Travel Tips: ಅಮರನಾಥ ಯಾತ್ರೆಯಲ್ಲಿ ಬರ್ಗರ್ – ಫಿಜ್ಜಾ ಬ್ಯಾನ್
ಮುಂದಿನ ತಿಂಗಳು ಬಹುನಿರೀಕ್ಷಿತ ಅಮರನಾಥ ಯಾತ್ರೆ ಶುರುವಾಗ್ತಿದೆ. ಅದಕ್ಕೆ ಸರ್ಕಾರ ಎಲ್ಲ ಸಿದ್ಧತೆ ಮಾಡುತ್ತಿದೆ. ನೀವೂ ಅಮರನಾಥ ಯಾತ್ರೆ ಮಾಡ್ತಿದ್ದರೆ ನಿಯಮಗಳನ್ನು ತಿಳಿದುಕೊಳ್ಳಿ. ಫುಡ್ ಮೆನು ಬಗ್ಗೆ ಮಾಹಿತಿ ಇರಲಿ.
ಅಮರನಾಥ ಯಾತ್ರೆಯು ಹಿಂದೂ ಧರ್ಮದಲ್ಲಿ ಅತ್ಯಂತ ಮಹತ್ವದ ತೀರ್ಥಯಾತ್ರೆಯಾಗಿದೆ. ಪ್ರತಿಯೊಬ್ಬ ಹಿಂದೂ ತನ್ನ ಜೀವಿತಾವಧಿಯಲ್ಲಿ ಒಮ್ಮೆ ಮಾಡಲು ಬಯಸುತ್ತಾನೆ. ಜಮ್ಮು – ಕಾಶ್ಮೀರ ರಾಜ್ಯದಲ್ಲಿರುವ ಒಂದು ಗುಹೆಯ ದೇವಾಲಯ ಅಮರನಾಥ. ಗುಹೆಯೊಳಗೆ ಮಂಜಿನ ಗಡ್ಡೆಯೊಂದು ಶಿವಲಿಂಗದ ಆಕಾರ ಹೊಂದಿರೋದನ್ನು ನಾವು ನೋಡ್ಬಹುದು. ಮುಖ್ಯ ದೇವಾಲಯವು ಸಮುದ್ರ ಮಟ್ಟದಿಂದ 12,756 ಅಡಿ ಎತ್ತರದಲ್ಲಿದೆ. ರಾಜಧಾನಿ ಶ್ರೀನಗರದಿಂದ ಸುಮಾರು 141 ಕಿಮೀ ದೂರದಲ್ಲಿದೆ.
ಈ ಬಾರಿ ಅಮರನಾಥ (Amarnath) ಯಾತ್ರೆಗೆ ತಯಾರಿ ಜೋರಾಗಿ ನಡೆದಿದೆ. ಇದೇ ಜುಲೈ ಒಂದರಿಂದ ಅಮರನಾಥ ಯಾತ್ರೆ (Yatra ) ಶುರುವಾಗಲಿದೆ. ಈ ಬಾರಿ ಅಮರನಾಥ ಯಾತ್ರೆ 67 ದಿನಗಳವರೆಗೆ ನಡೆಯಲಿದೆ. ಸುಮಾರು 5000 ಭಕ್ತರು ಅಮರನಾಥ ಯಾತ್ರೆ ಕೈಗೊಳ್ಳಲಿದ್ದಾರೆ. ಅಮರನಾಥ ಯಾತ್ರೆಗೆ ಹೋಗುವ ಭಕ್ತರು ಫಿಟ್ನೆಸ್ ಸರ್ಟಿಫಿಕೆಟ್ ಹಾಗೂ ಟ್ರಾವೆಲ್ ಕಾರ್ಡ್ ಪಡೆಯಬೇಕಾಗುತ್ತದೆ. ಅಮರನಾಥ ಗುಹೆ ತಲುಪಲು ಭಕ್ತರಿಗೆ ಯಾವುದೇ ವಾಹನ ಸೌಲಭ್ಯವಿಲ್ಲ. ಬಾಲ್ಟಾಲ್‌ನಿಂದ ಮತ್ತು ಪಹಲ್ಗಾಮ್‌ನಿಂದ ಅಮರನಾಥ್ ಯಾತ್ರೆ ಕೈಗೊಳ್ಳಬಹುದು.
