ಮಣಿಪುರ ಹಿಂಸಾಚಾರ ಹೊಣೆ ಹೊತ್ತು ರಾಜೀನಾಮೆ ನೀಡಲು ಹೊರಟ ಮುಖ್ಯಮಂತ್ರಿ ಬಿರೇನ್ ಸಿಂಗ್‌ರನ್ನು ಬೆಂಬಲಿಗರು ತಡೆದಿದ್ದಾರೆ. ಇಷ್ಟೇ ಅಲ್ಲ ರಾಜೀನಾಮೆ ಪತ್ರವನ್ನ ಹರಿದು ಹಾಕಿದ್ದಾರೆ.

ಇಂಪಾಲ(ಜೂ.30) ಮಣಿಪುರದ ಹಿಂಸಾಚಾರ ನಿಲ್ಲುತ್ತಿಲ್ಲ. ಪ್ರತಿ ದಿನ ಗಲಭೆ ನಡೆಯುತ್ತಲೇ ಇದೆ. ಸಾರ್ವಜನಿಕರು ಬಲಿಯಾಗುತ್ತಿದ್ದಾರೆ. ಆಸ್ತಿ ಪಾಸ್ತಿ ಕಳೆದುಕೊಳ್ಳುತ್ತಿದ್ದಾರೆ. ಕಳೆದ 2 ತಿಂಗಳನಿಂದ ನಡೆಯುತ್ತಿರುವ ಈ ಹಿಂಸಾಚಾರದ ಹೊಣೆ ಹೊತ್ತು ಮುಖ್ಯಮಂತ್ರಿ ಬಿರೇನ್ ಸಿಂಗ್ ರಾಜೀನಾಮೆಗೆ ನಿರ್ಧರಿಸಿದ್ದಾರೆ. ರಾಜೀನಾಮೆ ಪತ್ರ ಹಿಡಿದು ರಾಜ್ಯಾಪಾಲರ ಭೇಟಿಯಾಗಲು ಹೊರಟ ಬಿರೇನ್ ‌ಸಿಂಗ್‌ರನ್ನು ಬೆಂಬಲಿಗರು ತಡೆದಿದ್ದಾರೆ. ಬಿರೇನ್ ನಿವಾಸ ಸುತ್ತ ಜಮಾಯಾಸಿದ ಬೆಂಬಲಿಗರು ಮಾನವ ಸರಪಳಿ ಹೋರಾಟ ಆರಂಭಿಸಿದ್ದಾರೆ. ಇಷ್ಟೇ ಅಲ್ಲ ಯಾವುದೇ ಕಾರಣಕ್ಕೂ ರಾಜೀನಾಮೆ ನೀಡದಂತೆ ಮನವಿ ಮಾಡಿದ್ದಾರೆ. ಇದೇ ವೇಳೆ ಬಿರೇನ್ ಸಿಂಗ್ ಅವರ ರಾಜೀನಾಮೆ ಪತ್ರವನ್ನು ಹರಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಖ್ಯಮಂತ್ರಿ ರಾಜೀನಾಮೆ ನೀಡುವ ಅವಶ್ಯಕತೆ ಇಲ್ಲ. ಉಗ್ರರ ರೀತಿ ಕಾನೂನು ಕೈಗೆತ್ತಿಕೊಂಡವರ ವಿರುದ್ಧ ಸರ್ಕಾರ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಿ. ಬೆಂಕಿ ಹೆಚ್ಚಿ, ಸಮುದಾಯದ ಮೇಲೆ ದಾಳಿ ಮಾಡಿ ಆಕ್ರೋಶ ಹೊರಹಾಕುವುದಲ್ಲ. ಕಾನೂನಾತ್ಮ ರೀತಿಯಲ್ಲಿ ಸರ್ಕಾರದ ವಿರುದ್ಧ ಹೋರಾಡಬೇಕಿತ್ತು. ಆದರೆ ಕೆಲ ಸಮುದಾಯ ಹಾಗೂ ಗುಂಪುಗಳಿಗೆ ಈ ರೀತಿ ಹೋರಾಟಕ್ಕೆ ಯಾವುದೇ ವಿಷಯಗಳಿಲ್ಲ. ಹೀಗಾಗಿ ಹಿಂಸಾತ್ಮಕ ರೂಪದಲ್ಲಿ ಸರ್ಕಾರವನ್ನು ಬೆದರಿಸುವ ತಂತ್ರ ಮಾಡುತ್ತಿದ್ದಾರೆ. ಹೀಗಾಗಿ ಬೀರೆನ್ ಸಿಂಗ್ ರಾಜೀನಾಮೆ ನೀಡಬೇಕಿಲ್ಲ. ಮಣಿಪುರದ ಅಭಿವೃದ್ಧಿಗೆ ಬಿರೇನ್ ಸಿಂಗ್ ಶ್ರಮಿಸಿದ್ದಾರೆ ಎಂದು ಮಾನವ ಸರಪಳಿ ಹೋರಾಟ ಆರಂಭಿಸಿರುವ ಬೆಂಬಲಿಗರು ಹೇಳಿದ್ದಾರೆ.

