ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದ ಕುಖ್ಯಾತ 'ಬ್ಲೂ ಡ್ರಮ್' ಕೊಲೆ ಪ್ರಕರಣದಲ್ಲಿ ಪತಿಯನ್ನು ಹತ್ಯೆಗೈದ ಪತ್ನಿ ಮುಸ್ಕಾನ್ ಹಾಗೂ ಆಕೆಯ ಪ್ರಿಯಕರನಿಗೆ ನ್ಯಾಯಾಲಯ ಮರಣದಂಡನೆ ವಿಧಿಸಿದೆ.

ಮೀರತ್ (ಅ.14): ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ಉತ್ತರ ಪ್ರದೇಶದ ಮೀರತ್‌ನ ಕುಖ್ಯಾತ 'ಬ್ಲೂ ಡ್ರಮ್' (Blue Drum) ಕೊಲೆ ಪ್ರಕರಣದಲ್ಲಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಐತಿಹಾಸಿಕ ತೀರ್ಪು ಪ್ರಕಟಿಸಿದೆ. ಮರ್ಚೆಂಟ್ ನೇವಿ ಅಧಿಕಾರಿಯಾಗಿದ್ದ ಪತಿಯನ್ನೇ ಭೀಕರವಾಗಿ ಕೊಲೆ ಮಾಡಿ, ದೇಹದ ಭಾಗಗಳನ್ನು ತುಂಡರಿಸಿ ಸಿಮೆಂಟ್ ತುಂಬಿದ ಬ್ಲೂ ಡ್ರಮ್‌ನಲ್ಲಿ ಅಡಗಿಸಿಟ್ಟಿದ್ದ ಕಿರಾತಕ ಪತ್ನಿ ಮುಸ್ಕಾನ್ ರಸ್ತೋಗಿ (Muskan Rastogi) ಹಾಗೂ ಆಕೆಯ ಪ್ರಿಯಕರ ಸಾಹಿಲ್ ಶುಕ್ಲಾ (Sahil Shukla) ಇಬ್ಬರಿಗೂ ಗರಿಷ್ಠ 'ಮರಣದಂಡನೆ' (Death Penalty) ಶಿಕ್ಷೆ ವಿಧಿಸಲಾಗಿದೆ. ಪ್ರಕರಣ ನಡೆದು ಸುಮಾರು ಎರಡು ವರ್ಷಗಳ ಬಳಿಕ ಮೀರತ್ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಅರವಿಂದ್ ಕುಮಾರ್ ಮಿಶ್ರಾ ಅವರು ಬುಧವಾರ ಈ ಮಹತ್ವದ ತೀರ್ಪನ್ನು ನೀಡಿದ್ದಾರೆ.

ಮಹಾಭಾರತದ ಉಲ್ಲೇಖ - ಕೋರ್ಟ್‌ ಅಂಗಳದಲ್ಲಿ 'ಭಾರತ್ ಮಾತಾ ಕಿ ಜೈ' ಘೋಷಣೆ:

ತೀರ್ಪು ಪ್ರಕಟಿಸುವ ಸಂದರ್ಭದಲ್ಲಿ ನ್ಯಾಯಾಧೀಶರು ಮಹಾಭಾರತವನ್ನು ಉಲ್ಲೇಖಿಸಿ, ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆಯನ್ನು ನೀಡುವುದು ಸಹ ಧರ್ಮದ ಒಂದು ಭಾಗವಾಗಿದೆ ಎಂದು ಬಲವಾಗಿ ಹೇಳಿದರು. ಜೈಲಿನಿಂದ ವಿಡಿಯೋ ಕಾನ್ಫರೆನ್ಸಿಂಗ್ (Video Conferencing) ಮೂಲಕ ಜಡ್ಜ್ ಮುಂದೆ ಹಾಜರಾಗಿದ್ದ ಇಬ್ಬರೂ ಆರೋಪಿಗಳಿಗೆ ಗಲ್ಲು ಶಿಕ್ಷೆಯ ತೀರ್ಪನ್ನು ಓದಿ ಹೇಳಲಾಯಿತು. ಈ ವೇಳೆ ಕೋರ್ಟ್‌ ಹಾಲ್‌ನಲ್ಲಿ ಮೃತ ಸೌರಭ್ ರಜಪೂತ್ ಅವರ ತಾಯಿ ರೇಣು ರಜಪೂತ್ ಹಾಗೂ ಸೋದರ ಉಪಸ್ಥಿತರಿದ್ದರು.

