ಮಹಿಳೆ ಇನ್ನೂ ಸ್ವಲ್ಪ ಸಮಯ ಅಲ್ಲಿ ಕುಳಿತಿದ್ದರೆ ಗಂಭೀರವಾಗಿ ಗಾಯಗೊಂಡಿರುತ್ತಿದ್ದಳು ಅಥವಾ ಅವಳ ಜೀವಕ್ಕೂ ಅಪಾಯವಾಗುತ್ತಿತ್ತು.
ಪ್ರಾಣಿಗಳಿಗೆ ಮಾತನಾಡಲು ಬರುವುದಿಲ್ಲ. ಆದರೆ ಅವುಗಳಿಗೂ ಮನುಷ್ಯರಂತೆ ತಿಳುವಳಿಕೆ ಮತ್ತು ಭಾವನೆಗಳಿವೆ ಎಂದು ಹೇಳುತ್ತಾರೆ ವಿಜ್ಞಾನಿಗಳು. ಈ ಮಾತು ನಿಜವೆಂದು ಹಲವಾರು ಬಾರಿ ಸಾಬೀತಾಗಿದೆ. ಸದ್ಯ ಚೀನಾದ ವಿಡಿಯೋವೊಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಸಾಕು ಬೆಕ್ಕು ಸಮಯಕ್ಕೆ ಸರಿಯಾಗಿ ಅಪಾಯ ಗ್ರಹಿಸಿ ತನ್ನ ಮಾಲೀಕಳನ್ನು ದೊಡ್ಡ ಅಪಘಾತದಿಂದ ರಕ್ಷಿಸಿದೆ. ಈ ಸಂಪೂರ್ಣ ಘಟನೆ ಮನೆಯಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದ್ದು, ಸದ್ಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಹಾಗಾದರೆ ವಿಡಿಯೋದಲ್ಲಿ ಇರುವುದೇನು?, ನೋಡೋಣ ಬನ್ನಿ...
ಈ ವಿಡಿಯೋದಲ್ಲಿ ಒರ್ವ ಮಹಿಳೆ ತನ್ನ ಲಿವಿಂಗ್ ರೂಮಿನಲ್ಲಿ ಸೋಫಾದಲ್ಲಿ ಆರಾಮವಾಗಿ ಕುಳಿತು ತನ್ನ ಮೊಬೈಲ್ ಬಳಸುತ್ತಿರುವುದು ಸ್ಪಷ್ಟವಾಗಿ ಕಾಣುತ್ತದೆ. ಆಕೆಯ ಬಳಿ ಮೂರು ಸಾಕು ಬೆಕ್ಕುಗಳಿವೆ. ಇದ್ದಕ್ಕಿದ್ದಂತೆ ಒಂದು ಬೆಕ್ಕು ಮಾತ್ರ ಏನೋ ವಿಚಿತ್ರವೆನಿಸಿ ಎಚ್ಚರಗೊಂಡು ಸುತ್ತಲೂ ನೋಡಲು ಪ್ರಾರಂಭಿಸುತ್ತದೆ. ಸ್ವಲ್ಪ ಸಮಯದ ನಂತರ ಇತರ ಎರಡು ಬೆಕ್ಕುಗಳು ಸಹ ಚಡಪಡಿಸುತ್ತವೆ. ಅಷ್ಟೇ ಅಲ್ಲ, ಕೋಣೆಯ ಸುತ್ತಲೂ ಓಡಲು ಪ್ರಾರಂಭಿಸುತ್ತವೆ.
