ಬೆಕ್ಕುಗಳ ಮಲ ಯಾರಿಗೂ ಕಾಣುವುದಕ್ಕೆ ಸಿಗುವುದಿಲ್ಲ. ಅವುಗಳು ಮಣ್ಣು ಅಥವಾ ಮರಳಿನಲ್ಲಿ ಸಣ್ಣ ಹೊಂಡಗಳನ್ನು ಮಾಡಿ ಮಲವನ್ನು ಮುಚ್ಚಿಡುತ್ತವೆ. ಬೆಕ್ಕಿನ ಈ ವರ್ತನೆಯ ಹಿಂದಿನ ಕಾರಣದ ಬಗ್ಗೆ ನಿಮಗೆ ಗೊತ್ತಾ?
ಪ್ರಾಣಿ ಲೋಕ ಹಲವು ವಿಚಿತ್ರ ಹಾಗೂ ವಿಶೇಷಗಳನ್ನು ಹೊಂದಿರುವ ಅದ್ಭುತ ಲೋಕ. ಪ್ರಾಣಿಗಳ ಕೆಲ ವರ್ತನೆಗಳು ಅದು ಏಕೆ ಹಾಗೆ ಮಾಡುತ್ತಿರಬಹುದು ಎಂಬ ಕುತೂಹಲ ಮೂಡಲು ಕಾರಣವಾಗುತ್ತದೆ. ಅದೇ ರೀತಿ ಬೆಕ್ಕುಗಳ ಕೆಲ ಗುಣಗಳು ಕೂಡ ಯಾಕಿರಬಹುದು ಎಂದು ಪ್ರಶ್ನೆ ಮೂಡುವಂತೆ ಮಾಡುತ್ತದೆ. ಅದರಲ್ಲಿ ಮುಖ್ಯವಾಗಿ ಬೆಕ್ಕುಗಳ ಮಲವಿಸರ್ಜನೆ.
ಹೌದು ಬೆಕ್ಕುಗಳ ಮಲ ಯಾರಿಗೂ ಕಾಣುವುದಕ್ಕೆ ಸಿಗುವುದಿಲ್ಲ. ಅವುಗಳು ಮಣ್ಣು ಅಥವಾ ಮರಳಿನಲ್ಲಿ ಸಣ್ಣ ಹೊಂಡಗಳನ್ನು ಮಾಡಿ ಮುಚ್ಚಿಡುತ್ತವೆ. ಬೆಕ್ಕಿನ ಈ ವರ್ತನೆ ಅನೇಕರಿಗೆ ಕುತೂಹಲ ಹೆಚ್ಚಿಸುತ್ತದೆ. ಯಾಕೆ ಬೆಕ್ಕುಗಳು ಹೀಗೆ ಮಾಡುತ್ತಿರಬಹುದು ಎಂದು ಆದರೆ ಸಂಶೋಧನೆಗಳ ಪ್ರಕಾರ ಬೆಕ್ಕುಗಳ ಈ ವರ್ತನೆಗೆ ಕೆಲ ಕಾರಣಗಳಿವೆ ಅದು ಏನು ಅಂತ ಇಲ್ಲಿದೆ ಮಾಹಿತಿ.
ಬೆಕ್ಕು ಪ್ರಾಣಿಗಳಲ್ಲೇ ತನ್ನನ್ನು ಆಗಾಗ ಬಹಳ ಸ್ವಚ್ಛಗೊಳಿಸಿಕೊಳ್ಳುವ ಪ್ರಾಣಿ. ಬೆಕ್ಕು ಯಾವತ್ತೂ ಮಣ್ಣು ಅಥವಾ ಜಿಟ್ಟಿನಿಂದ ತುಂಬಿರುವುದು ತೀರಾ ಅಪರೂಪ ಸದಾಕಾಲ ಅದು ತನ್ನನ್ನು ನೆಕ್ಕಿ ನೆಕ್ಕಿ ಸ್ವಚ್ಚಗೊಳಿಸಿಕೊಳ್ಳುವುದರಲ್ಲೇ ದಿನದ ಬಹುತೇಕ ಸಮಯ ಕಳೆಯುತ್ತದೆ. ಆದರೆ ಬೆಕ್ಕು ತನ್ನ ಮಲವನ್ನು ಮುಚ್ಚಿಡುವುದಕ್ಕೆ ಅದರ ಈ ಕ್ಲೀನ್‌ನೆಸ್ಸೇ ಕಾರಣ ಅಂತ ನೀವು ಅಂದುಕೊಂಡರೆ ಅದು ಶುದ್ಧ ಸುಳ್ಳು.
ಹಾಗಿದ್ರೆ ಬೆಕ್ಕುಗಳು ತನ್ನ ಮಲವನ್ನು ಮುಚ್ಚಿಡುವುದೇಕೆ?
