ಮಣಿಪುರ ತೆರಳುತ್ತಿದ್ದ ರಾಹುಲ್ ಗಾಂಧಿ ತಡೆ, ರಾಜಕೀಯ ನಡೆ ಎಂದ ಕಾಂಗ್ರೆಸ್‌ಗೆ ಕಾರಣ ಬಿಚ್ಚಿಟ್ಟ ಪೊಲೀಸ್!
ಹಿಂಸಾಚಾರ ಪೀಡಿತ ಮಣಿಪುರದ ಚುರಾಚಂದ್‌ಪುರಕ್ಕೆ ತೆರಳುತ್ತಿದ್ದ ರಾಹುಲ್ ಗಾಂಧಿಯನ್ನು ಪೊಲೀಸರು ತಡೆದಿದ್ದಾರೆ. ಇದು ರಾಜಕೀಯ ಹೈಡ್ರಾಮಗೆ ಕಾರಣವಾಗಿದೆ. ಇದು ದ್ವೇಷದ ರಾಜಕಾರಣ ಎಂದು ಕಾಂಗ್ರೆಸ್ ಹೇಳಿದೆ. ಇದರ ಬೆನ್ನಲ್ಲೇ ಮಣಿಪುರ ಪೊಲೀಸರು ಕಾರಣ ಬಿಚ್ಚಿಟ್ಟಿದ್ದಾರೆ.
ಇಂಪಾಲ್(ಜೂ.29): ಹಿಂಸಾಚಾರದಲ್ಲಿ ಮುಳುಗಿರುವ ಮಣಿಪುರದಲ್ಲಿ ದಿನದಿಂದ ದಿನಕ್ಕೆ ಆತಂಕ ಹೆಚ್ಚಾಗುತ್ತಿದೆ. ಎರಡು ಸಮುದಾಯಗಳ ನಡುವಿನ ಘರ್ಷಣೆಗೆ ಬಹುತೇಕ ಮಣಿಪುರ ಹೊತ್ತಿ ಉರಿದಿದೆ. ಪ್ರತಿಭಟನೆ, ಹಿಂಸಾಚಾರದಿಂದ ಮಣಿಪುರದಲ್ಲಿ ಪ್ರಕ್ಷಬ್ದ ವಾತಾವರಣ ನಿರ್ಮಾಣವಾಗಿದೆ. ಮಣಿಪುರದಲ್ಲಿ ಕಾನೂನು ಸುವ್ಯವಸ್ಥೆ ಮಾಡಲು ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಇದರ ಬೆನ್ನಲ್ಲೇ ನಿರಾಶ್ರಿತ ಕೇಂದ್ರಗಳಲ್ಲಿ ತಂಗಿರುವ ಮಣಿಪುರ ಜನರನ್ನು ಭೇಟಿಯಾಗಲು ತೆರಳಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ಪೊಲೀಸರು ತಡೆದಿದ್ದಾರೆ. ಇದು ದ್ವೇಷದ ರಾಜಕಾರಣ. ರಾಹುಲ್ ಗಾಂಧಿಯನ್ನು ತಡೆಯಲು ಕಾರಣಗಳಿಲ್ಲ. ಆದರೆ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಇದರ ಬೆನ್ನಲ್ಲೇ ಮಣಿಪುರ ಪೊಲೀಸರು ಕಾರಣ ಬಿಚ್ಚಿಟ್ಟಿದ್ದಾರೆ. ರಾಹುಲ್ ಗಾಂಧಿ ರಸ್ತೆ ಮಾರ್ಗವಾಗಿ ಚುರಾಚಂದ್‌ಪುರಕ್ಕೆ ತೆರಳುವುದು ಸುರಕ್ಷತಾ ದೃಷ್ಟಿಯಿಂದ ಉತ್ತಮವಲ್ಲ. ಹೀಗಾಗಿ ತಡೆಯಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಮಣಿಪುರ ಹಿಂಸಾಚಾರದ ಕೇಂದ್ರಬಿಂದುವಾಗಿರುವ ಚುರಾಚಂದ್‌ಪುರಕ್ಕೆ ತೆರಳಿ ಅಲ್ಲಿರುವ ಪರಿಹಾರ ಕೇಂದ್ರಕ್ಕೆ ಭೇಟಿ ನೀಡುವ ಕಾರ್ಯಕ್ರಮವವನ್ನು ಕಾಂಗ್ರೆಸ್ ಆಯೋಜಿಸಲಾಗಿತ್ತು. ಮಣಿಪುರದ ರಾಜಧಾನಿಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ರಾಹುಲ್ ಗಾಂಧಿ ಚುರಾಚಂದ್‌ಪುರಕ್ಕೆ ರಸ್ತೆ ಮಾರ್ಗವಾಗಿ ತೆರಳಿದ್ದಾರೆ. ಈ ವೇಳೆ ಪೊಲೀಸರು ರಾಹುಲ್ ಗಾಂಧಿಯನ್ನು ತಡೆದಿದ್ದಾರೆ. ಈ ಕುರಿತು ಮಾತನಾಡಿರುವ ಮಣಿಪುರ ಎಸ್‌ಪಿ ಹೆಚ್ ಬಲರಾಮ್ ಸಿಂಗ್, ರಾಹುಲ್ ಗಾಂಧಿ ಚುರಾಚಂದ್‌ಪುರಕ್ಕೆ ರಸ್ತೆ ಮಾರ್ಗವಾಗಿ ತೆರಳುವುದು ಯಾವುದೇ ಕಾರಣಕ್ಕೂ ಭದ್ರತೆ ದೃಷ್ಟಿಯಿಂದ ಉಚಿತವಲ್ಲ. ರಸ್ತೆಯಲ್ಲಿ ಗ್ರೇನೇಡ್ ದಾಳಿಯಾಗುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ರಾಹುಲ್ ಗಾಂಧಿಯನ್ನು ತಡೆಯಲಾಗಿದೆ. ಇಷ್ಟೇ ಅಲ್ಲ ಹೆಲಿಕಾಪ್ಟರ್ ಮಾರ್ಗವಾಗಿ ಚುರಾಚಂದ್‌ಪುರಕ್ಕೆ ತೆರಳು ಸೂಚನೆ ನೀಡಲಾಗಿದೆ. ಇದರ ಹಿಂದೆ ಯಾವುದೇ ರಾಜಕೀಯ ಉದ್ದೇಶವಿಲ್ಲ. ಯಾವುದೇ ಸರ್ಕಾರದ ಆದೇಶವಿಲ್ಲ. ಕೇವಲ ಸುರಕ್ಷತೆಗಾಗಿ ಮಾಡಿದ್ದೇವೆ ಎಂದು ಬಲರಾಮ್ ಸಿಂಗ್ ಹೇಳಿದ್ದಾರೆ.
ಭದ್ರತೆ ನೆಪವೊಡ್ಡಿ ಮಣಿಪುರದಲ್ಲಿ ರಾಹುಲ್ ಗಾಂಧಿ ತಡೆದ ಪೊಲೀಸರು: ಹೆಲಿಕಾಪ್ಟರ್‌ನಲ್ಲಿ ಪ್ರಯಾಣ!
