- Home
- News
- India News
- Article 370: ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆ ಮೋದಿ, ಅಮಿತ್ ಶಾ, ಕಾಶ್ಮೀರಿ ನಾಯಕರು ಹೇಳಿದ್ದೀಗೆ..
Article 370: ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆ ಮೋದಿ, ಅಮಿತ್ ಶಾ, ಕಾಶ್ಮೀರಿ ನಾಯಕರು ಹೇಳಿದ್ದೀಗೆ..
370ನೇ ವಿಧಿಗೆ ಸಂಬಂಧಿಸಿದ ತೀರ್ಪಿನ ಬಗ್ಗೆ ಪ್ರಧಾನಿ ಮೋದಿ, ಅಮಿತ್ ಶಾ, ಜೆ.ಪಿ. ನಡ್ಡಾ ಶ್ಲಾಘಿಸಿದ್ದಾರೆ. ಆದರೆ, ಕಾಶ್ಮೀರಿ ನಾಯಕರು ತೀರ್ಪಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

370ನೇ ವಿಧಿಯ ಕುರಿತ ಸುಪ್ರೀಂ ಕೋರ್ಟ್ ಇಂದು ಬೆಳಗ್ಗೆ ತೀರ್ಪು ನೀಡಿದ್ದು, ಈ ತೀರ್ಪನ್ನು ಐತಿಹಾಸಿಕ ಎಂದು ಪ್ರಧಾನಿ ಮೋದಿ ಬಣ್ಣಿಸಿದ್ದು, ಹಾಗೂ ಶ್ಲಾಘಿಸಿದ್ದಾರೆ. ಹಾಗೆ, ಅಮಿತ್ ಶಾ, ಜೆ.ಪಿ. ನಡ್ಡಾ ಹಾಗೂ ಹಲವು ಕಾಶ್ಮೀರಿ ನಾಯಕರು ಸಹ ಪ್ರತಿಕ್ರಿಯೆ ನೀಡಿದ್ದಾರೆ. ಯಾರ್ಯಾರು ಏನೇನು ಹೇಳಿದ್ದಾರೆ ಬನ್ನಿ ನೋಡೋಣ..
ಜಮ್ಮು ಕಾಶ್ಮೀರದ 370ನೇ ವಿಧಿ ಬಗ್ಗೆ ಸುಪ್ರೀಂಕೋರ್ಟ್ ತೀರ್ಪು ಬಂದ ಒಂದು ಗಂಟೆಯೊಳಗೆ ಪ್ರಧಾನಿ ಮೋದಿ ಪ್ರತಿಕ್ರಿಯೆ ನೀಡಿದ್ದಾರೆ. ‘370 ನೇ ವಿಧಿಯನ್ನು ರದ್ದುಗೊಳಿಸುವುದರ ಕುರಿತು ಇಂದಿನ ಸುಪ್ರೀಂ ಕೋರ್ಟ್ ತೀರ್ಪು ಐತಿಹಾಸಿಕವಾಗಿದೆ ಮತ್ತು ಆಗಸ್ಟ್ 5, 2019 ರಂದು ಭಾರತದ ಸಂಸತ್ತು ತೆಗೆದುಕೊಂಡ ನಿರ್ಧಾರವನ್ನು ಸಾಂವಿಧಾನಿಕವಾಗಿ ಎತ್ತಿಹಿಡಿಯುತ್ತದೆ’ ಎಂದೂ ಪ್ರಧಾನಿ ಹೇಳಿದರು.
