Asianet Suvarna News Asianet Suvarna News

ಪೊಲೀಸರೆದುರೆ ನ್ಯಾಯಾಧೀಶರ ಸನ್‌ಗ್ಲಾಸ್ ಎತ್ಕೊಂಡ್ ಹೋದ ಕೋತಿ: ವೈರಲ್‌ ವಿಡಿಯೋ

ಪೊಲೀಸರೆದುರೇ ಕೋತಿಯೊಂದು ನ್ಯಾಯಾಧೀಶರ ಕನ್ನಡಕ ಕಿತ್ತುಕೊಂಡು ಓಡಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Monkey runs with Mathura District Magistrate sun glass akb
Author
First Published Aug 22, 2022, 4:00 PM IST

ನಗರ ಪ್ರದೇಶಗಳ ದೇಗುಲದ ಪರಿಸರದಲ್ಲಿ ವಾಸವಿರುವ ಕೋತಿಗಳು ಅಲ್ಲಿಗೆ ಬಂದವರ ಕೈಯಲ್ಲಿದ್ದ ವಸ್ತುಗಳನ್ನು ಕಿತ್ತುಕೊಂಡು ಓಡುವ, ಜೊತೆಗೆ ವಸ್ತುಗಳನ್ನು ಕಿತ್ತುಕೊಳ್ಳಲು ನೋಡಿ ಬೆದರಿಸುವ ದೃಶ್ಯಗಳನ್ನು ನೀವು ಈಗಾಗಲೇ ನೋಡಿರಬಹುದು. ಕೋತಿಗಳ ಉಪಟಳಕ್ಕೆ ಸಿಲುಕಿ ಜನ ಪರದಾಡುವ ಹಲವು ವಿಡಿಯೋಗಳನ್ನು ನೀವು ನೋಡಿರಬಹುದು. ಅದೇ ರೀತಿ ಈಗ ಇಲ್ಲೊಂದು ಕೋತಿ ಸನ್‌ಗ್ಲಾಸ್ ಮೇಲೆ ಕಣ್ಣು ಹಾಕಿದ್ದು, ಎತ್ತಿಕೊಂಡು ಓಡಾಡಿದೆ. ಅದೂ ಯಾರ ಸನ್‌ ಗ್ಲಾಸ್‌ ಅಂತೀರಾ ಮಥುರಾದ ಜಿಲ್ಲಾ ನ್ಯಾಯಾಧೀಶರ ಕೈಯಲ್ಲಿದ್ದ ಸನ್‌ಗ್ಲಾಸ್.

ಸನ್‌ಗ್ಲಾಸ್ ಹಾಕಿಕೊಂಡು ಬಿಸಿಲಿನಲ್ಲಿ ನಡೆಯುತ್ತಿದ್ದರೆ ಅದು ಕಣ್ಣಿಗೆ ತಂಪು ನೀಡುವುದು. ಅದೇ ರೀತಿ ದೊಡ್ಡ ಅಧಿಕಾರಿಗಳು ಗಣ್ಯರು ಸಿನಿಮಾ ತಾರೆಯರು ಹೀಗೆ ಉಳ್ಳವರೆಲ್ಲಾ ಸನ್‌ಗ್ಲಾಸ್ ಹಾಕಿಕೊಂಡು ತಿರುಗಾಡುತ್ತಾರೆ. ಹೀಗೆ ಸನ್‌ಗ್ಲಾಸ್‌ ಹಾಕಿಕೊಂಡು ಕೂಲಾಗಿ ಬಿಸಿಲಿನಲ್ಲಿ ತಿರುಗಾಡುತ್ತಿದ್ದ ಜನರನ್ನು ನೋಡಿದ ಕೋತಿಗೆ ಏನನಿಸಿತೋ ಏನೋ. ತನಗೂ ಹಾಗೆ ಕೂಲಾಗಿ ಕಣ್ಣಿಗೆ ಕನ್ನಡಕ ಹಾಕಿ ತಿರುಗಾಡಬೇಕು ಅನಿಸಿರಬೇಕು. ನ್ಯಾಯಾಧೀಶರ ಕೈಯಲ್ಲಿದ್ದ ಕೂಲಿಂಗ್ ಗ್ಲಾಸ್ ಎತ್ತಿಕೊಂಡು ಓಡಿ ಹೋಗಿ ಮಹಡಿ ಏರಿದೆ. 

