2020ರ ದೆಹಲಿ ಗಲಭೆ ಪ್ರಕರಣದಲ್ಲಿ ಉಮರ್ ಖಾಲಿದ್ ಮತ್ತು ಶಾರ್ಜೀಲ್ ಇಮಾಮ್ ಅವರ ಜಾಮೀನು ಅರ್ಜಿಯನ್ನು ದೆಹಲಿ ಪೊಲೀಸರು ಸುಪ್ರೀಂ ಕೋರ್ಟ್‌ನಲ್ಲಿ ವಿರೋಧಿಸಿದ್ದಾರೆ. ವಿದ್ಯಾವಂತರು ರಾಷ್ಟ್ರವಿರೋಧಿ ಕೃತ್ಯಗಳಲ್ಲಿ ತೊಡಗುವ 'ವೈಟ್ ಕಾಲರ್ ಭಯೋತ್ಪಾದನೆ'ಯ ಪ್ರವೃತ್ತಿ ಅಪಾಯಕಾರಿ ಎಂದಿದ್ದಾರೆ. 

ನವದೆಹಲಿ (ನ.20): 2020 ರ ದೆಹಲಿ ಗಲಭೆಯಲ್ಲಿ ಕಾರ್ಯಕರ್ತರಾದ ಉಮರ್ ಖಾಲಿದ್, ಶಾರ್ಜೀಲ್ ಇಮಾಮ್ ಮತ್ತು ಇತರರ ಜಾಮೀನು ಅರ್ಜಿಗಳನ್ನು ವಿರೋಧಿಸಲು ದೆಹಲಿ ಪೊಲೀಸರು ಸುಪ್ರೀಂ ಕೋರ್ಟ್‌ನಲ್ಲಿ ಇತ್ತೀಚೆಗೆ ನಡೆದ ಕೆಂಪು ಕೋಟೆ ಬಳಿಯ ಸ್ಫೋಟ ಪ್ರಕರಣ ಹಾಗೂ ವೈಟ್‌ ಕಾಲರ್‌ ಭಯೋತ್ಪಾದನ ಮಾಡ್ಯೂಲ್‌ಅನ್ನು ಉಲ್ಲೇಖಿಸಿದರು. ದೆಹಲಿ ಪೊಲೀಸರ ಪರವಾಗಿ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್‌ವಿ ರಾಜು, ಸರ್ಕಾರದ ನಿಧಿಯನ್ನು ಬಳಸಿಕೊಂಡು ವೈದ್ಯರು, ಇಂಜಿನಿಯರ್‌ಗಳಾಗುವ ವ್ಯಕ್ತಿಗಳು ನಂತರ ರಾಷ್ಟ್ರವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಪ್ರವೃತ್ತಿ ಸದ್ಯ ಹೊರಮೊಮ್ಮಿದೆ ಎಂದು ಸುಪ್ರೀಂ ಕೋರ್ಟ್‌ಗೆ ಹೇಳಿದರು.

ದೆಹಲಿ ಗಲಭೆಗೆ ಕಾರಣರಾದ ವ್ಯಕ್ತಿಗಳ ಜಾಮೀನು ಅರ್ಜಿಗಳನ್ನು ಬಲವಾಗಿ ವಿರೋಧಿಸಿದ ಎಎಸ್‌ಜಿ, ಬುದ್ಧಿಜೀವಿಗಳು ಭಯೋತ್ಪಾದಕರಾದಾಗ, ಅವರು ಸಾಮಾನ್ಯ ಭಯೋತ್ಪಾದಕರಿಗಿಂತ ಹೆಚ್ಚು ಅಪಾಯಕಾರಿಯಾಗುತ್ತಾರೆ ಎಂದು ಹೇಳಿದರು. ಈ ಶಿಕ್ಷಿತರು ವೈದ್ಯರಾಗಲು ಸರ್ಕಾರದ ಹಣವನ್ನು ಶಿಷ್ಯವೇತನವನ್ನು ಬಳಸಿಕೊಳ್ಳುತ್ತಾರೆ. ನಂತರ ಅವರು ರಾಷ್ಟ್ರವಿರೋಧಿಕೃತ್ಯಗಳನ್ನು ಮಾಡುತ್ತಾರೆ. ಇಂಥವರು ಹೆಚ್ಚು ಅಪಾಯಕಾರಿ ಎಂದು ಎಎಸ್‌ಜಿ ರಾಜು ಹೇಳಿದರು.

