ಮಣಿಪುರದಲ್ಲಿ ಗಲಭೆ ಆರಂಭವಾಗಿ ಅಂದಾಜು ಎರಡು ತಿಂಗಳಾಗಿವೆ. ರಾಜ್ಯ ಸರ್ಕಾರ ಗಲಭೆಯನ್ನು ತಡೆಯಲು ವಿಫಲವಾಗಿರುವ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಎನ್.ಬೀರೇನ್ ಸಿಂಗ್ ಶುಕ್ರವಾರ ತಮ್ಮ ರಾಜೀನಾಮೆ ಸಲ್ಲಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ನವದೆಹಲಿ (ಜೂ.30): ಮಣಿಪುರದಲ್ಲಿ ಜನಾಂಗೀಯ ಘರ್ಷಣೆ ಆರಂಭವಾಗಿ ಎರಡೂ ತಿಂಗಳಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿರುವ ಹಿನ್ನೆಲೆಯಲ್ಲಿ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಶುಕ್ರವಾರ ರಾಜೀನಾಮೆ ಸಲ್ಲಿಸುವ ಸಾಧ್ಯತೆಯಿದೆ. ಅವರು ಶುಕ್ರವಾರ ಮಧ್ಯಾಹ್ನ 1 ಗಂಟೆಗೆ ಮಣಿಪುರ ರಾಜ್ಯಪಾಲರಾದ ಅನುಸೂಯಾ ಉಯ್ಕೆ ಅವರಿಗೆ ರಾಜೀನಾಮೆ ಪತ್ರವನ್ನು ಸಲ್ಲಿಕೆ ಮಾಡುವ ಸಾಧ್ಯತೆ ಇದೆ. ವರದಿಗಳ ಪ್ರಕಾರ, ಮುಖ್ಯಮಂತ್ರಿ ಬಿರೇನ್ ಸಿಂಗ್ ಅವರು ಎರಡು ಆಯ್ಕೆಗಳನ್ನು ನೀಡಿದ್ದಾರೆ. ಒಂದೋ ಕೇಂದ್ರ ಸರ್ಕಾರವೇ ಮಧ್ಯಪ್ರವೇಶಿಸಿ ವಿಷಯವನ್ನು ಬಗೆಹರಿಸಬೇಕು. ಇಲ್ಲದೇ ಇದ್ದಲ್ಲಿ ತಾವು ರಾಜೀನಾಮೆ ನೀಡುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ. ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರದ ಕುರಿತು ಬಿರೇನ್ ಸಿಂಗ್ ಅವರು ಭಾನುವಾರ (ಜೂನ್ 23) ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದರು. ಸುದ್ದಿ ಸಂಸ್ಥೆ ಪಿಟಿಐ ಪ್ರಕಾರ ರಾಜ್ಯದಲ್ಲಿ ಆಗಿರುವ ಕೆಟ್ಟ ಪರಿಸ್ಥಿತಿ ಕುರಿತು ಗೃಹ ಸಚಿವರಿಗೆ ವಿವರಿಸಿದ್ದೇನೆ ಎಂದು ಅವರು ಹೇಳಿದರು.
ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಹಿಂಸಾಚಾರವನ್ನು "ಹೆಚ್ಚಿನ ಮಟ್ಟಿಗೆ" ನಿಯಂತ್ರಿಸಲು ಸಮರ್ಥವಾಗಿವೆ ಎಂದು ಅವರು ತಿಳಿಸಿದ್ದಾರೆ. ಮಣಿಪುರದಲ್ಲಿ ಮೈತೆಯಿ ಮತ್ತು ಕುಕಿ ಸಮುದಾಯಗಳ ನಡುವೆ ನಡೆಯುತ್ತಿರುವ ಜನಾಂಗೀಯ ಘರ್ಷಣೆಗಳಿಗೆ ಇಲ್ಲಿಯವರೆಗೆ 100 ಕ್ಕೂ ಹೆಚ್ಚು ಸಾವುಗಳಿಗೆ ಕಾರಣವಾಗಿವೆ. ಮೇ 3 ರಂದು ಬೆಟ್ಟದ ಜಿಲ್ಲೆಗಳಲ್ಲಿ 'ಬುಡಕಟ್ಟು ಒಗ್ಗಟ್ಟಿನ ಮೆರವಣಿಗೆ' ಆಯೋಜಿಸಿದ ನಂತರ ಆರಂಭದಲ್ಲಿ ಹಿಂಸಾಚಾರ ಭುಗಿಲೆದ್ದಿತು.
ಮಣಿಪುರ ತೆರಳುತ್ತಿದ್ದ ರಾಹುಲ್ ಗಾಂಧಿ ತಡೆ, ರಾಜಕೀಯ ನಡೆ ಎಂದ ಕಾಂಗ್ರೆಸ್‌ಗೆ ಕಾರಣ ಬಿಚ್ಚಿಟ್ಟ ಪೊಲೀಸ್!
ಪರಿಶಿಷ್ಟ ಪಂಗಡ (ಎಸ್‌ಟಿ) ಸ್ಥಾನಮಾನಕ್ಕಾಗಿ ಮೀಟೈ ಸಮುದಾಯದ ಕರೆಗೆ ಈ ಮೆರವಣಿಗೆಯು ಪ್ರತಿಕ್ರಿಯೆಯಾಗಿತ್ತು, ಇದು ಬುಡಕಟ್ಟು ಕುಕಿ ಸಮುದಾಯದಿಂದ ತೀವ್ರ ವಿರೋಧವನ್ನು ಕಂಡಿತು. ಅಂದಿನಿಂದ ಎರಡು ಗುಂಪುಗಳ ನಡುವಿನ ಘರ್ಷಣೆ ತೀವ್ರಗೊಂಡಿದೆ.
ಭದ್ರತೆ ನೆಪವೊಡ್ಡಿ ಮಣಿಪುರದಲ್ಲಿ ರಾಹುಲ್ ಗಾಂಧಿ ತಡೆದ ಪೊಲೀಸರು: ಹೆಲಿಕಾಪ್ಟರ್‌ನಲ್ಲಿ ಪ್ರಯಾಣ!
