ಕೇದಾರನಾಥ ದೇಗುಲದ ಮುಂದೆ ತಬ್ಬಿ ಪ್ರೊಪೋಸ್ ಮಾಡಿದ ಯುವತಿ: ಇನ್ಮುಂದೆ ಮೊಬೈಲ್ ಫೋನ್ ಬ್ಯಾನ್?
ಶಿವನ 12 ಜ್ಯೋತಿರ್ಲಿಂಗಗಳಲ್ಲಿ ಒಂದಾದ ಕೇದಾರನಾಥ ದೇವಾಲಯದ ಪ್ರದೇಶದಲ್ಲಿ ಮೊಬೈಲ್ ಫೋನ್‌ಗಳನ್ನು ಶೀಘ್ರದಲ್ಲೇ ನಿಷೇಧಿಸಲಾಗುವುದು ಎಂದು ಬದರಿನಾಥ್ ಕೇದಾರನಾಥ ಟ್ರಸ್ಟ್ ಜುಲೈ 3 ರಂದು ಅಧಿಸೂಚನೆ ಹೊರಡಿಸಿದೆ.
ಹೊಸದೆಹಲಿ (ಜುಲೈ 6, 2023): ಕೇದಾರನಾಥ ದೇವಾಲಯದ ಪ್ರದೇಶದಲ್ಲಿ ಮೊಬೈಲ್ ಫೋನ್‌ಗಳನ್ನು ಶೀಘ್ರದಲ್ಲೇ ಬ್ಯಾನ್ ಮಾಡಲು ಮುಂದಾಗಿದೆ. ಇದಕ್ಕೆ ಕಾರಣ ಸಾಮಾಜಿಕ ಜಾಲತಾಣಗಳ ಪ್ರಭಾವಿಗಳು ಯೂಟ್ಯೂಬ್ ಮತ್ತು ಇನ್‌ಸ್ಟಾಗ್ರಾಂ ರೀಲ್ಸ್ ಮಾಡಿ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತಿದ್ದಾರೆ ಎಂಬುದು. ಇತ್ತೀಚೆಗಷ್ಟೇ ದೇವಾಲಯದ ಮುಂದೆ ಪ್ರೊಪೋಸ್ ಮಾಡಿದ್ದು ಹೆಚ್ಚು ವೈರಲ್ ಆಗಿತ್ತು. ಈ ರೀತಿ ಘಟನೆಗಳು ಹೆಚ್ಚಾಗ್ತಿರೋ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿದುಬಂದಿದೆ.
ಶಿವನ 12 ಜ್ಯೋತಿರ್ಲಿಂಗಗಳಲ್ಲಿ ಒಂದಾದ ಕೇದಾರನಾಥ ದೇವಾಲಯದ ಪ್ರದೇಶದಲ್ಲಿ ಮೊಬೈಲ್ ಫೋನ್‌ಗಳನ್ನು ಶೀಘ್ರದಲ್ಲೇ ನಿಷೇಧಿಸಲಾಗುವುದು ಎಂದು ಬದರಿನಾಥ್ ಕೇದಾರನಾಥ ಟ್ರಸ್ಟ್ ಜುಲೈ 3 ರಂದು ಅಧಿಸೂಚನೆ ಹೊರಡಿಸಿದೆ. ದೇಗುಲದ ಸ್ಥಳದ ಸಮೀಪದಲ್ಲಿ ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ರೀಲ್ಸ್ ರಚಿಸುತ್ತಿರುವ 'ಭಕ್ತ'ರಿಗೆ ಇದು ಎಚ್ಚರಿಕೆಯಂತಿದೆ.
