1984 - 85ರಲ್ಲೇ ಆರ್‌ಎಸ್‌ಎಸ್‌ನ ಸಭೆಯೊಂದರಲ್ಲಿ ಮಾತನಾಡುವಾಗ ಮೊದಲ ಬಾರಿಗೆ ನರೇಂದ್ರ ಮೋದಿ ಜಮ್ಮು ಕಾಶ್ಮೀರದಲ್ಲಿ ಅಸ್ತಿತ್ವದಲ್ಲಿದ್ದ ಸಂವಿಧಾನದ 370ನೇ ವಿಧಿ ಮತ್ತು 35ಎ ವಿಧಿಗಳಿಂದ ಆಗುತ್ತಿರುವ ಪರಿಣಾಮಗಳ ಕುರಿತು ಮಾತನಾಡಿದ್ದರು.

ನವದೆಹಲಿ (ಡಿಸೆಂಬರ್ 12, 2023): ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ ಸಂವಿಧಾನದ 370ನೇ ರದ್ದು ನಿರ್ಧಾರ ಸರಿ ಎಂದು ಸುಪ್ರೀಂಕೋರ್ಟ್‌ ನೀಡಿರುವ ಆದೇಶ, ಈ ವಿಷಯದಲ್ಲಿ ಮೂರೂವರೆ ದಶಕಗಳ ನಾನಾ ರೀತಿಯ ಹೋರಾಟ ನಡೆಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಹೋರಾಟಕ್ಕೆ ಸಿಕ್ಕ ಬಹುದೊಡ್ಡ ಜಯ ಎಂದೇ ಬಣ್ಣಿಸಲಾಗಿದೆ.
ನರೇಂದ್ರ ಮೋದಿ ಪ್ರಧಾನಿಯಾದ ಮೇಲೆ 370ನೇ ವಿಧಿ ರದ್ದುಗೊಳಿಸುವ ನಿರ್ಧಾರ ಕೈಗೊಂಡಿದ್ದು ಹೌದಾದರೂ, ಅಂಥದ್ದೊಂದು ಹೋರಾಟಕ್ಕೆ ಅವರು ಮೂರೂವರೆ ದಶಕಗಳ ಹಿಂದೆಯೇ ಏಕತಾ ಯಾತ್ರೆಯ ಮೂಲಕ ಮುನ್ನುಡಿ ಬರೆದಿದ್ದರು.

ಮೊದಲ ಹೆಜ್ಜೆ:
1984 - 85ರಲ್ಲೇ ಆರ್‌ಎಸ್‌ಎಸ್‌ನ ಸಭೆಯೊಂದರಲ್ಲಿ ಮಾತನಾಡುವಾಗ ಮೊದಲ ಬಾರಿಗೆ ನರೇಂದ್ರ ಮೋದಿ ಜಮ್ಮು ಕಾಶ್ಮೀರದಲ್ಲಿ ಅಸ್ತಿತ್ವದಲ್ಲಿದ್ದ ಸಂವಿಧಾನದ 370ನೇ ವಿಧಿ ಮತ್ತು 35ಎ ವಿಧಿಗಳಿಂದ ಆಗುತ್ತಿರುವ ಪರಿಣಾಮಗಳ ಕುರಿತು ಮಾತನಾಡಿದ್ದರು. 1992ರಲ್ಲಿ ಕನ್ಯಾಕುಮಾರಿಯಿಂದ ಶ್ರೀನಗರದವರೆಗೆ ಕಾಶ್ಮೀರ ವಿಮೋಚನೆಗಾಗಿ 45 ದಿನಗಳ ಏಕತಾ ಯಾತ್ರೆ ಮಾಡಿ ಉಗ್ರರ ಅಡ್ಡಿಯ ನಡುವೆಯೂ ಶ್ರೀನಗರದ ಲಾಲ್‌ಚೌಕ್‌ನಲ್ಲಿ ಜನವರಿ 24ರಂದು ತ್ರಿವರ್ಣ ಧ್ವಜ ಹಾರಿಸಿ ಉಗ್ರರಿಗೆ ತಕ್ಕ ಪ್ರತ್ಯುತ್ತರ ನೀಡಿದ್ದರು. ಅಲ್ಲದೆ ಅದೇ ವರ್ಷ ಬಿಜೆಪಿಯಿಂದ ಕಾಶ್ಮೀರದ ಅಧ್ಯಯನ ಸಮಿತಿ ಸದಸ್ಯರಾಗಿ 4 ದಿನಗಳ ಕಾಲ ಕಾಶ್ಮೀರ ಪ್ರವಾಸ ಮಾಡಿ ಅಲ್ಲಿನ ವಸ್ತುಸ್ಥಿತಿಯನ್ನು ಅರಿತಿದ್ದರು.

ಇದನ್ನು ಓದಿ: Article 370: ಸುಪ್ರೀಂಕೋರ್ಟ್‌ ತೀರ್ಪಿನ ಬಗ್ಗೆ ಮೋದಿ, ಅಮಿತ್‌ ಶಾ, ಕಾಶ್ಮೀರಿ ನಾಯಕರು ಹೇಳಿದ್ದೀಗೆ..

