ಕಾಶ್ಮೀರಕ್ಕೆ ವಿಶೇಷ ಸ್ಥಾನ ರದ್ದು ನಿರ್ಧಾರ ಎತ್ತಿ ಹಿಡಿದ ಸುಪ್ರೀಂಕೋರ್ಟ್: ಮೋದಿ ಸರ್ಕಾರಕ್ಕೆ ಜಯ
ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ವಿಧಿ ರದ್ದುಗೊಳಿಸಿದ ಕೇಂದ್ರ ಸರ್ಕಾರದ ನಿರ್ಧಾರವನ್ನು ಸುಪ್ರೀಂಕೋರ್ಟ್ ಪಂಚ ಸದಸ್ಯ ಸಾಂವಿಧಾನಿಕ ಪೀಠ ಎತ್ತಿಹಿಡಿದಿದೆ.
ನವದೆಹಲಿ (ಡಿಸೆಂಬರ್ 11, 2023): ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ವಿಧಿ ರದ್ದುಗೊಳಿಸಿದ ಕೇಂದ್ರ ಸರ್ಕಾರದ ನಿರ್ಧಾರವನ್ನು ಸುಪ್ರೀಂಕೋರ್ಟ್ ಪಂಚ ಸದಸ್ಯ ಸಾಂವಿಧಾನಿಕ ಪೀಠ ಎತ್ತಿಹಿಡಿದಿದೆ. ಈ ಸಂಬಂಧ ಕೇಂದ್ರದ ನಿರ್ಧಾರದ ಪ್ರಶ್ನಿಸಿದ್ದ ಅರ್ಜಿಗಳ ಕುರಿತು ಸುಪ್ರೀಂಕೋರ್ಟ್ ಸೋಮವಾರ ಮಹತ್ವದ ತೀರ್ಪು ನೀಡಿದ್ದು, 370ನೇ ವಿಧಿ ತಾತ್ಕಾಲಿಕ ನಿಬಂಧನೆಯಾಗಿತ್ತು ಎಂದೂ ಮಹತ್ವದ ಅಭಿಪ್ರಾಯ ನೀಡಿದೆ.
370ನೇ ವಿಧಿಯು ಜಮ್ಮು ಮತ್ತು ಕಾಶ್ಮೀರವನ್ನು ಒಕ್ಕೂಟದೊಂದಿಗೆ ಸಾಂವಿಧಾನಿಕ ಏಕೀಕರಣಕ್ಕಾಗಿ ಉದ್ದೇಶಿಸಲಾಗಿತ್ತು ಮತ್ತು ಅದು ವಿಭಜನೆಗಾಗಿ ಅಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ ಮತ್ತು 370ನೇ ವಿಧಿ ಅಸ್ತಿತ್ವದಲ್ಲಿಲ್ಲ ಎಂದು ರಾಷ್ಟ್ರಪತಿ ಘೋಷಿಸಬಹುದು ಎಂದೂ ಹೇಳಿದ್ದಾರೆ. ಪ್ರಮುಖವಾಗಿ, 2024 ರ ಸೆಪ್ಟೆಂಬರ್ 30 ರೊಳಗೆ ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆಗೆ ಚುನಾವಣೆಗಳನ್ನು ನಡೆಸಲು ಕೇಂದ್ರ ಚುನಾವಣಾ ಆಯೋಗವು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ನಾವು ನಿರ್ದೇಶಿಸುತ್ತೇವೆ ಎಂದು ಸಿಜೆಐ ತೀರ್ಪು ಓದುವಾಗ ಹೇಳಿದ್ದಾರೆ.
ಇನ್ನು, 370 ಆರ್ಟಿಕಲ್ ರದ್ದತಿ ತೀರ್ಪು ಬರುವ ಮುನ್ನವೇ ಜಮ್ಮು-ಕಾಶ್ಮೀರದಾದ್ಯಂತ ಭಾರಿ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು. ಅಲ್ಲದೆ, ಜಮ್ಮು ಕಾಶ್ಮೀರದ ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಅವರನ್ನು ಸಹ ಬೆಳಗ್ಗೆಯಿಂದಲೇ ಗೃಹ ಬಂಧನ ಮಾಡಲಾಗಿದೆ ಎಂದು ಮೆಹಬೂಬಾ ಮುಫ್ತಿ ಹೇಳಿಕೊಂಡಿದ್ದಾರೆ. ಆದರೆ, ಯಾರನ್ನೂ ಗೃಹ ಬಂಧನ ಮಾಡಿಲ್ಲ ಅಥವಾ ಬಂಧಿಸಿಲ್ಲ ಎಂದು ಅಲ್ಲಿನ ಲೆಫ್ಟಿನೆಂಟ್ ಗವರ್ನರ್ ಹೇಳಿದ್ದಾರೆ.
ಇದನ್ನು ಓದಿ: ಕಾಶ್ಮೀರದ ವಿಶೇಷ ಸ್ಥಾನ ಹಿಂಪಡೆತ: ಇಂದು ಸುಪ್ರೀಂಕೋರ್ಟ್‌ನಲ್ಲಿ ಹಣೆಬರಹ ನಿರ್ಧಾರ
2019ರ ಆಗಸ್ಟ್ 5ರಂದು ಕೇಂದ್ರ ಸರ್ಕಾರ ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಮಾಡಿತ್ತು. ಇದೇ ವೇಳೆ ಕಾಶ್ಮೀರವನ್ನು ವಿಭಜಿಸಿ, ಪ್ರತ್ಯೇಕ ಲಡಾಖ್ ಕೇಂದ್ರಾಡಳಿತ ಪ್ರದೇಶವನ್ನೂ ಸೃಷ್ಟಿಸಲಾಗಿತ್ತು ಹಾಗೂ ಲಡಾಖ್ ಮತ್ತು ಜಮ್ಮು-ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶ ಎಂದು ಸಾರಲಾಗಿತ್ತು.