ಇದನ್ನು ಓದಿ: ಇದೆಂಥಾ ದಾರ್ಷ್ಟ್ಯ? ಕೇದಾರನಾಥನ ಮೇಲೆ ಹಣ ಊದಿದ ಮಹಿಳೆ; ಎಫ್ಐಆರ್ ದಾಖಲು
ಕೇದಾರನಾಥ ದೇಗುಲದ ಆವರಣದಲ್ಲಿ ಸಾಮಾಜಿಕ ಜಾಲತಾಣಗಳ ಇನ್‌ಫ್ಲುಯೆನ್ಸರ್ಸ್ ಯೂಟ್ಯೂಬ್ ಮತ್ತು ಇನ್‌ಸ್ಟಾಗ್ರಾಂ ರೀಲ್ಸ್ ಮಾಡಿ ಜಗತ್ತಿನಾದ್ಯಂತ ನೆಲೆಸಿರುವ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತಿದ್ದಾರೆ. ಇಂತಹ ಪ್ರಕರಣಗಳಲ್ಲಿ ಜನರು ಪ್ರತಿಕ್ರಿಯಿಸಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸುತ್ತಿದ್ದಾರೆ. ಆದ್ದರಿಂದ ಇಂತಹವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ಹಾಗೂ, ದೇವಸ್ಥಾನದ ಆವರಣದಲ್ಲಿ ರೀಲ್ಸ್ ಮಾಡುವವರ ವಿರುದ್ಧ, ಪ್ರಭಾವಿಗಳ ಮೇಲೆ ನಿಗಾ ಇಡಬೇಕು ಎಂದೂ ಪತ್ರದಲ್ಲಿ ತಿಳಿಸಲಾಗಿದೆ.
ಟ್ರಸ್ಟ್‌ನಿಂದ ನೋಟಿಸ್
ಕೇದಾರನಾಥ ದೇವಾಲಯದ ಮುಂದೆ ಹುಡುಗಿಯೊಬ್ಬಳು ತನ್ನ ಸಂಗಾತಿಗೆ ಪ್ರಪೋಸ್ ಮಾಡುತ್ತಿರುವ ವಿಡಿಯೋ ವೈರಲ್ ಆದ ಕೆಲವೇ ದಿನಗಳ ಬಳಿಕ ಟ್ರಸ್ಟ್ ಈ ಪತ್ರವನ್ನು ನೀಡಿದೆ. ಇನ್‌ಸ್ಟಾಗ್ರಾಮ್ ವಿಡಿಯೋ ಮಾಡಿದ ಮಹಿಳೆಯನ್ನು ವಿಶಾಖಾ ಫುಲ್‌ಸುಂಗೆ ಎಂದು ಗುರುತಿಸಲಾಗಿದ್ದು, ಇವರು ಇನ್‌ಸ್ಟಾಗ್ರಾಮ್‌ನಲ್ಲಿ 8 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದು, ಇನ್‌ಫ್ಲುಯೆನ್ಸರ್ ಎನಿಸಿಕೊಂಡಿದ್ದಾರೆ. ಅವರು ಮೊಣಕಾಲುಗಳ ಮೇಲೆ ಕುಳಿತು ತನ್ನ ಗೆಳೆಯನಿಗೆ ಪ್ರಪೋಸ್ ಮಾಡಿದ್ದರು.
ಇದನ್ನೂ ಓದಿ: ಪವಿತ್ರ ಕೇದಾರನಾಥ ಯಾತ್ರೆ ರದ್ದುಗೊಳಿಸಿದ ಸರ್ಕಾರ, ಕ್ಷೇತ್ರಕ್ಕೆ ಹೊರಟಿದ್ದ ಭಕ್ತರ ಪರದಾಟ!
ಕೇದಾರನಾಥ ದೇವಾಲಯದಂತಹ ಪವಿತ್ರ ಸ್ಥಳವು ವಿರಾಮದ ಸ್ಥಳವಲ್ಲ ಮತ್ತು ಅದಕ್ಕೆ ಹೆಚ್ಚಿನ ಗೌರವವನ್ನು ನೀಡಬೇಕಾಗಿತ್ತು ಎಂದು ಹೆಚ್ಚಿನ ನೆಟ್ಟಿಗರು ಈ ವಿಡಿಯೋಗೆ ಟೀಕಿಸಿದ್ದರು.
