G20 ಲೋಗೋ ವಿವಾದ, ರಾಜೀವ್ ಅಂದರೆ ಏನು ಗೊತ್ತಾ? ಕಾಂಗ್ರೆಸ್‌ಗೆ ಬಿಜೆಪಿ ತಿರುಗೇಟು?
ಜಾಗತಿಕ ರಾಷ್ಟ್ರಗಳನ್ನು ಭಾರತದತ್ತ ಕೈಬೀಸಿ ಕರೆಯುತ್ತಿರುವ ಜಿ20 ಶೃಂಗಸಭೆ ವಿವಾದಕ್ಕೆ ಕಾರಣವಾಗಿದೆ. ಲೋಗದಲ್ಲಿ ಬಿಜೆಪಿ ಪಕ್ಷದ ಚಿಹ್ನೆ ತುರುಕಲಾಗಿದೆ. ಇದು ಆಘಾತಕಾರಿ ಎಂದು ಕಾಂಗ್ರೆಸ್ ಹೇಳಿದೆ. ಈ ಆರೋಪಕ್ಕೆ ಬಿಜೆಪಿ ರಾಜೀವ್ ಹಾಗೂ ಕಮಲ್ ನಾಥ್ ಹೆಸರು ಮುಂದಿಟ್ಟು ಖಡಕ್ ಉತ್ತರ ನೀಡಿದೆ
ನವದೆಹಲಿ(ನ.09): ಜಾಗತಿಕ ಮಟ್ಟದಲ್ಲಿ ಭಾರತ ಪ್ರಬಲ ರಾಷ್ಟ್ರಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಇದೀಗ ಜಿ20 ಶೃಂಗಸಭೆ ಆಯೋಜಿಸುವ ಮೂಲಕ ಮತ್ತೆ ವಿಶ್ವದ ಗಮನಸೆಳೆದಿದೆ. ಆದರೆ ಈ ಜಿ20 ಶೃಂಗ ಸಭೆ ಭಾರತದಲ್ಲಿ ವಿವಾದಕ್ಕೆ ಕಾರಣವಾಗಿದೆ. ನವೆಂಬರ್ 8 ರಂದು ಪ್ರಧಾನಿ ನರೇಂದ್ರ ಮೋದಿ ವರ್ಚುವಲ್ ಆಗಿ ಜಿ20 ಶೃಂಗಸಭೆಯ ಲೋಗೋ, ವೆಬ್‌ಸೈಟ್ ಅನಾವರಣ ಮಾಡಿದ್ದರು. ಇದರ ಬೆನ್ನಲ್ಲೇ ಕಾಂಗ್ರೆಸ್ ಈ ಲೋಗೋಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಜಿ20 ಲೋಗದಲ್ಲಿ ಕಮಲ ಬಳಸಲಾಗಿದೆ. ಇದು ಬಿಜೆಪಿ ಉದ್ದೇಶಪೂರ್ವಕವಾಗಿ ಪಕ್ಷದ ಚಿಹ್ನೆಯನ್ನು ಬಳಸಲಾಗಿದೆ. ನಿಜಕ್ಕೂ ಆಘಾತಕಾರಿ ಎಂದಿದೆ. ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರೂ ಕಾಂಗ್ರೆಸ್ ಪಕ್ಷದ ಚಿಹ್ನೆ ಬಳಸುವ ಪ್ರಸ್ತಾಪ ನಿರಾಕರಿಸಿದ್ದರು. ಆದರೆ ಬಿಜೆಪಿ ಎಲ್ಲಿ ಅವಕಾಶ ಸಿಗುತ್ತೋ ಅಲ್ಲೆಲ್ಲಾ ತಮ್ಮ ಪಕ್ಷದ ಪ್ರಚಾರ ಮಾಡುತ್ತದೆ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಹೇಳಿದ್ದಾರೆ. ಕಾಂಗ್ರೆಸ್ ಆರೋಪಕ್ಕೆ ಬಿಜೆಪಿ ತಕ್ಕ ತಿರುಗೇಟು ನೀಡಿದೆ. ರಾಜೀವ್ ಹೆಸರಿನ ಅರ್ಥ ಗೊತ್ತೆ? ಕಮಲ್ ನಾಥ್ ಹೆಸರಿನಿಂದ ಕಮಲ ತೆಗೆಯುತ್ತೀರಾ ಎಂದು ಪ್ರಶ್ನಿಸಿದೆ.