ಬೆಕ್ಕುಗಳ ಈ ನಡವಳಿಕೆಯನ್ನು ನೋಡಿ ಮಹಿಳೆಯ ಗಮನ ಮೊಬೈಲ್‌ನಿಂದ ಬೇರೆಡೆಗೆ ತಿರುಗಿ ಆಕೆ ತಕ್ಷಣ ಎಚ್ಚರಗೊಂಡು ಬೇಗನೆ ಎದ್ದು ನಿಲ್ಲುತ್ತಾಳೆ. ಇನ್ನೇನು ಆಕೆ ತಾನಿರುವ ಜಾಗದಿಂದ ಹೊರಟ ತಕ್ಷಣ ಟಿವಿಯಿದ್ದ ಜಾಗದ ಹಿಂದಿನ ಗೋಡೆಯಿಂದ ಭಾರವಾದ ಟೈಲ್ ಬೀಳುತ್ತದೆ. ಹಾಗೆ ನೋಡಿದರೆ ಆ ಟೈಲ್ ಕೆಲವು ಸೆಕೆಂಡುಗಳ ಹಿಂದೆ ಮಹಿಳೆ ಕುಳಿತಿದ್ದ ಅದೇ ಸ್ಥಳದಲ್ಲಿ ಬೀಳುತ್ತದೆ. ಮಹಿಳೆ ಇನ್ನೂ ಸ್ವಲ್ಪ ಸಮಯ ಅಲ್ಲಿ ಕುಳಿತಿದ್ದರೆ ಅವಳು ಗಂಭೀರವಾಗಿ ಗಾಯಗೊಂಡಿರುತ್ತಿದ್ದಳು ಅಥವಾ ಅವಳ ಜೀವಕ್ಕೂ ಅಪಾಯವಾಗುತ್ತಿತ್ತು.
ಬಳಕೆದಾರರು ಹೇಳಿದ್ದೇನು?
ಇಡೀ ಘಟನೆಯನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದ್ದು, ವಿಡಿಯೋವನ್ನು phoenixtv_news ಎಂಬ Instagram ಪೇಜ್‌ನಲ್ಲಿ ಶೇರ್ ಮಾಡಲಾಗಿದೆ. ವಿಡಿಯೋ ನೋಡಿದ ನಂತರ ಜನರು ಬೆಕ್ಕುಗಳ ಬುದ್ಧಿವಂತಿಕೆ ಕಂಡು ಹಾಡಿ ಹೊಗಳುತ್ತಿದ್ದಾರೆ. ಕೆಲವು ಬಳಕೆದಾರರು "ಬೆಕ್ಕುಗಳು ಅಪಾಯವನ್ನು ಮುಂಚಿತವಾಗಿ ಗ್ರಹಿಸುತ್ತವೆ ಎಂದರೆ ಮತ್ತೆ ಕೆಲವರು "ಅವು ಕೇವಲ ಸಾಕುಪ್ರಾಣಿಗಳಲ್ಲ, ನಮ್ಮ ಜೀವನದ ನಿಜವಾದ ರಕ್ಷಕರು." ಎಂದು ಕಾಮೆಂಟ್ ಮಾಡಿದ್ದಾರೆ. ಬಹುತೇಕರು “ಇದು ಸಾಕುಪ್ರಾಣಿಗಳ ನಿಷ್ಠೆ!” ಎಂದು ಬೆಕ್ಕುಗಳ ಬುದ್ಧಿವಂತಿಕೆಯನ್ನು ಶ್ಲಾಘಿಸಿದ್ದಾರೆ. ಹಾಗೆಯೇ ಮಹಿಳೆಯ ಲಕ್ ಕುರಿತು ಮಾತನಾಡಿದ್ದಾರೆ. ಆ ಮಹಿಳೆ ಬಹಳ ಅದೃಷ್ಟವಂತೆ ಎಂದು ಹೇಳಿದ್ದಾರೆ. ಏಕೆಂದರೆ ಕೆಲವೇ ಸೆಕೆಂಡುಗಳಲ್ಲಿ ಆಕೆ ಅಪಾಯದಿಂದ ತಪ್ಪಿಸಿಕೊಂಡಿದ್ದಾರೆ. ಕೆಲವರು ಹಾಸ್ಯದಿಂದ “ಈ ಬೆಕ್ಕುಗಳಿಗೆ ಸ್ಕಿಲ್ ಡೆವಲಪ್ ಮಾಡೋ ಟ್ರೈನಿಂಗ್ ಕೊಡ್ತೀರಾ?” ಎಂಬ ರೀತಿಯ ಕಾಮೆಂಟ್‌ಗಳೂ ಮಾಡಿದ್ದಾರೆ. ಒಟ್ಟಾರೆ ಇದೊಂದು ಎಮೋಷನಲ್ ಮತ್ತು ವೈರಲ್ ಕ್ಷಣವಾಗಿದೆ.
