ಚೆನ್ನೈನಲ್ಲಿ ನೀಲಿ ಮಾರ್ಗದ ಮೆಟ್ರೋ ರೈಲೊಂದು ತಾಂತ್ರಿಕ ದೋಷದಿಂದಾಗಿ ಸುರಂಗ ಮಾರ್ಗದಲ್ಲಿ ಹಠಾತ್ ಸ್ಥಗಿತಗೊಂಡಿತು. ಇದರಿಂದಾಗಿ  ವಿದ್ಯುತ್ ಕಡಿತಗೊಂಡು  ಬೋಗಿಯಲ್ಲಿ ಕತ್ತಲಾವರಿಸಿದ್ದು ಪ್ರಯಾಣಿಕರು, ರೈಲಿನಿಂದ ಇಳಿದು ಹಳಿಗಳ ಮೇಲೆ ನಡೆದು ಸಮೀಪದ ನಿಲ್ದಾಣವನ್ನು ತಲುಪಬೇಕಾಯ್ತು

ಚೆನ್ನೈನಲ್ಲಿ ನೀಲಿ ಮಾರ್ಗದ ಮೆಟ್ರೋ ರೈಲೊಂದು ಸುರಂಗದಲ್ಲಿ ಸಾಗುತ್ತಿರುವಾಗ ಹಠಾತನೆ ಸ್ಥಗಿತಗೊಂಡು ನಿಂತ ಘಟನೆ ನಡೆದಿದ್ದು, ಇದರಿಂದ ರೈಲಿನಲ್ಲಿದ್ದ ಪ್ರಯಾಣಿಕರು ಸುರಕ್ಷಿತ ಸ್ಥಳವನ್ನು ತಲುಪುವುದಕ್ಕೆ ರೈಲಿನಿಂದ ಇಳಿದು ಹಳ್ಳಿಯ ಮೇಲೆ ನಡೆಯಬೇಕಾದಂತಹ ಸ್ಥಿತಿ ನಿರ್ಮಾಣವಾಗಿತ್ತು. ಮಂಗಳವಾರ ಬೆಳಗ್ಗೆ ಚೆನ್ನೈ ಮೆಟ್ರೋ ರೈಲು ಸೆಂಟ್ರಲ್ ಮೆಟ್ರೋ ಮತ್ತು ಹೈಕೋರ್ಟ್ ನಿಲ್ದಾಣಗಳ ನಡುವಿನ ಇರುವ ಸುರಂಗ ಮಾರ್ಗದಲ್ಲಿ ಹಠಾತ್ ಆಗಿ ಸ್ಥಗಿತಗೊಂಡಿತ್ತು.

ವಿಮ್ಕೊ ನಗರ ಡಿಪೋ ಮತ್ತು ಚೆನ್ನೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ನಡುವೆ ಪ್ರಯಾಣಿಸುತ್ತಿದ್ದ ರೈಲು ಸುರಂಗ ಮಾರ್ಗದ ಮೂಲಕ ಹಾದು ಹೋಗುವಾಗ ತಾಂತ್ರಿಕ ದೋಷ ಕಂಡು ಬಂದು ಈ ಘಟನೆ ನಡೆದಿದೆ. ಮೆಟ್ರೋ ಹಠಾತ್ ಸ್ಥಗಿತಗೊಂಡಿದ್ದರಿಂದ ರೈಲಿನೊಳಗೆ ವಿದ್ಯುತ್ ಕಡಿತಗೊಂಡು ಬೋಗಿಗಳ ಒಳಗೆ ಕತ್ತಲು ಆವರಿಸಿದ್ದರಿಂದ ಪ್ರಯಾಣಿಕರು ಭಯಗೊಂಡಿದ್ದರು. ಘಟನೆ ನಡೆಯುವ ವೇಳೆ ರೈಲಿನಲ್ಲಿದ್ದ ಅನೇಕ ಪ್ರಯಾಣಿಕರು ಈ ದೃಶ್ಯವನ್ನು ತಮ್ಮ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿದ್ದಾರೆ. ವೀಡಿಯೋದಲ್ಲಿ ಜನರು ಕತ್ತಲಿನ ಬೋಗಿಯಲ್ಲಿ ಟಾರ್ಚ್‌ ಹಿಡಿದುಕೊಂಡು ಹೊರಗೆ ಬಂದು ಸುರಂಗದೊಳಗೆ ರೈಲಿನ ಹಳಿಗಳ ಮೇಲೆ ನಡೆದುಕೊಂಡು ಹೋಗುವುದನ್ನು ಕಾಣಬಹುದಾಗಿದೆ.

