ಟಿಬೇಟ್ ಧರ್ಮಗುರು ದಲೈ ಲಾಮಾಗೆ ಕೇಂದ್ರ ಸರ್ಕಾರ ದೆಹಲಿಯಲ್ಲಿ ಹೊಸ ಬಂಗಲೆ ನೀಡಿದೆ. ದೆಹಲಿ ನಡೆ ಚೀನಾ ಕಣ್ಣು ಕೆಂಪಾಗಿಸಿದೆ. ಸದ್ಯ ದಲೈ ಲಾಮಾ ಹೊಸ ವಿಳಾಸ ಯಾವುದು? ಎಷ್ಟು ವರ್ಷಗಳಿಗೆ ಬಂಗಲೆ?
ದೆಹಲಿ (ನ.25) ಭಾರತ ಹಾಗೂ ಟಿಬೇಟ್ ನಡುವೆ ಉತ್ತಮ ಬಾಂಧವ್ಯವಿದೆ. ಟಿಬೇಟಿಯನ್ ನಿರಾಶ್ರಿತರಿಗೆ ಭಾರತ ಆಶ್ರಯ ನೀಡಿದೆ. ಟಿಬೇಟ್ ಜೊತೆ ಭಾರತ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಟಿಬೇಟ್ ಜೊತೆ ಭಾರತದ ನಂಟು ಚೀನಾ ಕಣ್ಣು ಕೆಂಪಾಗಿಸುತ್ತಲೇ ಬಂದಿದೆ. ಇದೀಗ ಕೇಂದ್ರ ಸರ್ಕಾರ ಟಿಬೇಟನ್ ಧರ್ಮಗುರು ದಲೈ ಲಾಮಾಗೆ ದೆಹಲಿಯಲ್ಲಿ ಬಂಗಲೆ ನೀಡಿದೆ. ದೆಹಲಿಯ ಲೂಟಿಯೆನ್ಸ್ ಪ್ರದೇಶದಲ್ಲಿ ಈ ಬಂಗಲೆ ನೀಡಲಾಗಿದೆ. ವಿದೇಶಾಂಗ ಸಚಿವಾಲಯದ (MEA) ಮನವಿಯ ಮೇರೆಗೆ ಮೋದಿ ಸರ್ಕಾರ ಈ ಮಹತ್ವದ ಕ್ರಮ ಕೈಗೊಂಡಿದೆ.
ದಲೈ ಲಾಮಾ ಅವರ ಕಚೇರಿ ನಿರ್ವಹಿಸುವ ಹಾಗೂ ಅವರ ಆಧ್ಯಾತ್ಮಿಕ ಮತ್ತು ಮಾನವೀಯ ಚಟುವಟಿಕೆಗಳ ಉಸ್ತುವಾರಿ ನೋಡಿಕೊಳ್ಳುವ ಗಾಡೆನ್ ಫೋಡ್ರಾಂಗ್ ಟ್ರಸ್ಟ್ (Gaden Phodrang Trust) ಹೆಸರಿಗೆ ಈ ವಸತಿ ಸೌಲಭ್ಯವನ್ನು ನೀಡಲಾಗಿದೆ. ಪಂಡಿತ್ ರವಿಶಂಕರ್ ಶುಕ್ಲಾ ಲೇನ್ನಲ್ಲಿ ಈ ಬಂಗಲೆ ಇದೆ.
ಮೂರು ವರ್ಷಗಳ ಅವಧಿಗೆ ಬಂಗಲೆ
ಸರ್ಕಾರಿ ನಿಯಮದ ಅನುಸಾರ ಮೂರು ವರ್ಷಗಳ ಅವಧಿಗೆ ದಲೈ ಲಾಮಾಗೆ ಈ ಬಂಗಲೆ ಹಂಚಿಕೆ ಮಾಡಲಾಗಿದೆ. ಮೂರು ವರ್ಷಗಳ ಬಳಿಕ ಅವಧಿ ವಿಸ್ತರಿಸುವ ಅಥವಾ ಅಂತ್ಯಗೊಳಿಸು ಅವಕಾಶಗಳಿವೆ. ಈ ಬಂಗಲೆಯೊಂದಿಗೆ ಪ್ರಮುಖ ಸರ್ಕಾರಿ ಕಚೇರಿಗಳು ಮತ್ತು ಅಧಿಕೃತ ನಿವಾಸಗಳನ್ನು ಹೊಂದಿರುವ ಲೂಟಿಯೆನ್ಸ್ ದೆಹಲಿ ವ್ಯಾಪ್ತಿಗೆ ದಲೈ ಲಾಮಾ ಅವರ ಸಾಂಸ್ಥಿಕ ಕಚೇರಿ ಎಂಟ್ರಿಕೊಟ್ಟಿದೆ.
ಟಿಬೆಟಿಯನ್ ಸಂಸತ್ತಿನಿಂದ ಭಾರತ ಸರ್ಕಾರಕ್ಕೆ ಕೃತಜ್ಞತೆ
14ನೇ ದಲೈ ಲಾಮಾ ಮತ್ತು ಅವರ ವೈಯಕ್ತಿಕ ಕಚೇರಿಗೆ ಲೂಟಿಯೆನ್ಸ್ ದೆಹಲಿಯಲ್ಲಿ ಟೈಪ್-7' (Type 7) ಬಂಗಲೆ ನೀಡಿರುವುದು ಟಿಬೇಟಿಯನ್ನರ ಸಂತಸಕ್ಕೆ ಕಾರಣವಾಗಿದೆ. ಇದೇ ವೇಳೆ ಗಡಿಪಾರು ಟಿಬೆಟಿಯನ್ ಸಂಸತ್ತಿನ ಸದಸ್ಯರು ಭಾರತ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ. ಟಿಬೆಟಿಯನ್ ಆಧ್ಯಾತ್ಮಿಕ ಗುರು ಮತ್ತು ಟಿಬೆಟಿಯನ್ ಸಮುದಾಯದ ಪರವಾಗಿ ಇದು ಮಹತ್ವದ ಬೆಂಬಲದ ನಡೆ ಎಂದು ಶ್ಲಾಘಿಸಿದ್ದಾರೆ.
ಟಿಬೆಟಿಯನ್ ಸಂಸತ್ ಸ್ಪೀಕರ್ ಡೋಲ್ಮಾ ತ್ಸೆರಿಂಗ್ (Dolma Tsering) ಈ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಇದು ಅತ್ಯಂತ ಸಂತೋಷದ ಸುದ್ದಿ. ಟಿಬೆಟಿಯನ್ ಸಂಸತ್ತಿನ ಪರವಾಗಿ ಭಾರತ ಸರ್ಕಾರಕ್ಕೆ ಧನ್ಯವಾದ ಸಲ್ಲಿಸುತ್ತೇವೆ. ಈ ವಸತಿ ವ್ಯವಸ್ಥೆಯಿಂದ ದಲೈ ಲಾಮಾ ಅವರು ರಾಷ್ಟ್ರ ರಾಜಧಾನಿಗೆ ಭೇಟಿ ನೀಡುವುದು ಹೆಚ್ಚು ಅನುಕೂಲಕರವಾಗಲಿದೆ ಮತ್ತು ದೆಹಲಿಯಲ್ಲಿ ತಂಗುವಾಗ ಹೆಚ್ಚಿನ ಸೌಕರ್ಯ ದೊರೆಯಲಿದೆ" ಎಂದು ಹೇಳಿದ್ದಾರೆ.
