ನ್ಯಾಯಾಧೀಶರು ಮರಣದಂಡನೆ ಶಿಕ್ಷೆ ಘೋಷಿಸುತ್ತಿದ್ದಂತೆ ಕೋರ್ಟ್‌ ಹಾಲ್‌ನಲ್ಲಿದ್ದ ವಕೀಲರು ಹಾಗೂ ಸಾರ್ವಜನಿಕರು 'ಭಾರತ್ ಮಾತಾ ಕಿ ಜೈ' ಎಂಬ ಹರ್ಷೋದ್ಗಾರಗಳನ್ನು ಕೂಗಿದರು ಹಾಗೂ ಕೋರ್ಟ್ ಆವರಣದ ಹೊರಗೆ ಸಂಭ್ರಮಾಚರಣೆಗಳು ನಡೆದವು. ಇಬ್ಬರೂ ಆರೋಪಿಗಳಿಗೆ ಎಸಗಿದ ಘೋರ ಅಪರಾಧಕ್ಕಾಗಿ ಮರಣದಂಡನೆ ವಿಧಿಸಲಾಗಿದೆ ಎಂದು ಸಾರ್ವಜನಿಕ ಅಭಿಯೋಜಕರ ಪರ ವಕೀಲ ಕೃಷ್ಣ ಕುಮಾರ್ ದುಬೆ ದೃಢಪಡಿಸಿದ್ದಾರೆ.

ಸಾವಿರ ಜೀವ ತೆಗೆಯುವ ಬದಲು ದೂರವಾಗಿ: ಭಾವುಕರಾದ ಮೃತನ ತಾಯಿ

ತೀರ್ಪಿನ ಬಳಿಕ ಭಾವುಕರಾಗಿ ಪ್ರತಿಕ್ರಿಯಿಸಿದ ಮೃತ ಸೌರಭ್ ತಾಯಿ ರೇಣು ರಜಪೂತ್, ಒಟ್ಟಿಗೆ ಬಾಳಲು ಇಷ್ಟವಿಲ್ಲದ ದಂಪತಿಗಳು ದೌರ್ಜನ್ಯ ಮತ್ತು ಕೊಲೆಗೆ ಇಳಿಯುವ ಬದಲು ಪ್ರತ್ಯೇಕವಾಗಿ ವಿಚ್ಛೇದನ ಪಡೆದು ಬಾಳುವುದು ಲೇಸು. ಕೇವಲ ತಮ್ಮ ಸ್ವಾರ್ಥಕ್ಕಾಗಿ ಇನ್ನೊಬ್ಬರ ಹೊಟ್ಟೆಯಲ್ಲಿ ಹುಟ್ಟಿದ ಮಗುವನ್ನು ಕೊಲ್ಲಬೇಡಿ. ನಮ್ಮ ಪಾಲಿಗೆ ನಮ್ಮ ಮಗ ಎಲ್ಲೂ ಹೋಗಿಲ್ಲ, ಅವನ ನೆನಪುಗಳು ಮನೆಯ ಪ್ರತಿಯೊಂದು ಮೂಲೆಯಲ್ಲೂ ಇವೆ. ಇಂತಹ ಪೈಶಾಚಿಕ ಕೃತ್ಯ ಎಸಗುವ ಪ್ರತಿಯೊಬ್ಬರಿಗೂ ಕೊನೆಗೆ ಮರಣದಂಡನೆಯೇ ಸಿಗಬೇಕು ಎಂದು ಕಣ್ಣೀರಿಟ್ಟರು. ಈ ತೀರ್ಪು ಬರುವ ಮುನ್ನವೇ ಆರೋಪಿ ಮುಸ್ಕಾನ್ ಪೋಷಕರು ನ್ಯಾಯಾಲಯಕ್ಕೆ ಲಿಖಿತ ಹೇಳಿಕೆ ಸಲ್ಲಿಸಿ, ತಮ್ಮ ಮಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಿದರೂ ತಾವೇನೂ ವಿರೋಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು.

