ಉತ್ತರ ಪ್ರದೇಶದಲ್ಲಿ, ಮೊದಲ ಪತ್ನಿಯೊಂದಿಗೆ ವಿಚ್ಛೇದನ ಪ್ರಕರಣ ನ್ಯಾಯಾಲಯದಲ್ಲಿರುವಾಗಲೇ ಎರಡನೇ ಮದುವೆಯಾಗಲು ಯತ್ನಿಸಿದ ವ್ಯಕ್ತಿಯೊಬ್ಬನಿಗೆ ಆತನ ಮೊದಲ ಪತ್ನಿ ಶಾಕ್ ನೀಡಿದ್ದಾಳೆ. ವರನು ವಧುವಿಗೆ ತಾಳಿ ಕಟ್ಟುವಷ್ಟರಲ್ಲಿ ಮದುವೆ ಮಂಟಪಕ್ಕೆ ಆಗಮಿಸಿದ ಆಕೆ, ಮದುವೆ ನಿಲ್ಲಿಸಿದ್ದಾಳೆ.
ಡಿವೋರ್ಸ್ ಪ್ರಕರಣ ಬಾಕಿ ಇದ್ದಾಗಲೇ 2ನೇ ಮದುವೆಗೆ ಸಿದ್ಧತೆ:
ಭಾರತದಲ್ಲಿ ನಡೆಯುವಷ್ಟು ಗೋಲ್‌ಮಾಲ್ ಮತ್ತೆಲೂ ಇಲ್ಲವೇನೋ? ಅದೇ ರೀತಿ ಇಲ್ಲೊಂದು ಕಡೆ ಮೊದಲ ಪತ್ನಿ ಇದ್ದಾಗಲೇ ಮತ್ತೊಂದು ಮದುವೆಯಾಗಲು ಹೊರಟಿದ್ದ ವ್ಯಕ್ತಿಯೋರ್ವನಿಗೆ ಆತನ ಮೊದಲ ಪತ್ನಿ ಶಾಕ್ ನೀಡಿದ್ದಾಳೆ. ಮದುವೆಯ ಸಮಯದಲ್ಲಿ ವರ ತನ್ನ ವಧುವಿಗೆ ಇನ್ನೇನು ತಾಳಿ ಕಟ್ಟಬೇಕು ಅನ್ನುವಷ್ಟರಲ್ಲಿ ವೇದಿಕೆ ಮೇಲೇರಿ ಬಂದ ಆತನ ಮೊದಲ ಪತ್ನಿ ತಮ್ಮ ಮದುವೆಯ ದಾಖಲೆಗಳನ್ನು ಅಲ್ಲಿ ತೋರಿಸಿ ಮದುವೆಯನ್ನು ನಿಲ್ಲಿಸಿದ್ದಾಳೆ. ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಈ ಘಟನೆಯಿಂದಾಗಿ ಮದುವೆ ಮನೆಯಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ತನ್ನ ಹಾಗೂ ವರನ ಮಧ್ಯೆ ಈಗಾಗಲೇ ಮದುವೆಯಾಗಿದ್ದು, ಆ ಮದುವೆಯ ಕಾನೂನು ಹೋರಾಟಗಳು ಮುಗಿಯುವ ಮೊದಲೇ ಆತ ಬೇರೆ ಮದುವೆಯಾಗುತ್ತಿದ್ದಾನೆ ಎಂದು ವಧು ಆರೋಪಿಸಿದ್ದಾರೆ.
ಸಾಕ್ಷಿ ಸಮೇತ ಬಂದು ಮದುವೆ ನಿಲ್ಲಿಸಿದ ಮೊದಲ ಪತ್ನಿ:
ವರ ವಿನಯ್ ಆನಂದ್ ಶರ್ಮಾ ಮದುವೆಯಾಗುತ್ತಿದ್ದ ವೇದಿಕೆ ಏರಿದ ಶರ್ಮಾ ಮೊದಲ ಪತ್ನಿ ರೇಷ್ಮಾ, ಅಲ್ಲಿದ್ದವರಿಗೆ ಅವರ ಮೊದಲ ಮದುವೆಯ ಫೋಟೋಗಳನ್ನು ತೋರಿಸಿ ವರನಿಗೆ ಮುಜುಗರ ಆಗುವಂತೆ ಮಾಡಿದ್ದಾಳೆ. ಕುಟುಂಬದೊಂದಿಗೆ ವೇದಿಕೆಗೆ ಬಂದ ರೇಷ್ಮಾ ವರ ಕಾನೂನು ಪ್ರಕ್ರಿಯೆ ಮುಗಿಯುವ ಮೊದಲೇ ಮದುವೆಯಾಗುತ್ತಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ವಿನಯ್ ತನ್ನ ಖಾತೆಯಿಂದ ದುಬಾರಿ ಮೊತ್ತದ ಹಣ ಪಡೆದಿದ್ದು, ಆತ ಖರೀದಿಸಿದ ಕಾರಿಗೂ ತಾನು ಹಣಕಾಸು ನೆರವು ನಿಡಿದ್ದಾಗಿ ಹೇಳಿದ್ದಾಳೆ.
