ತಿರುಪ್ಪರಂಕುಂಡ್ರಂ ವಿವಾದದಲ್ಲಿ ಸುಪ್ರೀಂ ಕೋರ್ಟ್ ಆದೇಶ ಟಿವಿಕೆ ಸರ್ಕಾರದ ಅಸಮರ್ಥತೆಗೆ ಕನ್ನಡಿ ಎಂದು ಎಂ.ಕೆ. ಸ್ಟಾಲಿನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯದ ಹಕ್ಕುಗಳು ಮತ್ತು ಮತಸೌಹಾರ್ದತೆಗೆ ಸಿಎಂ ವಿಜಯ್ ಅವರ ಧೋರಣೆ ಅಪಾಯ ತಂದಿದೆ ಎಂದು ಟೀಕಿಸಿದ್ದಾರೆ.

ಚೆನ್ನೈ (ನ.27): ತಮಿಳುನಾಡಿನ ಇತಿಹಾಸದಲ್ಲೇ ಹಿಂದೆಂದೂ ಕಾಣದ ರೀತಿಯಲ್ಲಿ ಸಂಪ್ರದಾಯ, ಮತಸೌಹಾರ್ದತೆ ಮತ್ತು ರಾಜ್ಯದ ಹಕ್ಕುಗಳಿಗೆ ಅಸಮರ್ಥ ಟಿವಿಕೆ (TVK) ಸರ್ಕಾರ ಅಪಾಯ ತಂದೊಡ್ಡಿದೆ ಎಂದು ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ (MK Stalin) ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಿರುಪ್ಪರಂಕುಂಡ್ರಂ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ (Supreme Court) ನೀಡಿರುವ ಆದೇಶವು ಟಿವಿಕೆ ಸರ್ಕಾರದ ಸ್ಪಷ್ಟ ಸೋಲಾಗಿದ್ದು, ಆಡಳಿತ ವೈಫಲ್ಯ ಮತ್ತು ಮುಖ್ಯಮಂತ್ರಿ ವಿಜಯ್ ಅವರ ಧೋರಣೆಯ ವಿರುದ್ಧ ಅವರು ಕಟುವಾಗಿ ವಾಗ್ದಾಳಿ ನಡೆಸಿದ್ದಾರೆ!

ತಿರುಪ್ಪರಂಕುಂಡ್ರಂ ಬೆಟ್ಟದ ತುದಿಯಲ್ಲಿರುವ ದೀಪತೋನ್‌ ಮೇಲೆ ನಾಳೆ ದೀಪ ಬೆಳಗುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿರುವುದನ್ನು ಉಲ್ಲೇಖಿಸಿರುವ ಎಂ.ಕೆ. ಸ್ಟಾಲಿನ್, ಆಡಳಿತ ನಿರ್ವಹಣೆಯಲ್ಲಿ ಅಸಮರ್ಥವಾಗಿರುವ ವಿಜಯ್ ಸರ್ಕಾರವು ನ್ಯಾಯಾಲಯದಲ್ಲಿ ಪ್ರಬಲ ವಾದಗಳನ್ನು ಮಂಡಿಸದೆ ತಮಿಳುನಾಡಿಗೆ ಅವಮಾನ ತಂದಿದೆ ಎಂದು ದೂರಿದ್ದಾರೆ.

ಸುಪ್ರೀಂ ಕೋರ್ಟ್ ಹೊರಡಿಸಿರುವ ನಿರ್ದೇಶನಗಳ ಕುರಿತು ಆಘಾತ ವ್ಯಕ್ತಪಡಿಸಿರುವ ಸ್ಟಾಲಿನ್, ಸರ್ಕಾರದ ನಡೆಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬೆಟ್ಟದ ಸಂಪೂರ್ಣ ಭಾಗವನ್ನು ಸಿಆರ್‌ಪಿಎಫ್ (CRPF) ಪಡೆಗೆ ಹಸ್ತಾಂತರಿಸುವುದು, ದೇವಸ್ಥಾನದ ಧರ್ಮದರ್ಶಿ ಮಂಡಳಿ ವಿಸರ್ಜನೆ, ನಿವೃತ್ತ ನ್ಯಾಯಾಧೀಶರನ್ನೊಳಗೊಂಡ ಸಮಿತಿಗೆ ಜವಾಬ್ದಾರಿ ನೀಡುವುದು, ಮುಖ್ಯ ಕಾರ್ಯದರ್ಶಿ, ಡಿಜಿಪಿ (DGP), ಧಾರ್ಮಿಕ ದತ್ತಿ ಇಲಾಖೆ ಆಯುಕ್ತರು, ಮದುರೈ ಜಿಲ್ಲಾಧಿಕಾರಿ, ಡಿಸಿ (DC) ಸೇರಿದಂತೆ ಹಲವರು ಖುದ್ದಾಗಿ ಹಾಜರಾಗಬೇಕು ಎಂದು ಸುಪ್ರೀಂ ಕೋರ್ಟ್ ನೀಡಿರುವ ಆದೇಶಗಳು ಆಘಾತಕಾರಿಯಾಗಿವೆ ಎಂದು ಅವರು ಹೇಳಿದ್ದಾರೆ.