ತೀರ್ಪಿಗೂ ಮುನ್ನ ರಾತ್ರಿಯೆಲ್ಲಾ ನಿದ್ರಿಸದೆ ಕಳೆದ ಆರೋಪಿಗಳು!

ಗಲ್ಲು ಶಿಕ್ಷೆಯ ಆತಂಕದಲ್ಲಿದ್ದ ಆರೋಪಿಗಳಾದ ಮುಸ್ಕಾನ್ ಹಾಗೂ ಸಾಹಿಲ್ ಮಂಗಳವಾರ ರಾತ್ರಿಯಿಡೀ ನಿದ್ರೆಯಿಲ್ಲದೆ ಕಳೆದಿದ್ದರು ಎಂದು ಹಿರಿಯ ಜೈಲು ಸೂಪರಿಂಟೆಂಡೆಂಟ್ ವೀರೇಶ್ ರಾಜ್ ಶರ್ಮಾ ತಿಳಿಸಿದ್ದಾರೆ. ಇಬ್ಬರೂ ಮಂಗಳವಾರ ರಾತ್ರಿ ಸರಿಯಾಗಿ ಊಟ ಮಾಡಿರಲಿಲ್ಲ, ಬುಧವಾರ ಬೆಳಗಿನ ಉಪಹಾರವನ್ನೂ ಮುಟ್ಟಿರಲಿಲ್ಲ.

ವಿಚಾರಣೆ ವೇಳೆ ಜಡ್ಜ್, ಸಾಹಿಲ್‌ಗೆ ಈ ಹಿಂದೆ ಯಾವುದೇ ಅಪರಾಧ ಎಸಗಿದ್ದೀಯಾ ಹಾಗೂ ಶಿಕ್ಷೆಯ ಕುರಿತು ಏನಾದರೂ ಹೇಳುವುದಿದೆಯೇ ಎಂದು ಕೇಳಿದಾಗ, ಆತ ಯಾವುದೇ ಹೇಳಿಕೆ ನೀಡದೆ ಮೌನಕ್ಕೆ ಶರಣಾಗಿದ್ದ. ದೋಷಿ ಎಂದು ತೀರ್ಪು ಬಂದ ದಿನದಿಂದಲೂ ಮುಸ್ಕಾನ್ ಜೈಲಿನಲ್ಲಿ ಯಾರೊಂದಿಗೂ ಮಾತನಾಡದೆ, ಮಹಿಳಾ ಬ್ಯಾರಾಕ್‌ನಲ್ಲಿ ಏಕಾಂಗಿಯಾಗಿ ಪ್ರಾರ್ಥನೆಯಲ್ಲಿ ತೊಡಗಿದ್ದಳು. ಜೈಲಿನಲ್ಲಿದ್ದಾಗ ತನ್ನ ಮಗಳನ್ನು ನೋಡಲು ಆಕೆ ಹಂಬಲಿಸಿದ್ದಳು.

