Asianet Suvarna News Asianet Suvarna News

G20 Presidency: ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯದ ಥೀಮ್‌ನಲ್ಲಿ ಭಾರತದ ಆಯೋಜನೆ

ಜಿ20 ಎನ್ನುವುದು ದೇಶಗಳ ಸಮೂಹವಾಗಿದ್ದು, ಇದರ ಆರ್ಥಿಕ ಸಾಮರ್ಥ್ಯವು ವಿಶ್ವದ ಜಿಡಿಪಿಯ 85% ಅನ್ನು ಪ್ರತಿನಿಧಿಸುತ್ತದೆ. ಜಿ20 ವಿಶ್ವದ ವ್ಯಾಪಾರದ 75% ಅನ್ನು ಪ್ರತಿನಿಧಿಸುವ 20 ದೇಶಗಳ ಗುಂಪಾಗಿದೆ ಮತ್ತು ಭಾರತವು ಈಗ ಜಿ20 ಗುಂಪನ್ನು ಮುನ್ನಡೆಸಲಿದೆ ಎಂದು ತಮ್ಮ ಭಾಷಣದಲ್ಲಿ ಹೇಳಿದ್ದಾರೆ.

India G20 Presidency PM Narendra Modi Unveil The Logo Theme And Website san
Author
First Published Nov 8, 2022, 7:53 PM IST

ನವದೆಹಲಿ (ನ.8): ವಿಶ್ವ ಆರ್ಥಿಕತೆಯಲ್ಲಿ ತನ್ನದೇ ಆದ ಛಾಪು ಮೂಡಿಸುತ್ತಿರುವ ಭಾರತ ತಂಡ ಜಿ20 ರಾಷ್ಟ್ರಗಳ ಶೃಂಗಸಭೆಗೆ ಡಿಸೆಂಬರ್‌ 1 ರಂದು ಆತಿಥ್ಯ ವಹಿಸಿಕೊಳ್ಳಲಿದೆ. ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುವಲ್‌ ಆಗಿ, ಭಾರತದ ಅಧ್ಯಕ್ಷತೆಯೆ ಜಿ20 ಶೃಂಗಸಭೆಯ ಲಾಂಛನ, ಥೀಮ್‌ ಹಾಗೂ ವೆಬ್‌ಸೈಟ್‌ಅನ್ನು ಅನಾವರಣ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಜಿ-20 ಶೃಂಗದ ಲಾಂಛನ ಕೇವಲ ಸಂಕೇತವಾಗಿರದೆ ಸಂದೇಶವಾಗಿದೆ ಎಂದರು. ಇದು ನಮ್ಮ ರಕ್ತನಾಳಗಳಲ್ಲಿ ಇರುವ ಭಾವನೆ. ಇದು ನಮ್ಮ ಆಲೋಚನೆಯಲ್ಲಿ ಒಳಗೊಂಡಿರುವ ನಿರ್ಣಯವಾಗಿದೆ. ಪ್ರಧಾನಿ ತಮ್ಮ ಭಾಷಣದಲ್ಲಿ, ಡಿಸೆಂಬರ್ 1 ರಿಂದ ಭಾರತವು ಜಿ 20 ಅಧ್ಯಕ್ಷತೆ ವಹಿಸಲಿದೆ ಎಂದು ಹೇಳಿದರು. ಇದು ಭಾರತಕ್ಕೆ ಐತಿಹಾಸಿಕ ಸಂದರ್ಭವಾಗಿದೆ, ಆ ಕಾರಣದಿಂದ ಇಂದು ಈ ಶೃಂಗಸಭೆಯ ವೆಬ್‌ಸೈಟ್, ಥೀಮ್ ಮತ್ತು ಲೋಗೋವನ್ನು ಬಿಡುಗಡೆ ಮಾಡಲಾಗಿದೆ. ಈ ಸಂದರ್ಭದಲ್ಲಿ ನಾನು ಎಲ್ಲಾ ದೇಶವಾಸಿಗಳಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದರು.