Manipur CM Biren Singh: ಗಲಭೆಯ ನೈತಿಕ ಹೊಣೆ ಹೊತ್ತು ಮಣಿಪುರ ಸಿಎಂ ರಾಜೀನಾಮೆ?

ಕಳೆದ 2 ತಿಂಗಳಿನಿಂದ ಹಿಂಸಾಚಾರ ನಡೆಯುತ್ತಲೇ ಇದೆ. ಶೀಘ್ರದಲ್ಲೇ ಮಣಿಪುರದಲ್ಲಿ ಶಾಂತಿ ನೆಲೆಸುವ ವಿಶ್ವಾಸವಿದೆ. ಸಾಮಾನ್ಯರಿಗೆ ಬದಕಲು ಸಾಧ್ಯವಾಗುತ್ತಿಲ್ಲ. ಟಾರ್ಗೆಟ್ ಮಾಡಲಾಗುತ್ತಿದೆ. ಇಂತಹ ಕಠಿಣ ಸಂದರ್ಭದಲ್ಲಿ ಮುಖ್ಯಮಂತ್ರಿ ರಾಜೀನಾಮೆ ನೀಡಿದರೆ ಪರಿಸ್ಥಿತಿ ಕೈಮೀರಲಿದೆ. ಹೀಗಾಗಿ ಬಿರೇನ್ ಸಿಂಗ್ ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಬೆಂಬಲಿಗರು ಮನವಿ ಮಾಡಿದ್ದಾರೆ. 

ಕೆಲವು ದಿನಗಳಿಂದ ಶಾಂತವಾಗಿದ್ದ ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಮರುಕಳಿಸಿದೆ. ಜೂನ್ 29ರ ಬೆಳಗ್ಗೆ ಗಲಭೆಕೋರರು ನಡೆಸಿದ ಗುಂಡಿನ ದಾಳಿಯಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಕಂಗ್‌ಪೋಕ್ಪಿ ಜಿಲ್ಲೆಯ ಹರಾವುಥೆಲ್‌ನಲ್ಲಿ ಮುಂಜಾನೆ 5:30ರ ಸುಮಾರಿಗೆ ಯಾವುದೇ ಗಲಭೆಗಳು ಇಲ್ಲದ ವೇಳೆ ಅನಾಮಧೇಯ ವ್ಯಕ್ತಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ. ತಕ್ಷಣ ಮಾಹಿತಿ ಪಡೆದ ಭದ್ರತಾ ಸಿಬ್ಬಂದಿ ಸ್ಥಳಕ್ಕಾಗಮಿಸಿ ವಾತಾವರಣವನ್ನು ಹತೋಟಿಗೆ ತೆಗೆದುಕೊಂಡರು.

ಮಣಿಪುರ ತೆರಳುತ್ತಿದ್ದ ರಾಹುಲ್ ಗಾಂಧಿ ತಡೆ, ರಾಜಕೀಯ ನಡೆ ಎಂದ ಕಾಂಗ್ರೆಸ್‌ಗೆ ಕಾರಣ ಬಿಚ್ಚಿಟ್ಟ ಪೊಲೀಸ್!

ಇದಾದ ಬಳಿಕ ಜೂನ್ 29ರ ಸಂಜೆ ಇಂಫಾಲದಲ್ಲಿ ಮೃತ ವ್ಯಕ್ತಿ ಅಂತ್ಯಸಂಸ್ಕಾರ ಪ್ರಕ್ರಿಯೆಗಳು ಆಯೋಜನೆಗೊಂಡಿತ್ತು. ಈ ವೇಳೆ ಮೃತನ ಸಂಬಂಧಿಕರು ಮುಖ್ಯಮಂತ್ರಿ ಬಿರೇನ್‌ಸಿಂಗ್‌ ಅವರ ಮನೆಯತ್ತ ಮೆರವಣಿಗೆ ಹೋಗಲು ಯತ್ನಿಸಿದಾಗ ಪೊಲೀಸರು ಅಡ್ಡಿಪಡಿಸಿದರು. ಈ ವೇಳೆ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಕಾದಾಟ ಏರ್ಪಟ್ಟು, ಪರಿಸ್ಥಿತಿ ನಿಯಂತ್ರಿಸುವ ಸಲುವಾಗಿ ಪೊಲೀಸರು ಅಶ್ರುವಾಯು ಸಿಡಿಸಿದ್ದಾರೆ. ಈ ವೇಳೆ ಸ್ಥಳೀಯ ಬಿಜೆಪಿ ಕಚೇರಿ ಮೇಲೂ ಪ್ರತಿಭಟನಾಕಾರರು ದಾಳಿ ನಡೆಸಿದ್ದಾರೆ.