ವೈಟ್‌ ಕಾಲರ್‌ ಟೆರರ್‌ ಮಾಡ್ಯೂಲ್‌

ಹರಿಯಾಣದ ಅಲ್-ಫಲಾಹ್ ವಿಶ್ವವಿದ್ಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಜೈಶ್-ಎ-ಮೊಹಮ್ಮದ್ ಬೆಂಬಲಿತ ವೈಟ್ ಕಾಲರ್ ಭಯೋತ್ಪಾದಕ ಮಾಡ್ಯೂಲ್ ಅನ್ನು ಭದ್ರತಾ ಸಂಸ್ಥೆಗಳು ಭೇದಿಸಿದ ಬೆನ್ನಲ್ಲೇ ಸುಪ್ರೀಂ ಕೋರ್ಟ್‌ನಲ್ಲಿ ಈ ಹೇಳಿಕೆಗಳು ಬಂದಿವೆ. ಈ ತಿಂಗಳ ಆರಂಭದಲ್ಲಿ ವೈದ್ಯರೊಬ್ಬರ ಆವರಣದಿಂದ ಸುಮಾರು 2,900 ಕಿಲೋಗ್ರಾಂಗಳಷ್ಟು ಐಇಡಿ ತಯಾರಿಸುವ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು.

ಒಂದು ದಿನದ ನಂತರ, ಅವನ ಸಹಚರ ಡಾ. ಉಮರ್ ನಬಿ, ಐತಿಹಾಸಿಕ ಕೆಂಪು ಕೋಟೆಯ ಹೊರಗೆ ಕಾರನ್ನು ಸ್ಫೋಟಿಸಿ 15 ಜನರ ಸಾವಿಗೆ ಕಾರಣವಾಗಿದ್ದ. ಅಂದಿನಿಂದ, ಹಲವಾರು ವೈದ್ಯರನ್ನು ಬಂಧಿಸಿ ವಶಕ್ಕೆ ಪಡೆಯಲಾಗಿದೆ. ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್ ಮತ್ತು ಎನ್.ವಿ. ಅಂಜಾರಿಯಾ ಅವರ ಪೀಠವು ಇಮಾಮ್, ಖಾಲಿದ್ ಮತ್ತು ಇತರ ಮೂವರ ಜಾಮೀನು ಅರ್ಜಿಗಳನ್ನು ವಿಚಾರಣೆ ನಡೆಸುತ್ತಿದ್ದಾಗ ದೆಹಲಿ ಪೊಲೀಸರು ಸುಪ್ರೀಂ ಕೋರ್ಟ್‌ನಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದರು.

ದೆಹಲಿ ಗಲಭೆ ಕೇಸ್‌ ವಿಚಾರಣೆ

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (CAA) ಯ ವಿರುದ್ಧ ನಡೆದ ಕೋಮು ಗಲಭೆಗೆ ಕಾರಣವಾದ ದೊಡ್ಡ ಪಿತೂರಿಯ ಭಾಗವಾಗಿದ್ದ ಆರೋಪದ ಮೇಲೆ ಇಮಾಮ್ ಮತ್ತು ಖಾಲಿದ್ ವಿರುದ್ಧ ಕಠಿಣ ಭಯೋತ್ಪಾದನಾ ವಿರೋಧಿ ಕಾನೂನು UAPA ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಹಿಂಸಾಚಾರದಲ್ಲಿ 50 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು ಮತ್ತು 700 ಕ್ಕೂ ಹೆಚ್ಚು ಜನರು ಗಾಯಗೊಂಡರು.