ಸುಪ್ರೀಂ ಕೋರ್ಟ್‌ನಲ್ಲಿ ಸೂಕ್ತ ಮತ್ತು ಬಲವಾದ ವಾದಗಳನ್ನು ಮುಂದಿಡದಿರುವುದು, ಹಲವು ದ್ವಂದ್ವ ನಿಲುವುಗಳನ್ನು ತಳೆದಿರುವುದು ಹಾಗೂ ಸರ್ಕಾರ ಜವಾಬ್ದಾರಿ ಹೊರಬೇಕಾದ ಕಡೆ ಹೇಡಿತನದಿಂದ ಧರ್ಮದರ್ಶಿ ಮಂಡಳಿಯನ್ನು ಕಾರಣ ತೋರಿಸಿ ಅಡಗಿಕೊಂಡಿರುವುದು, ಹೀಗೆ 'ಕೋತಿ ಕೈಯಲ್ಲಿ ಸಿಕ್ಕ ಹೂಮಾಲೆಯಂತೆ' ಎಲ್ಲವನ್ನೂ ಟಿವಿಕೆ ಸರ್ಕಾರ ಹಾಳುಮಾಡಿದೆ ಎಂದು ಸ್ಟಾಲಿನ್ ಟೀಕಿಸಿದ್ದಾರೆ.

ತಿರುಪ್ಪರಂಕುಂಡ್ರಂ ಮತ್ತು ರಾಜ್ಯದ ಹಿತಾಸಕ್ತಿ ಕಾಪಾಡುವಲ್ಲಿ ಡಿಎಂಕೆ (DMK) ಪಾತ್ರವನ್ನು ಸ್ಟಾಲಿನ್ ತಮ್ಮ ಪೋಸ್ಟ್‌ನಲ್ಲಿ ಪ್ರಸ್ತಾಪಿಸಿದ್ದಾರೆ. ತಿರುಪ್ಪರಂಕುಂಡ್ರಂನಲ್ಲಿ ತಲೆತಲಾಂತರದಿಂದ ನಡೆದುಕೊಂಡು ಬಂದ ಪೂಜಾ ಸಂಪ್ರದಾಯಗಳು ಮತ್ತು ಪದ್ಧತಿಗಳನ್ನು ಉಳಿಸಿದ್ದು ಡಿಎಂಕೆ ಸರ್ಕಾರ. ಮತಸೌಹಾರ್ದತೆ, ಶಾಂತಿ ಮತ್ತು ರಾಜ್ಯದ ಹಕ್ಕುಗಳನ್ನು ಎತ್ತಿಹಿಡಿದಿದ್ದು ಡಿಎಂಕೆ ಸರ್ಕಾರ ಎಂದು ಅವರು ಹೇಳಿದ್ದಾರೆ. ಆದರೆ ಇಂದು ಸಂಪೂರ್ಣವಾಗಿ ತನ್ನ ಅಸಮರ್ಥತೆ, ಪ್ರಚಾರದ ಹುಚ್ಚು ಮತ್ತು ಹೇಡಿತನದಿಂದ ಟಿವಿಕೆ ಸರ್ಕಾರ ಕೈಚೆಲ್ಲಿದೆ ಎಂದು ಆರೋಪಿಸಿದ್ದಾರೆ.

ದ್ರಾವಿಡ ಚಳವಳಿಯು ಅರವತ್ತು ವರ್ಷಗಳ ಕಾಲ ರಕ್ತ ಸುರಿಸಿ, ಅನೇಕ ಜೀವಗಳನ್ನು ಬಲಿಕೊಟ್ಟು ಹೋರಾಡಿ ಪಡೆದುಕೊಂಡು ರಕ್ಷಿಸುತ್ತಾ ಬಂದಿದ್ದ ರಾಜ್ಯದ ಹಕ್ಕುಗಳನ್ನು ಹಾಗೂ 100 ವರ್ಷಗಳ ಹಿಂದೆ ಆರಂಭವಾಗಿ ಹಂತಹಂತವಾಗಿ ಮೋಸಗಾರರ ಗುಂಪುಗಳ ಕೈಯಲ್ಲಿದ್ದ ದೇವಸ್ಥಾನಗಳನ್ನು ಜನತೆಯ ಆಡಳಿತದ ನಿಯಂತ್ರಣಕ್ಕೆ ದ್ರಾವಿಡ ಚಳವಳಿ ಮತ್ತು ಡಿಎಂಕೆ ತಂದಿದ್ದನ್ನು ಒಂದೇ ಪ್ರಕರಣದಲ್ಲಿ ಒಕ್ಕೂಟ ಸರ್ಕಾರಕ್ಕೆ (Union Government) ಧಾರೆ ಎರೆಯಲಾಗಿದೆ ಎಂದು ಸ್ಟಾಲಿನ್ ಕಿಡಿಕಾರಿದ್ದಾರೆ.