ಬಿಜೆಪಿ ವಕ್ತಾರ ಶೆಹಬಾಜ್ ಪೂನಾವಾಲ ಟ್ವೀಟ್ ಮೂಲಕ ಖಡಕ್ ತಿರುಗೇಟು ನೀಡಿದ್ದಾರೆ. ತಾವರ ನಮ್ಮ ರಾಷ್ಟ್ರೀಯ ಹೂವು. ಇದು ಮಹಾ ಲಕ್ಷ್ಮೀಯ ಆಸನವೂ ಆಗಿದೆ. ನೀವು ರಾಷ್ಟ್ರೀಯ ಹೂವನ್ನು ವಿರೋಧಿಸುತ್ತಿದ್ದೀರಾ? ಹಾಗಾದರೆ ಕಮಲ್ ನಾಥ್ ಹೆಸರಿನಿಂದ ಕಮಲ್ ತೆಗೆಯುತ್ತೀರಾ? ರಾಜೀವ್ ಹೆಸರಿನ ಅರ್ಥ ಕಮಲ. ಇಲ್ಲಿ ನಿಮಗೆ ಯಾವುದೇ ಅಜೆಂಡಾ ಇದ್ದಂತಿಲ್ಲ ಎಂದು ಪೂನಾವಾಲ ಟ್ವೀಟ್ ಮಾಡಿದ್ದಾರೆ.
G20 Presidency: ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯದ ಥೀಮ್‌ನಲ್ಲಿ ಭಾರತದ ಆಯೋಜನೆ
ಬಿಜೆಪಿ ನೀಡಿದ ತಿರುಗೇಟಿಗೆ ಕಾಂಗ್ರೆಸ್ ಕೊತ ಕೊತ ಕುದಿಯುತ್ತಿದೆ. ಬಿಜೆಪಿ ಪಕ್ಷದ ಚಿಹ್ನೆ ತುರುಕಿ ಇದೀಗ ಸಮರ್ಥನೆ ನೀಡುತ್ತಿದ್ದಾರೆ ಎಂದು ಆರೋಪಿಸಿದೆ. ಆದರೆ ಜಿ20 ಶೃಂಗಸಭೆಯ ಲೋಗೋ ಹಾಗೂ ವೆಬ್‌ಸೈಟ್‌ಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಲೋಗೋ ಹಾಗೂ ವೆಬ್‌ಸೈಟ್ ಅನಾವರಣ ಮಾಡಿದೆ ಪ್ರಧಾನಿ ನರೇಂದ್ರ ಮೋದಿ, ಇದು ಭರವಸೆಯ ಪ್ರತೀಕ. ಕಮಲ ಭಾರತದ ಸಂಸ್ಕೃತಿಯ ಭಾಗವಾಗಿದೆ. ಇಡೀ ವಿಶ್ವವನ್ನು ಒಗ್ಗೂಡಿಸುವ ಶಕ್ತಿ ಹೊಂದಿದೆ ಎಂದು ಮೋದಿ ಹೇಳಿದ್ದರು.