ಆ ರಹಸ್ಯಮಯ ಸರೋವರದಲ್ಲಿ ಇಂದಿಗೂ ಕಾಣಿಸಿಕೊಳ್ಳುತ್ತಂತೆ ದೈತ್ಯ ಜೀವಿ
ಅಮರನಾಥ ಯಾತ್ರೆಗೆ ತೆರಳುವವರು ಅನೇಕ ವಿಷ್ಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಅದ್ರಲ್ಲಿ ಆಹಾರ (Food) ವೂ ಸೇರಿದೆ. ಶ್ರೀ ಅಮರನಾಥ ದೇಗುಲ ಮಂಡಳಿಯ (SASB) ಭಕ್ತರಿಗೆ ಕೆಲ ನಿಯಮಗಳನ್ನು ರೂಪಿಸಿದೆ. ಭಕ್ತರು ಅದನ್ನು ಚಾಚುತಪ್ಪದೆ ಪಾಲಿಸಬೇಕಾಗುತ್ತದೆ. ಅಮರನಾಥ ಯಾತ್ರೆಗೆ ಹೋಗುವವರು ದಾರಿಯಲ್ಲಿ ಅಗತ್ಯವಾದ್ರೆ ಎನ್ನುವ ಕಾರಣಕ್ಕೆ ಕೆಲ ಆಹಾರವನ್ನು ತೆಗೆದುಕೊಂಡು ಹೋಗ್ಬಹುದು. ಆದ್ರೆ ಎಲ್ಲ ಆಹಾರಕ್ಕೆ ಮಂಡಳಿ ಒಪ್ಪಿಗೆ ನೀಡುವುದಿಲ್ಲ. ಕೆಲ ಆಹಾರವನ್ನು ದೇಗುಲ ಮಂಡಳಿ ನಿರ್ಬಂಧಿಸಿದೆ.
ಈ ಆಹಾರವನ್ನು ತೆಗೆದುಕೊಂಡು ಹೋಗುವಂತಿಲ್ಲ : ಅಮರನಾಥ ಯಾತ್ರಿಗಳು ಪರಾಠಾ, ಬರ್ಗರ್, ಪಿಜ್ಜಾ ಆಹಾರಗಳನ್ನು ಸೇವಿಸುವಂತಿಲ್ಲ ಎಂದು ಅಮರನಾಥ ದೇಗುಲ ಮಂಡಳಿ ತಿಳಿಸಿದೆ. ನಿಷೇಧಿತ ಆಹಾರಗಳ ಪಟ್ಟಿಯನ್ನು ಸಹ ಬಿಡುಗಡೆ ಮಾಡಲಾಗಿದೆ. ಗುಲಾಬ್ ಜಾಮೂನ್, ಬರ್ಗರ್, ಪಿಜ್ಜಾ, ಪರಾಠಾ, ತಂಪು ಪಾನೀಯಗಳು, ಜಲೇಬಿ, ರಸಗುಲ್ಲಾ ಮತ್ತು ಫ್ರೈಡ್ ಪಾಪಡನ್ನು ನೀವು ತೆಗೆದುಕೊಂಡು ಹೋಗುವಂತಿಲ್ಲ. ಪ್ರಯಾಣಿಕರಿಗೆ ಚಿಪ್ಸ್, ಸಮೋಸಾದಂತಹ ಕರಿದ ಪದಾರ್ಥ ಸೇವನೆ ಸಾಧ್ಯವಾಗೋದಿಲ್ಲ. ಅಷ್ಟೇ ಅಲ್ಲ ನಾನ್ ವೆಜ್, ತಂಬಾಕು, ಗುಟ್ಕಾ, ಪಾನ್ ಮಸಾಲಾ ಮತ್ತು ಸಿಗರೇಟ್‌ಗಳ ಮೇಲೆ ಸಂಪೂರ್ಣ ನಿಷೇಧ ಹೇರಲಾಗಿದೆ.
Unique Temple: ಪ್ರತಿ ವರ್ಷ ಬೆಳೆಯುತ್ತಲೇ ಇದೆ ಜಗತ್ತಿನ ಅತಿ ದೊಡ್ಡ ಶಿವಲಿಂಗ !