ಸುಪ್ರೀಂ ಕೋರ್ಟ್‌ನಲ್ಲಿ ಸರ್ಕಾರದ ಈ ಕ್ರಮದ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ 23 ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಪಂಚಸದಸ್ಯ ಸಾಂವಿಧಾನಿಕ ಪೀಠ 16 ದಿನ ಇವುಗಳ ವಿಚಾರಣೆ ನಡೆಸಿತ್ತು. ಸುದೀರ್ಘ ವಾದ-ಪ್ರತಿವಾದದ ಬಳಿಕ ನ್ಯಾಯಪೀಠ ಸೆಪ್ಟೆಂಬರ್ 5ರಂದು ತೀರ್ಪು ಕಾಯ್ದಿರಿಸಿತ್ತು. ಇದರ ಅಂತಿಮ ತೀರ್ಪು ಸೋಮವಾರ ಹೊರಬಿದ್ದಿದೆ.
News Hour: ಸೋಮವಾರ ಸುಪ್ರೀಂನಲ್ಲಿ ಆರ್ಟಿಕಲ್ 370 ಭವಿಷ್ಯ!
ಭಾರಿ ಬಿಗಿ ಭದ್ರತೆ:
ತೀರ್ಪು ಪ್ರಕಟವಾಗಲಿರುವ ಹಿನ್ನೆಲೆಯಲ್ಲಿ ಜಮ್ಮು-ಕಾಶ್ಮೀರದಲ್ಲಿ ಪ್ರಕ್ಷುಬ್ಧ ಸ್ಥಿತಿ ಉಂಟಾಗುವ ಸಾಧ್ಯತೆ ಇದೆ. ತೀರ್ಪು ಏನೇ ಬಂದರೂ ಪರ-ವಿರೋಧ ಗುಂಪುಗಳು ಬೀದಿಗಿಳಿಯುವ ಸಂಭವವಿದೆ. ಹೀಗಾಗಿ ಜಮ್ಮು-ಕಾಶ್ಮೀರದಾದ್ಯಂತ ಭಾರಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ.
ಏನಿದು ಕಾಶ್ಮೀರ ವಿಶೇಷ ಸ್ಥಾನಮಾನ?
ರಾಜಸಂಸ್ಥಾನವಾಗಿದ್ದ ಜಮ್ಮು-ಕಾಶ್ಮೀರವು, ದೇಶ ವಿಭಜನೆ ಬಳಿಕ ಪಾಕಿಸ್ತಾನ ಬದಲಿಗೆ ಭಾರತಕ್ಕೆ ಸೇರ್ಪಡೆಯಾಗಿತ್ತು. ಇದಕ್ಕಾಗಿ ಈ ರಾಜ್ಯಕ್ಕೆ 1949ರಲ್ಲಿ ಪರಿಚ್ಛೇದ 370ರ ಅಡಿ ವಿಶೇಷ ಸ್ಥಾನಮಾನ ನೀಡಲಾಗಿತ್ತು. ಇದರಿಂದ ಪ್ರತ್ಯೇಕ ಸಂವಿಧಾನ, ಧ್ವಜದ ಅಧಿಕಾರ ಕಣಿವೆ ರಾಜ್ಯಕ್ಕೆ ಲಭಿಸಿತ್ತು.
ರಕ್ಷಣೆ, ವಿದೇಶಾಂಗ ವ್ಯವಹಾರ, ಹಣಕಾಸು, ಸಂಪರ್ಕ ಹೊರತಾಗಿ ಯಾವುದೇ ಭಾರತೀಯ ಕಾನೂನು ಕಾಶ್ಮೀರಕ್ಕೆ ಅನ್ವಯವಾಗದಂತೆ ವಿಶೇಷ ಸ್ಥಾನಮಾನ ರಕ್ಷಣೆ ಒದಗಿಸಿತ್ತು. ಸಿಆರ್‌ಪಿಸಿಗೆ ಪರ್ಯಾಯವಾದ ರಣಬೀರ್ ದಂಡ ಸಂಹಿತೆ ಎಂಬ ಕಾನೂನು ಅಲ್ಲಿತ್ತು. ಆದರೆ ಇಡೀ ಶೇಷ ಭಾರತಕ್ಕೆ ಒಂದು ಕಾನೂನು, ಕಾಶ್ಮೀರಕ್ಕೆ ಒಂದು ಕಾನೂನು ಏಕೆ ಎಂದು ಪ್ರಶ್ನಿಸಿದ್ದ ಮೋದಿ ಸರ್ಕಾರ, 2019ರ ಆಗಸ್ಟ್ 5ರಂದು ಈ ವಿಷೇಷ ಸ್ಥಾನಮಾನ ರದ್ದು ಮಾಡಿತ್ತು. ಅಂದಿನಿಂದ ಈ ಮೇಲ್ಕಾಣಿಸಿದ ಎಲ್ಲ ಕಾಶ್ಮೀರದ ವಿಶೇಷ ಸವಲತ್ತುಗಳು ರದ್ದಾಗಿದ್ದವು.