ಸಿಎಂ ವಿಜಯ್ ವಿರುದ್ಧ ಸ್ಟಾಲಿನ್ ವಾಗ್ದಾಳಿ; ಮತಸೌಹಾರ್ದತೆಗೆ ಕರೆ

ಮುಖ್ಯಮಂತ್ರಿ ವಿಜಯ್ ಅವರ ಕಾರ್ಯವೈಖರಿ ಮತ್ತು ಮೌನದ ವಿರುದ್ಧವೂ ಎಂ.ಕೆ. ಸ್ಟಾಲಿನ್ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ಮುಖ್ಯಮಂತ್ರಿ ತಮ್ಮ ಜವಾಬ್ದಾರಿಗಳನ್ನು ಬೇರೆಯವರಿಗೆ ಹೊರಿಸಿ (Outsource), 'ಸ್ಟ್ಯಾಂಡ್-ಅಪ್ ಕಾಮಿಡಿಯನ್' (Stand-up comedian) ರೀತಿ ಸಂಭಾಷಣೆಗಳನ್ನು ನಟಿಸಿ ತೋರಿಸುತ್ತಿರುವ ರಾಜ್ಯ ಸರ್ಕಾರದ ಸ್ಥಿತಿ ಹೇಗಿರುತ್ತದೆ ಎಂಬುದನ್ನು ಇಂದಿನ ಸುಪ್ರೀಂ ಕೋರ್ಟ್ ಆದೇಶ ತೋರಿಸಿದೆ ಎಂದು ಸ್ಟಾಲಿನ್ ಹೇಳಿದ್ದಾರೆ.

ತಮಿಳುನಾಡಿನ ಪ್ರಸ್ತುತ ಮುಖ್ಯಮಂತ್ರಿ ರಾಜಕೀಯಕ್ಕೆ ಹೊಸಬರು, ಆಡಳಿತ ನಿರ್ವಹಣೆಯಲ್ಲಿ ಅನುಭವ ಇಲ್ಲದವರು ಎಂಬುದು ಸಮಸ್ಯೆಯಲ್ಲ. ಅನುಭವಿಗಳು ಮತ್ತು ಜ್ಞಾನವುಳ್ಳ ಯಾರನ್ನೂ ಅವರು ಹತ್ತಿರ ಸೇರಿಸುವುದೇ ಇಲ್ಲ ಎಂಬುದೇ ತಮಿಳುನಾಡಿನ ಹಲವು ಸಮಸ್ಯೆಗಳಿಗೆ ಕಾರಣವಾಗುತ್ತಿದೆ ಎಂದು ಅವರು ದೂರಿದ್ದಾರೆ. ಇಷ್ಟೆಲ್ಲಾ ಆದ ಮೇಲೂ ಮುಖ್ಯಮಂತ್ರಿ ವಿಜಯ್ ಬಾಯಿ ಬಿಡಲು ನಿರಾಕರಿಸುತ್ತಿರುವುದು ತಮಿಳುನಾಡಿಗೆ ಮಾಡುತ್ತಿರುವ ಐತಿಹಾಸಿಕ ದ್ರೋಹ ಎಂದು ಕರೆದಿದ್ದಾರೆ. ಕೊನೆಯಲ್ಲಿ ತಮಿಳುನಾಡಿನ ಜನತೆಗೆ ಮನವಿ ಮಾಡಿರುವ ಸ್ಟಾಲಿನ್, ಯಾವುದೇ ಪರಿಸ್ಥಿತಿಯಲ್ಲೂ ನಮ್ಮ ಮತಸೌಹಾರ್ದತೆಗೆ ಧಕ್ಕೆಯಾಗದಂತೆ ಕಾಪಾಡೋಣ. ನಮ್ಮ ಮುಂದಿನ ಪೀಳಿಗೆಗೆ ನಾವು ಮಾದರಿಯಾಗಿರೋಣ ಎಂದು ಹೇಳಿದ್ದಾರೆ.