ಭಾರತಕ್ಕೆ ಇದು ದೊಡ್ಡ ಅವಕಾಶ: ಜಿ20 ಎನ್ನುದು ದೇಶಗಳ ಸಮೂಹವಾಗಿದ್ದು, ಇದರ ಆರ್ಥಿಕ ಸಾಮರ್ಥ್ಯವು ವಿಶ್ವದ ಜಿಡಿಪಿಯ 85% ಅನ್ನು ಪ್ರತಿನಿಧಿಸುತ್ತದೆ. ಜಿ20 ವಿಶ್ವದ ವ್ಯಾಪಾರದ 75% ಅನ್ನು ಪ್ರತಿನಿಧಿಸುವ 20 ದೇಶಗಳ ಗುಂಪಾಗಿದೆ ಮತ್ತು ಭಾರತವು ಈಗ ಜಿ20 ಗುಂಪನ್ನು ಮುನ್ನಡೆಸಲಿದೆ. ಜಿ-20 ಲೋಗೋ-ಥೀಮ್ ಮತ್ತು ವೆಬ್‌ಸೈಟ್ ಅನಾವರಣ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಸ್ವಾತಂತ್ರ್ಯೋತ್ಸವದ ಅಮೃತ ಸಮಯದಲ್ಲಿ ದೇಶದ ಮುಂದೆ ಇಷ್ಟು ದೊಡ್ಡ ಅವಕಾಶ ಬಂದಿದೆ. ಇದು ಪ್ರತಿ ಭಾರತೀಯನಿಗೂ ಹೆಮ್ಮೆಯ ವಿಚಾರ ಎಂದು ಹೇಳಿದರು. ಇಂದು ಬಿಡುಗಡೆಯಾದ ಲೋಗೋ ರಚನೆಯಲ್ಲಿ ದೇಶದ ಜನರು ದೊಡ್ಡ ಪಾತ್ರವನ್ನು ವಹಿಸಿದ್ದಾರೆ. ನಾವು ದೇಶವಾಸಿಗಳ ಜನರ ಅಮೂಲ್ಯ ಸಲಹೆಗಳನ್ನು ಕೇಳಿದ್ದೇವೆ ಎಂದು ಅವರು ಹೇಳಿದರು. ಇಂದು ಆ ಸಲಹೆಗಳು ಅಂತಹ ದೊಡ್ಡ ಜಾಗತಿಕ ಘಟನೆಯ ಮುಖವಾಗುತ್ತಿವೆ ಎಂದಿದ್ದಾರೆ.

ಲಾಂಛನದ ಮೂಲಕ ಸಂದೇಶ ನೀಡಿದ್ದೇವೆ: ಈ ಲೋಗೋ ಮತ್ತು ಥೀಮ್ ಮೂಲಕ ನಾವು ಜಗತ್ತಿಗೆ ಸಂದೇಶವನ್ನು ನೀಡಿದ್ದೇವೆ ಎಂದು ಪ್ರಧಾನಿ ಹೇಳಿದರು. ಜಿ20 ಮೂಲಕ, ಯುದ್ಧಕ್ಕೆ ಬುದ್ಧ ನೀಡಿದ ಸಂದೇಶ ಮತ್ತು ಹಿಂಸಾಚಾರದ ಪ್ರತಿರೋಧಕ್ಕೆ ಮಹಾತ್ಮ ಗಾಂಧಿಯವರ ಪರಿಹಾರವನ್ನು ಹೇಳುತ್ತಿದೆ. ಆ ಮೂಲಕ ಭಾರತವು ತನ್ನ ಜಾಗತಿಕ ಖ್ಯಾತಿಯನ್ನು ನವೀಕರಿಸುತ್ತಿದೆ ಎಂದಿದ್ದಾರೆ.

ನಮ್ಮಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳಿವೆ: ಭಾರತದ ಆಯುರ್ವೇದ, ಯೋಗದ ಬಗ್ಗೆ ವಿಶ್ವದಲ್ಲಿ ಹೊಸ ಉತ್ಸಾಹ ಮತ್ತು ವಿಶ್ವಾಸವಿದೆ. ಅದರ ವಿಸ್ತರಣೆಗಾಗಿ ನಾವು ಜಾಗತಿಕ ವ್ಯವಸ್ಥೆಯನ್ನು ರಚಿಸಬಹುದು. ಭಾರತವು ವಿಶ್ವದ ಶ್ರೀಮಂತ ಮತ್ತು ಶ್ರೇಷ್ಠ ಪ್ರಜಾಪ್ರಭುತ್ವವಾಗಿದೆ. ಇದರೊಂದಿಗೆ ನಾವು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಹೊಂದಿದ್ದೇವೆ ಮತ್ತು ಪ್ರಜಾಪ್ರಭುತ್ವದ ತಾಯಿಯ ರೂಪದಲ್ಲಿ ಹೆಮ್ಮೆಯ ಸಂಪ್ರದಾಯವನ್ನು ಹೊಂದಿದ್ದೇವೆ ಎಂದು ಹೇಳಿದರು.