ಅಮರನಾಥ ಯಾತ್ರೆ ವೇಳೆ ಏನನ್ನು ತಿನ್ನಬಹುದು? : ಅಮರನಾಥ ಯಾತ್ರೆ ವೇಳೆ ಆರೋಗ್ಯ ಬಹಳ ಮುಖ್ಯವಾಗುತ್ತದೆ. ಭಕ್ತರ ನೆರವಿಗೆ ಅನೇಕ ವೈದ್ಯರ ತಂಡ ದಾರಿ ಮಧ್ಯೆ ಇರಲಿದೆಯಾದ್ರೂ ಭಕ್ತರು ತಮ್ಮ ಆರೋಗ್ಯ ನೋಡಿಕೊಳ್ಳಬೇಕು. ಆರೋಗ್ಯ ಕಡೆಸುವ ಆಹಾರ ಸೇವನೆಯಿಂದ ದೂರವಿರಬೇಕು. ಹಾಗಾಗಿಯೇ ದೇಗುಲದ ಆಡಳಿತ ಮಂಡಳಿ ನಿಯಮ ರೂಪಿಸಿದೆ. ಅದ್ರ ಪ್ರಕಾರ, ಪ್ರಯಾಣದಲ್ಲಿ ಭಕ್ತರು ಬೇಳೆಕಾಳುಗಳು, ಧಾನ್ಯಗಳು, ಹಸಿರು ತರಕಾರಿಗಳು, ಚಹಾ-ಕಾಫಿ, ಅನ್ನ, ಅವಲಕ್ಕಿ, ನಿಂಬೆ ಪಾನೀಯ, ಒಣ ಹಣ್ಣುಗಳನ್ನು ತಿನ್ನಬಹುದು. ಬೆಲ್ಲದಿಂದ ತಯಾರಿಸಿದ ಆಹಾರ, ಅಕ್ಕಿಯಿಂದ ಮಾಡಿದ ಖೀರ್, ಗಂಜಿ, ಎಳ್ಳು ಲಡ್ಡುಗಳು, ಧೋಕ್ಲಾ, ಚಿಕ್ಕಿ, ಮಖನಾವನ್ನು ಸಹ ಪ್ರಯಾಣಿಕರು ಸೇವನೆ ಮಾಡಬಹುದು. ಭಕ್ತರಿಗಾಗಿ ನಿರ್ಮಾಣ ಮಾಡಿರುವ ಶಿಬಿರಗಳಲ್ಲಿ ಅವರಿಗೆ ಯೋಗ್ಯವಾದ ಆಹಾರವನ್ನು ಒದಗಿಸಲಾಗುತ್ತದೆ. ಅವಶ್ಯವೆನಿಸಿದ್ರೆ ಭಕ್ತರು ತಮ್ಮ ಜೊತೆ ಆಹಾರವನ್ನು ತೆಗೆದುಕೊಂಡು ಹೋಗ್ಬಹುದು ಎಂದು ಮಂಡಳಿ ಹೇಳಿದೆ.
ಈ ಬಾರಿ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ವ್ಯವಸ್ಥೆ ಮಾಡಲಾಗ್ತಿದೆ. 120 ಲಂಗರ್ ತಯಾರಿಸಲಾಗ್ತಿದೆ. ಎಲ್ಲ ಲಂಗರ್ ನಲ್ಲಿ ವೈದ್ಯರು, ಅಗತ್ಯ ಮಾತ್ರೆಗಳು ಲಭ್ಯವಿರಲಿದೆ. ನೀವೂ ಅಮರನಾಥ ಯಾತ್ರೆಗೆ ತೆರಳುತ್ತಿದ್ದರೆ ಟ್ರಾವೆಲ್ ಬ್ಯಾಗ್, ರೇನ್ ಕೋಟ್, ಶೂ, ಬೆಚ್ಚಗಿನ ಬಟ್ಟೆ, ಅಗತ್ಯ ಔಷಧಿಯನ್ನು ತೆಗೆದುಕೊಂಡು ಹೋಗಿ. ಶಿಬಿರದಲ್ಲಿ ಬಟ್ಟೆ ಸೇರಿದಂತೆ ನಿಮಗೆ ಅಗತ್ಯವಿರುವ ವಸ್ತುಗಳು ಲಭ್ಯವಿರುತ್ತವೆ.