couple stunt in moving car: ದೆಹಲಿಯಲ್ಲಿ, ಚಲಿಸುವ ಕಾರೊಂದರಲ್ಲಿ ಜೋಡಿಯೊಂದು ಅಪಾಯಕಾರಿ ರೋಮ್ಯಾಂಟಿಕ್ ಸ್ಟಂಟ್ ಮಾಡಿದೆ. ಯುವಕ ಕಾರಿನ ಮೇಲೇರಿ ಗೆಳತಿಗೆ ಚುಂಬಿಸಿದ್ದು, ಈ ವೀಡಿಯೋ ವೈರಲ್ ಆಗಿದೆ. 

ಚಲಿಸುವ ಕಾರಿನ ಮೇಲೆ ಯುವಕ ಯುವತಿಯ ರೋಮ್ಯಾನ್ಸ್‌:

ಚಲಿಸುವ ಬೈಕ್‌ಗಳಲ್ಲಿ, ಕಾರಿನ ಒಳಗೆ ಪ್ರೇಮಿಗಳ ರೋಮ್ಯಾನ್ಸ್ ಬಗ್ಗೆ ಇಷ್ಟು ದಿನ ನೀವು ಕೇಳಿರಬಹುದು. ಆದರೆ ಈಗ ಯುವಕನೋರ್ವ ಕಾರಿನ ರೂಫ್ ಮೇಲೆ ರೋಮ್ಯಾಂಟಿಕ್ ಸ್ಟಂಟ್ ಮಾಡುವ ಮೂಲಕ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾನೆ. 

ಹೌದು ಚಲಿಸುವ ಕಾರೊಂದರಲ್ಲಿ ಜೋಡಿಯೊಂದು ರೋಮ್ಯಾಂಟಿಕ್ ಸ್ಟಂಟ್ ಮಾಡಲು ಹೋಗಿ ಈಗ ಪೊಲೀಸರ ಅತಿಥಿಯಾಗಿದ್ದಾರೆ. ತನ್ನ ಗೆಳತಿಗೆ ಸಾಹಸಮಯವಾಗಿ ಕಿಸ್ ಮಾಡುವುದಕ್ಕಾಗಿ ಯುವಕ ಚಲಿಸುವ ಕಾರಿನ ಮೇಲೇರಿ ಅಲ್ಲಿಂದ ಕಾರೊಳಗಿದ್ದ ತನ್ನ ಗರ್ಲ್‌ಫ್ರೆಂಡ್‌ಗೆ ಕಿಸ್ ಮಾಡಿದ್ದು, ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ. ವೀಡಿಯೋ ನೋಡಿದ ಅನೇಕರು ಈ ಜೋಡಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು. ಅದರಂತೆ ನಂತರ ಕಾರ್ಯಾಚರಣೆಗಿಳಿದ ಪೊಲೀಸರು ಆ ಜೊಡಿಯನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದು, ಬಳಿಕ ಭಾರತೀಯ ಸಂಚಾರ ಕಾಯ್ದೆಯ ಕೆಲ ಸೆಕ್ಷನ್‌ಗಳಡಿ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಾರಿನ ಹಿಂದಿದ್ದ ವಾಹನಗಳ ಸವಾರರು ಈ ದೃಶ್ಯವನ್ನು ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದರು.

ವೈರಲ್ ಆದ ವೀಡಿಯೋದಲ್ಲಿ ಏನಿದೆ.

