ಜಿರಳೆ ಅಭಿಜೀತ್ ದೀಪ್ಕೆ ಪ್ರಧಾನಿ ನರೇಂದ್ರ ಮೋದಿಯವರನ್ನು ಹಾಡಿ ಹೊಗಳಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಅಚ್ಚರಿ ಮೂಡಿಸಿದೆ. ಆದರೆ ಇದರ ಹಿಂದಿನ ಉದ್ದೇಶ ಮೇಟಾವನ್ನು ಪರೀಕ್ಷಿಸುವುದು ಮತ್ತು ಸಂವಿಧಾನ ದಿನದ ರ್ಯಾಲಿಗೆ ಜನರನ್ನು ಆಕರ್ಷಿಸುವುದಾಗಿದೆ ಎಂದು ದೀಪ್ಕೆ ತಿಳಿಸಿದ್ದಾರೆ.

ದೆಹಲಿ: ಮೋದಿಯಂಥ ವ್ಯಕ್ತಿ ಇದ್ದರೆ ದೇಶದ ಕಲ್ಯಾಣ ಸಾಧ್ಯ. ಮೋದಿ ಇದ್ದರೆ ಎಲ್ಲವೂ ಸಾಧ್ಯ (ಮೋದಿ ಹೈ ತೋ ಮುಮ್​ಕಿನ್​ ಹೈ). "ಮೋದಿ ಜಿ ಅವರ ಪ್ರಕಾಶದ ಮುಂದೆ, ಸೂರ್ಯನ ಬೆಳಕು ಕೂಡ ಮಂದವಾಗುತ್ತದೆ. ಮೋದಿ ಜಿ ಅವರ ಭಾಷಣದ ಮುಂದೆ, ಆಕಾಶದ ಭಾಷಣವೂ ಮಂದವಾಗುತ್ತದೆ. ಮೋದಿ ಜಿ ಇದ್ದರೆ, ಇದು ಒಂದು ದೇಶ. ಮೋದಿ ಜಿ ಇದ್ದರೆ, ಇದು ಜಗತ್ತು. ಮೋದಿ ಇಲ್ಲದಿದ್ದರೆ, ಏನೂ ಇಲ್ಲ" ಎಂದೆಲ್ಲಾ ಹಾಡಿ ಹೊಗಳಿದವರು ಬೇರಾರೂ ಅಲ್ಲ, ಬದಲಿಗೆ ಭಾರತದ ಉದ್ಧಾರ ಮಾಡುವೆ ಎಂದು ಅಮೆರಿಕದಿಂದ ಓಡೋಡಿ ಬಂದು ಮೋದಿ ವಿರುದ್ಧ ಪ್ರತಿಭಟನೆ ಮಾಡಲು ಯುವ ಸಮುದಾಯವನ್ನು ಉತ್ತೇಜಿಸುವ, ಇದಕ್ಕಾಗಿಯೇ ಕಾಕ್ರೋಚ್​ ಜನತಾ ಪಕ್ಷವನ್ನು (CJP) ಕಟ್ಟಿರುವ ಜಿರಳೆ ಅಭಿಜೀತ್​ ದೀಪ್ಕೆ!

ಮತ್ತೊಂದು ವಿಡಿಯೋದಲ್ಲಿ ಮೋದಿ ತುಂಬಾ ಶ್ರೇಷ್ಠ. ಇಷ್ಟು ವರ್ಷಗಳ ಕಾಲ ಅವರು ನಮಗಾಗಿ ತುಂಬಾ ಶ್ರಮಿಸಿದ್ದಾರೆ. ಅವರು ಏನು ತ್ಯಾಗ ಮಾಡಿಲ್ಲ ಹೇಳಿ? ಅವರು ಎಲ್ಲವನ್ನೂ ತ್ಯಜಿಸಿದ್ದಾರೆ. ನಾವು ಈ ವ್ಯಕ್ತಿಗೆ ನಮಸ್ಕರಿಸುತ್ತೇವೆ. ಅತ್ಯುತ್ತಮ ಪ್ರಧಾನಿ ಎಂದರೆ ಅದು ನರೇಂದ್ರ ಮೋದಿ. 2022 ರಲ್ಲಿ ಕಾರ್ಗಿಲ್‌ಗೆ ಭೇಟಿ ನೀಡಿ ದೀಪಾವಳಿ ಆಚರಿಸಿಕೊಂಡಿರುವುದು ಸ್ಮರಣೀಯ ಎಂದೆಲ್ಲಾ ಹೊಗಳಿದ್ದಾರೆ ದೀಪ್ಕೆ.

ಏಕಾಏಕಿ ದೀಪ್ಕೆಗೆ ಇದೇನಾಯ್ತು?

