ಸೆಪ್ಟೆಂಬರ್ 2024ರೊಳಗೆ ಜಮ್ಮು ಕಾಶ್ಮೀರದಲ್ಲಿ ಎಲೆಕ್ಷನ್ ನಡೆಸಿ: ಚುನಾವಣಾ ಆಯೋಗಕ್ಕೆ ಸುಪ್ರೀಂಕೋರ್ಟ್ ಡೆಡ್‌ಲೈನ್
370ನೇ ವಿಧಿಯನ್ನು ರದ್ದುಗೊಳಿಸುವ ಮೋದಿ ಸರ್ಕಾರದ ನಿರ್ಧಾರವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ. ಹಾಗೂ, ಜಮ್ಮು ಮತ್ತು ಕಾಶ್ಮೀರದ ರಾಜ್ಯತ್ವವನ್ನು ಶೀಘ್ರ ಮರುಸ್ಥಾಪಿಸಲು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದೂ ಸಾಂವಿಧಾನಿಕ ಪೀಠ ಹೇಳಿದೆ.
ನವದೆಹಲಿ (ಡಿಸೆಂಬರ್ 11, 2023): ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದು ನಿರ್ಧಾರವನ್ನು ಸುಪ್ರೀಂಕೋರ್ಟ್ ಸಾಂವಿಧಾನಿಕ ಪೀಠ ಎತ್ತಿ ಹಿಡಿದಿದೆ. ಈ ವೇಳೆ ಮುಂದಿನ ವರ್ಷ ಸೆಪ್ಟೆಂಬರ್ 30 ರೊಳಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆ ನಡೆಸುವಂತೆಯೂ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿದೆ.
370ನೇ ವಿಧಿಯನ್ನು ರದ್ದುಗೊಳಿಸುವ ಮೋದಿ ಸರ್ಕಾರದ ನಿರ್ಧಾರವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ. ಹಾಗೂ, ಜಮ್ಮು ಮತ್ತು ಕಾಶ್ಮೀರದ ರಾಜ್ಯತ್ವವನ್ನು ಶೀಘ್ರ ಮರುಸ್ಥಾಪಿಸಲು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದೂ ಸಾಂವಿಧಾನಿಕ ಪೀಠ ಗಡುವು ನೀಡಿದೆ.
ಇದನ್ನು ಓದಿ: ಕಾಶ್ಮೀರಕ್ಕೆ ವಿಶೇಷ ಸ್ಥಾನ ರದ್ದು ನಿರ್ಧಾರ ಎತ್ತಿ ಹಿಡಿದ ಸುಪ್ರೀಂಕೋರ್ಟ್: ಮೋದಿ ಸರ್ಕಾರಕ್ಕೆ ಜಯ
2024 ರ ಸೆಪ್ಟೆಂಬರ್ 30 ರೊಳಗೆ ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆಗೆ ಚುನಾವಣೆಗಳನ್ನು ನಡೆಸಲು ಕೇಂದ್ರ ಚುನಾವಣಾ ಆಯೋಗವು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ನಾವು ನಿರ್ದೇಶಿಸುತ್ತೇವೆ ಎಂದು ಆರ್ಟಿಕಲ್ 370 ರದ್ದು ತೀರ್ಪು ನೀಡುವ ವೇಳೆ ಸಿಜೆಐ ಹೇಳಿದ್ದಾರೆ. ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಐವರು ನ್ಯಾಯಾಧೀಶರ ಪೀಠವು ಆಗಸ್ಟ್ 2019 ರಲ್ಲಿ ಲಡಾಖ್ ಕೇಂದ್ರಾಡಳಿತ ಪ್ರದೇಶವನ್ನು ರಚಿಸುವ ನಿರ್ಧಾರದ ಸಿಂಧುತ್ವವನ್ನು ಸಹ ಎತ್ತಿಹಿಡಿದಿದೆ.
ಇಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ಹಿನ್ನೆಲೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಕಾಶ್ಮೀರ ಕಣಿವೆಯಲ್ಲಿ ಭದ್ರತೆಯನ್ನು ಬಲಪಡಿಸಲಾಗಿತ್ತು. ಇನ್ನು, ಸುಪ್ರೀಂ ಕೋರ್ಟ್ ತೀರ್ಪನ್ನು ಗೌರವಿಸಬೇಕು ಎಂದು ಬಿಜೆಪಿ ಸಾಂವಿಧಾನಿಕ ಪೀಠದ ತೀರ್ಪನ್ನು ಸ್ವಾಗತಿಸಿ ಪ್ರತಿಕ್ರಿಯೆ ನೀಡಿದೆ.
News Hour: ಸೋಮವಾರ ಸುಪ್ರೀಂನಲ್ಲಿ ಆರ್ಟಿಕಲ್ 370 ಭವಿಷ್ಯ!
ಕೇಂದ್ರವು ತನ್ನ ನಿರ್ಧಾರಗಳನ್ನು ಕಾನೂನು ಚೌಕಟ್ಟಿನೊಳಗೆ ತೆಗೆದುಕೊಳ್ಳಲಾಗಿದೆ ಎಂದೇ ಬಿಜೆಪಿ ವಾದಿಸಿತ್ತು. ಆರ್ಟಿಕಲ್ 370 ರದ್ದು ಬಳಿಕ ಜಮ್ಮು ಮತ್ತು ಕಾಶ್ಮೀರ ಮುಖ್ಯವಾಹಿನಿಗೆ ಬಂದಿದ್ದು, ಭಯೋತ್ಪಾದನೆಯನ್ನು ಕಡಿಮೆ ಮಾಡಿದೆ ಎಂದೂ ಸಮರ್ಥಿಸಿಕೊಂಡಿದೆ. ಕಳೆದ ನಾಲ್ಕು ವರ್ಷಗಳಲ್ಲಿ, ಇದು ಕೇಂದ್ರಾಡಳಿತ ಪ್ರದೇಶವನ್ನು ವೇಗವಾಗಿ ಅಭಿವೃದ್ಧಿಯತ್ತ ಸಾಗಲು ಸಹಾಯ ಮಾಡಿದೆ ಎಂದೂ ಕೇಂದ್ರ ಸರ್ಕಾರ ಹೇಳಿಕೊಂಡಿತ್ತು.
ಜಮ್ಮು ಮತ್ತು ಕಾಶ್ಮೀರ ಸರ್ಕಾರ ವಿಭಜನೆಯ ಬಳಿಕ ಆರ್ಟಿಕಲ್ 370 ಅನ್ನು ರದ್ದುಗೊಳಿಸಲಾಯಿತು. PDP-BJP ಮೈತ್ರಿ ಸರ್ಕಾರ ಪತನಗೊಂಡ ಒಂದು ವರ್ಷದ ನಂತರ ಅಂದರೆ ಆಗಸ್ಟ್ 2019 ರಲ್ಲಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.
ಇದನ್ನು ಓದಿ: ಕಾಶ್ಮೀರದ ವಿಶೇಷ ಸ್ಥಾನ ಹಿಂಪಡೆತ: ಇಂದು ಸುಪ್ರೀಂಕೋರ್ಟ್‌ನಲ್ಲಿ ಹಣೆಬರಹ ನಿರ್ಧಾರ