ವೀಡಿಯೋದಲ್ಲಿ ಕಾಣುವಂತೆ ವಾಹನದಟ್ಟಣೆಯಿಂದ ಕೂಡಿದ್ದ ರಸ್ತೆಯಲ್ಲಿ ಕಾರೊಂದು ಚಲಿಸುತ್ತಿದ್ದು, ಕಾರು ಚಾಲನೆಯಲ್ಲಿದ್ದಾಗಲೇ ಕಾರಿನ ವಿಂಡೋದಿಂದ ಮೆಲ್ಲನೇ ಕಾರಿನ ರೂಫ್ ಮೇಲೇರಿದ ಯುವಕ, ನಂತರ ಕೆಳಗೆ ಬಾಗಿದ್ದಾನೆ. ಈ ವೇಳೆ ಕಾರಿನ ಕಿಟಕಿಯಿಂದ ಹುಡುಗಿ ಹೊರಬಂದು ತಲೆಯನ್ನು ಎತ್ತಿದ್ದು, ಇಬ್ಬರು ಪರಸ್ಪರ ಕಿಸ್ ಮಾಡಿದ್ದಾರೆ. ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ಅನೇಕರು ಹಲವು ಕಾಮೆಂಟ್ ಮಾಡಿದ್ದು, ಸಾರ್ವಜನಿಕ ಸ್ಥಳದಲ್ಲಿ ಅಸಭ್ಯವಾಗಿ ವರ್ತಿಸುವುದರ ಜೊತೆಗ ಸಂಚಾರ ನಿಯಮ ಉಲ್ಲಂಘಿಸುತ್ತಿರುವ ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ಅದರಂತೆ ವೀಡಿಯೋ ವೈರಲ್ ಆಗುತ್ತಿದ್ದಂತೆ ಕಾರ್ಯಾಚರಣೆಗಳಿದ ಪೊಲೀಸರು ಈ ಪ್ರೇಮ ಪಕ್ಷಿಗಳ ವಿರುದ್ದ ಪ್ರಕರಣ ದಾಖಲಿಸಿ ದಂಡ ವಿಧಿಸಿದ್ದಾರೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಈ ಘಟನೆ ನಡೆದಿದೆ. ವೀಡಿಯೋಗೆ ಅನೇಕರು ಕಾಮೆಂಟ್ ಮಾಡಿದ್ದು, ಅಲ್ಪಾ ಮೆನ್ ಎಂದು ಕರೆಯಲ್ಪಡುವ ಕೆಲವರಿದ್ದಾರೆ ಅವರ ಅಪ್ಪ ತಾತ ಸಾಕಷ್ಟು ಸಂಪಾದನೆ ಮಾಡಿರ್ತಾರೆ ಅವರು ಅರ್ಧ ಭಾರತವನ್ನು ಖರೀದಿ ಮಾಡಬಹುದು ಎಂದು ಭಾವಿಸಿದ್ದಾರೆ ಎಂದು ಒಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನೀವು ಅವರ ವೀಡಿಯೋ ಮಾಡಿ ಅವರನ್ನು ಮತ್ತಷ್ಟು ಫೇಮಸ್ ಮಾಡ್ತಿದ್ದೀರಾ ಹಾಗೆ ಮಾಡಬೇಡಿ ಆದರೆ ಅವರಿಗೆ ಶಿಕ್ಷೆ ನೀಡಿ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಈ ಗಾಡಿ ಮಾಲೀಕದ್ಧ ಹಲವು ಸಂಚಾರಿ ನಿಯಮ ಉಲ್ಲಂಘನೆಯ ದಂಡವನ್ನು ಇನ್ನೂ ಪಾವತಿ ಮಾಡಿಲ್ಲ, ಅವುಗಳಲ್ಲಿ ಅತಿ ವೇಗ (ಸೆಕ್ಷನ್ 112/183, ಮೋಟಾರು ವಾಹನ ಕಾಯ್ದೆ), ಅನುಚಿತ ಪಾರ್ಕಿಂಗ್ (ಸೆಕ್ಷನ್ 122/177), ಉದ್ದೇಶಪೂರ್ವಕ ಅವಿಧೇಯತೆ (ಸೆಕ್ಷನ್ 179), ಮತ್ತು ಸೀಟ್ ಬೆಲ್ಟ್ ಇಲ್ಲದೆ ಚಾಲನೆ ಮಾಡುವುದು ಅಥವಾ ಅನಿಯಂತ್ರಿತ ಪ್ರಯಾಣಿಕರನ್ನು ಹೊತ್ತೊಯ್ಯುವುದು (ಸೆಕ್ಷನ್ 194B(1))ಗಳು ಸೇರಿವೆ. ಇವರು ಅವರ ಜೀವಕ್ಕೆ ಮಾತ್ರವವಲ್ಲದೇ ಬೇರೆಯವರ ಜೀವಕ್ಕೂ ಹಾನಿ ಉಂಟು ಮಾಡುತ್ತಾರೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.

ಇವರ ವೀಡಿಯೋವನ್ನು ಇನ್ಸ್ಟಾದಲ್ಲಿ ಪೋಸ್ಟ್ ಮಾಡಿದ ದೆಹಲಿ ಪೊಲೀಸರು ಜೀವ ಅಮೂಲ್ಯ 🚔ಮೇಲಿನ ಪ್ರಕರಣದ ಆರೋಪಿಗೆ ಎಂವಿಎ ಯ ಸೆಕ್ಷನ್ 179 ಮತ್ತು ಎಂವಿಎಯ ಸೆಕ್ಷನ್ 184 ರ ಅಡಿಯಲ್ಲಿ ಶಿಕ್ಷೆ ವಿಧಿಸಲಾಗಿದೆ. ನಾಗರಿಕರು ಸಂಚಾರ ನಿಯಮಗಳನ್ನು ಉಲ್ಲಂಘಿಸುವ ಮೂಲಕ ತಮ್ಮ ಮತ್ತು ಇತರರ ಜೀವಗಳಿಗೆ ಅಪಾಯವನ್ನುಂಟುಮಾಡಬಾರದು ಎಂದು ವಿನಂತಿಸಲಾಗಿದೆ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ನಿಂಗೆ ಎಷ್ಟು ಅಳೋಕೆ ಸಾಧ್ಯನೋ ಅಷ್ಟು ಅಳು ಎಂದ ಶಿಕ್ಷಕಿ: ಸಾವಿಗೆ ಶರಣಾದ ಬಾಲಕ

ಇದನ್ನೂ ಓದಿ: ಇಸ್ರೇಲ್‌ನಲ್ಲಿ ವೃದ್ಧರ ಆರೈಕೆಗೆ ಹೋಗಿದ್ದ ಕೇರಳದ ಹೋಮ್ ನರ್ಸ್ ಸಾವು