ಹಾಗೆ, ಇದು ಜಮ್ಮು, ಕಾಶ್ಮೀರ ಮತ್ತು ಲಡಾಖ್‌ನಲ್ಲಿನ ನಮ್ಮ ಸಹೋದರಿ ಮತ್ತು ಸಹೋದರರಿಗೆ ಭರವಸೆ, ಪ್ರಗತಿ ಮತ್ತು ಐಕ್ಯತೆಯ ಪ್ರತಿಧ್ವನಿಸುವ ಘೋಷಣೆಯಾಗಿದೆ. ನ್ಯಾಯಾಲಯವು ಭಾರತೀಯರಾದ ನಾವು ಪ್ರೀತಿಯಿಂದ ಹಿಡಿದಿಟ್ಟುಕೊಂಡಿರುವ ಏಕತೆಯ ಮೂಲತತ್ವವನ್ನು ಬಲಪಡಿಸಿದೆ ಎಂದೂ ಮೋದಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಅಲ್ಲದೆ, ಜಮ್ಮು, ಕಾಶ್ಮೀರ ಮತ್ತು ಲಡಾಖ್‌ನ ಜನರಿಗೆ ನಿಮ್ಮ ಕನಸುಗಳನ್ನು ಈಡೇರಿಸುವ ನಮ್ಮ ಬದ್ಧತೆ ಅಚಲವಾಗಿ ಉಳಿದಿದೆ ಎಂದು ನಾನು ಭರವಸೆ ನೀಡಲು ಬಯಸುತ್ತೇನೆ. ಆರ್ಟಿಕಲ್ 370ನಿಂದ ನೊಂದಿದ್ದ ದುರ್ಬಲ ಮತ್ತು ಅಂಚಿನಲ್ಲಿರುವ ವರ್ಗಗಳಿಗೆ ಪ್ರಗತಿಯ ಫಲಗಳು ವಿಸ್ತರಿಸಲು ನಾವು ನಿರ್ಧರಿಸಿದ್ದೇವೆ ಎಂದೂ ಹೇಳಿದ್ದಾರೆ.
ಹಾಗೆ, ಸಂಸತ್ತಿನಲ್ಲಿ ಕೇಂದ್ರದ 370 ನೇ ವಿಧಿ ತಂದ ಅಮಿತ್ ಶಾ ಸಹ ಸುಪ್ರೀಂಕೋರ್ಟ್ ತೀರ್ಪನ್ನು ಸ್ವಾಗತಿಸಿದ್ದು, ಪ್ರಧಾನಿಯ ನಾಯಕತ್ವವನ್ನು ಶ್ಲಾಘಿಸಿದರು. 370ನೇ ವಿಧಿ ರದ್ದತಿಯ ನಂತರ, ಬಡವರು ಮತ್ತು ವಂಚಿತರ ಹಕ್ಕುಗಳನ್ನು ಪುನಃಸ್ಥಾಪಿಸಲಾಗಿದೆ ಮತ್ತು ಪ್ರತ್ಯೇಕತಾವಾದ ಹಾಗೂ ಕಲ್ಲು ತೂರಾಟಗಳು ಈಗ ಹಿಂದಿನ ವಿಷಯಗಳಾಗಿವೆ. ಇಡೀ ಪ್ರದೇಶವು ಈಗ ಸುಮಧುರ ಸಂಗೀತ ಮತ್ತು ಸಾಂಸ್ಕೃತಿಕ ಪ್ರವಾಸೋದ್ಯಮದಿಂದ ಪ್ರತಿಧ್ವನಿಸುತ್ತದೆ.. ಏಕತೆಯ ಬಂಧಗಳು ಬಲಗೊಂಡಿವೆ. ಭಾರತದೊಂದಿಗೆ ಸಮಗ್ರತೆಯು ಬಲಗೊಳ್ಳುತ್ತದೆ ಎಂದೂ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
370 ನೇ ವಿಧಿಗೆ ಸಂಬಂಧಿಸಿದಂತೆ ಗೌರವಾನ್ವಿತ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಬಿಜೆಪಿ ಸ್ವಾಗತಿಸುತ್ತದೆ ಎಂದು ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ ಹೇಳಿದ್ದಾರೆ.
ಇನ್ನು, ಜಮ್ಮು ಕಾಶ್ಮೀರದ ಮಾಜಿ ಸಿಎಂ ಗುಲಾಂ ನಬಿ ಆಜಾದ್ ತೀರ್ಪನ್ನು ದುಃಖದಾಯಕ ಮತ್ತು ದುರದೃಷ್ಟಕರ ಎಂದು ಕರೆದಿದ್ದು, ಪ್ರದೇಶದ ಜನರು ತೀರ್ಪಿನಿಂದ ಸಂತೋಷವಾಗಿಲ್ಲ ಆದರೆ ನಾವು ಇದನ್ನು ಒಪ್ಪಿಕೊಳ್ಳಬೇಕು ಎಂದಿದ್ದಾರೆ.