ರಸ್ತೆಯ ಹಲವು ಭಾಗದಲ್ಲಿ ಪ್ರತಿಭಟೆಗಳು ನಡೆಯುತ್ತಿದೆ. ಕೆಲ ಪ್ರದೇಶಗಳು ಬೂದಿ ಮುಚ್ಚಿದ ಕೆಂಡದಂತಿದೆ. ಹೀಗಾಗಿ ಯಾವುದೇ ಕ್ಷಣದಲ್ಲೂ ದಾಳಿಯಾಗುವ ಸಾಧ್ಯತೆ ಹೆಚ್ಚಿದೆ. ಇಲ್ಲಿ ರಾಹುಲ್ ಗಾಂಧಿ ಭೇಟಿ ತಡೆಯುವ ಯಾವುದೇ ಉದ್ದೇಶವಿಲ್ಲ. ಕೇವಲ ರಸ್ತೆ ಮಾರ್ಗದ ಮೂಲಕ ತೆರಳುವುದು ಸುರಕ್ಷಿತವಲ್ಲದ ಕಾರಣ ತಡೆದಿದ್ದೇವೆ ಎಂದು ಮಣಿಪುರ ಪೊಲೀಸ್ ಸ್ಪಷ್ಟನೆ ನೀಡಿದೆ.
ಮಣಿಪುರ ಪೊಲೀಸರ ಸೂಚನೆ ಬಳಿಕ ರಾಹುಲ್ ಗಾಂಧಿ ಹೆಲಿಕಾಪ್ಟರ್ ಮೂಲಕ ಪ್ರಯಾಣ ಮುಂದುವರಿಸಿದ್ದಾರೆ. ಆದರೆ ಇದೇ ವಿಚಾರವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ರಾಜಕೀಯ ತೀವ್ರಗೊಳಿಸಿದೆ. ಇದು ಕೇಂದ್ರದ ಹುನ್ನಾರ ಎಂದು ಕಾಂಗ್ರೆಸ್ ಆರೋಪಿಸಿದೆ.
ಗುರುವಾರ ಚುರಚಂದ್‌ಪುರಕ್ಕೆ ತೆರಳಿ ಅಲ್ಲಿರುವ ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿದ ಬಳಿಕ ಬಿಷ್ಣುಪುರದ ಮೊಯಿರಾಂಗ್‌ಗೆ ಹೋಗಿ ಸ್ಥಳಾಂತರಗೊಂಡ ಜನರೊಂದಿಗೆ ರಾಹುಲ್ ಗಾಂಧಿ ಮಾತುಕತೆ ನಡೆಸಲಿದ್ದಾರೆ. ನಾಳೆ(ಜೂ.30) ಇಂಫಾಲ್‌ನ ಪರಿಹಾರ ಕೇಂದ್ರಗಳಿಗೆ ಭೇಟಿ ನೀಡಲಿರುವ ಅವರು ಬಳಿಕ ಅಲ್ಲಿನ ನಾಗರಿಕ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸಲಿದ್ದಾರೆ. ರಾಹುಲ್, ಮೇ.3ರಿಂದ ಜನಾಂಗೀಯ ಸಂಘರ್ಷಕ್ಕೆ ತುತ್ತಾಗಿರುವ ಮಣಿಪುರಕ್ಕೆ ಭೇಟಿ ನೀಡುತ್ತಿರುವ ಮೊದಲಿಗ ಕಾಂಗ್ರೆಸಿಗರಾಗಿದ್ದಾರೆ.
ರಾಜ್ಯದ 300ಕ್ಕೂ ಹೆಚ್ಚು ಪರಿಹಾರ ಕೇಂದ್ರಗಳಲ್ಲಿ 50,000 ಜನರು ವಾಸಿಸುತ್ತಿದ್ದಾರೆ. ಮೈತೇಯಿ ಸಮುದಾಯವನ್ನು ಪರಿಶಿಷ್ಟಪಂಗಡಕ್ಕೆ ಸೇರಿಸುವ ನಿರ್ಧಾರವನ್ನು ವಿರೋಧಿಸಿ ಕುಕಿ ಸಮುದಾಯ ಸಂಘರ್ಷಕ್ಕೆ ಮುಂದಾದ ಬೆನ್ನಲ್ಲೇ ಇದೀಗ ಎರಡೂ ಸಮುದಾಯಗಳು ಪರಸ್ಪರ ತೀವ್ರ ಹಿಂಸಾಚಾರಕ್ಕೆ ಮುಂದಗಿದ್ದು ಈವರೆಗೆ 100ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.