ಇಂದು ಮೋದಿ ಇಂಡೋನೇಷ್ಯಾಕ್ಕೆ: ನಾಳೆ, ನಾಡಿದ್ದು ಜಿ20 ಶೃಂಗ ಆಹಾರ-ಇಂಧನ ಭದ್ರತೆ, ಡಿಜಿಟಲ್‌ ರೂಪಾಂತರ, ಆರೋಗ್ಯ ಕ್ಷೇತ್ರದ ಬಗ್ಗೆ ಚರ್ಚೆ ಉಕ್ರೇನ್‌ ಮೇಲಿನ ರಷ್ಯಾ ಯುದ್ಧದ ಬಗ್ಗೆಯೂ ಜಾಗತಿಕ ನಾಯಕರ ಸಭೆ: ರಷ್ಯಾ ಗೈರು ನ.16ರಂದು ಭಾರತಕ್ಕೆ ಜಿ20 ರಾಷ್ಟ್ರಗಳ ಚೇರ್ಮನ್‌ ಹುದ್ದೆ ಹಸ್ತಾಂತರ

ಪಿಟಿಐ ನವದೆಹಲಿ(ನ.14) : ಇಂಡೋನೇಷ್ಯಾದಲ್ಲಿ ನ.15 ಹಾಗೂ 16ರಂದು ನಡೆಯಲಿರುವ ಮಹತ್ವದ ಜಿ20 ರಾಷ್ಟ್ರಗಳ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಮೂರು ದಿನಗಳ ಪ್ರವಾಸಕ್ಕಾಗಿ ಸೋಮವಾರ ದ್ವೀಪಗಳ ರಾಷ್ಟ್ರಕ್ಕೆ ತೆರಳಲಿದ್ದಾರೆ.

ಅಮೆರಿಕ, ಚೀನಾ, ಬ್ರಿಟನ್‌ ಮುಂತಾದ ಪ್ರಮುಖ ದೇಶಗಳ ಮುಖ್ಯಸ್ಥರು ಪಾಲ್ಗೊಳ್ಳಲಿರುವ ಜಾಗತಿಕ ಶೃಂಗದಲ್ಲಿ ಪ್ರಧಾನಿ ಮೋದಿ ಅವರು ಆಹಾರ ಮತ್ತು ಇಂಧನ ಭದ್ರತೆ, ಡಿಜಿಟಲ್‌ ರೂಪಾಂತರ ಹಾಗೂ ಆರೋಗ್ಯ ಕ್ಷೇತ್ರಗಳಿಗೆ ಸಂಬಂಧಿಸಿದ ಮೂರು ಪ್ರಮುಖ ಸಭೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಇದೇ ವೇಳೆ ಜಾಗತಿಕ ನಾಯಕರು ಉಕ್ರೇನ್‌ ಮೇಲೆ ರಷ್ಯಾ ಸಾರಿರುವ ಯುದ್ಧದ ಕುರಿತು ಗಂಭೀರ ಚರ್ಚೆ ನಡೆಸಲಿದ್ದಾರೆ. ವಿಶೇಷವೆಂದರೆ, ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಶೃಂಗಕ್ಕೆ ಗೈರಾಗಲಿದ್ದಾರೆ.

G20 ಲೋಗೋ ವಿವಾದ, ರಾಜೀವ್ ಅಂದರೆ ಏನು ಗೊತ್ತಾ? ಕಾಂಗ್ರೆಸ್‌ಗೆ ಬಿಜೆಪಿ ತಿರುಗೇಟು?

ನ.16ಕ್ಕೆ ಭಾರತಕ್ಕೆ ಅಧಿಕಾರ ಹಸ್ತಾಂತರ:

ಇಂಡೋನೇಷ್ಯಾದ ಜಿ20 ಅಧ್ಯಕ್ಷೀಯ ಅವಧಿ ಈ ಶೃಂಗದೊಂದಿಗೆ ಪೂರ್ಣಗೊಳ್ಳಲಿದೆ. ಹೀಗಾಗಿ ಶೃಂಗದ ಕೊನೆಯ ದಿನ ನ.16ರಂದು ಮುಂದಿನ ಒಂದು ವರ್ಷದ ಕಾಲ ಭಾರತಕ್ಕೆ ಜಿ20 ರಾಷ್ಟ್ರಗಳ ಅಧ್ಯಕ್ಷೀಯ ಹುದ್ದೆ ಹಸ್ತಾಂತರವಾಗಲಿದೆ. ಡಿ.1ರಿಂದ ಭಾರತದ ಅಧ್ಯಕ್ಷೀಯ ಅವಧಿ ಆರಂಭವಾಗಲಿದೆ. ಮುಂದಿನ ಜಿ20 ಶೃಂಗ ಭಾರತದಲ್ಲಿ ನಡೆಯಲಿದೆ.

ರಿಷಿ ಸುನಾಕ್‌ಗೆ ಮೊದಲ ಶೃಂಗ:

ಬ್ರಿಟನ್‌ನ ನೂತನ ಪ್ರಧಾನಿ ರಿಷಿ ಸುನಾಕ್‌ ಅವರಿಗೆ ಇದು ಮೊದಲ ಜಿ20 ಶೃಂಗ ಸಭೆಯಾಗಿದೆ. ಪ್ರಧಾನಿ ಮೋದಿ, ಅಮೆರಿಕದ ಅಧ್ಯಕ್ಷ ಜೋ ಬೈಡೆನ್‌, ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಮುಂತಾದವರನ್ನು ಅವರು ಪರಿಚಯಿಸಿಕೊಳ್ಳಲಿದ್ದಾರೆ. ಕ್ಸಿ ಜಿನ್‌ಪಿಂಗ್‌ ದಾಖಲೆಯ 3ನೇ ಅವಧಿಗೆ ಚೀನಾದ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಪಾಲ್ಗೊಳ್ಳುತ್ತಿರುವ ಮೊದಲ ಜಾಗತಿಕ ಶೃಂಗವೂ ಇದಾಗಿದೆ. ಉಕ್ರೇನ್‌ ಜಿ20 ಒಕ್ಕೂಟದ ಸದಸ್ಯನಲ್ಲದಿದ್ದರೂ ಅಲ್ಲಿನ ಅಧ್ಯಕ್ಷ ವೋಲೋದಿಮಿರ್‌ ಜೆಲೆನ್‌ಸ್ಕಿ ಅವರಿಗೆ ಶೃಂಗಕ್ಕೆ ಇಂಡೋನೇಷ್ಯಾ ಆಹ್ವಾನ ನೀಡಿದೆ. ಅವರು ಆನ್‌ಲೈನ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ. G20 Presidency: ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯದ ಥೀಮ್‌ನಲ್ಲಿ ಭಾರತದ ಆಯೋಜನೆ