ಮೊದಲ ಬಾರಿ ಅಲ್ಲ
ಕೇದಾರನಾಥದ ಇಂತಹ ರೀಲ್ ಅಥವಾ ವಿಡಿಯೋ ವೈರಲ್ ಆಗುತ್ತಿರುವುದು ಇದೇ ಮೊದಲಲ್ಲ. ದೇವಾಲಯ ಪ್ರದರ್ಶಿಸುವ ಹಲವಾರು ಇತರ ರೀತಿಯ ವಿಡಿಯೋಗಳು ಸಹ ಹೊರಹೊಮ್ಮಿವೆ. ಅಲ್ಲದೆ ಬಹಳಷ್ಟು ದೇವಸ್ಥಾನಗಳಲ್ಲಿ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳಿಗೆ ಅವಕಾಶವಿಲ್ಲ ಮತ್ತು ಆವರಣದಲ್ಲಿ ಮೊಬೈಲ್ ಫೋನ್‌ಗಳನ್ನು ಸಹ ನಿಷೇಧಿಸಬೇಕೆಂದು ನಿರಂತರ ಬೇಡಿಕೆಯಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಬದರಿನಾಥ ಕೇದಾರನಾಥ ದೇವಾಲಯ ಸಮಿತಿ, ಭವಿಷ್ಯದಲ್ಲಿ ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗದಂತೆ ಪ್ರಭಾವಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದೆ.
ಇದನ್ನೂ ಓದಿ: ಕೇದಾರನಾಥ ಪವರ್ ಫುಲ್ 'ಶಕ್ತಿ'ಧಾಮ: ತ್ರಿಕೋನ ಆಕಾರದ ಲಿಂಗದ ಮಹತ್ವ ಏನು?
ಅಮರನಾಥ ಶಿವಲಿಂಗ ದರ್ಶನ ಪಡೆದ 60 ಸಾವಿರಕ್ಕೂ ಹೆಚ್ಚು ಜನ
ಇನ್ನೊಂದೆಡೆ, ಜಮ್ಮು ಕಾಶ್ಮೀರದ ಅಮರನಾಥ ಶಿವ ಲಿಂಗ ನೋಡಲು ಹೆಚ್ಚು ಭಕ್ತರು ಭೇಟಿ ನೀಡುತ್ತಿದ್ದಾರೆ. ಬುಧವಾರ 18,354 ಭಕ್ತರು ಗವಿಯಲ್ಲಿ ಮಂಜುಗಡ್ಡೆಯಿಂದ ಮೂಡುವ ಶಿವಲಿಂಗ ದರ್ಶನ ಪಡೆದರು. ಅವರಲ್ಲಿ 12,483 ಪುರುಷರು, 5,146 ಮಹಿಳೆಯರು, 266 ಸಾಧುಗಳು, ಇಬ್ಬರು ಸಾಧ್ವಿಗಳು ಮತ್ತು 457 ಮಕ್ಕಳು ಸೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಒಟ್ಟಾರೆ, ಯಾತ್ರೆಯ ಮೊದಲ ಐದು ದಿನಗಳಲ್ಲಿ, ಒಟ್ಟು 67,197 ಭಕ್ತರು ನೈಸರ್ಗಿಕವಾಗಿ ರೂಪುಗೊಂಡ ಮಂಜುಗಡ್ಡೆಯ ದರ್ಶನ ಪಡೆದಿದ್ದಾರೆ.
ಇದನ್ನೂ ಓದಿ: Travel Tips: ಅಮರನಾಥ ಯಾತ್ರೆಯಲ್ಲಿ ಬರ್ಗರ್ – ಫಿಜ್ಜಾ ಬ್ಯಾನ್