ಪ್ರತಿ ನಿತ್ಯವೂ ಮೋದಿ ಜಪದಿಂದಲೇ ದಿನವನ್ನು ಆರಂಭಿಸುವ ಜಿರಳೆ ದೀಪ್ಕೆಗೆ ಏಕಾಏಕಿ ಇದೇನಾಯ್ತಪ್ಪಾ ಎಂದು ಅವರ ಅಭಿಮಾನಿಗಳು, ಪ್ರಧಾನಿ ನರೇಂದ್ರ ಮೋದಿ ವಿರೋಧಿಗಳು ಬೆಚ್ಚಿಬಿದ್ದಿರೋದಂತೂ ಗ್ಯಾರೆಂಟಿ. ಆದರೆ ದೀಪ್ಕೆ ಹೀಗೆಲ್ಲಾ ಬರೆದಿರುವ ಹಿಂದೆ ಇರುವ ಉದ್ದೇಶವೇ ಬೇರೆ. ಅಷ್ಟಕ್ಕೂ ಬಿಜೆಪಿ ಸರ್ಕಾರವನ್ನು ಪತನ ಮಾಡುವುದಕ್ಕಾಗಿಯೇ ಇಷ್ಟೆಲ್ಲಾ ಸಾಹಸ ಪಡುತ್ತಿರುವ ದೀಪ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೀಗೆಲ್ಲಾ ಕನಸಿನಲ್ಲಿಯಾದರೂ ಹೊಗಳುವುದು ಉಂಟೆ? ಆದರೆ ಹೊಗಳಿದ್ದಾರೆ ಎಂದರೆ, ಅದರ ಉದ್ದೇಶವೇ ಬೇರೆಯಾಗಿದೆ.

ನವೆಂಬರ್ 26 ರಂದು ಸಂವಿಧಾನ ದಿನವನ್ನು ಗುರುತಿಸಲು ನಾಗ್ಪುರದಲ್ಲಿ ರ್ಯಾಲಿಯನ್ನು ಘೋಷಿಸುವ ಮೊದಲು, ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಅತಿಯಾಗಿ ಹೊಗಳಿದ್ದಾರೆ ದೀಪ್ಕೆ. ಇದು ಮೇಟಾವನ್ನು ಪರೀಕ್ಷೆ ಮಾಡುವುದಕ್ಕಾಗಿ ಮಾಡಿದ್ದಂತೆ. ಅಮೆರಿಕದಲ್ಲಿ ಕೂತು ಭಾರತದ ವಿರುದ್ಧ, ಬಿಜೆಪಿ, ಪ್ರಧಾನಿ ವಿರುದ್ಧ ಬೈಯುತ್ತ ದಿನನಿತ್ಯ ವಿಡಿಯೋ ಮಾಡುವುದು ಹೆಚ್ಚಿನ ಜನರಿಗೆ ತಲುಪದ ಹಿಂದೆ ಮೆಟಾ ಕೈವಾಡ ಇದೆ ಎಂದಿರುವ ದೀಪ್ಕೆ, ಪ್ರಧಾನಿ ಅವರನ್ನು ಹೊಗಳಿದರೆ ಮೆಟಾ ಅದನ್ನು ಹೆಚ್ಚು ಜನರಿಗೆ ತಲುಪಿಸುತ್ತದೆ ಎನ್ನುವ ಕಾರಣಕ್ಕೆ ಸಂವಿಧಾನ ಉಳಿಸಿ ದಿನದಂದು ಎಲ್ಲರೂ ಬರುವಂತೆ ಹೇಳುವುದಕ್ಕಾಗಿ ಆರಂಭದಲ್ಲಿ ಮೋದಿ ಅವರನ್ನು ಹೊಗಳಿ ವಿಡಿಯೋ ಮಾಡಿದ್ದಾರೆ ಅಷ್ಟೇ!

ಕೊನೆಗೂ ಸತ್ಯ ನುಡಿದ್ರಲ್ಲ ಅಂತಿರೋ ಮೋದಿ ಫ್ಯಾನ್ಸ್​

ಆದ್ದರಿಂದ ಪ್ರಧಾನಿ ಅವರ ಫೋಟೋ ಹಾಕಿ ಅವರನ್ನು ಹಾಡಿ ಹೊಗಳಿದ್ದಾರೆ. ಸಂವಿಧಾನ ಉಳಿಸಿ ಎಂದು ಡಾ.ಬಿ.ಆರ್​. ಅಂಬೇಡ್ಕರ್​ ನೀಡಿರುವ ತತ್ವಗಳನ್ನು ಜನರಿಗೆ ತಲುಪುವಂತೆ ಮಾಡಲು ಮೋದಿ ಬಗ್ಗೆ ಬರೆದಿರುವುದಾಗಿಯೂ ಅವರು ಹೇಳಿಕೊಂಡಿದ್ದಾರೆ. ಹೀಗೆ ಬರೆದರೆ ತಮ್ಮ ಪೋಸ್ಟ್​ ಹೆಚ್ಚಿನ ಜನರಿಗೆ ಮೆಟಾ ತಲುಪಿಸುತ್ತದೆಯೇ ಎಂದು ಪರೀಕ್ಷೆಮಾಡಿರುವುದಾಗಿ ಹೇಳಿದ್ದಾರೆ. ಅವರು ಏನೇ ಹೇಳಿದ್ದರೂ, ಕೊನೆಗೂ ವ್ಯಂಗ್ಯಕ್ಕಾದರೂ ಪ್ರಧಾನಿ ನರೇಂದ್ರ ಮೋದಿ ಅವರ ವ್ಯಕ್ತಿತ್ವದ ಬಗ್ಗೆ ನಿಜವನ್ನೇ ಬಾಯಿ ಬಿಟ್ಟಿದ್ದೀರಲ್ಲ. ಕೊನೆಗೂ ನಿಮ್ಮ ಬಾಯಿಯಿಂದ ಇದನ್ನು ಕೇಳಿ ಖುಷಿಯಾಯಿತು ಎಂದು ಮೋದಿ ಫ್ಯಾನ್ಸ್​ ಹೇಳುತ್ತಿದ್ದಾರೆ.