10ನೇ ಬಾರಿಗೆ ಸಿಎಂ ಆದರೂ ನಿತೀಶ್ ಕುಮಾರ್ ಆಸ್ತಿ 13 ದನ-ಕರು,21 ರೂ ನಗದು, ಒಂದು ಮನೆ, ನಿತೀಶ್ ಕುಮಾರ್ ಬಿಹಾರದ ಅತ್ಯಂತ ಯಶಸ್ವಿ ಮುಖ್ಯಮಂತ್ರಿ. ಇವರ ಒಟ್ಟು ಆಸ್ತಿ ಇದೀಗ ಭಾರಿ ಚರ್ಚೆಯಾಗುತ್ತಿದೆ.

ಪಾಟ್ನಾ (ನ.20) ಬಿಹಾರ ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ 10ನೇ ಬಾರಿಗೆ ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ಮೂಲಕ ಅತೀ ಸುದೀರ್ಘ ಭಾರಿಗೆ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಕೆಲವೇ ಕೆಲವು ನಾಯಕರ ಸಾಲಿನಲ್ಲಿ ನಿತೀಶ್ ಗುರುತಿಸಿಕೊಂಡಿದ್ದಾರೆ. ಬಿಹಾರ ಜನತೆ ನಿತೀಶ್ ಕುಮಾರ್ ಮೇಲೆ ಸಾಕಷ್ಟ ಭರವಸೆ ಇಟ್ಟಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ನಿತೀಶ್ ಕುಮಾರ್ ಭ್ರಷ್ಟ ನಾಯಕನಲ್ಲ ಎಂಬುದು ಬಹುತೇಕ ಬಿಹಾರಿಗಳ ಅಭಿಪ್ರಾಯ. ಇದಕ್ಕೆ ಪೂರಕವಾಗಿ ನಿತೀಶ್ ಕುಮಾರ್ ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದ ಅಫಿಡವಿಟ್‌ನಲ್ಲಿ ತಮ್ಮ ಆಸ್ತಿ ವಿವರಗಳನ್ನು ಬಹಿರಂಗಪಡಿಸಿದ್ದಾರೆ. ಈ ಮಾಹಿತಿಗಳು ಹೊರಬೀಳುತ್ತಿದ್ದಂತೆ ಇದೀಗ ನಿತೀಶ್ ಕುಮಾರ್ ಮತ್ತೆ ಮತ್ತೆ ಆಯ್ಕೆಯಾಗಲು ಹಲವು ಕಾರಣಗಳಲ್ಲಿ ಇದೂ ಒಂದು ಎಂದು ಹಲವರು ಕಮೆಂಟ್ ಮಾಡಿದ್ದಾರೆ.

ನಿತೀಶ್ ಆಸ್ತಿ ವಿವರ

ನಿತೀಶ್ ಕುಮಾರ್ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಮಾಹಿತಿ ಪ್ರಕಾರ ಮುಖ್ಯಮಂತ್ರಿ ಬಳಿ 13 ದನ, 10 ಆಕಳು ಇದೆ. ಒಂದು ಫೋರ್ಡ್ ಇಕೋಸ್ಪೋರ್ಟ್ ಕಾರು ಇದೆ. ಇದರ ಜೊತೆಗೆ ಕೈಯಲ್ಲಿ 21,052 ರೂಪಾಯಿ ನಗದು ಇಟ್ಟುಕೊಂಡಿದ್ದಾರೆ. ಇನ್ನು ವಿವಿಧ ಬ್ಯಾಂಕ್‌ಗಳಲ್ಲಿ ಇಟ್ಟಿರುವ ಮೊತ್ತ 60,811 ರೂಪಾಯಿ. ಈ ಹೂಡಿಕೆ, ಅದರ ಬಡ್ಡಿ, ಬಾಂಡ್ ಸೇರಿದಂತೆ ಎಲ್ಲಾ ಒಟ್ಟು ಸೇರಿ ನಿತೀಶ್ ಕುಮಾರ್ ಚರಾಸ್ಥಿ ಮೌಲ್ಯ 16 ಲಕ್ಷ ರೂಪಾಯಿ. ಇನ್ನು ನಿತೀಶ್ ಕುಮಾರ್ ಬಳಿ ಇರುವ ಮತ್ತೊಂದು ಮಹತ್ವದ ಆಸ್ತಿ ಎಂದರೆ ಮನೆ. ನಿತೀಶ್ ಸ್ಥಿರಾಸ್ತಿಯಲ್ಲಿ ದೆಹಲಿಯ ದ್ವಾರಕ ಬಳಿ ಖರೀದಿಸಿದ ಮನೆ. 2004ರಲ್ಲಿ ನಿತೀಶ್ ಕುಮಾರ್ 1000 ಚದರ ಅಡಿ ವಿಸ್ತೀರ್ಣದ ಮನೆ ಖರೀದಿಸಿದ್ದಾರೆ. 2023ರಲ್ಲಿ ಈ ಮನೆಯ ಮೌಲ್ಯ 1.48 ಕೋಟಿ ರೂಪಾಯಿ ಇದೀಗ ಕೊಂಚ ಏರಿಕೆಯಾಗಿದೆ. ಹೀಗಾಗಿ ನಿತೀಶ್ ಕುಮಾರ್ ಸ್ಥಿರಾಸ್ತಿ, ಚರಾಸ್ತಿ ಎಲ್ಲಾ ಒಟ್ಟು ಸೇರಿ ಮೌಲ್ಯ 1.65 ಕೋಟಿ ರೂಪಾಯಿ.