ವಿಚಾರಣೆಯ ಸಮಯದಲ್ಲಿ, ದೆಹಲಿ ಪೊಲೀಸರು ಹಿಂಸಾಚಾರವು ಸ್ವಯಂಪ್ರೇರಿತವಲ್ಲ, ಬದಲಾಗಿ "ಸಂಯೋಜಿತ, ಪೂರ್ವ ಯೋಜಿತ ಮತ್ತು ಉತ್ತಮವಾಗಿ ವಿನ್ಯಾಸಗೊಳಿಸಲಾದ" ದಾಳಿ ಎಂದು ಪ್ರತಿಪಾದಿಸಿದರು.

ಮಸೂದೆ ಅಂಗೀಕಾರವಾಗುವ ಮೊದಲು ಶಾರ್ಜೀಲ್ ಇಮಾಮ್ ಸಿಎಎ ವಿರುದ್ಧ "ಪ್ರಚೋದನಕಾರಿ ಭಾಷಣ" ಮಾಡುತ್ತಿರುವ ವೀಡಿಯೊಗಳನ್ನು ಎಎಸ್‌ಜಿ ತೋರಿಸಿದರು. ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದಿಂದ ಪಲಾಯನ ಮಾಡಿರುವ ಧಾರ್ಮಿಕ ಅಲ್ಪಸಂಖ್ಯಾತರಿಗೆ ಸಿಎಎ ಭಾರತೀಯ ಪೌರತ್ವವನ್ನು ಒದಗಿಸುತ್ತದೆ.

ಎಎಸ್‌ಜಿ ರಾಜು ಅವರು ಇಮಾಮ್ ಎಂಜಿನಿಯರಿಂಗ್ ಪದವೀಧರನಾಗಿದ್ದಾನೆ ಎಂದು ತಿಳಿಸಿದರು. "ಇತ್ತೀಚಿನ ದಿನಗಳಲ್ಲಿ, ವೈದ್ಯರು, ಎಂಜಿನಿಯರ್‌ಗಳು ತಮ್ಮ ವೃತ್ತಿಯನ್ನು ಮಾಡದೆ ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಪ್ರವೃತ್ತಿ ಶುರುವಾಗಿದೆ" ಎಂದು ಅವರು ಹೇಳಿದರು.

ದೆಹಲಿಗೆ ಸರಬರಾಜುಗಳನ್ನು ನಿರ್ಬಂಧಿಸಲು ಮತ್ತು ಈಶಾನ್ಯವನ್ನು ಭಾರತದ ಉಳಿದ ಭಾಗಗಳಿಗೆ ಸಂಪರ್ಕಿಸುವ ಕಿರಿದಾದ ಭೂಪ್ರದೇಶವಾದ ಅಸ್ಸಾಂನಲ್ಲಿ ಚಿಕನ್‌ ನೆಕ್‌ಅನ್ನು ಆರ್ಥಿಕವಾಗಿ ಹತ್ತಿಕ್ಕಲು ಕಾರ್ಯಕರ್ತರು ಬಯಸಿದ್ದರು ಎಂದು ASG ತಿಳಿಸಿದ್ದಾರೆ. ಆಡಳಿತ ಬದಲಾವಣೆಯೇ ದೊಡ್ಡ ಉದ್ದೇಶ ಎಂದು ಅವರು ಹೇಳಿದರು.

"ಇದನ್ನು ಡೊನಾಲ್ಡ್ ಟ್ರಂಪ್ ಅವರ ಭೇಟಿಗೆ ಹೊಂದಿಕೆಯಾಗುವ ರೀತಿಯಲ್ಲಿ ಯೋಜಿಸಲಾಗಿತ್ತು. ಇದು ಕಾಕತಾಳೀಯವಲ್ಲ ಆದರೆ ಚೆನ್ನಾಗಿ ಯೋಚಿಸಿದ ಪಿತೂರಿ" ಎಂದು ಎಎಸ್‌ಜಿ ರಾಜು ಹೇಳಿದರು. ಟ್ರಂಪ್ ತಮ್ಮ ಮೊದಲ ಅವಧಿಯಲ್ಲಿ ಫೆಬ್ರವರಿ 2020 ರಲ್ಲಿ ಭಾರತಕ್ಕೆ ರಾಜ್ಯ ಭೇಟಿ ನೀಡಿದ್ದರು.