ಭಾರತಕ್ಕೆ ಜಿ20 ಶೃಂಗಸಭೆಯ ಅಧ್ಯಕ್ಷಗಾದಿ, ನ.8ಕ್ಕೆ ಪ್ರಧಾನಿ ಮೋದಿ ಲೋಗೋ, ವೆಬ್‌ಸೈಟ್ ಅನಾವರಣ!

'ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ:  ಮೋದಿ ಅವರು ತಮ್ಮ ಭಾಷಣದಲ್ಲಿ ಭಾರತವು ಅಭಿವೃದ್ಧಿ ಹೊಂದಿದ ದೇಶಗಳೊಂದಿಗೆ ನಿಕಟ ಸಂಬಂಧವನ್ನು ಹೊಂದಿರುವುದು ಮಾತ್ರವಲ್ಲದೆ ಅಭಿವೃದ್ಧಿಶೀಲ ರಾಷ್ಟ್ರಗಳ ದೃಷ್ಟಿಕೋನವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತದೆ ಎಂದು ಹೇಳಿದರು. ಜಗತ್ತಿನಲ್ಲಿ ಮೊದಲ ವಿಶ್ವ ಅಥವಾ ತೃತೀಯ ವಿಶ್ವ ಅಂತೆಲ್ಲಾ ಇರಬಾರದು. ಇದ್ದರೆ ಒಂದೇ ಜಗತ್ತು ಇರಬೇಕು ಎಂಬುದು ನಮ್ಮ ಪ್ರಯತ್ನವಾಗಿದೆ ಎಂದು ಹೇಳಿದರು. ಭಾರತವು ಒಂದು ಸೂರ್ಯ, ಒಂದು ಜಗತ್ತು, ಒಂದು ಗ್ರಿಡ್ ಎಂಬ ಮಂತ್ರದೊಂದಿಗೆ ವಿಶ್ವದಲ್ಲಿ ನವೀಕರಿಸಬಹುದಾದ ಇಂಧನ ಕ್ರಾಂತಿಗೆ ಕರೆ ನೀಡಿದೆ ಎಂದು ಪ್ರಧಾನಿ ಹೇಳಿದರು. ಅದೇ ಸಮಯದಲ್ಲಿ, ನಾವು ಒಂದು ಭೂಮಿ, ಒಂದು ಆರೋಗ್ಯ ಎಂಬ ಮಂತ್ರದೊಂದಿಗೆ ಜಾಗತಿಕ ಆರೋಗ್ಯವನ್ನು ಬಲಪಡಿಸುವ ಅಭಿಯಾನವನ್ನು ಪ್ರಾರಂಭಿಸಿದ್ದೇವೆ ಮತ್ತು ಈಗ ಜಿ20 ನಲ್ಲಿ ನಮ್ಮ ಮಂತ್ರ 'ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ' ಆಗಿರಲಿದೆ ಎಂದರು.

G 20ಯಲ್ಲಿ ನರೇಂದ್ರ ಮೋದಿ.. ಅಗ್ರ ನಾಯಕರ ಆಲಿಂಗನ

G20 ಅಂತರರಾಷ್ಟ್ರೀಯ ಆರ್ಥಿಕ ಸಹಕಾರದ ಪ್ರಮುಖ ವೇದಿಕೆಯಾಗಿದೆ, ಜಿ20 ಅಧ್ಯಕ್ಷತೆ ಅವಧಿಯಲ್ಲಿ, ಭಾರತವು ದೇಶದಾದ್ಯಂತ ವಿವಿಧ ಸ್ಥಳಗಳಲ್ಲಿ 32 ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದ ಸುಮಾರು 200 ಸಭೆಗಳನ್ನು ನಡೆಸುತ್ತದೆ. ಭಾರತವು ಡಿಸೆಂಬರ್ 1 ರಿಂದ ಜಿ20 ನ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಳ್ಳಲಿದೆ.

Follow Us:
Download App:
  • android
  • ios