ಓದುತ್ತಿರುವಾಗಲೇ ಪ್ರೀತಿಸಿ ಮದುವೆಯಾಗಿದ್ದ ಜೋಡಿ:
ರೇಷ್ಮಾ ಅವರು ಮೂಲತಃ ಗುಜರಾತ್‌ನ ಅಂಕಲೇಶ್ವರದವರಾಗಿದ್ದು, ಇಬ್ಬರು ಓದುತ್ತಿರುವಾಗಲೇ ಪ್ರೀತಿಯಲ್ಲಿ ಬಿದ್ದಿದ್ದರು. ನಂತರ 2022ರ ಮಾರ್ಚ್ 30ರಂದು ಅವರು ಕೋರ್ಟ್ ಮ್ಯಾರೇಜ್ ಆಗಿದ್ದರು. ಇದಾದ ನಂತರ ಎರಡು ಕುಟುಂಬಗಳು ಸೇರಿ ಮದುವೆಯ ಕಾರ್ಯಕ್ರಮವನ್ನು ಆಯೋಜಿಸಿತ್ತು. ಆದರೆ ನಂತರದಲ್ಲಿ ಇವರಿಬ್ಬರ ಸಂಬಂಧದಲ್ಲಿ ಬಿರುಕು ಮೂಡಿದ್ದು, ಪರಿಣಾಮ ಪ್ರಕರಣ ದಾಖಲಾಗಿತ್ತು. ಇದಾದ ನಂತರ ಇದು ವಿಚ್ಚೇದನದ ಹಂತ ತಲುಪಿದ್ದು, ಪ್ರಕರಣ ಇನ್ನೂ ಕೋರ್ಟ್‌ನಲ್ಲಿತ್ತು. ಪ್ರಕರಣದಲ್ಲಿ ಯಾವುದೇ ಅಂತಿಮ ಆದೇಶ ಬಂದಿರಲಿಲ್ಲ.
ಹೀಗಾಗಿ ಇತ್ತೀಚೆಗೆ ವಿನಯ್ ಅವರು ತಮ್ಮ ಗ್ರಾಮಕ್ಕೆ ಇತ್ತಿಚೆಗೆ ಹಿಂದಿರುಗಿದ್ದರು ಹಾಗೂ ಅವರ ಕುಟುಂಬದವರು ಅವರಿಗೆ ಮತ್ತೊಂದು ಮದುವೆ ಮಾಡುವುದಕ್ಕೆ ನಿರ್ಧರಿಸಿದ್ದರು. ಆತನೂ ಈ ಮದುವೆಗೆ ಒಪ್ಪಿಕೊಂಡಿದ್ದು, ಬಹಳ ಅದ್ದೂರಿಯಾಗಿ ಮದುವೆ ಸಮಾರಂಭಗಳು ನಡೆದಿದ್ದವು. ತಮ್ಮ ಮೊದಲ ಪತ್ನಿ ರೇಷ್ಮಾಗೆ ಈ ವಿಚಾರ ತಿಳಿದಿರಬಹುದು ಎಂಬ ಅರಿವು ವಿನಯ್‌ಗೆ ಇರಲಿಲ್ಲ. ಆದರೆ ಈ ವಿಚಾರ ರೇಷ್ಮಾಗೆ ತಿಳಿದಿದ್ದು, ಕೂಡಲೇ ಆಕೆ ತನ್ನ ಕುಟುಂಬದವರೊಂದಿಗೆ ಮದುವೆ ನಡೆಯುತ್ತಿದ್ದ ಸ್ಥಳಕ್ಕೆ ಬಂದಿದ್ದು, ಜಗಳ ಮಾಡಿದ್ದಾಳೆ. ಆಕೆ ಪೊಲೀಸರೊಂದಿಗೆ ಸ್ಥಳಕ್ಕೆ ಬಂದಿದ್ದರಿಂದಾಗಿ ಎರಡು ಕುಟುಂಬಗಳು ಮದುವೆಯನ್ನು ನಿಲ್ಲಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿಯೊಬ್ಬರು ಮಾತನಾಡಿದ್ದು, ಬೇರೆ ರಾಜ್ಯದ ಮಹಿಳೆಯೊಬ್ಬರು ತನ್ನ ಪತಿ ಡಿವೋರ್ಸ್ ಕೇಸ್ ಕೋರ್ಟ್‌ನಲ್ಲಿ ವಿಚಾರಣೆಯಲ್ಲಿ ಇರುವ ಸಮಯದಲ್ಲೇ ಮತ್ತೊಂದು ಮದುವೆಯಾಗುತ್ತಿದ್ದಾನೆ ಎಂದು ದೂರು ನೀಡಿದ್ದಾರೆ. ಹೀಗಾಗಿ ಕಾನೂನು ಪ್ರಕ್ರಿಯೆ ಪೂರ್ಣಗೊಳ್ಳುವವರೆಗೂ ಎರಡು ಕುಟುಂಬಗಳು ಮದುವೆಯನ್ನು ನಿಲ್ಲಿಸುವುದಕ್ಕೆ ನಿರ್ಧಾರ ಮಾಡಿವೆ. ಈ ಬಗ್ಗೆ ತನಿಖೆ ನಡೆಯುತ್ತಿಇದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಚಲಿಸುವ ಕಾರಿನ ರೂಫ್ ಮೇಲೆ ಯುವಕ ಯುವತಿಯ ರೋಮ್ಯಾಂಟಿಕ್ ಸ್ಟಂಟ್: ವೀಡಿಯೋ ವೈರಲ್ ಪೊಲೀಸರು ಮಾಡಿದ್ದೇನು?
ಇದನ್ನೂ ಓದಿ: ನಿಂಗೆ ಎಷ್ಟು ಅಳೋಕೆ ಸಾಧ್ಯನೋ ಅಷ್ಟು ಅಳು ಎಂದ ಶಿಕ್ಷಕಿ: ಸಾವಿಗೆ ಶರಣಾದ ಬಾಲಕ