ಬೆಕ್ಕುಗಳು ತಮ್ಮ ಮಲವನ್ನು ತಮ್ಮ ಬದುಕುಳಿಯುವಿಕೆಯ ಭಾಗವಾಗಿ ಮರೆ ಮಾಡುತ್ತವೆ. ಇದು ಬೆಕ್ಕುಗಳನ್ನು ಅವುಗಳ ಶತ್ರುಗಳಿಂದ ಹಾಗೂ ಇತರ ಪ್ರತಿಸ್ಪರ್ಧಿಗಳಿಂದ ರಕ್ಷಿಸಿಕೊಳ್ಳುವುದಕ್ಕೆ ಸಹಾಯ ಮಾಡುತ್ತದೆ. ಜೊತೆಗೆ ತಮ್ಮ ವಾಸನೆಯನ್ನು ಮರೆಮಾಚಲು ಹಾಗೂ ತಾವಿರುವ ಪ್ರದೇಶವನ್ನು ಇತರ ಪರಭಕ್ಷಕ ಪ್ರಾಣಿಗಳು ಗುರುತಿಸುವುದನ್ನು ತಪ್ಪಿಸಲು ಸಹಾಯ ಮಾಡುತ್ತದೆ. ಈ ನಡವಳಿಕೆಯು ಅವುಗಳಿಗೆ ತಮ್ಮ ಪೂರ್ವಜರೆನಿಸಿದ ಕಾಡು ಬೆಕ್ಕುಗಳಿಂದಲೇ ಬಂದಿದೆ. ಹಾಗೂ ಬೆಕ್ಕುಗಳಿಗೆ ಸುರಕ್ಷಿತವಾಗಿರಲು ಮತ್ತು ಸಾಮಾಜಿಕ ಸಂವಹನಗಳನ್ನು ನಿರ್ವಹಿಸಲು ಸಹಾಯ ಮಾಡುತ್ತದೆ.
ಪರಭಕ್ಷಕಗಳ ದಾರಿ ತಪ್ಪಿಸಲು ಸಹಾಯ:
ಕಾಡಿನಲ್ಲಿ ಮಲದಿಂದ ಬರುವ ಬೆಕ್ಕಿನ ವಾಸನೆಯು ಪರಭಕ್ಷಕಗಳಿಗೆ ದಾರಿದೀಪವಾಗಬಹುದು. ಇದು ಅವುಗಳನ್ನು ದುರ್ಬಲಗೊಳಿಸುತ್ತದೆ. ಹೀಗಾಗಿ ತಮ್ಮ ಮಲವನ್ನು ಹೂಳುವ ಮೂಲಕ, ಬೆಕ್ಕುಗಳು ತಮ್ಮನ್ನು ಪತ್ತೆಹಚ್ಚುವ ಮತ್ತು ದಾಳಿ ಮಾಡುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.
ಪ್ರದೇಶ ನಿರ್ವಹಣೆ
ಮನುಷ್ಯರಿಗೆ ಬೌಂಡರಿ ಇರುವಂತೆ ಬೆಕ್ಕುಗಳು ತಮ್ಮ ಪ್ರದೇಶವನ್ನು ಗುರುತಿಸಲು ಮೂತ್ರ ಮತ್ತು ಮಲವನ್ನು ಬಳಸುತ್ತವೆ ಮತ್ತು ತಮ್ಮ ವಿಶಿಷ್ಟವಾದ ಪರಿಮಳ ಪ್ರೊಫೈಲ್‌ಗಳು ಇತರ ಬೆಕ್ಕುಗಳು ಈ ಬೆಕ್ಕುಗಳನ್ನು ಗುರುತಿಸಲು ಅನುವು ಮಾಡಿಕೊಡುತ್ತದೆ. ಆದರೂ ತಮ್ಮ ಮಲವನ್ನು ಮಣ್ಣಿನಲ್ಲಿ ಹೂಳುವುದರಿಂದ ಸಂಘರ್ಷ ಅಥವಾ ಸವಾಲನ್ನು ತಪ್ಪಿಸುವ ಉದ್ದೇಶ ಹೊಂದಿದೆ.
ಆದರೆ ಅಂತಹ ಬೆದರಿಕೆ ಇಲ್ಲದ ಸಾಕುಬೆಕ್ಕುಗಳು ಕೂಡ ಈ ಸಹಜ ನಡವಳಿಕೆಯನ್ನು ಹೊಂದಿವೆ. ಹೀಗಾಗಿ ಮನೆಯಲ್ಲಿ ತಮಗಾಗಿ ಇಟ್ಟ ಕಸದ ಪೆಟ್ಟಿಗೆ ಅಥವಾ ಮರಳು ಚೀಲದಲ್ಲಿ ಅವು ಮಲ ವಿಸರ್ಜನೆ ಮಾಡಿ ಮುಚ್ಚಿಡುತ್ತವೆ.
ಸ್ವಚ್ಛತೆ
ಬೆಕ್ಕುಗಳು ಸ್ವಚ್ಛತೆಗೆ ಹೆಸರಾಗಿದ್ದರೂ ಕೂಡ ಮಲ ಮುಚ್ಚಿಡುವುದಕ್ಕೆ ಅದು ಕಾರಣ ಅಲ್ಲ, ಆದರೂ ಬೆಕ್ಕುಗಳು ಸ್ವಚ್ಛ ಪರಿಸರವನ್ನು ಇಷ್ಟಪಡುತ್ತವೆ. ಹಾಗೂ ತಮ್ಮ ಮಲವನ್ನು ಹೂಳುವುದು ಅವುಗಳಿಗೆ ಹೆಚ್ಚು ಆರೋಗ್ಯಕರ ನೆಮ್ಮದಿ ನೀಡುತ್ತದೆ. ಹಾಗೆಯೇ ಬೆಕ್ಕುಗಳು ಮಲವಿಸರ್ಜನೆ ಮಾಡಲು ಖಾಸಗಿ ಮತ್ತು ಸುರಕ್ಷಿತ ಸ್ಥಳಗಳನ್ನು ಹುಡುಕುತ್ತವೆ.