ಈ ಮಧ್ಯೆ, ಜಮ್ಮು ಮತ್ತು ಕಾಶ್ಮೀರದ ಜನರು ಭರವಸೆ ಕಳೆದುಕೊಳ್ಳುವುದಿಲ್ಲ ಅಥವಾ ಬಿಟ್ಟುಕೊಡುವುದಿಲ್ಲ. ಗೌರವ ಮತ್ತು ಘನತೆಗಾಗಿ ನಮ್ಮ ಹೋರಾಟ ಮುಂದುವರಿಯುತ್ತದೆ. ಇದು ನಮಗೆ ಅಂತಿಮ ಮಾರ್ಗವಲ್ಲ. ಭಾಋತದ ಕಲ್ಪನೆಯ ನಷ್ಟ ಎಂದು ಮೆಹಬೂಬಾ ಮುಫ್ತಿ ವಿಡಿಯೋ ಸಂದೇಶ ನೀಡಿದ್ದಾರೆ
ಅಲ್ಲದೆ, ಕಾಂಗ್ರೆಸ್ ನಾಯಕ ಮತ್ತು ಜಮ್ಮು ಕಾಶ್ಮೀರದ ಮಾಜಿ ಮಹಾರಾಜ ಹರಿ ಸಿಂಗ್ ಪುತ್ರ ಕರಣ್ ಸಿಂಗ್ ಈ ತೀರ್ಪಿನಿಂದ ಸಂತೋಷವಾಗದ ಜಮ್ಮು ಮತ್ತು ಕಾಶ್ಮೀರದ ಒಂದು ವರ್ಗದ ಜನರಿಗೆ ನನ್ನ ಪ್ರಾಮಾಣಿಕ ಸಲಹೆಯೆಂದರೆ ಅವರು ಈ ತೀರ್ಪನ್ನು ಸ್ವೀಕರಿಸಬೇಕು. ಸುಪ್ರೀಂ ಕೋರ್ಟ್ ಕ್ರಮವನ್ನು ಎತ್ತಿಹಿಡಿದಿದೆ ಎಂಬ ಅಂಶವನ್ನು ಒಪ್ಪಿಕೊಳ್ಳಬೇಕು. ಹಾಗೂ, ಮುಂದಿನ ಚುನಾವಣೆಯಲ್ಲಿ ಹೋರಾಡಲು ತಮ್ಮ ಶಕ್ತಿ ವಿನಿಯೋಜಿಸಬೇಕು ಎಂದು ಹೇಳಿದ್ದಾರೆ.
ಹಾಗೆ, ಯಾಷನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲಾ ಸಹ ತೀರ್ಪಿನಿಂದ ಹತಾಶೆಯಾಗಿದ್ದೇನೆ. ಆದರೆ ನಿರಾಶೆಗೊಂಡಿಲ್ಲ. ಹೋರಾಟ ಮುಂದುವರಿಯುತ್ತದೆ. ಬಿಜೆಪಿ ಇಲ್ಲಿಗೆ ತಲುಪಲು ದಶಕಗಳನ್ನು ತೆಗೆದುಕೊಂಡಿತು. ನಾವು ಕೂಡ ದೀರ್ಘಾವಧಿಗೆ ಸಿದ್ಧರಿದ್ದೇವೆ ಎಂದೂ ಹೇಳಿದರು.
ಇನ್ನೊಂದೆಡೆ, ಆರ್ಟಿಕಲ್ 370 ರ ಮೇಲಿನ ಸುಪ್ರೀಂ ಕೋರ್ಟ್ ತೀರ್ಪು ನಿರಾಶಾದಾಯಕವಾಗಿದೆ. ನ್ಯಾಯವು ಮತ್ತೊಮ್ಮೆ ಜಮ್ಮು ಮತ್ತು ಕಾಶ್ಮೀರದ ಜನರನ್ನು ತಪ್ಪಿಸುತ್ತದೆ. 370 ನೇ ವಿಧಿಯನ್ನು ಕಾನೂನುಬದ್ಧವಾಗಿ ಅಳಿಸಿಹಾಕಿರಬಹುದು. ಆದರೆ ಯಾವಾಗಲೂ ನಮ್ಮ ರಾಜಕೀಯ ಆಕಾಂಕ್ಷೆಗಳ ಭಾಗವಾಗಿ ಉಳಿಯುತ್ತದೆ ಎಂದು ಜಮ್ಮು ಮತ್ತು ಕಾಶ್ಮೀರ, ಪೀಪಲ್ಸ್ ಕಾನ್ಫರೆನ್ಸ್ ಮುಖ್ಯಸ್ಥ, ಸಜ್ಜದ್ ಲೋನ್ ಹೇಳಿಕೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