ನ್ಯಾಯಾಲಯದ ಅಂತಿಮ ತೀರ್ಪಿನ ಬಳಿಕ ಇಬ್ಬರನ್ನೂ ಜೈಲು ಕೈದಿಗಳ ಕಡ್ಡಾಯ ಸಮವಸ್ತ್ರಕ್ಕೆ (Prison Uniform) ಬದಲಾಯಿಸಲಾಗಿದ್ದು, ನಿಯಮಾವಳಿ ಪ್ರಕಾರ ಪ್ರತ್ಯೇಕ ಕಠಿಣ ಜೈಲುಗಳಿಗೆ ವರ್ಗಾಯಿಸಲು ಜೈಲು ಆಡಳಿತ ಮಂಡಳಿ ಕ್ರಮ ಕೈಗೊಂಡಿದೆ.

ಏನಿದು ಭೀಕರ 'ಬ್ಲೂ ಡ್ರಮ್' ಕೊಲೆ ಪ್ರಕರಣ?

2025 ರ ಮಾರ್ಚ್ 3 ರಂದು ಮರ್ಚೆಂಟ್ ನೇವಿ ಅಧಿಕಾರಿಯಾಗಿದ್ದ ಸೌರಭ್ ರಜಪೂತ್‌ನನ್ನು ಆತನ ಪತ್ನಿ ಮುಸ್ಕಾನ್ ಹಾಗೂ ಆಕೆಯ ಪ್ರಿಯಕರ ಸಾಹಿಲ್ ಭೀಕರವಾಗಿ ಹತ್ಯೆ ಮಾಡಿದ್ದರು. ಬಳಿಕ ಆತನ ಮೃತದೇಹವನ್ನು ಸಣ್ಣ ಸಣ್ಣ ತುಂಡುಗಳಾಗಿ ಕೊಚ್ಚಿ, ಮನೆಯಲ್ಲಿದ್ದ ನೀಲಿ ಬಣ್ಣದ ಪ್ಲಾಸ್ಟಿಕ್ ಡ್ರಮ್‌ನಲ್ಲಿ (Blue Drum) ಹಾಕಿ, ಅದರ ಮೇಲೆ ಸಿಮೆಂಟ್ ಕಾಂಕ್ರೀಟ್ ತುಂಬಿ ಮುಚ್ಚಿಟ್ಟಿದ್ದರು. ಮರುದಿನವೇ ಪೊಲೀಸರು ಕಾರ್ಯಾಚರಣೆ ನಡೆಸಿ ಈ ಸಿಮೆಂಟ್ ತುಂಬಿದ್ದ ಬ್ಲೂ ಡ್ರಮ್ ಅನ್ನು ವಶಪಡಿಸಿಕೊಂಡು, ಇಬ್ಬರನ್ನೂ ಬಂಧಿಸಿದ್ದರು. 2025 ರ ಜುಲೈನಲ್ಲಿ ಮೀರತ್ ಕೋರ್ಟ್‌ನಲ್ಲಿ ತನಿಖೆ ಆರಂಭಗೊಂಡು, ಪೊಲೀಸರು ಬರೋಬ್ಬರಿ 1,000 ಪುಟಗಳ ಬೃಹತ್ ದೋಷಾರೋಪಣೆ ಪಟ್ಟಿಯನ್ನು (Chargesheet) ಸಲ್ಲಿಸಿದ್ದರು. ಒಟ್ಟು 13 ತಿಂಗಳ ಸುದೀರ್ಘ ತನಿಖೆ ಹಾಗೂ 126 ಹಂತಗಳ ಸರಣಿ ವಿಚಾರಣೆಗಳ ಬಳಿಕ ಕೋರ್ಟ್‌ ಸೆಪ್ಟೆಂಬರ್ 30 ರಂದು ಇಬ್ಬರನ್ನೂ ತಪ್ಪಿತಸ್ಥರು ಎಂದು ಘೋಷಿಸಿತ್ತು. ಇದೀಗ ಇಬ್ಬರಿಗೂ ಮರಣದಂಡನೆ ಶಿಕ್ಷೆ ವಿಧಿಸಿ ಇತಿಹಾಸ ಬರೆದಿದೆ.