾಗಿ ಪ್ರತಿಕ್ರಿಯೆ ನೀಡಿರುವ ಟಿಎಂಸಿ ಸಂಸದ (TMC MP) ಡೆರಿಕ್‌ ಓಬ್ರಿಯಾನ್‌, ‘ಬಿಬಿಸಿ ಸಾಕ್ಷ್ಯಚಿತ್ರ (BBC Documentary) ಕುರಿತ ನನ್ನ ಪೋಸ್ಟ್‌ ಅನ್ನು ಟ್ವಿಟ್ಟರ್‌ ಅಳಿಸಿ ಹಾಕಿದೆ. ಭಾರತದ ಕಾನೂನಿಗೆ ವಿರುದ್ಧವಾಗಿ ಪೋಸ್ಟ್‌ ಮಾಡಿದ್ದರಿಂದಾಗಿ ಸರ್ಕಾರದ ಕೋರಿಕೆ ಮೇರೆಗೆ ಟ್ವೀಟ್‌ ಅನ್ನು ಅಳಿಸಿ ಹಾಕಲಾಗಿದೆ ಎಂದು ಟ್ವಿಟ್ಟರ್‌ ನನಗೆ ಮಾಹಿತಿ ನೀಡಿದೆ’ ಎಂದಿದ್ದಾರೆ ಹಾಗೂ ತಮ್ಮ ಟ್ವೀಟ್‌ ಅನ್ನು ಅದು ಅಳಿಸಿಹಾಕಿರುವ ಕುರಿತು ಹಾಗೂ ಟ್ವಿಟ್ಟರ್‌ ಸಂಸ್ಥೆ ಕಳುಹಿಸಿದ ಇ-ಮೇಲ್‌ ಅನ್ನು ಟ್ವೀಟ್‌ ಮಾಡಿದ್ದಾರೆ.

ಏನಿದು ವಿವಾದ?:
ಗುಜರಾತ್‌ ದಂಗೆಯ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುವ ಹಾಗೂ ದಂಗೆಯ ಕುರಿತ ತನಿಖೆ ಬಗ್ಗೆಯೂ ಅಪಸ್ವರ ವ್ಯಕ್ತಪಡಿಸುವ ಈ ಡಾಕ್ಯುಮೆಂಟರಿಯನ್ನು ಬಿಬಿಸಿ ಇತ್ತೀಚೆಗಷ್ಟೇ ಬಿಡುಗಡೆ ಮಾಡಿದೆ. ಇದರ ಕುರಿತು ಬ್ರಿಟನ್‌ ಸಂಸತ್ತಿನಲ್ಲಿ ಸಂಸದರೊಬ್ಬರು ಪ್ರಸ್ತಾಪಿಸಿದಾಗ ಸ್ವತಃ ಅಲ್ಲಿನ ಪ್ರಧಾನಿ ರಿಷಿ ಸುನಕ್‌ ಆಕ್ಷೇಪ ವ್ಯಕ್ತಪಡಿಸಿ ಮೋದಿಯವರನ್ನು ಸಮರ್ಥಿಸಿಕೊಂಡಿದ್ದು ಸುದ್ದಿಯಾಗಿತ್ತು. ಅದೇ ವೇಳೆ, ಭಾರತ ಸರ್ಕಾರ ಕೂಡ ಈ ಡಾಕ್ಯುಮೆಂಟರಿ ದುರುದ್ದೇಶದಿಂದ ಕೂಡಿದೆ ಎಂದು ಹೇಳಿತ್ತು. ಈಗ ಭಾರತದಲ್ಲಿ ಇದರ ವೀಕ್ಷಣೆಗಿರುವ ಎಲ್ಲಾ ಲಿಂಕ್‌ಗಳನ್ನು ಅಳಿಸಿಹಾಕಲು ಸೂಚಿಸಲಾಗಿದೆ.

ಇದನ್ನೂ ಓದಿ: ಬ್ರಿಟನ್‌ ಸಂಸತ್ತಲ್ಲಿ ಪ್ರಧಾನಿ ಮೋದಿ ಸಮರ್ಥಿಸಿದ ಪ್ರಧಾನಿ ರಿಷಿ ಸುನಕ್‌

ಸರ್ಕಾರದ ಈ ನಡೆಯನ್ನು ವಿಪಕ್ಷಗಳು ಟೀಕಿಸಿವೆ. ಬಿಜೆಪಿ ನಾಯಕರು ಹಾಗೂ ಕೇಂದ್ರ ಸಚಿವರು ಸರ್ಕಾರವನ್ನು ಸಮರ್ಥಿಸಿಕೊಂಡಿದ್ದಾರೆ.

ಅಟಲ್‌ ರಾಜಧರ್ಮ ಏಕೆ ನೆನಪಿಸಿದ್ದರು?: ಕಾಂಗ್ರೆಸ್‌
‘2002ರ ಗುಜರಾತ್‌ ಗಲಭೆಯ ನಂತರ ಅಂದಿನ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರು ನರೇಂದ್ರ ಮೋದಿಯವರಿಗೆ ರಾಜಧರ್ಮವನ್ನು ಏಕೆ ನೆನಪಿಸಿದ್ದರು ಎಂದು ಪ್ರಶ್ನಿಸಿರುವ ಕಾಂಗ್ರೆಸ್‌, ಪ್ರಧಾನಿ ನರೇಂದ್ರ ಮೋದಿ ಕುರಿತ ಬಿಬಿಸಿ ಸಾಕ್ಷ್ಯಚಿತ್ರದ ಸೆನ್ಸಾರ್‌ಶಿಪ್‌ಗಾಗಿ ಸರ್ಕಾರವನ್ನು ಶನಿವಾರ ಟೀಕಿಸಿದೆ.
ಈ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ, ಸಂವಹನಗಳ ಉಸ್ತುವಾರಿ ಜೈರಾಮ್‌ ರಮೇಶ್‌ ಅವರು ‘ಪ್ರಧಾನಿ ಮತ್ತು ಅವರ ಡ್ರಮ್‌ಬೀಟರ್‌ಗಳು ತಮ್ಮ ಹೊಸ ಬಿಬಿಸಿ ಸಾಕ್ಷ್ಯಚಿತ್ರವನ್ನು ನಿಂದಿಸುತ್ತಿದ್ದಾರೆ. ಹಾಗಿದ್ದರೆ 2002ರಲ್ಲಿ ಮೋದಿ ಅವರಿಗೆ ವಾಜಪೇಯಿ ಅವರು ‘ರಾಜಧರ್ಮ ಪಾಲಿಸಿ’ ಎಂದು ಏಕೆ ಹೇಳಿದ್ದರು?’ ಎಂದು ಕೇಳಿದ್ದಾರೆ.

ಇದನ್ನೂ ಓದಿ: 'ಚರ್ಚಿಲ್‌ ಬಗ್ಗೆಯೂ ಸಿರೀಸ್‌ ಮಾಡಿ..'ಪಿಎಂ ಮೋದಿ ಕುರಿತಾಗಿ ಬಿಬಿಸಿ ಸರಣಿಗೆ ಟ್ವಿಟರ್‌ನಲ್ಲಿ ಟೀಕೆ!

Follow Us:
Download App:
  • android
  • ios