1999ರಲ್ಲಿ ನಡೆದ ಕಾರ್ಗಿಲ್‌ ಯುದ್ಧದಲ್ಲಿ ಸ್ವತಃ ತೆರಳಿ ಸೈನಿಕರಿಗೆ ನೆರವು ನೀಡಿದ್ದರು. ಗುಜರಾತ್‌ ಮುಖ್ಯಮಂತ್ರಿಯಾದಾಗಲೂ ಹಲವಾರು ಬಾರಿ ಕಾಶ್ಮೀರಕ್ಕೆ ತೆರಳಿ ಅಲ್ಲಿನ ವಿವಿಧ ಸಮುದಾಯದೊಂದಿಗೆ ಸಮಾಲೋಚಿಸಿ ಸ್ಫೂರ್ತಿ ತುಂಬಿದ್ದರು. 2014ರ ಲೋಕಸಭಾ ಚುನಾವಣೆ ವೇಳೆ ಪ್ರಚಾರ ಮಾಡಲು ಕಾಶ್ಮೀರಕ್ಕೆ ತೆರಳಿದಾಗ ವಿಧಿ 35ಎ ದಿಂದ ಮಹಿಳೆಯರಿಗೆ ಆಗುತ್ತಿರುವ ಅನ್ಯಾಯದ ಕುರಿತು ಬೆಳಕು ಚೆಲ್ಲಿದ್ದರು. 

ಪ್ರಧಾನಿಯಾದ ನಂತರ ಸೈನಿಕರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿ ಉಗ್ರವಾದವನ್ನು ನಿಗ್ರಹಿಸುವ ಜೊತೆಗೆ ಅಲ್ಲಿನ ಶ್ರೇಯೋಭಿವೃದ್ಧಿಗೆ ಪ್ರಮುಖ ತೊಡಕಾಗಿದ್ದ ಆರ್ಟಿಕಲ್‌ 370 ಮತ್ತು 35ಎಗಳನ್ನು 2019ರಲ್ಲಿ ಸಂಸತ್ತಿನಲ್ಲಿ ರದ್ದು ಮಾಡಿದರು. ಈಗ ಇದಕ್ಕೆ ನ್ಯಾಯಾಲಯದ ಅನುಮೋದನೆಯೂ ದೊರೆಯುವುದರೊಂದಿಗೆ ಮೂರೂವರೆ ದಶಕಗಳ ಹೋರಾಟಕ್ಕೆ ದೊಡ್ಡ ಜಯ ಸಿಕ್ಕಂತಾಗಿದೆ.

ಕಾಶ್ಮೀರಕ್ಕೆ ವಿಶೇಷ ಸ್ಥಾನ ರದ್ದು ನಿರ್ಧಾರ ಎತ್ತಿ ಹಿಡಿದ ಸುಪ್ರೀಂಕೋರ್ಟ್‌: ಮೋದಿ ಸರ್ಕಾರಕ್ಕೆ ಜಯ

ಪ್ರಕರಣ ಸಾಗಿಬಂದ ಹಾದಿ

  • 2018 ಡಿ.20: ಜಮ್ಮು ಮತ್ತು ಕಾಶ್ಮೀರದ ಮೇಲೆ ರಾಷ್ಟ್ರಪತಿ ಆಳ್ವಿಕೆ ಜಾರಿ. 2019ರ ಜು.3ರಂದು ಆದೇಶ ವಿಸ್ತರಣೆ.
  • 2019 ಆ.5: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನ ನೀಡಿದ್ದ ಸಂವಿಧಾನದ 370ನೇ ವಿಧಿ ರದ್ದುಗೊಳಿಸಿದ ಕೇಂದ್ರ.
  • 2019 ಆ.6: ಕೇಂದ್ರ ಸರ್ಕಾರದ ನಿರ್ಧಾರ ಪ್ರಶ್ನಿಸಿ ವಕೀಲ ಎಂ.ಎಲ್‌. ಶರ್ಮಾ ಅವರಿಗೆ ಸುಪ್ರೀಂಕೋರ್ಟ್‌ಗೆ ಅರ್ಜಿ.
  • 2019 ಆ.28: 370ನೇ ವಿಧಿ ರದ್ದು ಕುರಿತ ಅರ್ಜಿಗಳ ವಿಚಾರಣೆ 5 ಸದಸ್ಯರ ಸಾಂವಿಧಾನಿಕ ಪೀಠಕ್ಕೆ ವರ್ಗಾವಣೆ.
  • 2023 ಆ.2: ಕೇಂದ್ರ ಸರ್ಕಾರದ ನಿರ್ಧಾರ ಪ್ರಶ್ನಿಸಿದ್ದ ಅರ್ಜಿಗಳ ಕುರಿತು ದೈನಂದಿನ ವಿಚಾರಣೆ ಆರಂಭಿಸಿದ ಕೋರ್ಟ್‌.
  • 2023 ಸೆ.5: ವಿಚಾರಣೆ ಪೂರ್ಣಗೊಳಿಸಿ ತೀರ್ಪು ಕಾದಿರಿಸಿದ ಸಿಜೆಐ ಚಂದ್ರಚೂಡನ್‌ ನೇತೃತ್ವದ ಸಾಂವಿಧಾನಿಕ ಪೀಠ.
  • 2023 ಡಿ.11: ಸಂವಿಧಾನದ 370ನೇ ವಿಧಿ ರದ್ದುಗೊಳಿಸಿದ ರಾಷ್ಟ್ರಪತಿಗಳ ಆದೇಶ ಸೂಕ್ತ ಎಂದು ಕೋರ್ಟ್‌ ತೀರ್ಪು

ಸೆಪ್ಟೆಂಬರ್ 2024ರೊಳಗೆ ಜಮ್ಮು ಕಾಶ್ಮೀರದಲ್ಲಿ ಎಲೆಕ್ಷನ್‌ ನಡೆಸಿ: ಚುನಾವಣಾ ಆಯೋಗಕ್ಕೆ ಸುಪ್ರೀಂಕೋರ್ಟ್ ಡೆಡ್‌ಲೈನ್‌