ನಿತೀಶ್ ಜೊತೆ ಇಂದು ಪ್ರಮಾಣವಚನ ಸ್ವೀಕರಿಸಿದು ಬಹುತೇಕ ಎಲ್ಲಾ ಸಚಿವರ ಆಸ್ತಿ ನಿತೀಶ್ ಕುಮಾರ್‌ಗಿಂತ ದುಪ್ಪಟ್ಟಿದೆ. ನಿತೀಶ್ 10ನೇ ಬಾರಿಗೆ ಬಿಹಾರದ ಮುಖ್ಯಮಂತ್ರಿಯಾಗಿರುವ ನಿತೀಶ್ ಕುಮಾರ್ ಸುದೀರ್ಘ ವರ್ಷಗಳಿಂದ ರಾಜಕೀಯ ಜೀವನದಲ್ಲಿದ್ದಾರೆ. ಕಳೆದ ನಾಲ್ಕು ದಶಕಗಳಿಂದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ನಿತೀಶ್ ಕುಮಾರ್ ಕ್ಲೀನ್ ಹ್ಯಾಂಡ್ ವ್ಯಕ್ತಿತ್ವ ಅನ್ನೋ ಅಭಿಪ್ರಾಯ ಬಿಹಾರ ಜನತೆಯಲ್ಲಿದೆ.

ನಿತೀಶ್ ಪ್ರಮಾಣವಚನ ಕಾರ್ಯಕ್ರಮದಲ್ಲಿ ಮೋದಿ, ಅಮಿತ್ ಶಾ

ಬಿಹಾರದ ಗಾಂಧಿ ಮೈದಾನದಲ್ಲಿ ನಿತೀಶ್ ಕುಮಾರ್ 10ನೇ ಬಾರಿಗೆ ಬಿಹಾರ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ನಿತೀಶ್ ಕುಮಾರ್ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಸೇರಿದಂತೆ ಹಲವು ಪ್ರಮುಖರು ಪಾಲ್ಗೊಂಡಿದ್ದರು. ನಿತೀಶ್ ಕುಮಾರ್ ಜೊತೆ ಸಾಮ್ರಾಟ್ ಚೌಧರಿ, ವಿಜಯ್ ಕುಮಾರ್ ಸಿನ್ಹ, ವಿಜಯ್ ಕುಮಾರ್ ಚೌಧರಿ, ಬಿಜೇಂದ್ರ ಪ್ರಸಾದ್ ಯಾದವ್, ಶ್ರಾವನ್ ಕುಮಾರ್, ಮಂಗಲ್ ಪಾಂಡೆ, ಡಾ.ದಿಲೀಪ್ ಜೈಸ್ವಾಲ್, ಅಶೋಕ್ ಚೌಧರಿ, ಲೇಶಿ ಸಿಂಗ್, ಮದನ್ ಶಹ್ನಿ, ನಿತಿನ್ ನವೀನ್, ರಾಮಕೃಪಾಲ್ ಯಾದವ್ ಸೇರಿ ಪ್ರಮುಖರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಆರ್‌ಜೆಡಿ ಮುಖ್ಯಸ್ಥ ತೇಜಸ್ವಿ ಯಾದವ್ ಸೇರಿದಂತೆ ಹಲವರು ಶುಭಕೋರಿದ್ದಾರೆ. ಇತ್ತ ಜನ ಸುರಾಜ್ ಪಕ್ಷದ ಸಂಸ್ಥಾಪಕ ನಾಯಕ ಪ್ರಶಾಂತ್ ಕಿಶೋರ್ ಮೌನ ಪ್ರತಿಭಟನೆ ಆರಂಭಿಸಿದ್ದಾರೆ.