ಜಿ20 ಅಧ್ಯಕ್ಷತೆ ದೇಶಕ್ಕೆ ಐತಿಹಾಸಿಕ ಕ್ಷಣವಾಗಿದೆ. ವಸುಧೈವ ಕುಟುಂಬಕಂ ಎಂಬುದು ಭಾರತದ ಕರುಣೆಯ ಸಂಕೇತ. ಲಾಂಛನದಲ್ಲಿರುವ ಕಮಲ ವಿಶ್ವವನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಭಾರತದ ಸಾಂಸ್ಕೃತಿಕ ಪರಂಪರೆ ಹಾಗೂ ವಿಶ್ವಾಸವನ್ನು ಬಿಂಬಿಸುತ್ತದೆ ಎಂದು ಬಣ್ಣಿಸಿದರು. ಕೋವಿಡ್ ಸಾಂಕ್ರಾಮಿಕದ ನಂತರ ಕಂಡುಬಂದ ಪರಿಣಾಮಗಳನ್ನು ಇಡೀ ವಿಶ್ವದ ಎದುರಿಸುತ್ತಿದೆ. ಈ ಸಂದರ್ಭದಲ್ಲಿ ಜಿ20 ಲಾಂಛನ ಆಶಾವಾದದ ಪ್ರತೀಕ. ಎಂತಹುದೇ ಪರಿಸ್ಥಿತಿ ಇದ್ದರೂ ಕಮಲ ಅರಳುತ್ತದೆ ಎಂಬುದರ ಸೂಚಕ ಎಂದು ಹೇಳಿದರು. ಲಾಂಛನದಲ್ಲಿರುವ ಕಮಲದ ಏಳು ದಳಗಳು ವಿಶ್ವದ 7 ಖಂಡಗಳನ್ನು, ಸಂಗೀತ 7 ಸ್ವರಗಳನ್ನು ಪ್ರತಿನಿಧಿಸುತ್ತದೆ. ಜಿ20 ಎಂಬುದು ವಿಶ್ವವನ್ನು ಸೌಹಾರ್ದತೆಯೆಡೆಗೆ ಒಯ್ಯುತ್ತದೆ. ಈ ಲಾಂಛನ ಭಾರತದ ಪುರಾತನ ಸಂಸ್ಕೃತಿ, ನಂಬಿಕೆ, ಬುದ್ಧಿವಂತಿಕೆಯನ್ನು ಬಿಂಬಿಸುತ್ತದೆ ಎಂದು ಹೇಳಿದರು.
ಭಾರತಕ್ಕೆ ಜಿ20 ಶೃಂಗಸಭೆಯ ಅಧ್ಯಕ್ಷಗಾದಿ, ನ.8ಕ್ಕೆ ಪ್ರಧಾನಿ ಮೋದಿ ಲೋಗೋ, ವೆಬ್‌ಸೈಟ್ ಅನಾವರಣ!
ಜಿ20 ಎಂಬುದು ಅಂತಾರಾಷ್ಟ್ರೀಯ ಸಹಕಾರದ ಉದ್ದೇಶದಿಂದ ಸ್ಥಾಪಿಸಲಾಗಿರುವ ಪ್ರತಿಷ್ಠಿತ ವೇದಿಕೆ. ವಿಶ್ವದ ಜಿಡಿಪಿಯಲ್ಲಿ ಶೇ.85ರಷ್ಟುಹಾಗೂ ಜಾಗತಿಕ ವ್ಯಾಪಾರದಲ್ಲಿ ಶೇ.75ರಷ್ಟುಮತ್ತು ವಿಶ್ವ ಜನಸಂಖ್ಯೆಯಲ್ಲಿ ಮೂರನೇ ಎರಡರಷ್ಟುಪಾಲನ್ನು ಜಿ20 ಹೊಂದಿದೆ. ಸದ್ಯ ಇದರ ಅಧ್ಯಕ್ಷತೆ ಇಂಡೋನೇಷ್ಯಾ ಬಳಿ ಇದ್ದು, ಡಿ.1ರಂದು ಭಾರತದ ಅದರ ಹೊಣೆ ಹೊತ್ತುಕೊಳ್ಳಲಿದೆ.