ರೈಲು ಹಠಾತ್ ಆಗಿ ನಿಂತಿದ್ದರಿಂದ ಹಾಗೂ ಲೈಟ್‌ಗಳು ಆಫ್ ಆಗಿ ಒಳಗೆ ಕತ್ತಲು ಆವರಿಸಿದ್ದರಿಂದ ಪ್ರಯಾಣಿಕರು ಒಳಗೆ ಏನಾಗಿದೆ ಎಂಬುದನ್ನು ತಿಳಿದುಕೊಳ್ಳುವುದಕ್ಕೆ ಬಾಗಿಲುಗಳಿಂದ ಹೊರಗೆ ಆತಂಕದಿಂದ ನೋಡುವುದು ವೀಡಿಯೋಗಳಲ್ಲಿ ಸೆರೆಯಾಗಿದೆ. ಸುಮಾರು 10 ನಿಮಿಷಗಳ ಕಾಲ ಪ್ರಯಾಣಿಕರು ಮೆಟ್ರೋದೊಳಗೆ ಸಿಲುಕಿದ್ದಾರೆ. ನಂತರ ನಂತರ ಘಟನಾ ಸ್ಥಳದಿಂದ ಸುಮಾರು 500 ಮೀಟರ್ ದೂರದಲ್ಲಿರುವ ಹತ್ತಿರದ ಹೈಕೋರ್ಟ್ ಮೆಟ್ರೋ ನಿಲ್ದಾಣಕ್ಕೆ ನಡೆದುಕೊಂಡು ಹೋಗುವಂತೆ ರೈಲಿನಲ್ಲಿ ಘೋಷಣೆ ಮಾಡಲಾಯಿತು ಎಂದು ಕೆಲವು ಪ್ರಯಾಣಿಕರು ಹೇಳಿದರು.

ಹಠಾತ್ ಸಂಭವಿಸಿದ ಘಟನೆಯಿಂದಾಗಿ ಕಚೇರಿಗೆ ಹೋಗುವವರು ಮತ್ತು ವಿದ್ಯಾರ್ಥಿಗಳು ಸೇರಿದಂತೆ ಅನೇಕ ಪ್ರಯಾಣಿಕರು ಸುರಂಗದೊಳಗೆ ಮಾರ್ಗವನ್ನು ಹುಡುಕಿಕೊಂಡು ಎಮರ್ಜೆನ್ಸಿ ಲೈಟ್‌ಗಳ ಸಹಾಯದಿಂದ ರೈಲ್ವೆ ಸಿಬ್ಬಂದಿ ಮಾರ್ಗದರ್ಶನದೊಂದಿಗೆ ಸುರಂಗದ ಮೂಲಕ ಎಚ್ಚರಿಕೆಯಿಂದ ಹೆಜ್ಜೆ ಹಾಕಿ ಸಮೀಪದ ಹೈಕೋರ್ಟ್ ಮೆಟ್ರೋ ನಿಲ್ದಾಣವನ್ನು ತಲುಪಿದ್ದಾರೆ.

ಘಟನೆಯ ನಂತರ ತಾಂತ್ರಿಕ ಸಮಸ್ಯೆಯಿಂದಾಗಿ ಈ ಅಡಚಣೆ ಉಂಟಾಗಿದೆ ಎಂದು ಚೆನ್ನೈ ಮೆಟ್ರೋ ರೈಲು ಲಿಮಿಟೆಡ್ (CMRL) ನಂತರ ದೃಢಪಡಿಸಿದೆ. ನಂತರ ಆ ಮಾರ್ಗದಲ್ಲಿ ಸ್ಟಕ್ ಆಗಿದ್ದ ರೈಲನ್ನು ಹಿಂತೆಗೆದು ಸ್ವಲ್ಪ ಹೊತ್ತಿನಲ್ಲಿ ಎಂದಿನಂತೆ ಸಾಮಾನ್ಯ ಕಾರ್ಯಾಚರಣೆಯನ್ನು ಪುನಃ ಸ್ಥಾಪಿಸಲಾಯಿತು.