ಇದೆಂಥಾ ದಾರ್ಷ್ಟ್ಯ? ಕೇದಾರನಾಥನ ಮೇಲೆ ಹಣ ಊದಿದ ಮಹಿಳೆ; ಎಫ್ಐಆರ್ ದಾಖಲು
ಕೇದಾರನಾಥ ದೇಗುಲದ ಗರ್ಭಗುಡಿಯಲ್ಲಿರುವ ಶಿವಲಿಂಗಕ್ಕೆ ಹಣವನ್ನು ಮಳೆಯಂತೆ ಸುರಿಸುತ್ತಿರುವ ಮಹಿಳೆಯೊಬ್ಬರ ದಾರ್ಷ್ಟ್ಯದ ವಿಡಿಯೋ ವೈರಲ್ ಆಗಿದೆ. ಜೊತೆಗೆ, ಈ ಮಹಿಳೆ ಮೇಲೆ ಎಫ್‌ಐಆರ್ ಕೂಡಾ ದಾಖಲಾಗಿದೆ.
ಮಹಿಳೆಯೊಬ್ಬರ ದುಡ್ಡಿನ ದಾರ್ಷ್ಟ್ಯ ಪ್ರದರ್ಶನದ ವಿಡಿಯೋವೊಂದು ಇಂಟರ್ನೆಟ್‌ನಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ಕೋಪಕ್ಕೆ ಕಾರಣವಾಗಿದೆ.
ವಿಡಿಯೋದಲ್ಲಿ ಕೂದಲು ಬಿಟ್ಟು, ರುದ್ರಾಕ್ಷಿ ಧರಿಸಿ, ಬಿಳಿ ಸೀರೆಯುಟ್ಟಿರುವ ಮಹಿಳೆಯು ಕೇದಾರನಾಥ ದೇಗುಲದ ಗರ್ಭಗುಡಿಯಲ್ಲಿರುವ ಶಿವಲಿಂಗಕ್ಕೆ ಹಣವನ್ನು ಊದಿ ಬಿಡುತ್ತಿದ್ದಾರೆ. ಈ ವಿಡಿಯೋವನ್ನು ಅದೇ ಗರ್ಭಗುಡಿಯಲ್ಲಿ ನಿಂತು ಮತ್ತೊಬ್ಬರು ಮಾಡಿದ್ದಾರೆ. ಹಣ ಊದುವಾಗ ತಡೆಯದ, ವಿಡಿಯೋ ಮಾಡುವಾಗ ತಡೆಯದ ಬದರಿನಾಥ್-ಕೇದಾರನಾಥ ದೇವಾಲಯ ಸಮಿತಿ (BKTC)ಯು ಇದೀಗ ವಿಡಿಯೋ ವೈರಲ್ ಆಗಿ ಎಲ್ಲರ ಕೋಪಕ್ಕೆ ಕಾರಣವಾಗುತ್ತಿರುವಾಗ ಈ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ. ನಂತರದಲ್ಲಿ ಮಹಿಳೆಯ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ದೇವಾಲಯದ ಆವರಣದೊಳಗೆ ಛಾಯಾಗ್ರಹಣ ಮತ್ತು ವೀಡಿಯೊಗ್ರಫಿಯನ್ನು ನಿಷೇಧಿಸಿದ್ದು, ಅದು ಹೇಗೆ ವ್ಯಕ್ತಿಯೊಬ್ಬರು ಈ ವಿಡಿಯೋ ರೆಕಾರ್ಡ್ ಮಾಡಲು ಅವಕಾಶ ಸಿಕ್ಕಿದೆ ಎಂಬ ಪ್ರಶ್ನೆ ಎಲ್ಲೆಡೆ ಕೇಳಿ ಬರುತ್ತಿದೆ. ವೀಡಿಯೊ ವೈರಲ್ ಆದ ನಂತರ ಸಾಕಷ್ಟು ದ್ವೇಷ ಮತ್ತು ಅಸಮಾಧಾನಕ್ಕೆ ಕಾರಣವಾಗಿದೆ.