ನಿನ್ನೆ ಭಾನುವಾರ ಈ ಘಟನೆ ನಡೆದಿದೆ. ಮಥುರಾದ ಜಿಲ್ಲಾ ನ್ಯಾಯಾಧೀಶರಾದ  ನವನೀತ್ ಸಿಂಗ್ ಚಹಾಲ್‌, ಹಾಗೂ ವೃಂದಾವನದ ಎಸ್ಎಎಸ್ಪಿ ಅವರು ಮಥುರಾದ ಬಂಕೆ ಬಿಹಾರಿ ದೇಗುಲಕ್ಕೆ ಆಗಮಿಸಿದ್ದರು. ಕೃಷ್ಣಜನ್ಮಷ್ಟಮಿಯಂದು ಬಂಕೆ ಬಿಹಾರಿ ದೇಗುಲದಲ್ಲಿ ಕಾಲ್ತುಳಿತಕ್ಕೆ ಒಳಗಾಗಿ ಇಬ್ಬರು ಸಾವನ್ನಪ್ಪಿದ್ದರು. ಈ ಪ್ರಕರಣದ ಬಗ್ಗೆ ತನಿಖೆ ನಡೆಸಲು ನ್ಯಾಯಾಧೀಶರು ಹಾಗೂ ಎಸ್ಎಸ್‌ಪಿ ಸ್ಥಳಕ್ಕೆ ಆಗಮಿಸಿದ್ದರು. ಇವರು ಆಗಮಿಸಿ ಸ್ವಲ್ಪ ಹೊತ್ತಿನಲ್ಲೇ ಇವರಿದ್ದಲ್ಲಿಗೆ ಬಂದ ಕೋತಿಯೊಂದು ಇವರ ಬಳಿ ಇದ್ದ ಕನ್ನಡಕವನ್ನು ಕಿತ್ತುಕೊಂಡು ಪರಾರಿಯಾಗಿದೆ. ಈ ವೇಳೆ ಅನೇಕ ಪೊಲೀಸರು ಸ್ಥಳದಲ್ಲಿದ್ದರು. ಕೋತಿಗೇನು ಗೊತ್ತು ಇವರು ಪೊಲೀಸರು ಅವರು ಮ್ಯಾಜಿಸ್ಟ್ರೇಟ್ ಅಂತ? ಮೆಲ್ಲನೆ ಕೆಳಗೆ ಬಂದಿದ್ದೆ, ನ್ಯಾಯಾಧೀಶರ ಕನ್ನಡಕ ಕಿತ್ತುಕೊಂಡು ಎಸ್ಕೇಪ್ ಆಗಿದೆ. ಕೂಡಲೇ ಅಲ್ಲಿದ್ದ ಇತರ ಅಧಿಕಾರಿಗಳು ಹಾಗೂ ಪೊಲೀಸರು ಕೋತಿಯ ಹಿಂದೆ ಸನ್‌ಗ್ಲಾಸ್‌ಗಾಗಿ ಓಡಿದ್ದಾರೆ. 

Kolar: ಕುಚಿಕು ಫ್ರೆಂಡ್ಸ್‌ಗಳಾದ ಕೋತಿ, ನಾಯಿ ಹಾಗೂ ಬೆಕ್ಕು!

ಆದರೆ ಎಷ್ಟು ಹೊತ್ತಾದರೂ ಕನ್ನಡಕವನ್ನು ವಾಪಸ್ ನೀಡದೆ ಸುಮಾರು ಹೊತ್ತುಗಳ ಕಾಲ ಕೋತಿ ಪೊಲೀಸರು ಹಾಗೂ ಅಧಿಕಾರಿಗಳನ್ನು ಆಟವಾಡಿಸಿದೆ. ಕನ್ನಡಕ ಕಿತ್ತುಕೊಂಡ ಕೋತಿ ಸಮೀಪದ ಕಟ್ಟಡವೇರಿ ಮೇಲೆ ಸಾಗಿದೆ. ಈ ವೇಳೆ ಬೇರೆ ವಸ್ತುಗಳನ್ನು ನೀಡಿ ಕನ್ನಡಕ ವಾಪಸ್ ನೀಡುವಂತೆ ಅಧಿಕಾರಿಗಳು ಹಲವು ಪ್ರಯತ್ನಗಳನ್ನು ಮಾಡಿದರು ಫಲ ಕೊಟ್ಟಿಲ್ಲ. ಆದರೆ ಹಲವು ಪ್ರಯತ್ನಗಳ ನಂತರ ಸುಮಾರು ಸಮಯದ ಬಳಿಕ ಕೋತಿ ಕನ್ನಡಕವನ್ನು ಮರಳಿಸಿದೆ.

ನಿಮ್ಮ ಮಕ್ಕಳಿಗೂ ಸ್ಮಾರ್ಟ್‌ಫೋನ್ ಗೀಳಿದ್ಯಾ ಹಾಗಿದ್ರೆ ಈ ಸ್ಟೋರಿ ನೋಡಿ

ಇದೇ ವೇಳೆ ವೃಂದಾವನ ವ್ಯಾಪ್ತಿಯಲ್ಲಿ ಕೋತಿಗಳು ಯಾವ ರೀತಿ ಕಿರುಕುಳ ನೀಡುತ್ತಿವೆ ಎಂಬುದನ್ನು ಸ್ಥಳೀಯರು ಹೇಳಿದರು. ಅಲ್ಲದೇ ಕೆಲವು ಜನರು, ಕೋತಿಗಳು ವಸ್ತುಗಳನ್ನು ಕಸಿದುಕೊಂಡರೆ ಪ್ರೂಟಿ ಜ್ಯೂಸ್ ನೀಡುವ ಮೂಲಕ ಜನ ಅವುಗಳಿಂದ ವಸ್ತುಗಳನ್ನು ವಾಪಸ್ ಪಡೆಯುತ್ತಾರೆ. ಇದನ್ನೇ ಅಭ್ಯಾಸ ಮಾಡಿಕೊಂಡಿರುವ ಕೋತಿಗಳು ಜನರ ಬಳಿ ಇರುವ ವಸ್ತುಗಳನ್ನು ಎಗರಿಸಿಕೊಂಡು ಪರಾರಿಯಾಗುತ್ತಿವೆ. ಹೀಗೆ ಓಡುವ ಕೋತಿಗಳಿಗೆ ಜ್ಯೂಸ್ ನೀಡಿ ತಮ್ಮ ವಸ್ತುಗಳನ್ನು ತೆಗೆದುಕೊಳ್ಳುವ ಸ್ಥಿತಿ ಬಂದಿದೆ ಎಂದು ಸ್ಥಳೀಯರು ದೂರಿದ್ದಾರೆ.

Follow Us:
Download App:
  • android
  • ios