ಹೆಚ್ಚಿನ ಕಾಮೆಂಟ್, ವಿಡಿಯೋವನ್ನು ನೇರವಾಗಿ ವೀಕ್ಷಿಸಬೇಕೆಂದರೆ ಲಿಂಕ್ ಇಲ್ಲಿದೆ…
ಒಟ್ಟಾರೆ ಈ ವಿಡಿಯೋ ಉತ್ತಮ ಸಂದೇಶವನ್ನು ನೀಡುತ್ತದೆ. ಜನರು ಸಾಮಾನ್ಯವಾಗಿ ಪ್ರಾಣಿಗಳು ಕೇವಲ ಆಟವಾಡಲು ಅಥವಾ ಒಂಟಿತನವನ್ನು ತೊಡೆದುಹಾಕುವ ಜೀವಿಯೆಂದು ಪರಿಗಣಿಸುತ್ತಾರೆ. ಆದರೆ ಈ ಘಟನೆ ನಾವು ನಮ್ಮ ಸಾಕುಪ್ರಾಣಿಗಳನ್ನು ಎಚ್ಚರಿಕೆಯಿಂದ ಅರ್ಥಮಾಡಿಕೊಂಡರೆ, ಅವು ನಮಗೂ ಸಹಾಯ ಮಾಡಬಹುದು ಎಂದು ತೋರಿಸುತ್ತದೆ. ಅನೇಕ ಬಾರಿ ಪ್ರಾಣಿಗಳು ಮನುಷ್ಯರ ಮುಂದೆ ಅಪಾಯವನ್ನು ಗುರುತಿಸಿ ನಮ್ಮನ್ನು ಉಳಿಸುತ್ತವೆ.
ವೈರಲ್ ಆದ ಬೆಕ್ಕು ದತ್ತು ಸ್ವೀಕಾರ
ತನ್ನ ಪ್ರೀತಿಯ ಬೆಕ್ಕನ್ನು ನೋಡಿಕೊಳ್ಳಲು ಇಚ್ಛಿಸುವ ಯಾರಿಗಾದರೂ ಪಿತ್ರಾರ್ಜಿತ ಆಸ್ತಿಯನ್ನು ಬಿಟ್ಟುಕೊಡಲು ಚೀನಾದ ವ್ಯಕ್ತಿಯೊಬ್ಬರು ಯೋಜಿಸಿದ್ದಾರೆ. ತಮ್ಮ ಪ್ರೀತಿಯ ಬೆಕ್ಕಿಗೆ ಉತ್ತಮ ಆರೈಕೆಯನ್ನು ಒದಗಿಸಬೇಕೆಂಬ ಷರತ್ತಿನ ಮೇಲೆ ತಮ್ಮ ಸಂಪೂರ್ಣ ಆಸ್ತಿಯನ್ನು ಅಪರಿಚಿತರಿಗೆ ನೀಡಲಿದ್ದಾರೆ. ಲಾಂಗ್ ಎಂಬ ಉಪನಾಮದಿಂದ ಗುರುತಿಸಲ್ಪಟ್ಟ 82 ವರ್ಷದ ಈ ವ್ಯಕ್ತಿ ತನ್ನ ಮರಣದ ನಂತರ ಆಸ್ತಿಯನ್ನು ಯಾರಿಗಾದರೂ ಬಿಟ್ಟುಕೊಡಲು ಸಿದ್ಧರಿದ್ದಾರೆ. ಆದರೆ ಅವರದು ಒಂದೇ ಒಂದು ಷರತ್ತು. ತಮ್ಮ ಸಾಕುಪ್ರಾಣಿಯನ್ನು ಪೋಷಿಸಬೇಕು.