Kedarnath Dham ಬಗ್ಗೆ 5 ಆಸಕ್ತಿಕರ ಸಂಗತಿಗಳು
ಇದಕ್ಕೆ ಕೆಲವರು, ಅವರನ್ನು ಗರ್ಭಗುಡಿಗೆ ಹೇಗೆ ಬಿಟ್ಟರು ಎಂದು ಪ್ರಶ್ನಿಸಿದ್ದರೆ, ಮತ್ತೆ ಕೆಲವರು ಭಕ್ತಿ ಎಂಬ ಪದದ ಅರ್ಥವನ್ನೇ ಮಹಿಳೆ ಕಳೆಯುತ್ತಿದ್ದಾಳೆ ಎಂದು ದೂರಿದ್ದಾರೆ.
ಕನಿಷ್ಠ ಪಕ್ಷ ಭಗವಾನ್ ಶಿವನ ಮೇಲಾದರೂ ತನ್ನ ಹಣದ ಮದ ತೋರಬಾರದೆಂಬ ಯೋಚನೆ ಮಹಿಳೆಗೆ ಇರಬೇಕಿತ್ತು. ಇದು ಕಲಿಯುಗ ಎಂದು ಟ್ವಿಟ್ಟರ್ ಬಳಕೆದಾರರೊಬ್ಬರು ಅಸಮಾಧಾನ ಹೊರ ಹಾಕಿದ್ದಾರೆ.
'ದೇವರ ದರ್ಶನಕ್ಕೆ ಭಕ್ತರಿಗೆ 5 ಸೆಕೆಂಡ್ ಕೂಡಾ ನೀಡುವುದಿಲ್ಲ. ಅಂಥದರಲ್ಲಿ ಈ ಮಹಿಳೆ ಗರ್ಭಗುಡಿಯೊಳಗೆ ನಿಂತು ಇಂಥದೊಂದು ಅಹಂಕಾರದ ಪ್ರವೃತ್ತಿಯಲ್ಲಿ ತೊಡಗಿದ್ದು ಹೇಗೆ? ದೇವಾಲಯದ ಪಂಡಿತರೂ ಇದನ್ನು ಪಕ್ಕದಲ್ಲಿ ನಿಂತು ಎಂಜಾಯ್ ಮಾಡುತ್ತಿದ್ದಾರೆ' ಎಂದು ಮತ್ತೊಬ್ಬರು ದೂರಿದ್ದಾರೆ.
ಕ್ರಮಕ್ಕೆ ಆಗ್ರಹ
ಏತನ್ಮಧ್ಯೆ, ಬದರಿನಾಥ್-ಕೇದಾರನಾಥ ದೇವಾಲಯ ಸಮಿತಿ (ಬಿಕೆಟಿಸಿ) ಅಧ್ಯಕ್ಷ ಅಜೇಂದ್ರ ಅಜಯ್ ರುದ್ರಪ್ರಯಾಗ ಡಿಎಂ ಮಯೂರ್ ದೀಕ್ಷಿತ್ ಮತ್ತು ಪೊಲೀಸ್ ಅಧೀಕ್ಷಕರನ್ನು ವೀಡಿಯೊ ಕುರಿತು ತನಿಖೆಗೆ ಕೇಳಿದ್ದಾರೆ. ಅಲ್ಲದೇ ಮಹಿಳೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಮಹಿಳೆ ವಿರುದ್ಧ ಎಫ್‌ಐಆರ್ ದಾಖಲು
ಜಿಲ್ಲಾ ರುದ್ರಪ್ರಯಾಗ ಪೊಲೀಸರು ಕೇದಾರನಾಥ ದೇವಾಲಯ ಸಮಿತಿಯ ಪರವಾಗಿ ನೋಟಿಸ್ ಜಾರಿ ಮಾಡಿದ್ದಾರೆ. ದೂರಿನ ಆಧಾರದ ಮೇಲೆ, ಕೋಟ್ವಾಲಿ ಸೋನ್‌ಪ್ರಯಾಗ್ ಕೇದಾರನಾಥ ಧಾಮದಲ್ಲಿ ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಕ್ಕಾಗಿ ಮಹಿಳೆಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.